ADVERTISEMENT

ಐದುನೂರು ವರ್ಷಗಳ ಅಪರೂಪದ ಮರವಿದು!

ಈರಣ್ಣ ಬೆಂಗಾಲಿ
Published 6 ಸೆಪ್ಟೆಂಬರ್ 2025, 21:32 IST
Last Updated 6 ಸೆಪ್ಟೆಂಬರ್ 2025, 21:32 IST
<div class="paragraphs"><p>ಐದುನೂರು ವರ್ಷಗಳ ಅಪರೂಪದ ಮರವಿದು!</p></div>

ಐದುನೂರು ವರ್ಷಗಳ ಅಪರೂಪದ ಮರವಿದು!

   

ಸಸ್ಯಲೋಕದ ವಿಸ್ಮಯಗಳು ಯಾವಾಗಲೂ ಜನಸಾಮಾನ್ಯರಿಗೆ ಅಚ್ಚರಿಯನ್ನುಂಟು ಮಾಡುತ್ತವೆ. ಕೆಲವು ಮರಗಳು 50 ವರ್ಷಗಳ ಕಾಲ ಬದುಕಿದ್ದರೆ ಇನ್ನು ಕೆಲವುದರ ಜೀವಿತಾವಧಿ ಸಾವಿರ ವರ್ಷಗಳು. ಅದೇ ರೀತಿ ರಾಯಚೂರು ಜಿಲ್ಲೆಯ ದೇವದುರ್ಗದಲ್ಲಿ ನೆಲೆನಿಂತ ಐದುನೂರು ವರ್ಷದ ಬೃಹತ್ ಮರ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇಂಥ ವಿಸ್ಮಯಕಾರಿ ಬಾವೋಬಾಬ್‌ ಮರ ದೇವದುರ್ಗದಲ್ಲಿ ಬಿಟ್ಟರೆ ಹಾವೇರಿಯ ಹಾವನೂರ್‌ನಲ್ಲೊಂದಿದೆ. ಮೂಲತಃ ಈ ಜಾತಿಯ ಮರ ನಮ್ಮ ದೇಶದ್ದಲ್ಲ. 

ಬಾವೋಬಾಬ್ ಮರದ ವೈಜ್ಞಾನಿಕ ಹೆಸರು ಅಡನಸೋನಿಯಾ ಡಿಜಿಟಾಟಾ. ಕನ್ನಡದಲ್ಲಿ ಇದನ್ನು ಗೊಡ್ಡು ಹುಣಸೆ ಮರ ಎಂದು ಕರೆಯಲಾಗುತ್ತಿದ್ದು, ಈ ಮರವು ಆಫ್ರಿಕಾ, ಮಡಗಾಸ್ಕರ್, ಆಸ್ಟ್ರೇಲಿಯಾಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಅಚ್ಚರಿ ಎಂಬಂತೆ ದೇವದುರ್ಗ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿರುವ ಈ ಮರವು ಗಾತ್ರದಲ್ಲಿ 45 ಅಡಿ ಅಗಲ ಮತ್ತು 40 ಅಡಿ ಎತ್ತರವಿದೆ. ಇಂಧಾರ್ ಜಿಲ್ಲೆಯ ‘ಮಾಂಡು’ವಿನಲ್ಲಿ ಈ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದ್ದು, ಅಲ್ಲಿ ಬಾವೋಬಾಬ್ ಕಾಯಿಯ ಒಣಗಿಸಿರುವ ತಿರುಳನ್ನು ಪುಡಿ ಮಾಡಿ, ತಣ್ಣನೆಯ ಪಾನೀಯವನ್ನು ಮಾಡುತ್ತಾರೆ. ಈ ಮರದ ಕಾಯಿಗಳನ್ನು ‘ಮಾಂಡು ಕಿ ಇಮ್ಲಿ’ ಎಂದು ಕರೆಯುತ್ತಾರೆ. ಧಾರ್‌ನ ತೋಟಗಾರಿಕೆ ಇಲಾಖೆಯು ಬಾವೋಬಾಬ್ ಹಣ್ಣುಗಳಿಗೆ ಭೌಗೋಳಿಕ ಸೂಚ್ಯಂಕ ಜಿಐ ಟ್ಯಾಗ್‌ಗೆ ಪ್ರಸಾಪವಿಟ್ಟಿದೆ.

ADVERTISEMENT

ಮೂರು ಸಾವಿರ ವರ್ಷಗಳಷ್ಟು ದೀರ್ಘಾಯುಷ್ಯವನ್ನು ಹೊಂದಿರುವ ಈ ಮರದಲ್ಲಿ ರಾತ್ರಿ ವೇಳೆ ಹೂಗಳು ಅರಳಿ ಸುಗಂಧ ಬೀರುತ್ತವೆ. ಅಚ್ಚರಿಯ ಸಂಗತಿ ಎಂದರೆ ಬಾವೋಬಾಬ್ ಮರದ ಕಾಂಡದಲ್ಲಿ ಒಂದು ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಅಗಾಧ ಸಾಮರ್ಥ್ಯ ಹೊಂದಿದ್ದು, ಪ್ರಾಕೃತಿಕ ವಾಟರ್ ಟ್ಯಾಂಕ್ ಎಂದೂ ಹೆಸರುವಾಸಿ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಈ ಮರವು ಗಣನೀಯ ಪಾತ್ರವಹಿಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.