ADVERTISEMENT

ಭೂಗತ ಪಾತಕಿ ಲಖನ್‌ನ ಗಾಂಧಿವಾದಿ ಕಥನ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 23:30 IST
Last Updated 5 ಏಪ್ರಿಲ್ 2025, 23:30 IST
<div class="paragraphs"><p>ಲಕ್ಷ್ಮಣ್‌ ತುಕಾರಾಂ ಗೋಲೆ</p></div>

ಲಕ್ಷ್ಮಣ್‌ ತುಕಾರಾಂ ಗೋಲೆ

   
ಲಕ್ಷ್ಮಣ್‌ ತುಕಾರಾಂ ಗೋಲೆ ಒಂದು ಕಾಲದಲ್ಲಿ ಭೂಗತ ಜಗತ್ತಿನ ಡಾನ್. ಈಗ ಅಪ್ಪಟ ಗಾಂಧಿವಾದಿ! ಈ ರೂಪಾಂತರದ ಕಥನವೇ ಸ್ವಾರಸ್ಯಕರ.

ಲಕ್ಷ್ಮಣ್‌ ತುಕಾರಾಂ ಗೋಲೆ ತನ್ನ 16ನೇ ವಯಸ್ಸಿನಲ್ಲಿಯೇ ಪಾತಕ ಜಗತ್ತಿಗೆ ಕಾಲಿರಿಸುತ್ತಾನೆ. ಅಲ್ಲಿಂದ ಆರಂಭವಾದ ಕತ್ತಲ ಜಗತ್ತಿನ ಪಯಣದಲ್ಲಿ ಅಪರಾಧಗಳನ್ನು ಎಸಗುತ್ತಾ, ಪೊಲೀಸರಿಂದ ತಪ್ಪಿಸಿಕೊಳ್ಳುತ್ತಾ ಆತ ಬದುಕಿದ ರೀತಿಯೇ ರೋಚಕ. ಈತ ಒಂಬತ್ತು ಮಂದಿಯ ತಂಡ ಕಟ್ಟಿಕೊಂಡು ಪಿಕ್‌ಪಾಕೆಟ್, ಸರಗಳ್ಳತನದಿಂದ ಹಿಡಿದು ಕೈ–ಕಾಲು ಕತ್ತರಿಸುವ ಸುಪಾರಿ ಪಡೆದು ಮುಂಬೈನ ಜನ ಹಾಗೂ ಪೊಲೀಸರಿಗೆ ದೊಡ್ಡ ತಲೆನೋವಾಗಿರುತ್ತಾನೆ.

ಗೋಲೆ ಒಮ್ಮೆ ಸ್ನೇಹಿತರೊಂದಿಗೆ ರಸ್ತೆಬದಿಯ ಗೂಡಂಗಡಿಯಲ್ಲಿ ವಡಾಪಾವ್ ತಿನ್ನುತ್ತಾ ನಿಂತಿದ್ದಾಗ, ಹತ್ತಿರದ ನಲ್ಲಿಯಲ್ಲಿ ನೀರು ಹಿಡಿಯಲು ಜಗಳ ಶುರುವಾಗಿತ್ತು. ರೌಡಿಯೊಬ್ಬ ನೀರಿಗಾಗಿ ಬಂದಿದ್ದ ಯುವತಿಯನ್ನು ಛೇಡಿಸತೊಡಗಿದ. ಕೋಪಗೊಂಡ ಆಕೆ ಏನೂ ತೋಚದೆ ವಡಾಪಾವ್ ತಿನ್ನುತ್ತಿದ್ದವರ ಬಳಿ ಬಂದು ‘ನಿಮಗೆ ಏನೂ ಅನ್ನಿಸುತ್ತಿಲ್ಲವೇ’ ಎಂದು ಕೇಳಿದಾಗ, ಲಕ್ಷ್ಮಣ್‌ ಪಕ್ಕದ ಸಲೂನ್‌ನಿಂದ ರೇಜರ್ ತಂದು ಆವೇಶಭರಿತನಾಗಿ ಆ ರೌಡಿಯ ಮೇಲೆ ಚಂಗನೆ ಹಾರಿ ಕಿವಿಗೆ ಹೊಡೆದ. ಆ ಹೊಡೆತಕ್ಕೆ ಕಿವಿಯೇ ಕತ್ತರಿಸಿ ಬಿತ್ತು. ಅವನ ಹೊಟ್ಟೆಗೂ ತಿವಿಯ ತೊಡಗಿದ. ಅಲ್ಲಿದ್ದ ಜನ ದೂರ ಸರಿದರು. ಹೆಂಗಸರು ಬೆದರಿ ತಮ್ಮ ಜೋಪಡಿ ಸೇರಿಕೊಂಡರು. ಅಂದಿನಿಂದ ಪಾತಕಲೋಕದಲ್ಲಿ ‘ರೇಜರ್ ಲಖನ್’ ಎಂದೇ ಹೆಸರಾದ.

