
ಕೆರೆಯಲ್ಲಿ ಪಟ್ಟೆತೆಲೆ ಹೆಬ್ಬಾತುಗಳು
ಚಿತ್ರಗಳು/ಸತೀಶ ಬಡಿಗೇರ್
ಸಾಂಪ್ರದಾಯಿಕ ಬೆಳೆಗಳಿಗೆ ಒಗ್ಗಿಕೊಂಡಿರುವ ಹೆಬ್ಬಾತುಗಳಿಗೆ ಆಹಾರ ಬೆಳೆ ಬದಲಾವಣೆಯಿಂದ ಹೊಸ ಆಹಾರ ಹುಡುಕುವುದು ಕಷ್ಟಸಾಧ್ಯ. ಹೀಗಾಗಿ, ಅವು ಮತ್ತೆ ಮತ್ತೆ ತವರಿಗೆ ಹಿಂದಿರುಗುತ್ತವೆ. ಇದರಿಂದಾಗಿ ಗದಗದ ಮಾಗಡಿ ಕೆರೆ ಸದ್ಯ ಈ ಪಕ್ಷಿಗಳ ಆಶ್ರಯತಾಣವಾಗಿದೆ...
ಪಟ್ಟೆತಲೆ ಹೆಬ್ಬಾತು (ಬಾರ್ ಹೆಡೆಡ್ ಗೂಸ್)ಗಳ ವಲಸೆಗೆ ಸಾಂಸ್ಕೃತಿಕ ಹಿನ್ನೆಲೆ ಇದೆ. ಈ ನೆಲೆಯಲ್ಲಿ ರೈತರ ಚಟುವಟಿಕೆಗಳೇನು? ಚಳಿಗಾಲಕ್ಕೆ ಹೊಲ ಗದ್ದೆಗಳಲ್ಲಿ ತುಂಬಿರುವ ಫಸಲುಗಳಾವುವು? ಅವುಗಳಲ್ಲಿ ತಮ್ಮ ಆಹಾರ ಯಾವುದು? ಎಲ್ಲಿ? ಯಾವಾಗ ಎಂಬ ಖಚಿತವಾದ ತಿಳಿವಳಿಕೆ ಅವುಗಳಿಗೆ ಇರುತ್ತದೆ.
ಈ ಜ್ಞಾನವನ್ನು ಅವು ತಮ್ಮ ಪೂರ್ವಿಕರಿಂದ ಪಡೆದುಕೊಂಡಿವೆ. ಅವುಗಳಲ್ಲಿ ಅನುವಂಶಿಕವಾಗಿ ಇದು ಹರಿದು ಸಾಗಿರುತ್ತದೆ. ಹಾಗಾಗಿ, ಅವು ಮತ್ತೆ ಮತ್ತೆ ಮಾಗಡಿ ಕೆರೆ ಬಂದು, ಮತ್ತೆ ತವರಿಗೆ ಹಿಂದಿರುಗುತ್ತವೆ. ಆದರೆ, ಬದಲಾಗುತ್ತಿರುವ ಪರಿಸರ, ಜಾಗತಿಕಗೊಂಡ ಆರ್ಥಿಕ ಚಟುವಟಿಕೆಗಳು ಇವುಗಳ ಬದುಕಿನ ಮೇಲೆ ಮತ್ತು ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿವೆ.
ಕಡಲೆ, ಶೇಂಗಾ ಇವೆಲ್ಲವೂ ಆ ಸಮಯಕ್ಕೇ ಬರುವ ಬೆಳೆಗಳು. ಈಗಿನ ಉದಾರೀಕರಣ ನೀತಿಯಿಂದ ಆರ್ಥಿಕತೆ ಪ್ರಾಮುಖ್ಯತೆ ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇರುವ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಿಂದಾಗಿ, ಋತುಮಾನ ಆಧರಿಸಿದ ಸಾಂಪ್ರದಾಯಿಕ ಬೆಳೆಗಳು ಮೂಲೆಗುಂಪಾಗುತ್ತಿವೆ.
