ದತ್ತ ಮುಖ ಮಾಡಿದರೆ ಕಾಣುವ ಹೊಂಬಣ್ಣದ ಓಕುಳಿ. ಬೇವು–ಬೆಲ್ಲ ಸವಿಯುವ ಯುಗಾದಿ ಹಬ್ಬದವರೆಗೂ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದಲ್ಲಿ ಭಂಡಾರ ಜಾತ್ರೆಗಳ ಸಂಭ್ರಮ ಕಳೆಗಟ್ಟಿರುತ್ತದೆ. ಈ ಭಾಗದಲ್ಲಿ ನಡೆಯುವ ಜಾತ್ರೆಗಳು ಕೇವಲ ಜಾತ್ರೆಗಳಷ್ಟೇ ಆಗಿರುವುದಿಲ್ಲ. ಭಂಡಾರದ ಜಾತ್ರೆಗಳಾಗಿರುತ್ತವೆ. ಹೀಗಾಗಿ ದೀಪಾವಳಿ ಅವಧಿಯಲ್ಲಿ ಅಷ್ಟ ದಿಕ್ಕುಗಳಲ್ಲೆ...
ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು, ನಡೆದಾಡುವ ಬೀದಿಗಳೂ ಹಳದಿ. ಆಗಸದತ್ತ ಮುಖ ಮಾಡಿದರೆ ಕಾಣುವ ಹೊಂಬಣ್ಣದ ಓಕುಳಿ. ಬೇವು–ಬೆಲ್ಲ ಸವಿಯುವ ಯುಗಾದಿ ಹಬ್ಬದವರೆಗೂ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗದಲ್ಲಿ ಭಂಡಾರ ಜಾತ್ರೆಗಳ ಸಂಭ್ರಮ ಕಳೆಗಟ್ಟಿರುತ್ತದೆ. ಈ ಭಾಗದಲ್ಲಿ ನಡೆಯುವ ಜಾತ್ರೆಗಳು ಕೇವಲ ಜಾತ್ರೆಗಳಷ್ಟೇ ಆಗಿರುವುದಿಲ್ಲ. ಭಂಡಾರದ ಜಾತ್ರೆಗಳಾಗಿರುತ್ತವೆ. ಹೀಗಾಗಿ ದೀಪಾವಳಿ ಮತ್ತು ಯುಗಾದಿ ಹಬ್ಬದ ನಡುವಿನ ಅವಧಿಯಲ್ಲಿ ಅಷ್ಟ ದಿಕ್ಕುಗಳಲ್ಲೆಲ್ಲ ಹೊಂಬಣ್ಣದ ಹೊಂಗಿರಣಗಳ ನೋಟ ಕಾಣಬಹುದಾಗಿದೆ.
ಇಲ್ಲಿನ ಕೆಲವೊಂದು ಜಾತ್ರೆಗಳಲ್ಲಿ ಭಂಡಾರವನ್ನು ಹಾರಿಸಲಾಗುತ್ತದೆ. ಶುದ್ಧವಾಗಿರುವ ಅರಿಸಿನದ ಪುಡಿಯನ್ನೇ ಭಂಡಾರ ಎಂದು ಕರೆಯಲಾಗುತ್ತದೆ. ಇಂತಹ ಭಂಡಾರವನ್ನು ದೇವರ ಮೇಲೆ ತೂರುವುದರಿಂದ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಬಲವಾದ ನಂಬಿಕೆ ಗಡಿಭಾಗದ ಜನರಲ್ಲಿದೆ. ಬೀರದೇವರ, ಮಾಳಿಂಗರಾಯ, ಲಕ್ಷ್ಮಿದೇವಿ, ದುರ್ಗಾದೇವಿ, ಮಲಕಾರಿಸಿದ್ಧ, ಅಮೋಘಸಿದ್ಧ, ವಿಠ್ಠಲದೇವರ, ಆಂಜನೇಯ ಸೇರಿದಂತೆ ವಿವಿಧ ದೇವರ ಜಾತ್ರೆಗಳಲ್ಲಿ ಭಂಡಾರ ತೂರಿ ಭಕ್ತರು ಸಂಭ್ರಮಿಸುವ ದೃಶ್ಯಗಳು ಅದ್ಭುತ ಅನುಭವ ನೀಡುತ್ತವೆ.