ADVERTISEMENT

ಬಂಧನಕ್ಕೊಳಗಾಗಿ ಜೈಲು ಸೇರಿದಾಗ ಅವನೆದುರಿಗೆ ತೆರೆದುಕೊಂಡದ್ದು ವಿಚಿತ್ರ ಹಾಗೂ ಅಷ್ಟೇ ಭಯಾನಕ ಪಾತಕ ಜಗತ್ತು. ಛೋಟಾ ರಾಜನ್, ಅಮರ ನಾಯಕ್, ದಾವೂದ್ ಮುಂತಾದವರು ತಮ್ಮ ಗುಂಪುಗಳಿಗೆ ಹುಡುಗರನ್ನು ಸೇರಿಸಿಕೊಳ್ಳಲು ಜೈಲು ಸೂಕ್ತ ಸ್ಥಳವಾಗಿತ್ತು. ಚಾಕುವಿನಿಂದ ಇರಿಯುವ ವಿಧಾನ, ಎಲ್ಲಿ, ಹೇಗೆ, ಎಷ್ಟು ಆಳಕ್ಕೆ ಇರಿಯಬೇಕು, ಚಾಕುವಿನ ಉದ್ದ, ಅಗಲ, ಹರಿತ... ಇವೆಲ್ಲವನ್ನು ಕೈದಿಗಳು ಲಕ್ಷ್ಮಣ್‌ಗೆ ಹೇಳಿಕೊಟ್ಟರು!

ಇಲ್ಲಿ ಪಳಗಿದ ನಂತರ ಎಸಗಿದ ಅಪರಾಧಗಳಿಗೆ ಲೆಕ್ಕವಿಲ್ಲ. ಹಲ್ಲೆ, ಇರಿತ, ಧಮ್ಕಿ, ಲೂಟಿ, ಹಫ್ತಾ ವಸೂಲಿ, ನಿಯಮ ಬಾಹಿರ ವಿದ್ಯುತ್ ಸಂಪರ್ಕ, ಮಾದಕ ವಸ್ತು ಕಳ್ಳ ಸಾಗಣೆ, ಸಿನಿಮಾ ಟಿಕೆಟ್ ಬ್ಲಾಕ್ ಮಾರಾಟ... ಹೀಗೆ ಹತ್ತಾರು ಕೃತ್ಯಗಳು. ಕೊಲೆ ಹಾಗೂ ಅತ್ಯಾಚಾರ ಇವೆರಡನ್ನು ಹೊರತುಪಡಿಸಿ ಮಾಡದ ಅಪರಾಧಗಳೇ ಇಲ್ಲ. ಜೈಲಿಗೆ ಹೋಗುವುದು, ಬಿಡುಗಡೆ ಹೊಂದುವುದು ಮಾಮೂಲಿ ಆಯಿತು. ಅಪರಾಧಕ್ಕೆ ಸಂಬಂಧಿಸಿದ ಕಾನೂನುಗಳು ಹಾಗೂ ವಿವಿಧ ಸೆಕ್ಷನ್‌ಗಳು ಈತನ ನಾಲಗೆ ತುದಿಯಲ್ಲಿದ್ದವು! ಈ ಕಾನೂನುಗಳ ಬಗ್ಗೆ ಪೊಲೀಸರಿಗೇ ಅನುಮಾನ ಬಂದಾಗ ಸ್ಪಷ್ಟತೆಗಾಗಿ ಅವರು ಕೇಳುತ್ತಿದ್ದುದು ಗೋಲೆಯನ್ನೇ!

