ADVERTISEMENT

ಬುಕರ್‌ ಬಾನು: ಬರವಣಿಗೆ ಒಂದು ರಾಜಕೀಯ ಕ್ರಿಯೆ...

ಸಣ್ಣಕತೆ ನನ್ನ ಆತ್ಮಕ್ಕೆ ಹತ್ತಿರವಾದ ಪ್ರಕಾರ

ದೇವು ಪತ್ತಾರ
Published 25 ಮೇ 2025, 0:29 IST
Last Updated 25 ಮೇ 2025, 0:29 IST
<div class="paragraphs"><p>ಟ್ರೋಫಿಯೊಂದಿಗೆ ಬಾನು ಮುಷ್ತಾಕ್‌&nbsp;</p></div>

ಟ್ರೋಫಿಯೊಂದಿಗೆ ಬಾನು ಮುಷ್ತಾಕ್‌ 

   

ಲೇಖಕಿ ಬಾನು ಮುಷ್ತಾಕ್‌ ಅವರು ರಚಿಸಿ, ದೀಪಾ ಭಾಸ್ತಿ ಅವರು ಅನುವಾದಿಸಿದ ಹನ್ನೆರಡು ಕತೆಗಳ ಅನುವಾದಿತ ಕೃತಿ ‘ಹಾರ್ಟ್‌ ಲ್ಯಾಂಪ್‌’ 2025ರ ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿಗೆ ಭಾಜನವಾಗಿದೆ. ಇಂತಹ ಅನನ್ಯ ಗೌರವಕ್ಕೆ ಪಾತ್ರರಾದ ಲೇಖಕಿ ಬಾನು ಮುಷ್ತಾಕ್‌ ಅವರೊಂದಿಗೆ ನಡೆಸಿದ ಮಾತುಕತೆಗಳ ಆಯ್ದ ಭಾಗ ಇಲ್ಲಿದೆ...

ಮೇಡಂ, ಅಂತರರಾಷ್ಟ್ರೀಯ ಬುಕರ್‌ ಪ್ರಶಸ್ತಿ ಪಡೆದದ್ದಕ್ಕೆ ಅಭಿನಂದನೆಗಳು. ಪ್ರಶಸ್ತಿ ಘೋಷಿಸಿದಾಗ ಏನನ್ನಿಸಿತು? ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ADVERTISEMENT

