ಈಗೊಂದು 75-80 ವರ್ಷಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿ ಭಾಗದಲ್ಲಿ ಹುಲಿಗಳು ಹೇರಳವಾಗಿ ಇದ್ದವು. ಅಲ್ಲಿನ ಕಾಡುಗಳಲ್ಲಿ ಒಂದು ಜಾತಿಯ ಹುಲ್ಲು ಹೆಚ್ಚಾಗಿ ಬೆಳೆಯುತ್ತಿತ್ತು. ಇದನ್ನು ಗಮನಿಸಿದ ಆಗಿನ ಸರ್ಕಾರ ಹಳ್ಳಿಗರಿಗೆ ಜಾನುವಾರು ಸಾಕಲು ಪ್ರೋತ್ಸಾಹ ನೀಡಿದ್ದರಿಂದ, ಹುಲ್ಲು ಮೇಯಲು ಕಾಡಿಗೆ ಜಾನುವಾರುಗಳನ್ನು ಬಿಡುವ ಪರಿಪಾಟ ಪ್ರಾರಂಭವಾಯಿತು. ಆ ಕಾಡಿನ ಹುಲಿಯೊಂದಕ್ಕೆ ಕಾಡುಪ್ರಾಣಿಗಳನ್ನು ಬೇಟೆಯಾಡುವುದಕ್ಕಿಂತ ಸಾಕಿದ ಜಾನುವಾರುಗಳನ್ನು ಬೇಟೆಯಾಡುವುದೇ ಸುಲಭ ಮತ್ತು ಸುರಕ್ಷಿತವೆಂದು ತೋರಿತೆಂದು ಕಾಣುತ್ತದೆ. ಹಳ್ಳಿಗರ ಜಾನುವಾರುಗಳನ್ನು ಹಿಡಿಯಲು ಪ್ರಾರಂಭಿಸಿತು. ಬಲುಬೇಗನೆ ಅದು ವನ್ಯಪ್ರಾಣಿಗಳ ಬೇಟೆ ನಿಲ್ಲಿಸಿತು. ಸಾಕಿದ ದನಗಳನ್ನು ರಾಜಾರೋಷವಾಗಿ ಹಿಡಿದು ತಿನ್ನುವ ಹುಲಿಯನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂಬ ಹಳ್ಳಿಗರ ಪ್ರಯತ್ನ ವಿಫಲವಾದ ಕಾರಣಕ್ಕೆ ಆ ಹುಲಿ ನರಭಕ್ಷಕವಾಗಿ ಪರಿವರ್ತಿತವಾಯಿತು. ನರಭಕ್ಷಕ ಹುಲಿಗಳನ್ನು ಕೊಲ್ಲುವ ಕೆನೆತ್ ಆಂಡರ್ಸನ್ ಬಂದು ಆ ಹುಲಿಯನ್ನು ಕೊಲ್ಲುತ್ತಾನೆ. ಈ ಘಟನೆಯನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ಬೆಳ್ಳಂದೂರಿನ ನರಭಕ್ಷಕ’ ಎಂಬ ಕಾಡಿನಕಥೆಯಲ್ಲಿ ವಿವರಿಸಲಾಗಿದೆ.
