ಹೊಸಪೇಟೆಯಲ್ಲಿ ಸೆರೆ ಸಿಕ್ಕ ಕರಡಿ
ಚಿತ್ರ: ಲವ
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಚಂದ್ರಶೇಖರಪುರದ ಮಾಳಗೇರ ಶಿವಕುಮಾರ್ ತಮ್ಮ ಕುರಿಹಟ್ಟಿಯಲ್ಲಿ ನಿದ್ದೆಯಲ್ಲಿದ್ದರು. ಅದೇ ವೇಳೆ ಹಟ್ಟಿಯ ಜಾನುವಾರುಗಳು ಬೆದರಿದ್ದಲ್ಲದೆ ವಿಚಿತ್ರ ಸದ್ದು ಮಾಡುತ್ತಿದ್ದವು. ನಾಯಿಗಳು ಬೊಗಳಲು ಆರಂಭಿಸಿದವು. ಶಿವಕುಮಾರ್ ಗಾಬರಿಯಿಂದ ಎದ್ದು ನೋಡಿದರೆ ಅನತಿ ದೂರದಲ್ಲಿ ದೈತ್ಯ ಕರಡಿ! ದನಕರುಗಳು, ನಾಯಿಗಳಿಂದ ಹೆದರಿದಂತೆ ಕಂಡ ಅದು ಬೇವಿನಮರ ಏರಿತ್ತು. ಈ ಸುದ್ದಿ ಹಬ್ಬಿ ಜನರು ಆ ರಾತ್ರಿಯಲ್ಲೇ ಜಮಾವಣೆಗೊಂಡರು.
ಅರಣ್ಯ ಇಲಾಖೆಗೂ ಸುದ್ದಿ ಮುಟ್ಟಿತು. ಅವರು ಹಾಜರಾದರು. ಪೊಲೀಸರು ಜನರನ್ನು ದೂರ ಸರಿಸುತ್ತಾ ಮರದ ಸುತ್ತಲಿನ ಪ್ರದೇಶವನ್ನು ಕಾರ್ಯಾಚರಣೆಗೆ ಸಿದ್ಧಗೊಳಿಸಿದರು. ವೈಲ್ಡ್ ಲೈಫ್ ಎಸ್.ಓ.ಎಸ್ ತಂಡ ಧಾವಿಸಿತು. ಪಶು ವೈದ್ಯರು ಅರವಳಿಕೆ ನೀಡುವ ಗನ್ ಹಿಡಿದು ಜೆಸಿಬಿಯ ಮುಂದಿನ ಬಕೆಟ್ ಏರಿ ಕುಳಿತರು. ಆಪರೇಟರ್ ಬಕೆಟ್ ಅನ್ನು ಕರಡಿಗೆ ಸಮನಾಂತರವಾಗಿ ಒಯ್ದು ಕೊಂಚ ದೂರ ನಿಲ್ಲಿಸಿದ. ಅರವಳಿಕೆ ಗುರಿಮುಟ್ಟಿತು. ಕರಡಿ ಪ್ರಜ್ಞೆ ತಪ್ಪಿದ ನಂತರ ಮರವೇರಿದ ಒಂದಿಬ್ಬರು ಅದರ ಹೊಟ್ಟೆಗೆ ಹಗ್ಗ ಬಿಗಿದು ನಿಧಾನವಾಗಿ ಬಕೆಟ್‌ಗೆ ಇಳಿಸಿದರು. ಅಲ್ಲಿಂದ ಕರಡಿಯನ್ನು ಬೋನಿಗೆ ವರ್ಗಾಯಿಸಿ, ಅರಣ್ಯ ಇಲಾಖೆ ಕಚೇರಿಗೆ ಒಯ್ದರು. ಮರುಕ್ಷಣ ಜನ ಸಾಗರವೂ ಕರಗಿತು.