ಬಾನು ಮುಷ್ತಾಕ್‌: ಸಮಾಧಾನ- ಖುಷಿ, ನೆಮ್ಮದಿ. ಭಯಂಕರ ಟೆನ್ಶನ್‌ ಇತ್ತು. ಒಂದರೆಕ್ಷಣ ನಂಬಲಿಕ್ಕೇ ಆಗಲಿಲ್ಲ. ಇಲ್ಲಿಂದ ಲಂಡನ್‌ಗೆ ಹೋಗುವಾಗ ಪ್ರಶಸ್ತಿ ಬರಬಹುದು ಎಂಬ ನಿರೀಕ್ಷೆ ಇರಲಿಲ್ಲ. ಅಂತಿಮ ಪಟ್ಟಿಯ ಆರು ಪುಸ್ತಕಗಳ ಪೈಕಿ ಒಂದು ಆಗಿದ್ದೇ ಹೆಚ್ಚು ಅನ್ನಿಸಿತ್ತು. ಅದನ್ನು ಕೂಡ ಕನಸು ಮನಸಿನಲ್ಲಿ ನೆನೆಸಿರಲಿಲ್ಲ. ಸಾಕಷ್ಟು ನಿರಾಳವಾಗಿಯೇ ಹೋಗಿದ್ದೆ. ಪ್ರಕಟಿಸುವ ಕೊನೆಯ ಗಳಿಗೆಯಲ್ಲಿ ಹೆಚ್ಚು ಟೆನ್ಶನ್‌- ಆತಂಕ ಉಂಟಾಯಿತು. ಸುತ್ತಲಿನ ವಾತಾವರಣ ಹೆಚ್ಚು ಒತ್ತಡ ಉಂಟು ಮಾಡಿತು. ಸ್ಪರ್ಧೆಯಲ್ಲಿ ಇರುವ ಬೇರೆ ಕೃತಿಗಳ ಬಗೆಗೂ ಒಳ್ಳೆಯ ಅಭಿಪ್ರಾಯ ಇತ್ತು. ಆದರೆ ಅವುಗಳ ಬಗ್ಗೆ ನನಗೆ ಗೊತ್ತಿರಲಿಲ್ಲ. ಸ್ಪರ್ಧೆಯಲ್ಲಿದ್ದ ಉಳಿದ ಕೃತಿಗಳ ಗುಣಮಟ್ಟದ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಕನ್ನಡದ ಕತೆಗಳನ್ನು ಇಂಗ್ಲಿಷಿನ ನಿರ್ಣಾಯಕರು ಹೇಗೆ ಪರಿಗಣಿಸುತ್ತಾರೆ, ಅವರ ಆಸಕ್ತಿ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಉಳಿದವು ಕಾದಂಬರಿಗಳು ಮತ್ತು ಉತ್ತಮ ಸಾಹಿತ್ಯ ಕೃತಿಗಳು ಎಂಬ ಅಭಿಪ್ರಾಯ ಕೇಳಿದ್ದರಿಂದ ಇಲ್ಲಿಯವರೆಗೆ ಬಂದದ್ದೇ ದೊಡ್ಡದು ಎಂದು ಭಾವಿಸಿದ್ದೆ. ಪ್ರಶಸ್ತಿ ಘೋಷಿಸಿದಾಗ ಖುಷಿಯಿಂದ ಕಣ್ಣಾಲಿಗಳು ತುಂಬಿ ಬಂದವು. ಅನಿರೀಕ್ಷಿತ ಸಂಭ್ರಮ ಮನ ತುಂಬಿ ಬಂತು.

ಅಂತರರಾಷ್ಟ್ರೀಯ ಮನ್ನಣೆಯಲ್ಲಿ ಅನುವಾದದ ಮಹತ್ವ ಎಷ್ಟು? 

ಅನುವಾದದ ಮಹತ್ವ ತುಂಬಾ ಇದೆ. ಒಂದು ಸಾಹಿತ್ಯ ಕೃತಿ ಅದು ರಚನೆಯಾದ ಭಾಷೆಯಲ್ಲದೆ ಬೇರೆ ಕಡೆಗಳಲ್ಲಿ ಪರಿಚಯ-ಪ್ರಚಾರ ಆಗಲು ಅನುವಾದಗಳು ಅತ್ಯಗತ್ಯ. ಅವೇ ನಿಜವಾದ ಕೊಂಡಿ. ಎರಡೂ ಭಾಷೆಯಲ್ಲಿ ಪ್ರಭುತ್ವ ಇರುವವರು ಮಾಡುವ ಉತ್ತಮ ಅನುವಾದಗಳು ಸಹಜವಾಗಿಯೇ ಗಮನ ಸೆಳೆಯುತ್ತವೆ. ಸಾಹಿತ್ಯ ಕೃತಿಗಳು ಬೇರೆ ಭಾಷೆಗಳಿಗಿಂತ ಇಂಗ್ಲಿಷಿಗೆ ಅನುವಾದವಾಗುವುದು ತುಂಬಾ ಅಗತ್ಯ. ಇದರಿಂದಾಗಿ ಜಗತ್ತಿನ ಬೇರೆ ಬೇರೆ ಭಾಷೆಗಳಿಗೆ ಅನುವಾದ ಆಗುವುದು ಸಾಧ್ಯವಾಗುತ್ತದೆ. 

ಬದಲಾದ ಕಾಲ- ಸಂದರ್ಭದಲ್ಲಿ ಬರೆಯವುದು ಹೆಚ್ಚು ಆತಂಕ- ಒತ್ತಡ ಹೇರುತ್ತಿದೆಯೇ?