ಬಾಳೇಕರ್‌ ತೋರಿದ ಗಾಂಧಿ ಪಥ

ಜೈಲಿನಲ್ಲಿದ್ದ ಮತ್ತೊಬ್ಬ ಕೈದಿ ಬಾಳೇಕರ್ ಈತನಿಗೆ ಪರಿಚಯವಾದರು. ಗಾಂಧೀಜಿ ಪ್ರಭಾವಕ್ಕೊಳಗಾಗಿದ್ದ ಬಾಳೇಕರ್, ಸಹಚರರನ್ನು ಸೇರಿಸಿಕೊಂಡು ಜೈಲಿನ ಅಮಾನವೀಯ ನಿಯಮಗಳ ವಿರುದ್ಧ ಉಪವಾಸ ಸತ್ಯಾಗ್ರಹ ಶುರುಮಾಡಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಗಿತ್ತು. ಲಖನ್, ಬಾಳೇಕರ್ ಜೊತೆ ಕೈ ಜೋಡಿಸಿದ. ಇದೇ ಸಂದರ್ಭದಲ್ಲಿ ಲಖನ್‌ಗೆ ಸಿಕ್ಕಿದ್ದು ಗಾಂಧೀಜಿ ಆತ್ಮಕಥನ ‘ಸತ್ಯಾಚೆ ಪ್ರಯೋಗ್’. ಇದು ಲಖನ್ ಜೀವನದ ಪರಿವರ್ತನೆಯ ಅಮೃತ ಗಳಿಗೆ. ಚಾಕು-ಚೂರಿ ಹಿಡಿದಿರುತ್ತಿದ್ದ ಕೈಗಳಲ್ಲಿ ಗಾಂಧೀಜಿಯ ಸತ್ಯ-ಅಹಿಂಸೆಯ ಪುಸ್ತಕಗಳು!

ಅಲ್ಲಿಂದ ಆರಂಭವಾದುದು ಲಖನ್‌ನ ಪರಿವರ್ತನೆಯ ಪರ್ವ. ಮಾಂಸಾಹಾರ-ಮದ್ಯಪಾನವನ್ನು ಸಂಪೂರ್ಣ ತ್ಯಜಿಸಿದರು. ಜೈಲಿನಲ್ಲಿ ಸ್ವಯಂಪ್ರೇರಿತರಾಗಿ ಕಸಗುಡಿಸುವ ಹಾಗೂ ಶೌಚಾಲಯ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿದರು. ರೌಡಿಗಳಿಗೆ ಅಗತ್ಯವೆಂದು ತಿಳಿದಿದ್ದ ಗಡ್ಡಮೀಸೆ ತೆಗೆಸಿದರು. ಸರ್ವಧರ್ಮ ಪ್ರಾರ್ಥನೆ, ಯೋಗಾಭ್ಯಾಸವನ್ನು ಆರಂಭಿಸಿದರು. ಇವೆಲ್ಲಾ ಬಾಹ್ಯದ ಬದಲಾವಣೆಗಳಾದರೆ, ಆಂತರಿಕವಾಗಿ ಸಮಚಿತ್ತ ಕಾಪಾಡುವ ಪ್ರಯತ್ನ ನಡೆಸಿದರು. ಮಾತು ಕಡಿಮೆ ಮಾಡಿ ಓದು ಹಾಗೂ ಧ್ಯಾನದಲ್ಲಿ ಗಮನ ಹರಿಸತೊಡಗಿದರು. ತಮಗೇ ಅಚ್ಚರಿ ಎನ್ನುವಂತೆ ಶಾಂತಚಿತ್ತರಾದರು. ಎಲ್ಲವನ್ನು ನಗುನಗುತ್ತಲೇ ಸ್ವೀಕರಿಸತೊಡಗಿದರು. ಈ ಬದಲಾವಣೆಯಿಂದ ಜೈಲು ಅಧಿಕಾರಿಗಳಿಗೆ ಲಖನ್ ಬಗ್ಗೆ ಒಂದೆಡೆ ಅನುಮಾನವಾದರೆ ಮತ್ತೊಂದೆಡೆ ಅಚ್ಚರಿ.