ಕರಡಿಗಳಿಗೆ ಅರಣ್ಯವೇ ಆಹಾರ ತಾಣ. ಬಿಟ್ಟರೆ ಹೊಲಗಳು. ಆದರೆ ಒಂದಿಷ್ಟು ಕರಡಿಗಳಿಗೆ ಊರೇ ಆಹಾರದ ಮೂಲವಾಗಿ ಬಿಡುತ್ತದೆ. ಹೊಸಪೇಟೆ, ಸಂಕ್ಲಾಪುರ, ಕಾರಿಗನೂರು ಹೀಗೆ ಜನವಸತಿ ಸ್ಥಳಗಳಲ್ಲಿ ನಾಲ್ಕೈದು ತಿಂಗಳಿಂದ ಒಂದು ಕರಡಿ ಅಲ್ಲಲ್ಲಿ ಕಾಣಿಸಿಕೊಂಡು ಕಣ್ಮರೆ ಆಗುತ್ತಿರುವುದು ಇತ್ತೀಚೆಗಷ್ಟೆ ಕೇಳಿ ಬಂದಿತ್ತು. ಆತಂಕಗೊಂಡ ಜನರೇ ಇದನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ದುಂಬಾಲು ಬಿದ್ದಿದ್ದರು. ಆ ಕರಡಿಯ ಸೆರೆ ಹಿಡಿಯುವ ಸತತ ಪ್ರಯತ್ನ ಕೈಗೂಡಿದ್ದು ಒಂದು ರಾತ್ರಿ ಹೊಸಪೇಟೆಯ ಸಂಡೂರು ರಸ್ತೆಯಲ್ಲಿ.
ಊರ ಆಹಾರವೇ ಇಷ್ಟ...
ಕಾಡಿನ ಹಣ್ಣು ಹಂಪಲು, ಜೇನು, ಗೆದ್ದಲು ಹುಳುಗಳು, ಗೊದ್ದಿಗೆ ಇವುಗಳೇ ಕರಡಿಗಳ ಆಹಾರ. ಆಹಾರಕ್ಕೆ ಅಭಾವ ಆದಾಗ ಜಮೀನುಗಳಿಗೆ ಬರುತ್ತವೆ. ಅಲ್ಲದೆ ಗುಡಿ ಗುಂಡಾರಗಳಲ್ಲಿ ಸಿಗುವ ದೀಪದ ಎಣ್ಣೆ, ತೆಂಗಿನಕಾಯಿ, ಇಟ್ಟ ಎಡೆ ತಿನ್ನುತ್ತವೆ. ಮುಸುರೆ ಸಿಕ್ಕರೂ ಕುಡಿಯುತ್ತವೆ. ಒಮ್ಮೆ ಕರಡಿಗಳು ಇಂತಹ ಜಾಗ ನೋಡಿಕೊಂಡರೆ ಪ್ರತಿ ನಿತ್ಯ ಅದೇ ಸಮಯಕ್ಕೆ ಕಾಯಂ ಬರುತ್ತವೆ. ವಿಶೇಷವಾಗಿ ಹೊಸಪೇಟೆ, ಚಂದ್ರಶೇಖರಪುರದಲ್ಲಿ ಕಂಡ ಕರಡಿಗಳು ಹೆಚ್ಚಾಗಿ ಇಂತಹ ಆಹಾರಕ್ಕೇ ಒಗ್ಗಿಕೊಂಡಂತೆ ಕಾಣುತ್ತವೆ.