ಬರವಣಿಗೆ ಒಂದು ರಾಜಕೀಯ ಕ್ರಿಯೆ. ಸಹಜವಾಗಿಯೇ ಅದು ಪ್ರತಿಕ್ರಿಯೆಗೆ ಕಾರಣವಾಗುತ್ತದೆ. ಅಧಿಕಾರದ ಕೇಂದ್ರಗಳು ಪ್ರತಿರೋಧ ಒಡ್ಡುವುದು ಕೂಡ ನಿರೀಕ್ಷಿತ. ಹಾಗಂತ ಬರವಣಿಗೆಯ ಬಂಡಾಯವನ್ನು ನಿಲ್ಲಿಸಲು ಸಾಧ್ಯವಿಲ್ಲ. ಬರೆಯುವುದೇ ಬಂಡಾಯ. 

ಬರವಣಿಗೆ ಆರಂಭಿಸಿದ ದಿನಗಳಿಗೂ ಈಗ ಬರೆಯುವುದರಲ್ಲಿ ಏನು ಬದಲಾವಣೆ ಆಗಿದೆ?

ಸಮಕಾಲೀನ ಯುವ ಲೇಖಕರು ಹೊಸ ಬಗೆಯ ವಸ್ತು ಮತ್ತು ತಂತ್ರ ಬಳಸಿ ಬರೆಯುತ್ತಿದ್ದಾರೆ. ನನ್ನ ಬರವಣಿಗೆಯ ವಸ್ತು ಮತ್ತು ಸ್ವರೂಪದಲ್ಲಿಯೂ ಬಹಳಷ್ಟು ಬದಲಾವಣೆ ಆಗಿದೆ. ಹಿಂದೆ ಪಿತೃ ಪ್ರಧಾನ ವ್ಯವಸ್ಥೆಯ ವಿರುದ್ಧ ಬರೆಯುತ್ತಿದ್ದೆ. ಬಾಬರಿ ಮಸೀದಿಯ ಘಟನೆಯ ನಂತರದ ದಿನಗಳಲ್ಲಿ ಸಮಾಜದಲ್ಲಿ ಉಂಟಾದ ಸ್ಥಿತ್ಯಂತರ, ಕೋಮುವಾದ, ಸಾರ್ವಜನಿಕ ಹಿಂಸೆಗಳು ಬರವಣಿಗೆಯ ಮೇಲೆ ಪ್ರಭಾವ ಬೀರಿದವು. ಸಹಬಾಳ್ವೆ, ನೆಮ್ಮದಿ ಬಹಳ ಮುಖ್ಯ ಅನ್ನಿಸಿದವು. ಬರವಣಿಗೆಯ ಸ್ವರೂಪ ಬದಲಾಯಿತು. ಸಮಾಜವು ಬದಲಾದ ಹಾಗೆ ಬರವಣಿಗೆಯ ವಸ್ತು- ಸ್ವರೂಪವು ಬದಲಾಗುತ್ತದೆ. ನಾನು ಮಾತ್ರ ಆಯಾ ಕಾಲಕ್ಕೆ ಮತ್ತು ಆಗಾಗ ಅನ್ನಿಸಿದ ಹಾಗೆ ಬರೆಯುತ್ತ ಬಂದವಳು.

ಪತ್ರಕರ್ತೆ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಆಗಿರುವ ನಿಮಗೆ ಈ ಚಟುವಟಿಕೆಗಳು ಬರವಣಿಗೆಗೆ ಅಡ್ಡಿಯನ್ನುಂಟು ಮಾಡಲಿಲ್ಲವೇ?

