
ಬೇಬಿ ಜಿ.
ಡಿಸೆಂಬರ್ ಚಳಿಯ ಒಂದು ಮುಂಜಾವು. ರೋಗಿಗಳಿಂದ ತುಂಬಿದ್ದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ವಾತಾವರಣ ಗದ್ದಲಮಯವಾಗಿತ್ತು. ಅದೇ ವೇಳೆ ಹಾಡಿಯೊಂದರ 18 ವರ್ಷದ ಆದಿವಾಸಿ ಮಹಿಳೆಯನ್ನು ಗಾಲಿಕುರ್ಚಿಯಲ್ಲಿ ಹೆರಿಗೆ ವಾರ್ಡ್‌ಗೆ ಕರೆದುಕೊಂಡು ಬರಲಾಯಿತು. ಅದು ಆಕೆಯ ಚೊಚ್ಚಲ ಗರ್ಭಧಾರಣೆಯಾಗಿದ್ದರಿಂದ ಆರೋಗ್ಯ ಸಮಸ್ಯೆಗಳಿದ್ದವು. ಜನಿಸಿದ ಮಗು ಕೇವಲ 1.22 ಕೆ.ಜಿ ತೂಗುತ್ತಿತ್ತು. ಸೋಂಕಿನಿಂದ ಬಳಲುತ್ತಿದ್ದ ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು.
ಆಕೆಯ ಸಂಬಂಧಿಕರು ಚಿಕಿತ್ಸೆ ಪೂರ್ಣಗೊಳ್ಳುವುದಕ್ಕೂ ಮೊದಲೇ, ಮನೆಗೆ ಮರಳುವ ಧಾವಂತದಲ್ಲಿ ಇದ್ದರು. ಆಸ್ಪತ್ರೆ ಪ್ರಕ್ರಿಯೆಗಳ ಬಗ್ಗೆ ಅರಿವಿಲ್ಲದಿದ್ದರಿಂದ ಮನೆಗೆ ಹೊರಡುತ್ತೇವೆ ಎಂದು ಹಟ ಮಾಡುತ್ತಿದ್ದರು. ಚೇತರಿಕೆಗೆ ಸಮಯ ಬೇಕೆಂದೂ, ಈಗ ತೆರಳುವುದು ಶಿಶುವಿಗೆ ಮಾರಣಾಂತಿಕವಾಗಬಹುದೆಂದೂ ವೈದ್ಯರು ಅವರನ್ನು ಸಮಾಧಾನ ಪಡಿಸುತ್ತಿದ್ದರೂ, ಅವರು ಕೇಳಲು ಸಿದ್ಧರಿರಲಿಲ್ಲ. ಕುಟುಂಬಸ್ಥರು ಮನೆಗೆ ಹೋಗುವುದಾಗಿ ಹಟ ಹಿಡಿದಾಗಲೆಲ್ಲಾ, ಜಿಲ್ಲಾ ಆದಿವಾಸಿ ಆರೋಗ್ಯ ಸಂಯೋಜಕಿ ಬೇಬಿ ಜಿ. ಅವರನ್ನು ಸಮಾಧಾನ ಪಡಿಸುತ್ತಿದ್ದರು. ಅವರ ಮಾತುಗಳನ್ನು ಸಮಾಧಾನದಿಂದ ಕೇಳಿ, ಗಂಭೀರಾವಸ್ಥೆಯಲ್ಲಿರುವ ಮಗು ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾದ ಅನಿವಾರ್ಯತೆಯನ್ನು ಅವರಿಗೆ ವಿವರಿಸಿ ಮನವೊಲಿಸುವ ಪ್ರಯತ್ನ ಮಾಡಿದ್ದರು.
ಅನೇಕ ಆದಿವಾಸಿಗಳಿಗೆ ಸರ್ಕಾರಿ ಆಸ್ಪತ್ರೆಗಳೆಂದರೆ ಭಯ ಮತ್ತು ಅಪರಿಚಿತ ಸ್ಥಳ. ವಾಸಸ್ಥಳದಿಂದ ದೂರ ಇರುವುದರಿಂದ, ಭಾಷೆಯ ಅಡೆತಡೆಗಳು ಮತ್ತು ತಾರತಮ್ಯದಿಂದಾಗಿ ಆದಿವಾಸಿಗಳಿಗೆ ಆರೋಗ್ಯ ಸೇವೆಯ ಲಭ್ಯತೆ ಇಂದಿಗೂ ದೂರದ ಮಾತು.