ನಿತ್ಯ ರಾತ್ರಿ ಕನಿಷ್ಠ ಆರೇಳು ಕಿ.ಮೀ ಆಹಾರಕ್ಕಾಗಿ ಸಂಚರಿಸುತ್ತವೆ. ಮಳೆಗಾಲದಲ್ಲಿ ಮಾತ್ರ ಇವುಗಳಿಂದ ಬೆಳೆ ಹಾನಿ, ಮನುಷ್ಯರ ಮೇಲೆ ದಾಳಿಗಳು ಹೆಚ್ಚು. ಹೊಲಗಳಲ್ಲಿ ಶೇಂಗಾ, ಮೆಕ್ಕೆಜೋಳ, ಸಜ್ಜೆ, ದಾಳಿಂಬೆ ಹೀಗೆ ಸಾಂಪ್ರದಾಯಿಕ ಬೆಳೆಗಳ ಸುಗ್ಗಿ. ಇಳಿಸಂಜೆ ಆಗುತ್ತಿದ್ದಂತೆ ಕಾಡಿನ ಅಂಚಿಗೆ ಬಂದು ಕತ್ತಲಾಗುತ್ತಿದ್ದಂತೆ ಹೊಲಗಳಿಗೆ ದಾಳಿ ಇಡುತ್ತವೆ. ರೈತರು ಓಡಿಸಿದರೆ, ಆಹಾರ ಸಿಗದಿದ್ದರೆ ಬೇರೆ ಹೊಲಗಳಿಗೆ ಹೋಗುತ್ತವೆ. ಆಹಾರ ಅರಸುತ್ತಾ ಬಹು ದೂರ ಹೋಗಿ ವಾಪಸ್ ವಾಸಸ್ಥಾನಕ್ಕೆ ಬರುವಷ್ಟರಲ್ಲಿ ಒಮ್ಮೊಮ್ಮೆ ದಾರಿ ಮಧ್ಯದಲ್ಲಿ ಬೆಳಕು ಹರಿದು ಬಿಟ್ಟರೆ, ಮಳೆ ಮೋಡ ಕವಿದ ಕಾರಣಕ್ಕೆ ಬೆಳಕು ಹರಿಯುವ ಸಮಯವನ್ನು ಊಹಿಸದೇ ನಡುದಾರಿಯಲ್ಲಿ ಸಿಕ್ಕಿ ಹಾಕಿಕೊಂಡರೆ, ಪರಿಸರಕ್ಕೆ ಹೊಸತಾದ ಕರಡಿಗಳು ತನ್ನ ನೆಲೆ ಪತ್ತೆ ಹಚ್ಚಲು ಆಗದೇ ದಿಕ್ಕೆಟ್ಟು ಅಲೆಯುವಾಗ ತಾವಿದ್ದಲ್ಲೇ ಸಿಗುವ ಪೊದೆ, ಬೆಳೆಗಳ ಮಧ್ಯೆ ಅವಿತುಕೊಳ್ಳುತ್ತವೆ. ಆಗ ಕೃಷಿಕರು ಇವುಗಳ ಇರುವಿಕೆಯ ಗುರುತಿಸದೇ ಅವುಗಳ ಸುತ್ತಮುತ್ತ ಸುಳಿದಾಗ ಜೀವ ಭಯದಿಂದ ಆಕ್ರಮಣ ಮಾಡುತ್ತವೆ.
ಇನ್ನು ಜನರು ಕಲ್ಲುಗಳಿಂದ ಹೊಡೆದು, ನಾಯಿಗಳನ್ನು ಛೂ ಬಿಟ್ಟು, ಬಾಯಿ ಮಾಡಿ ಓಡಿಸಿದ ಕರಡಿಗಳು ಜನರ ಮೇಲೆ ಮನಸ್ಸಲ್ಲಿ ರಚ್ಚು ಇಟ್ಟುಕೊಂಡು ಪ್ರತಿಕಾರ ತೀರಿಸಿಕೊಳ್ಳಲು ದಾಳಿ ಮಾಡುತ್ತವೆ. ಬಿಟ್ಟರೆ ಮರಿ ಕರಡಿಗಳೊಂದಿಗೆ ತಾಯಿ ಕರಡಿ ಇದ್ದಾಗ, ಬೆದೆಗೆ ಬಂದಾಗ ದಾಳಿ ಮಾಡುತ್ತವೆ.