ನಿರಂತರ ಬೇಟೆ ಕಾರಣಕ್ಕೆ ಈಗ್ಗೆ ನೂರು ವರ್ಷಗಳ ಹಿಂದೆ ಭಾರತದ ಕಾಡುಗಳಲ್ಲಿದ್ದ ಹುಲಿಗಳ ಸಂಖ್ಯೆ ಲಕ್ಷದಿಂದ ಸಾವಿರಕ್ಕಿಳಿಯಿತು. ಸ್ವಾತಂತ್ರ‍್ಯ ಪೂರ್ವದ ಬ್ರಿಟಿಷ್ ಆಡಳಿತ ಮತ್ತು ಸ್ವಾತಂತ್ರ್ಯೋತ್ತರ ಭಾರತ ಸರ್ಕಾರ ಹುಲಿ ಬೇಟೆಗೆ ಪ್ರೋತ್ಸಾಹ ನೀಡುತ್ತಿದ್ದವು. 1965ರವರೆಗೂ ಹುಲಿಯನ್ನು ಕೊಂದು ಅದರ ಬಾಲವನ್ನು ಜಿಲ್ಲಾಧಿಕಾರಿಗೆ ನೀಡಿ, ಒಂದು ನೂರು ರೂಪಾಯಿ ಇನಾಮು ಪಡೆಯಬಹುದಿತ್ತು. ಹುಲಿಯನ್ನು ಬೇಟೆಯಾಡುವುದು ಸಮಾಜದಲ್ಲಿ ಪ್ರತಿಷ್ಠೆಯ ಸಂಗತಿಯಾಗಿತ್ತು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ವನ್ಯಜೀವಿಗಳ ಸಂರಕ್ಷಣೆಗಾಗಿ ವನ್ಯಜೀವಿ ಕಾಯ್ದೆ 1972 ಅನ್ನು ಜಾರಿಗೆ ತಂದರು. ಇದರಿಂದ ಹುಲಿ, ಸಿಂಹ, ಆನೆ, ಚಿರತೆಗಳಿಗೆ ಅತಿ ಹೆಚ್ಚು ರಕ್ಷಣೆ ದೊರಕಿತು. ಆಗಿನ ಕೇಂದ್ರ ಸರ್ಕಾರ ಹುಲಿಗಳ ಸಂರಕ್ಷಣೆ ಮಾಡಲೇಬೇಕು ಎಂದು ಸಂಕಲ್ಪ ತೊಟ್ಟು, 1973ರಲ್ಲಿ ಹುಲಿ ಯೋಜನೆಯನ್ನು ಪ್ರಾರಂಭಿಸಿತು. ಈಗ ಭಾರತ ಹೆಚ್ಚು ಹುಲಿಗಳನ್ನು ಹೊಂದಿದ ದೇಶವೆಂದು ಪರಿಗಣಿಸಲ್ಪಟ್ಟಿದೆ. ಹಾಗಾದರೆ ಹುಲಿಗಳ ರಕ್ಷಣೆ ಬಹಳ ಸಮರ್ಥವಾಗಿ ಆಗುತ್ತಿದೆಯೇ ಎಂಬುದನ್ನು ಮುಂದೆ ನೋಡೋಣ.
ಹುಲಿ ಮೂಲತಃ ಅತ್ಯಂತ ನಾಚಿಕೆ ಸ್ವಭಾವದ ಪ್ರಾಣಿ. ದಟ್ಟವಾದ ಕಾಡಿನಲ್ಲಿ ನೀವು ಪ್ರತಿ ದಿನ ತಿರುಗಾಡುತ್ತೀರಿ, ಅದು ಹುಲಿಯ ಆವಾಸಸ್ಥಾನವೂ ಆಗಿದೆ ಎಂದುಕೊಳ್ಳಿ. ಹುಲಿ ತಜ್ಞರ ಪ್ರಕಾರ, ನೀವು ಹುಲಿಯನ್ನು ಎದುರಿಸುವ ಸಂದರ್ಭ ತೀರಾ ಕಡಿಮೆ. ಹುಲಿ ನಿಮ್ಮನ್ನು ನೂರು ಬಾರಿ ನೋಡಿದ್ದರೆ, ನೀವು ಹುಲಿಯನ್ನು ಒಮ್ಮೆ ಮಾತ್ರ ನೋಡಲು ಸಾಧ್ಯ. ಇದಕ್ಕೆ ಪೂರಕವಾದ ಒಂದು ಘಟನೆ ಹೀಗಿದೆ.
