ಮಹಿಳೆಯರಿಗೆ ಬಂಗಾರವೆಂದರೆ ಎಲ್ಲಿಲ್ಲದ ಪ್ರೀತಿ. ಹೆಂಡತಿ ಮುನಿಸಿಕೊಂಡರೆ ಗಂಡ ನಗುತ್ತಾ ‘ನನ್ ಚಿನ್ನ.. ನನ್ ಬಂಗಾರಿ..’ ಎಂದರೆ ಸಾಕು ಚಿನ್ನದಂತೆ ಅವರು ಕರಗಿಹೋಗುತ್ತಾರೆ. ಆದರೆ ಚಿನ್ನ ಕರಗಬೇಕಾದರೆ 1,064 ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಬೇಕು! ಚಿನ್ನವನ್ನು ಮಣ್ಣಿನಲ್ಲಿ, ಸಮುದ್ರದ ತಳದಲ್ಲಿ ನೂರಾರು ವರ್ಷ ಹೂತಿಟ್ಟರೂ ಅದು ತನ್ನ ಬಣ್ಣ ಕಳೆದುಕೊಳ್ಳುವುದಿಲ್ಲ.
ಇದೆಲ್ಲ ಹೇಳುತ್ತಿರುವುದಕ್ಕೆ ಕಾರಣವಿದೆ. ಬ್ರಿಟಿಷ್ ಟೆಲಿವಿಷನ್ ನೆಟ್‌ವರ್ಕ್ ‘ಇಂಡಿಪೆಂಡೆಂಟ್ ಟಿವಿ’ಯಲ್ಲಿ ಸುದ್ದಿಯೊಂದು
ಬಿತ್ತರಗೊಂಡಿತ್ತು. ಅದೇನೆಂದರೆ ಮಧ್ಯ ಚೀನಾದ ವಾಂಗು ಗೋಲ್ಡ್ ಫೀಲ್ಡ್‌ನಲ್ಲಿ ಒಂದು ಸಾವಿರ ಟನ್‌ಗಳಿಗಿಂತ ಹೆಚ್ಚು ಚಿನ್ನ ಇರುವ ನಿಕ್ಷೇಪವನ್ನು ನೆಲದ ಮೇಲಿನಿಂದ ಎರಡು ಕಿಲೊಮೀಟರ್‌ಗಳ ಆಳದಲ್ಲಿ ಕಂಡು ಹಿಡಿದಿರುವುದಾಗಿ ಸುದ್ದಿಯಲ್ಲಿತ್ತು. ಅದರ ಇಂದಿನ ಬೆಲೆ ಸುಮಾರು 80 ಬಿಲಿಯಲ್ ಡಾಲರ್‌ಗಳು(₹6.92 ಲಕ್ಷ ಕೋಟಿ). ನಮ್ಮ ಕೋಲಾರ ಚಿನ್ನದ ಗಣಿಗಳ ಗತವೈಭವವನ್ನು ನೆನೆಸಿಕೊಂಡರೆ ಕೋಲಾರ ಚಿನ್ನದ ಗಣಿಗಳು 1880-2001ರ (121 ವರ್ಷಗಳು) ಮಧ್ಯೆ ಹೆಚ್ಚು ಕಡಿಮೆ ಇಷ್ಟೇ ಚಿನ್ನವನ್ನು ಉತ್ಪಾದನೆ ಮಾಡಿದ್ದವು. ಅದೆಲ್ಲ ಬ್ರಿಟಿಷರ ಪಾಲಾದ ನಮ್ಮ ಕೋಲಾರ ಚಿನ್ನದ ಗಣಿಗಳ ಕಣ್ಣೀರಿನ ಕಥೆ. ಇದೇ ಚಿನ್ನದ ಗಣಿಗಳು 1980ರ ದಶಕದಲ್ಲಿಯೇ 3.30 ಕಿಲೋಮೀಟರ್ ಆಳಕ್ಕೆ ಇಳಿದಿದ್ದವು.