ಇವು ಹೆಚ್ಚುಕಮ್ಮಿ ಮನುಷ್ಯರಷ್ಟೇ ಹುಷಾರು. ಮನುಷ್ಯರ ಮೇಲೆ ದಾಳಿ ಮಾಡಿದರೆ ಮೊದಲು ಹಿಡಿದು ಎಳೆಯುವುದೇ ಕಾಲುಗಳನ್ನು. ನೆಲಕ್ಕೆ ಬೀಳಿಸಿ ಮೊದಲು ಪರಚುವುದೇ ಮುಖದ ಭಾಗವನ್ನು. ಆಮೇಲೆ ಸಿಕ್ಕ ಸಿಕ್ಕಲ್ಲಿ ಕಚ್ಚುತ್ತವೆ. ವಿಷ ಸೇರಿದಂತೆ ಇನ್ನಿತರೆ ಜೀವ ಹಾನಿಕಾರಕ, ರಾಸಾಯನಿಕ ವಸ್ತುಗಳನ್ನು ಮೂಸಿ ನೋಡಿ ಮುಟ್ಟುವುದಿಲ್ಲ. ಮನಷ್ಯರನ್ನು ದೂರದಿಂದಲೇ ಗಮನಿಸಿ ಮರೆ ಆಗುತ್ತವೆ. ಅಲ್ಲದೆ ಬೆಳೆಗಳ ಕಾವಲಿಗೆ ರೈತರು ಹಾಕಿದ ಎಕ್ಸಲೇಟರ್ ವಯರ್, ದಪ್ಪ ತಂತಿ, ಪ್ಲಾಸ್ಟಿಕ್ ಹಗ್ಗ... ಇವು ಒಂದು ಕಾಲಿಗೆ, ಹೊಟ್ಟೆ ಭಾಗಕ್ಕೆ ಬಿದ್ದರೆ ಅದನ್ನು ತನ್ನ ಎರಡೂ ಕೈಗಳಿಂದ ಸುಲಭವಾಗಿ ಬಿಡಿಸಿಕೊಂಡು ಅಲ್ಲಿಂದ ಕಾಲ್ಕೀಳುತ್ತವೆ.
ಬಲೆಗೆ ಬೀಳಿಸುವ ಬಗೆ..
ಕರಡಿ ದಾಳಿ ಮಾಡಿದೆ, ಬೆಳೆ ಮಧ್ಯೆ ಅವಿತು ಕುಳಿತಿದೆ ಎನ್ನುವ ಸುದ್ದಿ ಬಂದರೆ ಬೋನು, ಬಲೆ, ಕವಲು ಕಟ್ಟಿಗೆಗಳೊಂದಿಗೆ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಾರೆ. ಕರಡಿ ಇರುವ ಸ್ಥಳ, ಅದನ್ನು ಯಾವ ದಿಕ್ಕಿಗೆ ಓಡಿಸಿಕೊಂಡು ಹೋದರೆ ಬಲೆಗೆ ಬೀಳಿಸಬಹುದು ಎಂಬ ಲೆಕ್ಕಚಾರ ಮಾಡಿ, ಆಯಕಟ್ಟಿನ ಸ್ಥಳದಲ್ಲಿ ಬಲೆ ಕಟ್ಟುತ್ತಾರೆ.ಅದರಲ್ಲೇ ಒಂದಿಬ್ಬರು ಧೈರ್ಯವಂತರು ಕೈಯಲ್ಲಿಯೂ ಬಲೆಗಳನ್ನು ಹಿಡಿದುಕೊಂಡು ಮುನ್ನುಗ್ಗಿ ಕರಡಿಯನ್ನು ಬಲೆ ಕಟ್ಟಿದ ಸ್ಥಳದತ್ತ ಅಟ್ಟಿಸಿಕೊಂಡು ಹೋಗುತ್ತಾರೆ. ಲೆಕ್ಕಚಾರದಂತೆ ಕಟ್ಟಿದ ಬಲೆಗೆ ಬಿದ್ದರೆ ಸರಿ. ಒಂದು ವೇಳೆ ಆ ಕರಡಿ ಹಿಂತಿರುಗಿ ಅಟ್ಟಿಸಿಕೊಂಡು ಹೋದವರ ಮೈಮೇಲೆ ಏರಿ ಬಂದರೆ ಅದೇ ಬಲೆಯನ್ನು ಹಾಕಿ ಬಂಧಿಸುತ್ತಾರೆ. ಹೀಗೆ ಬಲೆಗೆ ಸಿಕ್ಕಾಕ್ಷಣ ಕರಡಿಗೆ ಕವಲು ಕಟ್ಟಿಗೆ ಹಾಕಿ ಅದುಮುತ್ತಾರೆ. ಕರಡಿಯ ಆರ್ಭಟ ತಣ್ಣಗಾಗುತ್ತಿದ್ದಂತೆ ಬಲೆ ಬಿಡಿಸಿ ಬೋನಿಗೆ ಹಾಕುತ್ತಾರೆ.