ಮಹಾರಾಷ್ಟ್ರದ ತಾಡೋಬ ಹುಲಿ ಸಂರಕ್ಷಿತ ಪ್ರದೇಶದ ರಾಯಲ್ ಬೆಂಗಾಲ್ ಹುಲಿಯೊಂದು ಎರಡು ಸಾವಿರ ಕಿಲೋಮೀಟರ್ ದೂರದ ಅತಿ ದೀರ್ಘ ಪಯಣವನ್ನು ಪೂರ್ಣಗೊಳಿಸಿದ ಅಪೂರ್ವ ಪ್ರಸಂಗವಿದು. ಛತ್ತೀಸ್‍ಗಢ, ತೆಲಂಗಾಣ, ಆಂಧ್ರಪ್ರದೇಶಗಳನ್ನು ದಾಟಿ ಒಡಿಶಾ ತಲುಪಿದ ಅಸಾಧಾರಣ ರೋಚಕ ಘಟನೆ. ನಾಲ್ಕು ರಾಜ್ಯಗಳ, ಕಾಡುಮೇಡು, ಗುಡ್ಡಬೆಟ್ಟಗಳನ್ನು ಬಳಸಿಕೊಂಡು, ಕೃಷಿ ಜಮೀನು ಹಾದು, ಗಣಿ ಪ್ರದೇಶವನ್ನು ದಾಟಿ, ಅತ್ತ ಜನವಸತಿ ಪ್ರದೇಶಗಳನ್ನೂ ನಿರಾಯಾಸವಾಗಿ ಸಾಗಿ ತನ್ನ ಗಮ್ಯವನ್ನು ತಲುಪಿ, ಹೊಸನೆಲೆಯನ್ನು ಮತ್ತು ಸಂಗಾತಿಯನ್ನು ಸೇರಿಕೊಂಡಿದ್ದನ್ನು ದಾಖಲಿಸಲಾಗಿದೆ. ತಿಂಗಳುಗಟ್ಟಲೆ ಕ್ರಮಿಸಿದ ಈ ದೀರ್ಘ ಪಯಣದಲ್ಲಿ ಮನುಷ್ಯನ ಜೊತೆ ಒಂದೇ ಒಂದು ಸಂಘರ್ಷವಾದ ದಾಖಲೆಯಿಲ್ಲದಿರುವುದು ಈ ಹುಲಿಯ ಪಯಣದ ವಿಶಿಷ್ಟತೆಯಾಗಿದೆ.
ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ತಾಡೋಬ ಹುಲಿ ಸಂರಕ್ಷಿತ ಪ್ರದೇಶದ ಬ್ರಹ್ಮಪುರಿ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿ 2021ರಲ್ಲಿ ಕ್ಯಾಮೆರಾ ಟ್ರ‍್ಯಾಪಿನಲ್ಲಿ ಈ ಹುಲಿಯ ಪಯಣವನ್ನು ಪತ್ತೆ ಮಾಡಲಾಗಿತ್ತು. ಪ್ರತಿ ಮನುಷ್ಯರ ಕೈಬೆರಳಚ್ಚು ಹೇಗೆ ಭಿನ್ನವಾಗಿರುತ್ತದೆಯೋ ಹಾಗೆಯೇ ಹುಲಿಗಳ ಪಟ್ಟೆಯೂ ಪ್ರತಿಯೊಂದರಲ್ಲೂ ಭಿನ್ನವಾಗಿರುತ್ತದೆ. ಈ ಪಟ್ಟೆಗಳನ್ನು ಆಧರಿಸಿಯೇ ಹುಲಿಯ ಚಲನವಲನವನ್ನು ಪತ್ತೆ ಮಾಡಬಹುದಾಗಿದೆ.
2023ರ ಜೂನ್-ಜುಲೈ ತಿಂಗಳಲ್ಲಿ ಒಡಿಶಾದ ರಾಯಗಢ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹುಲಿ ಕಂಡು ಬಂದಿತು. ಆಂಧ್ರ ಪ್ರದೇಶದ ಶ್ರೀಕಾಕುಲಂ ಮತ್ತು ಮಹೇಂದ್ರಗಿರಿ ಅರಣ್ಯ ವಿಭಾಗದಲ್ಲಿ ಸಂಚರಿಸುತ್ತಿರುವ ಮಾಹಿತಿ ಅಲ್ಲಿನ ಅರಣ್ಯ ಇಲಾಖೆಯವರಿಗೆ ಇತ್ತು. ಸೆಪ್ಟೆಂಬರ್ 2023ರಲ್ಲಿ ಗಜಪತಿ ಜಿಲ್ಲೆಯ ಪರ್ಲಾಕೆಮುಂಡಿ ಅರಣ್ಯ ವಿಭಾಗದಲ್ಲಿ ಒಂದು ಹಸುವನ್ನು ಕೊಂದ ಘಟನೆ ದಾಖಲಾಯಿತು. ಈ ಭಾಗದಲ್ಲಿ ಕಳೆದು ಮೂವತ್ತು ವರ್ಷಗಳಲ್ಲಿ ಹುಲಿ ಕಂಡು ಬಂದ ಘಟನೆ ದಾಖಲಾಗಿರಲಿಲ್ಲ. ವಲಸೆ ಹುಲಿಯ ಚಲನವಲನದ ಮೇಲೆ ನಿಗಾ ಇಟ್ಟಿರುವ ಒಡಿಶಾ ಅರಣ್ಯ ಇಲಾಖೆಯು ಸ್ಥಳೀಯರಿಗೆ ರಾತ್ರಿ ಸಮಯದಲ್ಲಿ ಮನೆಯಿಂದ ಆಚೆ ಬಾರದಂತೆ ಎಚ್ಚರಿಕೆ ನೀಡುತ್ತಾ, ಹುಲಿ ಸಂರಕ್ಷಣೆಗೆ ಒತ್ತು ಕೊಡುತ್ತಿದೆ. ಜೊತೆಗೆ ಹಸುವನ್ನು ಕಳೆದುಕೊಂಡವರಿಗೆ ಪರಿಹಾರವನ್ನೂ ನೀಡುತ್ತಿದೆ.