ಒಂದು ಸಮೀಕ್ಷೆ ಪ್ರಕಾರ 2023ರಲ್ಲಿ ಜಗತ್ತಿನಾದ್ಯಂತ ಸುಮಾರು ಮೂರು ಸಾವಿರ ಟನ್ ಬಂಗಾರವನ್ನು ಗಣಿಗಳಿಂದ ಉತ್ಪಾದನೆ ಮಾಡಲಾಗಿದೆ. ಪ್ರಸ್ತುತ ಹೆಚ್ಚು ಚಿನ್ನ ಉತ್ಪಾದನೆ ಮಾಡುತ್ತಿರುವ ಮೊದಲ ಹತ್ತು ದೇಶಗಳೆಂದರೆ ಚೀನಾ, ರಷ್ಯಾ, ಆಸ್ಟ್ರೇಲಿಯಾ, ಅಮೆರಿಕ, ಕೆನಡಾ, ಘಾನಾ, ಬ್ರೆಜಿಲ್, ಉಜ್ಬೇಕಿಸ್ಥಾನ, ಮೆಕ್ಸಿಕೊ ಮತ್ತು ಇಂಡೊನೇಷ್ಯಾ. ಭಾರತ ವರ್ಷಕ್ಕೆ ಕೇವಲ ಎರಡು ಟನ್ ಚಿನ್ನವನ್ನು ರಾಯಚೂರಿನ ಹಟ್ಟಿ ಚಿನ್ನದ ಗಣಿಗಳಿಂದ ಉತ್ಪಾದನೆ ಮಾಡುತ್ತಿದೆ.
ಬಂಗಾರದ ಜಾಡು...
ಇನ್ನು ಬಂಗಾರ ಎಲ್ಲಿಂದ ಬಂದಿತು ಎಂಬುದರ ಜಾಡು ಹುಡುಕುತ್ತಾ ಹೋದರೆ ವಿಜ್ಞಾನಿಗಳಿಗೂ ಅರ್ಥವಾಗದ ವೈಜ್ಞಾನಿಕ ಮತ್ತು ಕುತೂಹಲಕರ ಕಥೆಯಿದೆ. ವಿಜ್ಞಾನಿಗಳು ಭೂಮಿಯಲ್ಲಿ ಇದುವರೆಗೂ 118 ಧಾತುಗಳನ್ನು ಕಂಡುಹಿಡಿದಿದ್ದಾರೆ. ಅವುಗಳಲ್ಲಿ ಮೊದಲ 94 ಧಾತುಗಳು ನೈಸರ್ಗಿಕವಾಗಿ ದೊರಕಿದರೆ, 24 ಧಾತುಗಳು ರಾಸಾಯನಿಕ ಅಂಶಗಳ ಪರಮಾಣು ಪ್ರತಿಕ್ರಿಯಾತ್ಮಕತೆಯಿಂದ ಕೃತಕವಾಗಿ ಸಂಶ್ಲೇಷಿಸಲ್ಪಟ್ಟಿರುವುದಾಗಿ ತಿಳಿಯುತ್ತದೆ.