ಒಂಟಿ ಕರಡಿ ಕಂಡರೆ ಭಯ ಬೀಳುವ ಜನ ಗುಂಪಾಗಿದ್ದಾಗ ಹೆದರಿಸುವುದು, ಕೆರಳಿಸುವುದು, ಬಾಯಿ ಮಾಡುತ್ತಾ ಓಡಿಸಿಕೊಂಡು ಹೋಗುವುದು ಮಾಡುತ್ತಾರೆ. ಸಮೂಹ ಸನ್ನಿಗೆ ಒಳಗಾಗುವ ಜನ ಭಂಡತನ ತೋರಿಸುತ್ತಾರೆ. ಅವರ ಹುಚ್ಚಾಟ ನಿಯಂತ್ರಿಸುವುದೇ ಅರಣ್ಯ ಇಲಾಖೆಗೆ ದೊಡ್ಡ ಸವಾಲು. ಒಮ್ಮೊಮ್ಮೆ ಕುಪಿತಗೊಂಡ ಕರಡಿಗಳು ಜನರತ್ತ ಏರಿ ಬಂದು, ಎದ್ದು ನಿಂತು ಎರಡೂ ಕೈಗಳಲ್ಲಿಯ ಉಗುರಿನಿಂದ ಪರಚಿದ, ಕಡಿದು ತೀವ್ರ ಗಾಯಗೊಳಿಸಿದ, ಸಾಯಿಸಿದ ಉದಾಹರಣೆಗಳಿವೆ. ಸಿಟ್ಟಿಗೆದ್ದ ಕರಡಿಯ ರೌದ್ರಾವತಾರ ಎಂತಹವರನ್ನೂ ಬೆಚ್ಚಿ ಬೀಳಿಸುತ್ತದೆ. ಅದರ ಆರ್ಭಟ, ಗರ್ಜನೆಗೆ ಎದೆ ಧಸಕ್ಕೆನ್ನುತ್ತದೆ. ಕರಡಿ ಹಿಡಿಯುವ ಕಾರ್ಯಾಚರಣೆ ಜನರಿಗೆ ವಿನೋದವೆನಿಸಿದರೆ, ಸೆರೆಹಿಡಿಯುವ ತಂಡದ ಜೀವ ಅಕ್ಷರಶಃ ಬಾಯಿಗೆ ಬಂದಿರುತ್ತದೆ.
ಕರಡಿ ಸೆರೆ ಹಿಡಿಯುವ ಕಾರ್ಯಚರಣೆ ವೇಳೆಯಲ್ಲಿ ಅಥವಾ ಜನರಿಂದ ಹಲ್ಲೆಗೆ ತುತ್ತಾಗಿದ್ದರೆ ಪಶು ವೈದ್ಯರಿಂದ ಸೂಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಕೊಡಿಸಲಾಗುತ್ತದೆ. ಅದರ ಆರೋಗ್ಯವನ್ನು ಖಾತ್ರಿ ಮಾಡಿಕೊಂಡು ರಾತ್ರಿ ಹೊತ್ತಲ್ಲಿ ಕಾಡಿಗೆ ಬಿಡಲಾಗುತ್ತದೆ. ಒಂದು ವೇಳೆ ಚಿಕಿತ್ಸೆಯ ಅವಶ್ಯಕತೆ ಇದ್ದರೆ ತಮ್ಮ ಸುಪರ್ದಿನಲ್ಲಿಟ್ಟುಕೊಂಡು ಗುಣಮುಖ ಮಾಡುತ್ತಾರೆ. ಪುಂಡ ಕರಡಿಗಳನ್ನು ಮೃಗಾಲಯಕ್ಕೆ ಬಿಡಲಾಗುತ್ತದೆ. ಚಂದ್ರಶೇಖರಪುರದಲ್ಲಿ ಸೆರೆ ಸಿಕ್ಕ ಕರಡಿ ಈಗ ಗದಗ ಮೃಗಾಲಯದಲ್ಲಿ ಇದೆ
ಜನ ಜಾಣರಾಗುತ್ತಿದ್ದಾರೆ..