ಜೂನ್ 8, 2006 ಲಖನ್ ಜೀವನದಲ್ಲಿ ನಿರ್ಣಾಯಕ ದಿನ. ಅವರ ಮೇಲಿದ್ದದ್ದು ಒಟ್ಟು 19 ಆರೋಪಗಳು. ನ್ಯಾಯಾಧೀಶ ರಿಗೆ ಕೈಮುಗಿದು ತನ್ನೆಲ್ಲಾ ತಪ್ಪುಗಳನ್ನು ಒಪ್ಪಿಕೊಂಡು ಯಾವುದೇ ಶಿಕ್ಷೆಗೆ ತಯಾರಿದ್ದೇನೆ ಎಂದು ನಿವೇದಿಸಿಕೊಂಡರು. ‘ಹೊಡೆಯಲು, ಬಡಿಯಲು, ಹೊಡಿಸಿಕೊಳ್ಳಲು, ಚೂರಿ ಹಾಕಲು ನನಗೆ ಧೈರ್ಯದ ಅಗತ್ಯ ಇರಲಿಲ್ಲ. ಆದರೆ ನ್ಯಾಯಾಧೀಶರ ಮುಂದೆ ಸತ್ಯ ನುಡಿಯಲು, ತಪ್ಪು ಒಪ್ಪಿಕೊಳ್ಳಲು ಅಪಾರವಾದ ಧೈರ್ಯಬೇಕು’ ಎಂದರು. ಲಖನ್‌ನ ಸನ್ನಡತೆ ಹಾಗೂ ತಪ್ಪೊಪ್ಪಿಗೆಗಾಗಿ ಏಳು ವರ್ಷಗಳ ಸಜೆಯನ್ನು ನಾಲ್ಕು ವರ್ಷಗಳಿಗೆ ಇಳಿಸಲಾಯಿತು. ನಾಸಿಕ್ ಜೈಲಿನಲ್ಲಿ ತನ್ನ ಸಹಚರರ ಮನಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸಿದರು. ಮುಂಬೈನ ಸರ್ವೋದಯ ಮಂಡಳಿಯ ಸಹಾಯದಿಂದ ಗಾಂಧಿ ಸಾಹಿತ್ಯ ಪಡೆದು ಅವರಿಗೆಲ್ಲ ಪರಿಚಯಿಸಿ ಅವರಲ್ಲಿ ಹಲವರ ಮನಪರಿವರ್ತನೆ ಮಾಡಿದರು. ಇವರ ಸನ್ನಡತೆ ಹಾಗೂ ಕೈದಿಗಳ ಮನಪರಿವರ್ತನೆ ಕಾರ್ಯಗಳಿಗಾಗಿ ಶಿಕ್ಷೆ ಅವಧಿಯನ್ನು ಇಳಿಸಲಾಯಿತು. ಲಖನ್ ಯಾರಿಗೆಲ್ಲಾ ತೊಂದರೆ ಕೊಟ್ಟಿದ್ದರೋ ಅವರಿಗೆಲ್ಲಾ ಜೈಲಿನಿಂದಲೇ ಕ್ಷಮಾಪಣಾ ಪತ್ರ ಬರೆದರು.