ಹೆಬ್ಬಾತುಗಳು ಕಾಲಾಂತರದಿಂದಲೂ ಸಾಂಪ್ರದಾಯಿಕ ಬೆಳೆಗಳಿಗೆ ಅಭ್ಯಾಸವಾಗಿವೆ. ಆಹಾರ ಬೆಳೆ ಬದಲಾವಣೆಯಿಂದ ಅವು ಹೊಸ ಆಹಾರ ಹುಡುಕುವುದು ಕಷ್ಟಸಾಧ್ಯ. ಅಭಿವೃದ್ಧಿ ಹೆಸರಿನಲ್ಲಿ ಕೆರೆ ಮಧ್ಯದಲ್ಲಿ ನೆಡುತೋಪುಗಳನ್ನು ಮಾಡುವುದು ವಿನಾಶಕಾರಿ. ಕೆರೆಗಳೆಂದರೆ ಕಾಂಕ್ರಿಟ್ ಕಟ್ಟೆ ಕಟ್ಟಿಸಿ, ನೀರಿಟ್ಟುಕೊಳ್ಳುವುದಲ್ಲ.
–ಹೀಗೆ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾಪಕರಾದ ಕೃಪಾಕರ–ಸೇನಾನಿ ಮಾತನಾಡುತ್ತಲೇ ಇದ್ದರು.
ಇದಕ್ಕೆ ಕಾರಣವಿದೆ. ಗದಗದಿಂದ 26 ಕಿಲೋಮೀಟರ್ ದೂರದಲ್ಲಿರುವ ಮಾಗಡಿ ಕೆರೆಗೆ ಪಟ್ಟೆತಲೆ ಹೆಬ್ಬಾತುಗಳು ಬರುವ ಸಂಖ್ಯೆ ಇಳಿಮುಖವಾಗಿದೆ.
ಮಂಗೋಲಿಯಾ ಮತ್ತು ಉತ್ತರ ಚೀನಾ ಮೂಲದ ಇವು ಇಲ್ಲಿಗೆ ಚಳಿಗಾಲದ ಅತಿಥಿಗಳು. ನವೆಂಬರ್ ಮೊದಲ ವಾರ ಕಳೆಯುತ್ತಿದ್ದಂತೆ ಆ ಪ್ರದೇಶದಲ್ಲಿ ಮೈನಸ್ 20 ಡಿಗ್ರಿಯಷ್ಟು ಚಳಿ ಇರುತ್ತದೆ. ಕೆರೆಗಳೆಲ್ಲವೂ ಹೆಪ್ಪುಗಟ್ಟುತ್ತವೆ. ಆಹಾರವೂ ಸಿಗುವುದಿಲ್ಲ. ಅದೇ ಸಮಯದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ 10 ರಿಂದ 15 ಡಿಗ್ರಿ ಉಷ್ಣಾಂಶ ಇರುತ್ತದೆ. ಈ ವ್ಯತ್ಯಾಸವನ್ನು ತಜ್ಞರು ದಾಖಲಿಸಿದ್ದಾರೆ. ಹೀಗಾಗಿ, ಹೆಬ್ಬಾತುಗಳು ಮಂಗೋಲಿಯಾ ಮತ್ತು ಚೀನಾದಿಂದ ಟಿಬೆಟ್, ಹಿಮಾಲಯ ಪರ್ವತ ಶ್ರೇಣಿಗಳನ್ನು ದಾಟಿಕೊಂಡು ಭಾರತಕ್ಕೆ ಬರುತ್ತವೆ. ನವೆಂಬರ್‌ನಿಂದ ಮಾರ್ಚ್‌ವರೆಗೆ ಇಲ್ಲೇ ವಿಶ್ರಾಂತಿ ಪಡೆದು ಮತ್ತೆ ಹಿಂದಿರುಗುತ್ತವೆ.