ಏಷ್ಯಾದಲ್ಲಿಯೇ ಕರಡಿಧಾಮಗಳಿರುವುದು ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ. ಒಂದು ದರೋಜಿ (8272.80 ಹೆಕ್ಟರ್) ಮತ್ತೊಂದು ಗುಡೇಕೋಟೆ (916759.79) ಯಲ್ಲಿ. ಮೊದಲೆಲ್ಲ ಇವುಗಳಿಗೆ ವಿಷ ಉಣಿಸುವ ಅಟ್ಟಾಡಿಸಿಕೊಂಡು ಹೋಗುವ ಕಲ್ಲುಗಳಿಂದ ಹೊಡೆಯುವ ಸಿಟ್ಟಿಗೇಳಿಸುವ ಇಂತಹ ಅಮಾನವೀಯ ಘಟನೆಗಳು ಸಿಕ್ಕಾಪಟ್ಟೆ ಜರುಗುತ್ತಿದ್ದವು.
ಈಗ ಇದಕ್ಕೆಲ್ಲ ತಡೆ ಬಿದ್ದಿದೆ. ಅರಣ್ಯದಂಚಿನ ಕೃಷಿಕರು ಕರಡಿ ತಿನ್ನದ ಔಡಲ ಎಳ್ಳು ಹತ್ತಿ ಬೆಳೆಯುವ ಜಾಣ್ಮೆ ತೋರುತ್ತಿದ್ದಾರೆ. ಕರಡಿ ಭಾದಿತ ಬೆಳೆಗಳ ರೈತರು ರಾತ್ರಿ ಬೆಂಕಿ ಹಾಕಿಕೊಂಡು ಗದ್ದಲ ಮಾಡುತ್ತಾ ಪಟಾಕಿ ಸಿಡಿಸುತ್ತಾ ಬೆಳೆ ಸಂರಕ್ಷಿಸಿಕೊಳ್ಳುತ್ತಾರೆ. ಕರಡಿ ಕಂಡರೆ ದೂರ ಹೋಗುತ್ತಾರೆ. ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸುತ್ತಾರೆ. ಸೆರೆ ಹಿಡಿಯಲು ಸಹಕರಿಸುತ್ತಾರೆ.
ಅರಣ್ಯ ಇಲಾಖೆ ಕರಡಿಗಳ ಜೀವನ ಕ್ರಮದ ಬಗ್ಗೆ ಅವುಗಳು ದಾಳಿ ಮಾಡಲು ಕಾರಣವಾಗುವ ಸಂದರ್ಭ ಅಂಶಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದೆ. ಬಿಗಿ ಕಾನೂನಿನ ಭಯವೂ ಜನರಲ್ಲಿದೆ. ಹಾಗೆ ಸರ್ಕಾರ ಬೆಳೆ ಪ್ರಾಣ ಹಾನಿಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಿದ್ದಲ್ಲದೇ ಅರಣ್ಯದಲ್ಲಿ ನೀರಿನ ಮೂಲಗಳ ಸಂರಕ್ಷಣೆ ಸೃಷ್ಟಿ ಮಾಡುತ್ತಿದೆ. ಹಣ್ಣಿನ ಗಿಡಗಳನ್ನು ನಾಟಿ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.