ಭೂಮಿಯ ಸೃಷ್ಟಿಗೆ ಸೂರ್ಯ ಮೂಲವಾದರೆ, ಸೂರ್ಯನ ಸೃಷ್ಟಿಗೆ ಬ್ರಹ್ಮಾಂಡ... ಅಂದರೆ 94 ಧಾತುಗಳು ಭೂಮಿ ಆಕಾಶವೆಲ್ಲ ತುಂಬಿಕೊಂಡಿವೆ. ಬ್ರಹ್ಮಾಂಡದಲ್ಲಿ, ಸೂರ್ಯನಲ್ಲಿ, ನಾವಿರುವ ಭೂಮಿಯಲ್ಲೂ ಬಂಗಾರ ಅಡಗಿಕೊಂಡು ಕುಳಿತಿದೆ. ರಾಜ ಮಹಾರಾಜರ ಅರಮನೆಗಳು, ಗುಡಿ, ಚರ್ಚು, ಮಸೀದಿಗಳು ಬಂಗಾರದಿಂದಲೇ ತುಂಬಿಕೊಂಡಿದ್ದರೆ, ಅಭಿವೃದ್ಧಿ ಹೊಂದಿದ ದೇಶಗಳ ಖಜಾನೆಗಳು, ಬ್ಯಾಂಕುಗಳಲ್ಲಿ ಚಿನ್ನದ ಇಟ್ಟಿಗೆಗಳನ್ನು ಪೇರಿಸಿಡಲಾಗಿದೆ. ಭೂಮಿಯಲ್ಲಿ ಇದುವರೆಗೂ ಸಂಗ್ರಹವಾಗಿರುವ ಚಿನ್ನ ಸುಮಾರು 2,44,000 ಟನ್‌ಗಳು ಎನ್ನಲಾಗಿದೆ! ಅಧಿಕೃತವಾಗಿ ಹೆಚ್ಚು ಚಿನ್ನ ಹೊಂದಿರುವ ಹತ್ತು ದೇಶಗಳಲ್ಲಿ ಅಮೆರಿಕ ಮೊದಲ ಸ್ಥಾನಲ್ಲಿದ್ದರೆ (8133 ಟನ್‌ಗಳು), ನೆದರ್‌ಲ್ಯಾಂಡ್ ಹತ್ತನೇ ಸ್ಥಾನದಲ್ಲಿದ್ದು (612 ಟನ್‌ಗಳು), ಭಾರತ ಒಂಬತ್ತನೇ(831 ಟನ್‌ಗಳು) ಸ್ಥಾನದಲ್ಲಿದೆ.
ಭಾರತದ ದೇವಸ್ಥಾನಗಳಲ್ಲಿ ಮೂರು ಸಾವಿರದಿಂದ ನಾಲ್ಕು ಸಾವಿರ ಟನ್ ಚಿನ್ನ ಇದೆ ಎನ್ನಲಾಗಿದೆ! ಇನ್ನು ಭಾರತದಲ್ಲಿರುವ ಖಾಸಗಿ ಬಂಗಾರ ಸುಮಾರು ಇಪ್ಪತ್ತೇಳು ಸಾವಿರ ಟನ್‌ಗಳಂತೆ! ಇದು ಬಹುಶಃ ತಪ್ಪು ಲೆಕ್ಕವಿರಬೇಕು. ಅದಕ್ಕಿಂತ ಹೆಚ್ಚು ಚಿನ್ನ ಇರಬಹುದು.
ಚಿನ್ನ ಭೂಮಿಗೆ ಬಂದಿದ್ದು ಹೇಗೆ?
ಈಗ ಮೇಲಿನ ಅಂಕಿಅಂಶಗಳು ಒಂದು ಕಡೆಗಿರಲಿ. ಪುರಾಣಗಳಲ್ಲಿ ಬರುವ ಮಾನವರು, ದಾನವರು, ಇಂದಿನ ಮನುಷ್ಯರೂ ಸೇರಿ ಎಲ್ಲರೂ ಹಾಹಾಕಾರ ಮಾಡುವ ಚಿನ್ನ ಭೂಮಿಗೆ ಬಂದಿದ್ದಾದರೂ ಹೇಗೆ? ಭೂಮಿಯ ಹೊರಚಿಪ್ಪು ಅಥವಾ ಭೂಪದರಗಳಿಗಿಂತ ಭೂಗರ್ಭದಲ್ಲಿ ಹೆಚ್ಚು ಚಿನ್ನದ ಖಜಾನೆ ಇರುವುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ವಿಜ್ಞಾನಿಗಳು ಭೂಗರ್ಭದಲ್ಲಿ ಸುಮಾರು 1.6 ಕ್ವಾಡ್ರಿಲಿಯನ್ ಟನ್‌ಗಳ ಚಿನ್ನ ಇದೆ ಎನ್ನುತ್ತಾರೆ. ಮಿಲಿಯನ್, ಬಿಲಿಯನ್, ಟ್ರಿಲಿಯನ್ ಆದ ಮೇಲೆ ಬರುವುದೇ ಕ್ವಾಡ್ರಿಲಿಯನ್. ಒಂದು ಕ್ವಾಡ್ರಿಲಿಯನ್ ಎಂದರೆ ಒಂದು ಅಂಕೆಯ ಮುಂದೆ 15 ಸೊನ್ನೆಗಳನ್ನು ಹಾಕಬೇಕು. ಈ ಎಲ್ಲಾ ಚಿನ್ನವನ್ನು ಹೊರಕ್ಕೆ ತೆಗೆದುಕೊಂಡುಬಂದರೆ ಇಡೀ ಭೂಮೈಯನ್ನು ಒಂದೂವರೆ ಅಡಿ ಹಾಸಬಹುದಂತೆ!