ಮಂಗೋಲಿಯಾದಿಂದ ದಕ್ಷಿಣ ಭಾರತದತ್ತ ಬರುವ ಹೆಬ್ಬಾತುಗಳಿಗೆಲ್ಲ ಈ ಕೆರೆಯೇ ಅಚ್ಚುಮೆಚ್ಚು. ಈ ಜಾಗ ಹೊರತುಪಡಿಸಿ ಬೇರೆಲ್ಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಬ್ಬಾತುಗಳನ್ನು ಒಂದೇ ಕಡೆ ಸಿಗುವುದಿಲ್ಲ. ಕೆಲವು ವರ್ಷಗಳ ಹಿಂದೆ 10 ರಿಂದ 11 ಸಾವಿರದಷ್ಟು ಹೆಬ್ಬಾತುಗಳು ಬಂದಿರುವುದನ್ನು ಪಕ್ಷಿಪ್ರೇಮಿಗಳು ಗುರುತಿಸಿದ್ದಾರೆ. ಈಗ ಮಾಗಡಿಗೆ ಬರುವ ಹೆಬ್ಬಾತುಗಳ ಸಂಖ್ಯೆ ಆರೇಳು ಸಾವಿರಕ್ಕೆ ಕುಸಿದಿದೆ.
ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಕೆರೆಯಲ್ಲಿ ಪಕ್ಷಿ ಪ್ರಿಯರ ಮನಸೆಳೆದ ಪಟ್ಟೆತಲೆ ಹೆಬ್ಬಾತು
ನವೆಂಬರ್‌ನ ಕೊನೆ ವಾರದಲ್ಲಿ ಕೆರೆಯಲ್ಲಿ ಅಂದಾಜು 6 ರಿಂದ 7 ಸಾವಿರದಷ್ಟು ಹೆಬ್ಬಾತುಗಳಿದ್ದವು. ಜನವರಿ 14 ರ ವೇಳೆಗೆ ಈ ಸಂಖ್ಯೆ 3 ಸಾವಿರಕ್ಕೆ ಇಳಿಯಿತು. ಇಲ್ಲಿಗೆ ಬಂದಿದ್ದ ಇನ್ನೂ 4 ಸಾವಿರದಷ್ಟು ಬಾತುಗಳು ಸ್ಥಳ ಬದಲಿಸಿದವು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೆಬ್ಬಾತುಗಳು ಸ್ಥಳ ಬದಲಿಸಲು ಏನು ಕಾರಣ ಇರಬಹುದು ಎಂಬುದಕ್ಕೆ ತಜ್ಞರು ಉತ್ತರ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ.
‘ಪಟ್ಟೆತಲೆ ಹೆಬ್ಬಾತುಗಳ ಮೊದಲ ಆಯ್ಕೆ ಮಾಗಡಿ ಕೆರೆ. ಅದನ್ನು ಹೊರತುಪಡಿಸಿ ಲಕ್ಷ್ಮೇಶ್ವರ ತಾಲ್ಲೂಕಿನ ಶೆಟ್ಟಿಕೆರೆ, ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಕೆರೆ, ನಂಜನಗೂಡಿನ ಹದಿನಾರು ಕೆರೆ, ಕಬಿನಿ ಹಿನ್ನೀರು, ಹಗರಿಬೊಮ್ಮನಹಳ್ಳಿಯ ತುಂಗಭದ್ರಾ ಹಿನ್ನೀರು, ಬಾಗಲಕೋಟೆ ಆಲಮಟ್ಟಿ ಹಿನ್ನೀರಿನಲ್ಲಿ ಹೆಚ್ಚು ಕಾಣಿಸುತ್ತವೆ’ ಎನ್ನುತ್ತಾರೆ ದಾವಣಗೆರೆಯ ಪಕ್ಷಿಗಳ ಪ್ರೇಮಿ ಶಿಶುಪಾಲ.