ಅರಣ್ಯವಾಸಿ ಸಮುದಾಯಗಳಿಗೆ ಸಾಂಪ್ರದಾಯಿಕ ಔಷಧೀಯ ಸಸ್ಯಗಳ ಲಭ್ಯತೆ ಇಳಿಮುಖವಾಗುತ್ತಿದ್ದ ಹಾಗೂ ಆಧುನಿಕ ಆರೋಗ್ಯ ಸೇವೆಗಳು ಇನ್ನೂ ಕೈಗೆಟುಕದಂತಿದ್ದ ಸಮಯದಲ್ಲಿ, ಬೇಬಿ ಅವರು ಜಿಲ್ಲಾ ಬುಡಕಟ್ಟು ಆರೋಗ್ಯ ಸಂಯೋಜಕಿಯಾಗಿ ನೇಮಕಗೊಂಡರು. ಕರ್ನಾಟಕದ ಮೊದಲ ಬುಡಕಟ್ಟು ಆರೋಗ್ಯ ಸಂಯೋಜಕಿ ಎನ್ನುವ ಹೆಗ್ಗಳಿಕೆ ಅವರದ್ದು..
ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸುವುದು, ಆಧಾರ್ ನೋಂದಣಿ, ಆಯುಷ್ಮಾನ್ ಭಾರತ್ ಯೋಜನೆಯ ಸೌಲಭ್ಯಗಳು ಸಿಗುವಂತೆ ಮಾಡುವುದು ಇವರ ಕೆಲಸ. ಸದ್ಯ ಈ ಯೋಜನೆಯು ಕರ್ನಾಟಕದ ಆರು ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಜಾರಿಯಲ್ಲಿದೆ. ನೇಮಕವಾದ ಬಳಿಕ ಈವರೆಗೂ ಎರಡು ಸಾವಿರ ಆದಿವಾಸಿಗಳಿಗೆ ಚಿಕಿತ್ಸೆ ಸಿಗಲು ಬೇಬಿ ನೆರವಾಗಿದ್ದಾರೆ.
‘ಆರಂಭಿಕ ಹಂತದಲ್ಲಿ ನಿರ್ಣಾಯಕ ಚಿಕಿತ್ಸೆ ಸಿಗದೆ, ರೋಗಿಯನ್ನು ಉನ್ನತ ಕೇಂದ್ರಗಳಿಗೆ ತಲುಪಿಸುವಷ್ಟರಲ್ಲಿ ಗುಣಪಡಿಸಬಹುದಾದ ಕಾಯಿಲೆಗಳು ಉಲ್ಬಣಗೊಂಡಿರುತ್ತವೆ’ ಎಂದು ಆದಿವಾಸಿ ಸಮುದಾಯದ ಮುಖಂಡ ಮಾದೇಗೌಡ ಸಿ. ವಿವರಿಸುತ್ತಾರೆ. ‘ರೋಗ ಪತ್ತೆ ಹಚ್ಚುವಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರಾದರೂ, ನೂರಾರು ಹಾಡಿಗಳಲ್ಲಿ ಈ ಅನೇಕ ಹುದ್ದೆಗಳು ಖಾಲಿ ಇವೆ’ ಎಂದು ಅವರು ಹೇಳುತ್ತಾರೆ. ಹೀಗಾಗಿ ಕಾಯಿಲೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತವೆ.
‘ನಾನು ಆಸ್ಪತ್ರೆಗೆ ಹೋದಾಗ, ಜನಸಾಗರದ ನಡುವೆ ಇದ್ದಂತಾಯಿತು. ಎಲ್ಲಿಗೆ ಹೋಗಬೇಕೆಂದೇ ಗೊತ್ತಾಗಲಿಲ್ಲ’ ಹಲವು ವರ್ಷಗಳ ಮೊಣಕಾಲು ನೋವಿಗೆ ಚಿಕಿತ್ಸೆ ಪಡೆಯಲು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹೋದ ಬಿ.ಆರ್. ಹಿಲ್ಸ್‌ನ 50 ವರ್ಷದ ಲಕ್ಷ್ಮಿ ಎಂಬ ಸೋಲಿಗ ಮಹಿಳೆ ಹೇಳಿದ ಅನುಭವದ ಮಾತುಗಳಿವು. ಯಾವಾಗಲೂ ಗಿಜಿಗುಡುತ್ತಿರುವ ಆಸ್ಪತ್ರೆಯ ಕಾರಿಡಾರ್‌ಗಳು ಅವರಿಗೆ ದಿಕ್ಕುತೋಚದಂತೆ ಮಾಡಿದ್ದವು. ‘ವೈದ್ಯರು ನಮ್ಮೊಂದಿಗೆ ಸರಿಯಾಗಿ ಮಾತನಾಡುವುದಿಲ್ಲ. ನಮ್ಮನ್ನು ಬೇಗನೇ ಕಳುಹಿಸಿಬಿಡುತ್ತಾರೆ. ಯಾವುದನ್ನೂ ಸರಿಯಾಗಿ ವಿವರಿಸುವುದಿಲ್ಲ. ಕೆಲವೊಮ್ಮೆ ನಮ್ಮ ಮೇಲೆಯೇ ಕಿರುಚುತ್ತಾರೆ. ನಮಗೆ ಏನೂ ಅರ್ಥವಾಗುವುದಿಲ್ಲ ಎಂಬಂತೆ ನಡೆಸಿಕೊಳ್ಳುತ್ತಾರೆ’ ಎಂದು ಹೇಳುವಾಗ ಲಕ್ಷ್ಮಿಯವರ ಮುಖದಲ್ಲಿ ಬೇಸರ ಆವರಿಸಿತ್ತು.
ಲಕ್ಷ್ಮಿ ಅಂದು ಅವಸರವಸರವಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದರು. ಇದಾಗಿ ಹಲವು ವರ್ಷಗಳಾದರೂ ಅವರ ಕಾಯಿಲೆ ಪತ್ತೆಯಾಗಲೇ ಇಲ್ಲ. ಈ ವರ್ಷ ನೋವು ಉಲ್ಬಣಗೊಂಡು, ಓಡಾಟವೂ ಕಷ್ಟವಾದಾಗ ಆಸ್ಪತ್ರೆಗೆ ಹೋಗಲೇಬೇಕಾದ ಅನಿವಾರ್ಯತೆ ಲಕ್ಷ್ಮಿಯವರಿಗೆ ಎದುರಾಯಿತು. ‘ನಿಲ್ಲುವುದು, ಓಡಾಡುವುದು ಕೂಡ ಕಷ್ಟವಾಗಿತ್ತು. ಜೀವನೋಪಾಯದ ಮೂಲವಾದ ಜಮೀನಿನ ನಿರ್ವಹಣೆ ಅಸಾಧ್ಯವಾಯಿತು’ ಎಂದು ಅವರು ಹೇಳುತ್ತಾರೆ. ಈ ಬಾರಿ, ಆಸ್ಪತ್ರೆಗೆ ಹೋಗುವಾಗ ಲಕ್ಷ್ಮಿಯವರಿಗೆ ಆತಂಕ ಕಡಿಮೆ ಇತ್ತು. ಆಸ್ಪತ್ರೆಯಲ್ಲಿ ಸಹಾಯಕ್ಕೆ ಬೇಬಿ ಅವರು ಇರುತ್ತಾರೆ ಎನ್ನುವುದೇ ಅವರಿಗೆ ದೊಡ್ಡ ಸಮಾಧಾನದ ಸಂಗತಿಯಾಗಿತ್ತು.