ಇದು ಭೂಮಿಯಲ್ಲಿನ ಚಿನ್ನದ ಕಥೆಯಾದರೆ, ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ಗಣಿ ಮಾಡಿ ಚಿನ್ನವನ್ನು ಭೂಮಿಗೆ ತರುವುದರ ಬಗ್ಗೆಯೂ ವಿಜ್ಞಾನಿಗಳು ಯೋಜನೆಗಳನ್ನು ತಯಾರಿಸುತ್ತಿದ್ದಾರೆ. ಸುಮಾರು 1,400 ಕೋಟಿ ವರ್ಷಗಳ ಹಿಂದೆ ಘಟಿಸಿದ ಬಿಗ್‌ಬ್ಯಾಂಗ್ ಮಹಾಸ್ಫೋಟದಿಂದ ಬ್ರಹ್ಮಾಂಡದಲ್ಲಿ ಚಿನ್ನ ಹೇಗೆ ಸೃಷ್ಟಿಯಾಯಿತು ಎನ್ನುವ ಕಥೆಗೆ ಬರೋಣ. ಇದು ಬಹಳ ಸ್ವಾರಸ್ಯಕರ ಮತ್ತು ವೈಜ್ಞಾನಿಕ ಫ್ಯಾಂಟಸಿಯಾಗಿದೆ. ಚಿನ್ನ ಸೂಪರ್ನೋವಾ ನ್ಯೂಕ್ಲಿಯೊಸಿಂಥೆಸಿಸ್‌ನಲ್ಲಿ ಮತ್ತು ನ್ಯೂಟ್ರಾನ್ ನಕ್ಷತ್ರಗಳ ಘರ್ಷಣೆಯಿಂದ ಉತ್ಪತ್ತಿಯಾಯಿತು. ಮತ್ತು ಅದು ಕೋಟ್ಯಂತರ ಸೌರವ್ಯೂಹಗಳು/ಸೂರ್ಯಮಂಡಲಗಳು ರೂಪುಗೊಂಡಾಗಿನ ಧೂಳಿನಲ್ಲಿದೆ ಎಂಬುದಾಗಿ ವಿಜ್ಞಾನಿಗಳು ಭಾವಿಸಿದ್ದಾರೆ.