ಅನೇಕ ಅಡಚಣೆಗಳನ್ನು ನಿವಾರಿಸಿಕೊಂಡು ಎರಡು ಸಾವಿರ ಕಿ.ಮೀ ದೂರದ ಸಾಹಸಮಯ ಪಯಣವನ್ನು ಪೂರೈಸಿ, ಹೊಸ ನೆಲೆಯನ್ನು ಹಾಗೂ ಸಂಗಾತಿಯನ್ನು ಕಂಡುಕೊಂಡ ಈ ಅಪೂರ್ವ ಘಟನೆಯು ಸಂರಕ್ಷಣೆಯ ಹೊಸ ಆಯಾಮಗಳಿಗೆ ನಾಂದಿಯಾಗಿದೆ. ಗಡಿ-ಭಾಷೆಗಳಿಲ್ಲದ ವನ್ಯ ಸಂತತಿಗಳಿಗೆ ಸರಾಗವಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಚರಿಸಲು ಅಡಚಣೆಯಾಗುವ ಅಣೆಕಟ್ಟು, ಗಣಿ ಪ್ರದೇಶ, ಹೊಸ ನಗರಗಳ ನಿರ್ಮಾಣ, ಹೆದ್ದಾರಿ, ರೈಲು ಮಾರ್ಗಗಳು ಅಥವಾ ಇನ್ಯಾವುದೇ ರೀತಿಯ ಅಭಿವೃದ್ಧಿ ವರಸೆಗಳನ್ನು ಮರು ಪರಿಷ್ಕರಣೆ ಮಾಡುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಬರೀ ಸೀಮಿತ ಪರಿಧಿಯಲ್ಲಿ ವನ್ಯಜೀವಿಗಳು ಬದುಕುವುದಕ್ಕೆ ಬಯಸುವುದಿಲ್ಲ. ಅವುಗಳ ಮುಕ್ತ ಸಂಚಾರಕ್ಕೆ ಅನುವಾಗುವಂತೆ ನಮ್ಮ ಅಭಿವೃದ್ಧಿ ಮಾದರಿ ಇರಬೇಕು ಎನ್ನುವುದಕ್ಕೆ ಈ ಘಟನೆ ಒಂದು ಜ್ವಲಂತ ನಿದರ್ಶನವಾಗಿದೆ.
ಹೆಚ್ಚು ಸಾಂದ್ರತೆ ಹೊಂದಿರುವ ಪ್ರದೇಶದಿಂದ ಹುಲಿಗಳು ಕಡಿಮೆ ಸಾಂದ್ರತೆ ಇರುವ ಪ್ರದೇಶಕ್ಕೆ ತೆರಳುತ್ತವೆ ಎಂಬುದು ಇಲಾಖೆ ಮತ್ತು ಬಹಳಷ್ಟು ಹುಲಿ ತಜ್ಞರ ಸಾಮಾನ್ಯ ಅಭಿಪ್ರಾಯ. 2017ರಲ್ಲಿ ಕಡಿಮೆ ಸಾಂದ್ರತೆಯಿರುವ ಭದ್ರಾ ಅಭಯಾರಣ್ಯದ ಆಲದಹಾರದ ಹುಲಿಯೊಂದು 2021ರಲ್ಲಿ ಹೆಚ್ಚು ಸಾಂದ್ರತೆಯಿರುವ ನಾಗರಹೊಳೆಯಲ್ಲಿ ಕಂಡು ಬಂದಿತು. ಇದು ಅರಣ್ಯ ಇಲಾಖೆಯ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಘಟನೆ. ಇಂತಹ ಘಟನೆಯಿಂದ ಪಾಠ ಕಲಿಯುವ ಮೂಲಕ ಕರ್ನಾಟಕ ಅರಣ್ಯ ಇಲಾಖೆ ತನ್ನ ಧೋರಣೆಗಳನ್ನು ಇನ್ನಷ್ಟು ಪಕ್ವಗೊಳಿಸಿಕೊಳ್ಳಬೇಕು.