ಇಲ್ಲ. ಈ ಚಟುವಟಿಕೆಗಳು ನನ್ನ ಬರವಣಿಗೆಯನ್ನು ಶ್ರೀಮಂತಗೊಳಿಸಿದವು. ವಿಭಿನ್ನ ಅನುಭವಲೋಕ ತೆರೆದುಕೊಳ್ಳಲು ಕಾರಣವಾದವು.  ವ್ಯಕ್ತಿಗಳ ಜೊತೆಗೆ ಒಡನಾಡಿದ ಅನುಭವ ಮತ್ತು ಸಂಘಟನೆಗಳಲ್ಲಿ ಮಾಡಿದ ಕೆಲಸ ನನ್ನ ಬರವಣಿಗೆಗೆ ತುಂಬಾ ನೆರವಾಯಿತು. ಬರವಣಿಗೆಗೆ ಬದುಕು ಬಹಳ ಮುಖ್ಯ. ನನ್ನದು ಕೇವಲ ಸಾಹಿತ್ಯ ಕೇಂದ್ರಿತ ಆಲೋಚನ ಕ್ರಮ ಅಲ್ಲ. ಬದುಕು ಸುಧಾರಿಸುವುದಕ್ಕಾಗಿ ಹೋರಾಟ ನಡೆಸುವುದು, ಘನತೆಯ ಬದುಕನ್ನು ನಮ್ಮದಾಗಿಸಿಕೊಳ್ಳುವುದು ಬಹಳ ಮುಖ್ಯ. ಅದಕ್ಕಾಗಿ ಬರವಣಿಗೆಯೂ ನೆರವಾಗಬೇಕು ಎಂಬ ನಂಬುಗೆ ನನ್ನದು. 

ಕನ್ನಡ ವಿಮರ್ಶೆ ನಿಮ್ಮ ಬರಹಗಳಿಗೆ ಹೇಗೆ ಪ್ರತಿಕ್ರಿಯಿಸಿದೆ? ಅದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?

ತಟಸ್ಥವಾಗಿದೆ. ನನಗೆ ಖುಷಿಯನ್ನೂ ಉಂಟು ಮಾಡಿಲ್ಲ. ಬೇಸರವನ್ನು ಕೂಡ. ವಿಮರ್ಶೆಯಿಂದ -ಪ್ರತಿಕ್ರಿಯೆಯಿಂದ ಹೆಚ್ಚು ಲಾಭ ಆಗಿಲ್ಲ. ಯಾರು ಏನೇ ಹೇಳಲಿ? ಸುಮ್ಮನೆ ನನ್ನ ಪಾಡಿಗೆ ನಾನು ಬರೆಯುತ್ತ ಹೋದೆ. ಬರೆಯುತ್ತ ಹೋಗುತ್ತೇನೆ. ಪ್ರತಿಕ್ರಿಯೆಗಳನ್ನು ಆಧರಿಸಿ ಬರೆಯುವುದು ಅಥವಾ ಬರೆಯುವುದನ್ನು ನಿಲ್ಲಿಸುವುದು ಆಗುವುದಿಲ್ಲ.

ಸಾಹಿತ್ಯದ ಗುಂಪುಗಾರಿಕೆ ಬಗ್ಗೆ ಏನು ಹೇಳುತ್ತೀರಿ?

ನಾನು ಯಾವುದೇ ಸಾಹಿತ್ಯದ ಗುಂಪಿಗೆ ಸೇರಿದವಳಲ್ಲ. ಗುಂಪುಗಾರಿಕೆ ಮಾಡಿದವಳೂ ಅಲ್ಲ. ಸುಮ್ಮನೆ ನನಗೆ ತೋಚಿದ ಹಾಗೆ ಬರೆಯುತ್ತ ಹೋದವಳು. ಬರೆಯುವುದು ನನ್ನ ಪ್ರೀತಿಯ ಕೆಲಸ. ಅದರಿಂದ ಬರುವ ಮನ್ನಣೆ ಹಾಗೂ ಚರ್ಚೆಗಳ ಕುರಿತು ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ.

ಲೇಖನ- ಕವಿತೆ- ಪ್ರಬಂಧ ಬರೆದಿದ್ದೀರಿ. ಲೇಖಕನಿಗೆ ಪ್ರಕಾರ ನಿಷ್ಠೆ ಮುಖ್ಯವೇ?