ಬೇಬಿಯವರ ಬೆಂಬಲ, ಮಾರ್ಗದರ್ಶನದಿಂದ ಲಕ್ಷ್ಮಿ ಅವರು ಚಾಮರಾಜನಗರ ಮತ್ತು ಮೈಸೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಹಿಂದೆ ತಮಗೆ ಅಸಾಧ್ಯವೆನಿಸಿದ್ದ ದಾಖಲಾತಿ ಪ್ರಕ್ರಿಯೆ, ರೋಗನಿರ್ಣಯ ಮತ್ತು ತಜ್ಞರ ಸಲಹೆಗಳು ಈ ಬಾರಿ ಸುಲಭವಾಗಿ ಲಭಿಸಿತು. ದೀರ್ಘಕಾಲದ ಸಂಧಿವಾತಕ್ಕೆ ಸಕಾಲಿಕ ಚಿಕಿತ್ಸೆ, ಸೂಕ್ತ ಔಷಧಿ ದೊರೆತಿದ್ದರಿಂದ ಅವರ ಸ್ಥಿತಿ ಈಗ ಸುಧಾರಿಸಿದೆ.
‘ಎಲ್ಲಿಗೆ ಹೋಗಬೇಕು, ಯಾರನ್ನು ಭೇಟಿ ಮಾಡಬೇಕು ಎಂಬ ಅರಿವು ಲಕ್ಷ್ಮಿಗೆ ಸಿಕ್ಕಿದ್ದು ಬೇಬಿಯಿಂದ. ಆಧುನಿಕ ವೈದ್ಯಕೀಯ ಪದ್ಧತಿಯ ಬಗ್ಗೆ ಭಯ ಹೊಂದಿದ್ದ ಅವರನ್ನು ಚಿಕಿತ್ಸೆ ಪಡೆಯಲು ಒಪ್ಪಿಸಿದರು’ ಎಂದು ಲಕ್ಷ್ಮಿ ಅವರ ಚಿಕಿತ್ಸೆಯ ಉಸ್ತುವಾರಿ ವಹಿಸಿದ್ದ ಸೋಲಿಗ ಆರೋಗ್ಯ ಕಾರ್ಯಕರ್ತ ಪಾದ್ರೇಗೌಡ ಹೇಳಿದರು.
ಭಾಷೆಯ ಅಡೆತಡೆಗಳನ್ನು ನಿವಾರಿಸುವಲ್ಲಿ ಬೇಬಿ ಅವರು ತಮ್ಮ ಸಮುದಾಯ ಮತ್ತು ವೈದ್ಯಕೀಯ ಸಿಬ್ಬಂದಿಯ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಮಂಜುನಾಥ್ ಅವರ ಮಾತು.
2023ರಲ್ಲಿ ಸೇವೆಗೆ ನೇಮಕಗೊಂಡ ಬೇಬಿ, ಆರೋಗ್ಯ ಸೇವೆಗಳನ್ನು ಪಡೆಯುವಂತೆ ಜನರನ್ನು ಮನವೊಲಿಸಲು ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದರು. ಅನೇಕ ಆದಿವಾಸಿ ಕುಟುಂಬಗಳ ಬಳಿ ಅಗತ್ಯ ಗುರುತಿನ ಚೀಟಿಗಳೂ ಇಲ್ಲದಿರುವುದರಿಂದ ಉಚಿತ ಆರೋಗ್ಯ ಸೇವೆ ನೀಡುವ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ ಎನ್ನುವುದು ಅವರ ಗಮನಕ್ಕೆ ಬಂತು. ಬೇಬಿ ಮತ್ತು ಇತರ ಆರೋಗ್ಯ ಸಂಯೋಜಕರು ಈ ವಿಷಯವನ್ನು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಸಭೆಯಲ್ಲಿ ಪ್ರಸ್ತಾಪಿಸಿದರು. ‘ನಾವು ಶಿಬಿರ ಆಧಾರಿತ ನೋಂದಣಿ ಅಭಿಯಾನವನ್ನು ನಡೆಸಿದೆವು. ಅಧಿಕಾರಿಗಳು ಕುಗ್ರಾಮಗಳಿಗೆ ತೆರಳಿ, ಹಾಸಿಗೆ ಹಿಡಿದವರು ಮತ್ತು ಅಂಗವಿಕಲರಿಗೂ ದಾಖಲೆಗಳು ಸಿಗುವಂತೆ ಮಾಡಿದರು’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಈ ಅಭಿಯಾನದ ಮೂಲಕ ಸುಮಾರು ಏಳು ಸಾವಿರ ಮಂದಿಗೆ ಗುರುತಿನ ದಾಖಲೆಗಳು ಸಿಕ್ಕಿತು. ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ, ವಿಶೇಷವಾಗಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವಂತೆ ನೋಡಿಕೊಳ್ಳುವಲ್ಲಿ ಬೇಬಿ ಅವರ ಪ್ರಯತ್ನಗಳು ಶ್ಲಾಘನೀಯ’ ಎಂದರು.