ಅಲ್ಲಿ ಹುಲಿಯೊಂದು ಮಹಾರಾಷ್ಟ್ರದ ತಾಡೋಬದಿಂದ ಒಡಿಶಾಕ್ಕೆ ಹೊರಡುತ್ತಿರುವ ಹೊತ್ತಿನಲ್ಲೇ ಕರ್ನಾಟಕ ಅರಣ್ಯ ಇಲಾಖೆ ರೇಡಿಯೊ ಕಾಲರ್ ಅಳವಡಿಸಿದ ಹುಲಿಯನ್ನು ಎಚ್ಚರ ತಪ್ಪಿಸಿ ಮೈಸೂರು ಭಾಗದಿಂದ ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯಕ್ಕೆ ತಂದು ಬಿಟ್ಟಿತು. ಒಂದು ಪ್ರದೇಶದಲ್ಲಿ ನೈಸರ್ಗಿಕವಾಗಿ ಹುಲಿಗಳ ಸಂಖ್ಯೆ ಆ ಪ್ರದೇಶದ ಧಾರಣ ಸಾಮರ್ಥ್ಯಕ್ಕಿಂತ ಹೆಚ್ಚಾದಾಗ, ಒಂದೋ ಪ್ರಾಯದ ಗಂಡು ಹುಲಿ ವಯಸ್ಸಾದ ಗಂಡು ಹುಲಿಯನ್ನು ಬಲಿ ಹಾಕುತ್ತದೆ ಅಥವಾ ಹೊಸ ನೆಲೆಯನ್ನು ಹುಡುಕಿಕೊಂಡು ಹೋಗುತ್ತದೆ. ಮೈಸೂರು ಭಾಗದಲ್ಲಿ ಹುಲಿ ಸಂಖ್ಯೆ ಹೆಚ್ಚಳವಾಗಿದ್ದರೆ, ನೈಸರ್ಗಿಕವಾಗಿಯೇ ಅದನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯ ಅವುಗಳಿಗೆ ಇತ್ತು. ಬಂಡೀಪುರದ ಮೂಲಕ ಭದ್ರಾ ಅಭಯಾರಣ್ಯಕ್ಕೆ ಬರಲು ನೈಸರ್ಗಿಕ ಪಥವೇ ಲಭ್ಯವಿತ್ತು. ರಾಷ್ಟ್ರೀಯ ಹುಲಿ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಎರಡು ಅಭಯಾರಣ್ಯಗಳ ಮಧ್ಯೆ ಹುಲಿಗಳ ಸಂಚಾರಕ್ಕೆ ನೈಸರ್ಗಿಕ ಪಥ ಲಭ್ಯವಿದ್ದಾಗ, ಯಾವುದೇ ಕಾರಣಕ್ಕೂ ಹುಲಿಯನ್ನು ಹಿಡಿದು ಮತ್ತೊಂದು ಭಾಗದಲ್ಲಿ ಬಿಡುವ ಹಾಗಿಲ್ಲ. ಆದರೆ, ಇಲ್ಲಿ ಅರಣ್ಯ ಇಲಾಖೆ ಹಸ್ತಕ್ಷೇಪ ಮಾಡಿದ್ದರಿಂದ ಯಡವಟ್ಟಾಯಿತು. ರಾಷ್ಟ್ರೀಯ ಹುಲಿ ಪ್ರಾಧಿಕಾರದ ಹುಲಿ ಸ್ಥಳಾಂತರಿಸುವ ಮಾರ್ಗಸೂಚಿಯನ್ನು ಮೀರಿ, ಹುಲಿಯನ್ನು ಬಲವಂತವಾಗಿ ಸ್ಥಳಾಂತರಿಸಿದ್ದರಿಂದ ಭದ್ರಾ ಅಭಯಾರಣ್ಯದಲ್ಲಿ ಆ ಹುಲಿಗೆ ಸೂಕ್ತ ನೆಲೆ ಲಭಿಸಲಿಲ್ಲ. ನೆಲೆ ಗುರುತಿಸಿಕೊಳ್ಳುವ ಅದರ ಹುಟ್ಟುಗುಣ ಮನುಷ್ಯ ಹಸ್ತಕ್ಷೇಪದಿಂದ ಏರುಪೇರಾಯಿತು. ದಿಕ್ಕು ತಪ್ಪಿದ ಹುಲಿ ಗೊತ್ತು ಗುರಿಯಿಲ್ಲದೇ ಅಲೆಯ ತೊಡಗಿತು. ಕಾಡಿನಲ್ಲಿ ನಿರಾಳವಾಗಿದ್ದ ಅದು, ಭದ್ರಾ ಅಭಯಾರಣ್ಯಕ್ಕೆ ಬಲವಂತವಾಗಿ ಸ್ಥಳಾಂತರಿಸಿದ ನಂತರದಲ್ಲಿ, ತನ್ನ ಸ್ವಭಾವವನ್ನು ಬದಲಿಸಿಕೊಂಡಿತು. ಹತ್ತಾರು ಜಾನುವಾರುಗಳು ಆ ಹುಲಿಗೆ ಬಲಿಯಾದವು. ರೈತರ, ಹೈನುಗಾರರ, ಮೇಕೆ ಸಾಕುವವರ ಸಹನೆ ತಪ್ಪಿತು. ಹುಲಿಗೊಂದು ಗತಿ ಕಾಣಿಸಲು ಮುಂದಾದರು. ಫೆಬ್ರುವರಿ 10, 2025ರಂದು ಹಾಸನ ಜಿಲ್ಲೆಯ ಬೇಲೂರು ಸಮೀಪದ ರಾಮದೇವರ ಹಳ್ಳದಲ್ಲಿ ಆ ಹುಲಿಯ ಕಳೇಬರ ತೇಲುತ್ತಿತ್ತು. ತಡೋಬದ ಹುಲಿಗೆ ಇದ್ದ ಅದೃಷ್ಟ ಮೈಸೂರಿನಿಂದ ಬಲವಂತವಾಗಿ ಸ್ಥಳಾಂತರಿಸಿದ ಹುಲಿಗೆ ಇರಲಿಲ್ಲ. ಯಥಾಪ್ರಕಾರ ಅರಣ್ಯ ಇಲಾಖೆ ನಿತ್ರಾಣದಿಂದ ಹುಲಿ ಸಾವನ್ನಪ್ಪಿದೆ ಎಂದು ಘೋಷಿಸಿ ಕೈತೊಳೆದುಕೊಂಡಿತು.
ಈ ಮೊದಲೇ ಹೇಳಿದಂತೆ, ತ್ಯಾಗರ್ತಿ ಭಾಗದಲ್ಲಿ ಸ್ಥಳೀಯವಾಗಿ ಹುಲಿ ಪ್ರಭೇದ ನಶಿಸಿಹೋಗಿ ಯಾವುದೋ ಕಾಲವಾಗಿತ್ತು. ರಾಷ್ಟ್ರಮಟ್ಟದಲ್ಲಿ ಹುಲಿಗಳ ಸಂಖ್ಯೆ ಭಾರತದ ಮಟ್ಟಿಗೆ ಹೆಚ್ಚಾಗಿದ್ದರೂ, ಪಶ್ಚಿಮಘಟ್ಟಗಳಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. 2018ರ ಹುಲಿ ಗಣತಿಯಲ್ಲಿ ಪಶ್ಚಿಮಘಟ್ಟದಲ್ಲಿ 981 ಹುಲಿಗಳಿದ್ದವು. 2022ರ ಹೊತ್ತಿಗೆ ಹುಲಿಗಳ ಸಂಖ್ಯೆ 824ಕ್ಕೆ ಇಳಿಯಿತು. ನಾಲ್ಕು ವರ್ಷಗಳಲ್ಲಿ 157 ಹುಲಿಗಳನ್ನು ಪಶ್ಚಿಮಘಟ್ಟ ಕಳೆದುಕೊಂಡಿದೆ.