ಆಯಾ ಸಂದರ್ಭ ಮತ್ತು ವಸ್ತುವಿಗೆ ಅನುಗುಣವಾಗಿ ಬರೆಯುತ್ತ ಹೋದೆ. ಕವಿತೆ- ಲೇಖನ ಅಂತ ಪ್ರತ್ಯೇಕಿಸುವುದಿಲ್ಲ. ಆಯಾ ವಸ್ತುವೇ ಅದರ ಆಕಾರ-ಸ್ವರೂಪವನ್ನು ನಿರ್ಧರಿಸಿತು. ಆದರೆ, ಸಣ್ಣಕತೆ ನನ್ನ ಆತ್ಮಕ್ಕೆ ಹತ್ತಿರವಾದ ಪ್ರಕಾರ. ಸಣ್ಣಕತೆಯಲ್ಲಿ ಅನುಭವ ಲೋಕದ ವಿಸ್ತರಣೆ- ಕಲ್ಪಕತೆಗಳಿವೆ. ಭಾಷೆಯಲ್ಲಿ ಅದನ್ನು ಸೊಗಸಾಗಿ ಕಟ್ಟಬಹುದು. ಕನ್ನಡದ ಸಣ್ಣಕತೆಯ ಲೋಕ ವಿಭಿನ್ನ–ವಿಶಿಷ್ಟ. ಇತ್ತೀಚಿನ ವರ್ಷಗಳಲ್ಲಿ ನಾನು ಬಹುತೇಕ ಲೇಖನ ಬರೆಯುವುದನ್ನೇ ನಿಲ್ಲಿಸಿದ್ದೇನೆ. ಅವುಗಳನ್ನ ಹೇಗೆ ಕತೆಯಾಗಿಸಬಹುದು ಎಂದು ಯೋಚಿಸುತ್ತಿರುತ್ತೇನೆ. ಕತೆಯ ಮೂಲಕ ಕಟ್ಟುವ ಲೋಕ ನನಗೆ ಪ್ರಿಯವಾದದ್ದು.

ಮುಂದಿನ ಬರವಣಿಗೆ ಏನು? ಹೇಗಿರುತ್ತದೆ?

ಈ ಪ್ರಶಸ್ತಿಯ ನಂತರ ಸಹಜವಾಗಿಯೇ ನಿರೀಕ್ಷೆಗಳು ಹೆಚ್ಚಾಗಲಿವೆ. ಅದು ಒತ್ತಡವನ್ನೂ ಉಂಟು ಮಾಡಬಹುದು. ನಾನು ಮಾತ್ರ ಎಂದಿನಂತೆ ನನ್ನದೇ ರೀತಿಯಲ್ಲಿ ಬರವಣಿಗೆ ಮುಂದುವರೆಸುತ್ತೇನೆ. ಬರವಣಿಗೆ ನನಗೆ ಮೊದಲ ಆದ್ಯತೆ. ನನ್ನ ಬದುಕಿನ ಘಟನೆ-ನೆನಪುಗಳನ್ನ ದಾಖಲಿಸುವ ಆತ್ಮಕತೆ ಬರೆಯಬೇಕು ಎಂಬ ವಿಚಾರ ಇದೆ. ಒಂದು ಕಾದಂಬರಿಯ ಹೊಳಹು ಹಾಕಿಕೊಂಡಿರುವೆ. ಅವನ್ನೆಲ್ಲ ಯಾವಾಗ ಆರಂಭಿಸಿ, ಮುಗಿಸುತ್ತೇನೋ ಗೊತ್ತಿಲ್ಲ. ಈ ಪ್ರಶಸ್ತಿಯ ನಂತರ ಬೇರೆ ಬೇರೆ ಸಾಹಿತ್ಯ ಉತ್ಸವ- ಕಾರ್ಯಕ್ರಮಗಳಿಗಾಗಿ ತುಂಬಾ ಬೇಡಿಕೆ ಬರುತ್ತಿದೆ. ಜಗತ್ತಿನಾದ್ಯಂತ ಓಡಾಡಬೇಕಾಗಬಹುದು. ಈ ಓಡಾಟ- ಕಾರ್ಯಕ್ರಮಗಳ ಮಧ್ಯೆ ಬಿಡುವು ಮಾಡಿಕೊಂಡು ಬರೆಯಬೇಕಾಗಲಿದೆ. ಬರೆಯುವುದು ಬಹಳ ಮುಖ್ಯ. ಅದಕ್ಕೆಲ್ಲ ಸ್ವಲ್ಪ ಪ್ಲ್ಯಾನ್‌ ಮಾಡಬೇಕಾಗುತ್ತದೆ.