ಬೇಬಿಯವರಿಂದಾಗಿ ಅನೇಕ ಜೀವಗಳು ಉಳಿದಿವೆ ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಸ್. ಚಿದಂಬರ ಅವರು ಸ್ಮರಿಸುತ್ತಾರೆ. ‘ಪ್ರಕರಣ ಸರಳವಾಗಿರಲಿ ಅಥವಾ ಗಂಭೀರವಾಗಿರಲಿ, ರೋಗಿ ಆಸ್ಪತ್ರೆಗೆ ದಾಖಲಾದಾಗಿನಿಂದ ಬಿಡುಗಡೆಯಾಗುವವರೆಗೆ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಹಲವು ಬಾರಿ ಮೈಸೂರಿನ ಆಸ್ಪತ್ರೆಗಳಿಗೆ ರೋಗಿಗಳೊಂದಿಗೆ ಖುದ್ದಾಗಿ ತೆರಳಿದ್ದಾರೆ ಎಂದು ಅವರು ಹೇಳಿದರು.
ಈ ಕೆಲಸ ಮಾಡುವ ಶಕ್ತಿಯು ವೃತ್ತಿಪರ ತರಬೇತಿ, ಜೀವನದ ಅನುಭವದಿಂದ ಸಿಕ್ಕಿದೆ ಎನ್ನುವುದು ಬೇಬಿಯವರ ಮಾತು. ‘ವೈದ್ಯಕೀಯ ಭಾಷೆ ಭಯ ಹುಟ್ಟಿಸುವಂತಿರುತ್ತದೆ, ಆದ್ದರಿಂದ ರೋಗದ ಸ್ಥಿತಿಗತಿಗಳನ್ನು ತಾಳ್ಮೆ ಮತ್ತು ಸ್ಪಷ್ಟತೆಯಿಂದ ವಿವರಿಸಬೇಕಾಗುತ್ತದೆ. ಭಾವನಾತ್ಮಕ ಪ್ರಜ್ಞೆಯು ಶುಶ್ರೂಷಾ ವೃತ್ತಿಯ ಅವಿಭಾಜ್ಯ ಅಂಗವಾಗಿದೆ ಎಂಬುದು ಅವರ ಅಭಿಪ್ರಾಯ.
ತಾಯಿಯೂ ತರಬೇತಿ ಪಡೆದ ದಾದಿಯಾಗಿದ್ದರಿಂದ ಬೇಬಿ ಬೆಳೆಯುತ್ತಾ ಗಮನಿಸಿದ
ಕೌಶಲವೂ ಹೌದು. ಕೆಲಸ ಮುಗಿಸಿ ಮನೆಗೆ ಬಂದಾಗ ತಮ್ಮ ಕೆಲಸದ ಅನುಭವಗಳನ್ನು ತಾಯಿ ಹಂಚಿಕೊಳ್ಳುತ್ತಿದ್ದರು. ರೋಗಿಗಳ ಬಗ್ಗೆ ಅವರು ತೋರಿಸುತ್ತಿದ್ದ ಕಾಳಜಿ ಮತ್ತು ತಾಳ್ಮೆ ಬೇಬಿ ಅವರ ಮೇಲೆ ಪ್ರಭಾವ ಬೀರಿದೆ. ತಂದೆಯು ಬಾಲ್ಯದಿಂದಲೂ ಸಮುದಾಯಕ್ಕೆ ಮರಳಿ ಏನನ್ನಾದರೂ ಕೊಡುವ ಮಹತ್ವವನ್ನು ಅವರಿಗೆ ಒತ್ತಿ ಹೇಳುತ್ತಿದ್ದರು. ಆಸ್ಪತ್ರೆ ಮತ್ತು ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಇದೇ ಅವರಿಗೆ ಪ್ರೇರಣೆಯಾಗಿದೆ.
ಅನುವಾದ: ಅಬ್ದುಲ್ ರಹಿಮಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.