ಗದಗ ಜಿಲ್ಲೆ ಮಾಗಡಿ ಕೆರೆಗೆ ಬಂದಿರುವ ಪಟ್ಟೆತೆಲೆ ಹೆಬ್ಬಾತು
ಜಾಗತಿಕ ಪರಿಸರದಲ್ಲಾಗುತ್ತಿರುವ ಬದಲಾವಣೆಗಳು ಕೂಡ ವಲಸೆ ಮೇಲೆ ಪರಿಣಾಮ ಬೀರುತ್ತಿದೆ. ಅದು ಒಳ್ಳೆಯ ಪರಿಣಾಮವೋ; ಕೆಟ್ಟದ್ದೋ ಎಂಬುದನ್ನು ಈಗಲೇ ಹೇಳಲು ಸಾಧ್ಯವಾಗುವುದಿಲ್ಲ. ಮೈಸೂರು ಜಿಲ್ಲೆಯ ಹದಿನಾರು ಕೆರೆಗೆ ವಲಸೆ ಹಕ್ಕಿಗಳು ಜನವರಿಗೆ ಬರುತ್ತಿರಲಿಲ್ಲ. ಆದರೆ, ಅಲ್ಲಿಗೆ ಅದಕ್ಕೂ ಮೊದಲೇ 250ಕ್ಕೂ ಹೆಚ್ಚು ಹಕ್ಕಿಗಳು ಬಂದಿವೆ. ದಾವಣಗೆರೆಗೆ ಜನವರಿಯಲ್ಲಿ ಬರುತ್ತಿದ್ದ ಹಕ್ಕಿಗಳು ಡಿಸೆಂಬರ್‌ನಲ್ಲೇ ಬಂದಿವೆ. ಪಕ್ಷಿ ವೀಕ್ಷಕರು ಊಹಿಸದ ಹೊಸ ಜಾಗಗಳೆಲ್ಲಾ ವಲಸೆ ಹಕ್ಕಿಗಳು ಕಂಡು ಬರುತ್ತಿವೆ. ಈ ಬಗ್ಗೆ ನಿರಂತರವಾಗಿ ವೈಜ್ಞಾನಿಕ ಅಧ್ಯಯನ ನಡೆದರೆ ನಿಖರ ಕಾರಣಗಳು ಗೊತ್ತಾಗಲಿವೆ ಎನ್ನುತ್ತಾರೆ ತಜ್ಞರು.
ಈ ಕೆರೆ ಬರುವ ಹೆಬ್ಬಾತುಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಅಲ್ಲದೇ ಸ್ಥಳ ಬದಲಾವಣೆಯನ್ನೂ ಮಾಡಿವೆ. ಇದಕ್ಕೆ ಕಾರಣ ಇಲ್ಲದಿಲ್ಲ. ಮುಂಚೆ ಕಡಲೆ, ಶೇಂಗಾವನ್ನು ಮಳೆ ಆಧರಿಸಿ ಬೆಳೆಯಲಾಗುತ್ತಿತ್ತು. ಈಗ ಕೊಳವೆಬಾವಿ ಸಂಸ್ಕೃತಿ ಬಂದ ನಂತರ ರೈತರು ತಮಗೆ ಅನುಕೂಲಕ್ಕೆ ತಕ್ಕಂತೆ ಯಾವ ಬೆಳೆಯನ್ನು, ಯಾವಾಗ ಬೇಕಾದರೂ ಬೆಳೆಯುತ್ತಾರೆ. ಇದು ಕೂಡ ಭವಿಷ್ಯದಲ್ಲಿ ಕಷ್ಟವಾಗಲಿದೆ. ಇಂತಹ ಬದಲಾವಣೆಗಳು ನಮಗೆ ಗೊತ್ತಿಲ್ಲದಂತೆ ಭೌಗೋಳಿಕವಾಗಿ ಬದಲಾವಣೆಗಳು ಆಗುತ್ತವೆ. ಮುಂದೆ ಹತ್ತು ವರ್ಷಗಳಲ್ಲಿ ಅವು ಬರದೇ ಹೋದಾಗ ತಿಳಿಯುತ್ತದೆ.
ದಾವಣಗೆರೆ ಜಿಲ್ಲೆಯ ಕೊಂಡಜ್ಜಿ ಕೆರೆಯಲ್ಲಿ ಕಂಡ ಪಟ್ಟೆತಲೆ ಹೆಬ್ಬಾತುಗಳು
ರೈತನ ಬೆಳೆಯ ಆಯ್ಕೆ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿರುತ್ತದೆ. ಹಿಂದಿನಂತೆ ಸಾಂಪ್ರದಾಯ ಪದ್ಧತಿಗೆ ಅದು ವಿರುದ್ಧವಾಗಿದೆ. ಬದಲಾಗುತ್ತಿರುವ ಈ ಚಿತ್ರಣಗಳು ಹೆಬ್ಬಾತುಗಳ ಭವಿಷ್ಯಕ್ಕೆ ಕಂಟಕವಾದರೆ ಅಚ್ಚರಿ ಇಲ್ಲ. ಹಾಗಾದಲ್ಲಿ ನೂರಾರು ವರ್ಷಗಳಿಂದ ಬೆಸೆದು ಬಂದ ಹಕ್ಕಿ ಮತ್ತು ಮನುಷ್ಯ ಸಂಸ್ಕೃತಿಯ ಕೊಂಡಿ ಕಳಚಿ ಹೋಗಬಹುದು. ಹೆಬ್ಬಾತುಗಳು ಮಾಗಡಿ ಕೆರೆಗೆ ವಿದಾಯವನ್ನೂ ಹೇಳಬಹುದು.