ಫೆಬ್ರುವರಿ 17, 2025 ರಂದು ಶಿವಮೊಗ್ಗ ಜಿಲ್ಲೆಯ ಸಾಗರ-ಶಿಕಾರಿಪುರ ಗಡಿಯಂಚಿನ ಅಂಬ್ಲಿಗೊಳ ಜಲಾಶಯದಲ್ಲಿ ಮೀನು ಹಿಡಿಯಲು ಹೋದವರಿಗೆ ತೇಲುತ್ತಿರುವ ಹುಲಿಯ ಕಳೇಬರ ಕಂಡು ಬಂತು. ತಕ್ಷಣ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಸಾಗರ ವಿಭಾಗದ ಅರಣ್ಯ ಇಲಾಖೆಯು ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿತು. ಮಾರ್ಗಸೂಚಿಯ ಪ್ರಕಾರ ಹುಲಿಯ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಹುಲಿ ತಜ್ಞ ಹಾಗೂ ಹುಲಿ ಸಂರಕ್ಷಣೆಯಲ್ಲಿ ಕೆಲಸ ಮಾಡಿದ ಅನುಭವವಿರುವ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ಹಾಜರಿದ್ದು, ದೃಢೀಕರಿಸಬೇಕು. ಹುಲಿ ಗುಂಡೇಟಿನಿಂದ ಸತ್ತಿದ್ದರೆ, ಅದನ್ನು ತಕ್ಷಣದಲ್ಲಿ ಪತ್ತೆ ಹಚ್ಚಲು ಮೆಟಲ್ ಡಿಟೆಕ್ಟರ್ ಸಾಧನವನ್ನು ಬಳಕೆ ಮಾಡಬೇಕು... ಇತ್ಯಾದಿಗಳು. ಸಾಗರ ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿ ತಜ್ಞರಲ್ಲದವರನ್ನು ಕರೆಸಿ, ಮರಣೋತ್ತರ ಪರೀಕ್ಷೆ ಮಾಡಿಸಿದರು. ಅಂಬ್ಲಿಗೊಳ ಜಲಾಶಯದಲ್ಲಿ ಪತ್ತೆಯಾದ ಹುಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಸತ್ತಿರಬಹುದು ಎಂಬ ಬಾಲಿಶ ಹೇಳಿಕೆಯನ್ನು ಅಧಿಕಾರಿಗಳು ಉಸುರಿದರು. ಇದಕ್ಕೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ಮರಣೋತ್ತರ ಪರೀಕ್ಷೆಯ ನಂತರದಲ್ಲಿ ನಿಖರ ಕಾರಣ ತಿಳಿಯುತ್ತದೆ ಎಂದು ತಿಪ್ಪೆ ಸಾರಿಸಿದರು. ಹುಲಿಯ ಕತ್ತಿನಲ್ಲಿ ಬಲವಾದ ರಂಧ್ರವಿತ್ತು. ಅಂದರೆ, ಹುಲಿಗೆ ಗುಂಡು ಹೊಡೆದು ಸಾಯಿಸಲಾಗಿದೆ ಎಂಬುದು ನಿರ್ವಿವಾದ. ಸ್ಥಳೀಯ ಮಾಹಿತಿದಾರರ ಪ್ರಕಾರ, ಒಂದು ವಾರದ ಮುಂಚೆ ಇದೇ ಹುಲಿ ಬೆಳಂದೂರಿನಲ್ಲಿ ಒಂದು ಕರುವನ್ನು ಹಿಡಿದು ತಿಂದಿತ್ತು. ಬಹುಶಃ ಈ ಹುಲಿ ಹೊಸ ನೆಲೆಯನ್ನು ಹುಡುಕಿಕೊಂಡು ಕಾಳಿ ಹುಲಿ ಸಂರಕ್ಷಣಾ ಪ್ರದೇಶದತ್ತ ಹೊರಟಿತ್ತೇನೋ? ವನ್ಯಜೀವಿಗಳ ಕುರಿತಾಗಿ ಬಹಳಷ್ಟು ಅಸಹನೆ ಹೊಂದಿದ ಇಲ್ಲಿನ ಜನರಿಗೆ ತಾಳ್ಮೆಯೇ ಇಲ್ಲವಾಯಿತು. ಬಾಳಿ ಬದುಕಿ, ನೈಸರ್ಗಿಕ ಸೇವೆ ನೀಡಬೇಕಿದ್ದ ಎಂಟು ವರ್ಷದ ಗಂಡು ಹುಲಿ ದುರಂತ ಅಂತ್ಯ ಕಂಡಿತು. ಇಂತಹ ದುರಂತಗಳನ್ನು ತಪ್ಪಿಸಲು ಹುಲಿ ಪಥಗಳನ್ನು ಗುರುತಿಸಿ, ಅವುಗಳನ್ನು ಬೆಸೆಯುವ ಕೆಲಸವನ್ನು ಮಾಡಲು ಇಲಾಖೆ ಮುಂದಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.