ಕನ್ನಡದ ಕೃತಿಯೊಂದಕ್ಕೆ ದೊರೆತ ಅಪೂರ್ವ ಮನ್ನಣೆ ಇದು. ಇದು ಕನ್ನಡ ಭಾಷೆ- ಸಾಹಿತ್ಯಕ್ಕೆ ಎಷ್ಟು, ಹೇಗೆ ಸ್ಫೂರ್ತಿ ನೀಡಬಲ್ಲದು?

ಈ ಪ್ರಶಸ್ತಿಯು ಜಗತ್ತು ಕನ್ನಡದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದೆ. ಇದು ತಂದು ಕೊಡುವ ಅಪಾರ ಹಣ ಮತ್ತು ಖ್ಯಾತಿ ಊಹಿಸಲೂ ಸಾಧ್ಯವಿಲ್ಲ. ಜಗತ್ತಿನ ಎಷ್ಟೋ ಕಡೆಗಳಲ್ಲಿ ಕನ್ನಡದ ಬಗ್ಗೆ ಗೊತ್ತಿಲ್ಲ. ಇದರಿಂದಾಗಿ ಭಾಷೆ- ಸಾಹಿತ್ಯದ ಕುರಿತು ಗೊತ್ತಾಯಿತು. ಕನ್ನಡದ ಲೇಖಕರು ಕಂಡು ಕೇಳರಿಯದ ಮೊತ್ತ ಹಾಗೂ ಜನಪ್ರಿಯತೆಯ ಪ್ರಶಸ್ತಿ ಇದು. ಕನ್ನಡ ಸಾಹಿತ್ಯದಲ್ಲಿ ಅಪಾರ ಸತ್ವ ಇದೆ. ಜಗತ್ತಿನ ಬೇರೆ ಬೇರೆ ಕಡೆಗಳಲ್ಲಿ ಕನ್ನಡದ ಕಡೆಗೆ, ಇಲ್ಲಿನ ಸಾಹಿತ್ಯ ಕೃತಿಗಳ ಕಡೆಗೆ ಗಮನ ಸೆಳೆಯಲು ಕಾರಣವಾಗುತ್ತದೆ. ಕನ್ನಡದ ಕೃತಿಗಳ ಅನುವಾದದ ಸಾಧ್ಯತೆಗಳು ಹೆಚ್ಚಾಗಲಿವೆ. ಕನ್ನಡದಲ್ಲಿ ಇರುವ ಮಹತ್ವದ ಕೃತಿಗಳ ಕಡೆಗೂ ಜಗತ್ತು ಗಮನ ಹರಿಸಲಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಕನ್ನಡದ ವಿಸ್ತರಣೆ-ಪ್ರಚಾರ ನಡೆದು ಸ್ವರೂಪ ಬದಲಾಗಬಹುದು. ಮುಂಬರುವ ದಿನಗಳಲ್ಲಿ, ಅನುವಾದವಾಗದೇ ಇರುವ ಕನ್ನಡದ ಸತ್ವಯುತ ಕೃತಿಗಳಿಗೆ ಮನ್ನಣೆಯ ದಾರಿ ತೆರೆಯಲಿದೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಹಾದಿ ತೆರೆಯಲು ಇದು ಸಕಾಲ.

ಕಲೆ: ಪ್ರಕಾಶ್‌ ಶೆಟ್ಟಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.