ಇವರು ಬಿಡುಗಡೆಯಾದದ್ದು 2006 ರ ಫೆಬ್ರುವರಿ 28 ರಂದು. ಹೊಸ ಜೀವನ ಕಣ್ಮುಂದೆ. ಪರಿವರ್ತನೆಯ ಪ್ರತಿ ಹಂತದಲ್ಲೂ ಸಹಕಾರ ನೀಡಿದ್ದ ಮುಂಬೈ ಸರ್ವೋದಯ ಮಂಡಳಿಯ ಸೋಮಯ್ಯನವರನ್ನು ಕಾಣಲು ರೈಲು ಹತ್ತುತ್ತಾರೆ. ಅದೇ ರೈಲಿನಲ್ಲಿ ಅದೆಷ್ಟೋ ಬಾರಿ ಟಿಕೆಟ್ ಇಲ್ಲದೆ, ಅಧಿಕಾರಿಗಳ ಕಣ್ಣು ತಪ್ಪಿಸಿ, ಶೌಚಾಲಯದಲ್ಲಿ ಬಚ್ಚಿಟ್ಟುಕೊಂಡು ಪ್ರಯಾಣಿಸಿರಲಿಲ್ಲ! ಈಗ ಯಾವುದೇ ಆತಂಕವಿಲ್ಲದೆ ಆರಾಮಾಗಿ ಕುಳಿತು ಪ್ರಯಾಣ. ಸ್ವಾತಂತ್ರ್ಯ ಅಂದರೆ ಇದೇ ತಾನೆ? ನಿರ್ಭೀತಿ!

ಗಾಂಧಿ ತತ್ವ ಪ್ರಚಾರಕ: ಸರ್ವೋದಯ ಮಂಡಳಿಯ ಪುಸ್ತಕದ ಅಂಗಡಿಯ ಕೆಲಸದ ಜೊತೆಗೆ ಮಂಡಳಿ ನಡೆಸುತ್ತಿದ್ದ ‘ಗಾಂಧಿ ಪರಿಚಯ್ ಪರೀಕ್ಷಾ’ಗಳನ್ನು ನಡೆಸುವ ಉಸ್ತುವಾರಿ! ಲಖನ್‌ನ ಪರಿವರ್ತನೆ ತಿಳಿದ ಮಿಲ್ಟನ್ ಪ್ಲಾಸ್ಟಿಕ್ ಕಂಪನಿಯಿಂದ ಕೆಲಸದ ಅವಕಾಶ. ಸುದ್ದಿವಾಹಿನಿಯೊಂದು 2015 ರಲ್ಲಿ ‘ಜಿಂದಗಿ ಲೈವ್’ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ಫೈಜಲ್ ಹಜ್ಮಿಯವರ ನಿರ್ದೇಶನದಲ್ಲಿ ಇವರ ಜೀವನಾಧಾರಿತ ಬಯೋಪಿಕ್ ‘ಲಕ್ಷ್ಮಣ್‌ ಗೋಲೆ’ ಸಿನಿಮಾವಾಗಿದೆ. ‘ಅಪರಾಧವನ್ನು ದ್ವೇಷ ಮಾಡಿ, ಅಪರಾಧಿಯನ್ನಲ್ಲ’ ಎಂಬ ಸಂದೇಶದೊಂದಿಗೆ ಲಕ್ಷ್ಮಣ್‌ ದೇಶದಾದ್ಯಂತ ಗಾಂಧಿ ವಿಚಾರಗಳನ್ನು ಯುವಜನತೆಗೆ ಹಾಗೂ ಮುಖ್ಯವಾಗಿ ಬಂದಿಖಾನೆಯಲ್ಲಿರುವ ಅಪರಾಧಿಗಳಿಗೆ ತಲುಪಿಸಲು ಉಪನ್ಯಾಸಗಳನ್ನು ನೀಡುತ್ತಾ ಸಂಚರಿಸುತ್ತಿದ್ದಾರೆ.