ವಿಜ್ಞಾನಿಗಳ ಪರಿಕಲ್ಪನೆಯಲ್ಲಿ ಎರಡು ನ್ಯೂಟ್ರಾನ್ ನಕ್ಷತ್ರಗಳು ಬಾಹ್ಯಾಕಾಶದ ಮಧ್ಯದಲ್ಲಿ ಎಲ್ಲೋ ಕೋಟಿ ಕೋಟಿ ಮೈಲಿಗಳ ದೂರದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದು ಸ್ಫೋಟಗೊಳ್ಳುತ್ತವೆ. ನ್ಯೂಟ್ರಾನ್ ನಕ್ಷತ್ರಗಳು ಹೆಚ್ಚಾಗಿ ನ್ಯೂಟ್ರಾನ್‌ಗಳಿಂದ (ತಟಸ್ಥ ಕಣಗಳು) ಸಂಯೋಜಿಸಲ್ಪಟ್ಟಿರುತ್ತವೆ ಮತ್ತು ಪ್ರೋಟಾನ್‌ಗಳ ಸಣ್ಣ ಭಾಗವನ್ನು (ಧನಾತ್ಮಕ ಆವೇಶದ ಕಣಗಳು) ಮತ್ತು ಎಲೆಕ್ಟ್ರಾನ್‌ಗಳು (ಋಣಾತ್ಮಕ ಆವೇಶಗಳು), ಹಾಗೆಯೇ ನ್ಯೂಕ್ಲಿಯಸ್‌ಗಳನ್ನು ಹೊಂದಿರುತ್ತವೆ. ಎರಡು ನಕ್ಷತ್ರಗಳು ಗುರುತ್ವಾಕರ್ಷಣೆಯ ಅಲೆಗಳನ್ನು ಉತ್ಪಾದಿಸುವುದರ ಜೊತೆಗೆ ಚಿನ್ನವನ್ನು ಒಳಗೊಂಡಂತೆ ಅನೇಕ ಭಾರವಾದ ಧಾತುಗಳನ್ನು ಉತ್ಪಾದಿಸುತ್ತವೆ. ಗ್ಯಾಲಕ್ಸಿಯಲ್ಲಿ (ನಕ್ಷತ್ರ ಪುಂಜಗಳು) ಎರಡು ನ್ಯೂಟ್ರಾನ್ ನಕ್ಷತ್ರಗಳು ಅಂತಿಮ ವಿನಾಶ ಮತ್ತು ಅನಿವಾರ್ಯ ಸೃಷ್ಟಿಯ ಬ್ಯಾಲೆಯಲ್ಲಿ ಪರಸ್ಪರ ಘರ್ಷಣೆಗೊಳ್ಳುತ್ತಾ ಸುತ್ತುತಿರುತ್ತವೆ.
ಇಡೀ ಬ್ರಹ್ಮಾಂಡ, ಈ ಜಗತ್ತು ಬೆಂಕಿ ಗಾಳಿ ನೀರು ಭೂಮಿ (ಕಲ್ಲು-ಮಣ್ಣು) ಕೊನೆಗೆ ಎಲ್ಲವನ್ನು ಆವರಿಸಿಕೊಂಡಿರುವ ಆಕಾಶ (ಪಂಚಭೂತಗಳು); ಗಿಡ ಮರ ಪಕ್ಷಿಪ್ರಾಣಿಗಳು ಕೊನೆಗೆ ನಾವೆಲ್ಲರೂ ಸೃಷ್ಟಿಯಾಗಿರುವುದೇ ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಮತ್ತು ನ್ಯೂಕ್ಲಿಯಸ್‌ನಿಂದಲೇ! ಈಗ ಹೇಳಿ, ನಮ್ಮೆಲ್ಲರ ಇಷ್ಟವಾದ ಚಿನ್ನದ ಮೂಲ ಕಥೆ ಎಲ್ಲಿದೆ? ಹೇಗಿದೆ? ಸ್ವಲ್ಪ ತಣ್ಣಗೆ ಕಣ್ಣು ಮುಚ್ಚಿ ಊಹಿಸಿಕೊಳ್ಳಿ. ಹ್ಞಾ, ಇನ್ನೊಂದು ವಿಷಯ ಮರತೇಹೋಗಿತ್ತು. ನಮ್ಮೆಲ್ಲರ ದೇಹದಲ್ಲಿ ತುಂಬಿಕೊಂಡಿರುವುದು ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಮತ್ತು ನ್ಯೂಕ್ಲಿಯಸ್ ಸಂಯೋಜನೆಯ 94 ಧಾತುಗಳು ಮತ್ತು ಕೃತಕವಾಗಿ ಸಂಶ್ಲೇಷಿಸಲ್ಪಟ್ಟ 24 ಧಾತುಗಳೂ ಇರಬಹುದು! ಅಂದರೆ ಪಂಚಭೂತಗಳ ಮೂಲ ಧಾತುಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.