ಏಳನೇ ಬಾರಿಗೆ ಮಾಗಡಿ ಕೆರೆಗೆ ಬಂದ ಎಕ್ಸ್ 52 ಟ್ಯಾಗ್ ಇರುವ ಪಟ್ಟೆತಲೆ ಹೆಬ್ಬಾತು.
ವಲಸೆ ಅಧ್ಯಯನಕ್ಕಾಗಿ ಟ್ಯಾಗ್
ಮಂಗೋಲಿಯಾದ ವೈಲ್ಡ್‌ಲೈಫ್ ರಿಸರ್ಚ್ ಸೆಂಟರ್‌ನ ಬ್ಯಾಟ್ ಬೇಯರ್ ಮತ್ತು ಅವರ ಸಂಗಾತಿಗಳು ವಲಸೆ ಅಧ್ಯಯನಕ್ಕಾಗಿ ಹೆಬ್ಬಾತುಗಳ ಕೊರಳಿಗೆ ಟ್ಯಾಗ್ ಕಟ್ಟಿ ನಿರಂತರ ನಿಗಾ ವಹಿಸಿದ್ದರು. ನೂರು ಹೆಬ್ಬಾತುಗಳ ಕೊರಳಿಗೆ ಟ್ಯಾಗ್ ಹಾಕಿದ್ದರು. ಪ್ರತಿಯೊಂದಕ್ಕೂ ಭಿನ್ನ ಸಂಖ್ಯೆ ನೀಡಿದ್ದರು. ಪಕ್ಷಿ ಗಂಡೋ ಹೆಣ್ಣೋ ಅದರ ದೇಹ ತೂಕ ಆರೋಗ್ಯ ಸ್ಥಿತಿ ಎಲ್ಲವನ್ನೂ ದಾಖಲಿಸಿದ್ದರು. ನೀರಿನಲ್ಲಿ ನೆನೆಯದ ವೆಲ್ವೆಟ್ ಬಟ್ಟೆಯಲ್ಲಿ ನಂಬರ್ ಬರೆದು ಟ್ಯಾಗ್ ಕಟ್ಟಿದ್ದರು. ಹೀಗೆ ಟ್ಯಾಗ್ ಇರುವ ನೂರು ಹಕ್ಕಿಗಳ ಪೈಕಿ ಹತ್ತು ಹೆಬ್ಬಾತುಗಳ ಬೆನ್ನಿನ ಮೇಲೆ ಜಿಪಿಎಸ್ ಸಿಸ್ಟಂ ಹೊಂದಿರುವ ಕ್ಯಾಮೆರಾ ಅಳವಡಿಸಿದ್ದರು. ಹೆಬ್ಬಾತುಗಳು 25 ಸಾವಿರ ಅಡಿ ಮೇಲೆ ಹಾರುತ್ತವೆ. ಮೌಂಟ್ ಎವರೆಸ್ಟ್ ದಾಟಿ ಬರುತ್ತವೆ. ಹೆಬ್ಬಾತುಗಳ ಬೆನ್ನ ಮೇಲಿಟ್ಟ ಕ್ಯಾಮೆರಾದಿಂದ ಅದರ ಜತೆಗೆ ಹಾರುವ ಹಕ್ಕಿಗಳ ಹಿಂಡು ಹಿಮಾಲಯ ಪರ್ವತ ಶ್ರೇಣಿಯ ನೋಟ ಸೆರೆಯಾಗಿತ್ತು. ಎಕ್ಸ್-57 ಸಂಖ್ಯೆ ಹೊಂದಿರುವ ಹೆಬ್ಬಾತು ಸತತ 7ನೇ ಬಾರಿಗೆ ಮಾಗಡಿ ಕೆರೆಗೆ ವಲಸೆ ಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.