ಕರ್ನಾಟಕದ ಹಲವು ಜೈಲುಗಳಲ್ಲಿ ಉಪನ್ಯಾಸ ನೀಡಿದ್ದಾರೆ. ರಾಜ್ಯ ಸರ್ವೋದಯ ಮಂಡಳಿ ಅಧ್ಯಕ್ಷ ಎ.ಎಸ್.ಸುರೇಶ್‌ ಅವರು ಲಕ್ಷ್ಮಣ್‌ ಜೀವನಾಧಾರಿತ ಪುಸ್ತಕ ‘ಗಾಂಧಿಯಾನದೆಡೆಗೆ…’ ಹೊರತಂದಿದ್ದಾರೆ.

ಲಕ್ಷ್ಮಣ್‌, ಕೈದಿಗಳ ಮನಪರಿವರ್ತನೆ ಮಾತ್ರ ಮಾಡುವುದಿಲ್ಲ, ಅವರಿಗೆ ಸೂಕ್ತ ಕೆಲಸ ದೊರಕಿಸುವಲ್ಲೂ ನೆರವು ನೀಡುತ್ತಿದ್ದಾರೆ. ಗಾಂಧಿವಾದದ ಮೂರ್ತಿರೂಪದಂತಿರುವ ಗೋಲೆ ತಮ್ಮ ಕಾರ್ಯಗಳನ್ನು ಮುಂದುವರೆಸಲು ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಏಕೆಂದರೆ ನಮ್ಮ ಬಂದಿಖಾನೆಗಳಲ್ಲೂ ನೂರಾರು ಲಕ್ಷ್ಮಣ್‌ ಗೋಲೆಗಳಿದ್ದಾರೆ. ಅವರೂ ರೂಪಾಂತರಗೊಳ್ಳಬೇಕು ಅಲ್ಲವೆ, ಚಿಟ್ಟೆಯಂತೆ!

ಗಾಂಧಿ ಪಥ ನಾಟಕ

ದೇಶದ ಪ್ರಥಮ ಸ್ವಾತಂತ್ರ ಗ್ರಾಮ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ರಾಜ್ಯ ಸರ್ವೋದಯ ಮಂಡಳಿಯ ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಶಿವಮೊಗ್ಗದ ಸರಂತ ರಂಗತಂಡದವರು ಕಾಂತೇಶ್ ಕದರಮಂಡಲಗಿ ನಿರ್ದೇಶನದಲ್ಲಿ ಎಚ್.ಎಸ್.ಸುರೇಶ್ ರಚಿಸಿರುವ ‘ಗಾಂಧಿ ಪಥ’ ನಾಟಕದ ಪ್ರಥಮ ಪ್ರದರ್ಶನ ನೀಡಿದರು. ವಿಶೇಷ ಅತಿಥಿಯಾಗಿದ್ದ ಲಕ್ಷ್ಮಣ್‌ ಗೋಲೆ ನಾಟಕ ವೀಕ್ಷಿಸಿ ಸಂತಸಗೊಂಡು ‘ಈ ನಾಟಕವನ್ನು ಮುಖ್ಯವಾಗಿ ಯುವಜನತೆ ಹಾಗೂ ಕೈದಿಗಳಿಗೆ ತೋರಿಸಬೇಕು’ ಎಂದು ಅಭಿಪ್ರಾಯಪಟ್ಟರು. ನಾಟಕ ಪ್ರದರ್ಶನಕ್ಕೆ (9448414752) ಸಂಪರ್ಕಿಸಬಹುದು.

ಗಾಂಧಿ ಪಥ ನಾಟಕದ ದೃಶ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.