ಬೆಳಗಾವಿ ಜಿಲ್ಲೆಯ ಅಪ್ಪಾಚಿವಾಡಿಯ ಹಾಲಸಿದ್ಧನಾಥ, ಕೇರೂರಿನ ಮಲಕಾರಿಸಿದ್ಧ, ಯಲ್ಪಾರಟ್ಟಿಯ ಅರಣ್ಯಸಿದ್ಧ, ಯಕ್ಸಂಬಾದ ಬೀರೇಶ್ವರ, ವಿಜಯಪುರ ಜಿಲ್ಲೆಯ ಅರಕೇರಿಯ ಅಮೋಘಸಿದ್ಧ ದೇವಸ್ಥಾನಗಳಲ್ಲಿ ಭಂಡಾರ ಜಾತ್ರೆಗಳು ವೈಭವದಿಂದ ನಡೆಯುತ್ತವೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಹುಲಜಂತಿ ಮಾಳಿಂಗರಾಯ, ಕೊಲ್ಹಾಪುರ ಜಿಲ್ಲೆಯ ಪಟ್ಟಣಕಡೋಲಿಯ ವಿಠ್ಠಲ ಬೀರದೇವರ ಜಾತ್ರೆಗಳೂ ಭಂಡಾರ ಜಾತ್ರೆಯೆಂದೇ ಪ್ರಸಿದ್ಧಿ ಪಡೆದಿವೆ.
ಇಪ್ಪತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ಹುಲಜಂತಿ ಮಾಳಿಂಗರಾಯ, ಅಪ್ಪಾಚಿವಾಡಿಯ ಹಾಲಸಿದ್ಧನಾಥ, ಪಟ್ಟಣಕಡೋಲಿಯ ವಿಠ್ಠಲ ಬೀರದೇವರ ಜಾತ್ರೆಗಳಲ್ಲಿ ನೂರು ಟನ್‌ಗೂ ಹೆಚ್ಚು ಭಂಡಾರವನ್ನು ತೂರಲಾಗುತ್ತದೆ. ಕೇರೂರಿನ ಮಲಕಾರಿಸಿದ್ಧ, ಯಕ್ಸಂಬಾದ ಬೀರೇಶ್ವರದಂತಹ ದೇವಸ್ಥಾನಗಳ ಜಾತ್ರೆಗಳಲ್ಲಿ ಹತ್ತರಿಂದ ಇಪ್ಪತ್ತು ಟನ್‌ಗಳಷ್ಟು ಭಂಡಾರ ಹಾರಿಸಿ ಭಕ್ತರು ಹರಕೆ ತೀರಿಸುತ್ತಾರೆ. ಭಂಡಾರದಲ್ಲಿ ಮಿಂದೆದ್ದ ಭಕ್ತರು ಆಗಮಿಸುತ್ತಿದ್ದಂತೆಯೇ ಇವರು ಯಾವ ಜಾತ್ರೆಗೆ ಹೋಗಿ ಬಂದಿದ್ದಾರೆ ಎನ್ನುವುದು ಸುಲಭವಾಗಿ ಗೊತ್ತಾಗಿ ಬಿಡುತ್ತದೆ. ಕೆಲವೊಂದು ಕಡೆಗೆ ಲಕ್ಷ್ಮಿ ದೇವಿ, ರೇಣುಕಾದೇವಿ, ದುರ್ಗಾದೇವಿ ಸೇರಿದಂತೆ ವಿವಿಧ ದೇವರ ಜಾತ್ರೆಗಳಲ್ಲೂ ಭಂಡಾರ ಹಾರಿಸಲಾಗುತ್ತದೆ.
ಎಲ್ಲೆಲ್ಲಿ ಭಂಡಾರದೋಕುಳಿ ನಡೆಯುತ್ತದೆಯೋ, ಅಲ್ಲೆಲ್ಲ ಆಯಾ ದೇವರ ಹೆಸರಿನೊಂದಿಗೆ ‘ಚಾಂಗ್ ಭಲೋ..ಚಾಂಗ್ ಭಲೋ’ ಎಂಬ ಉದ್ಘೋಷಗಳು ಲಯಬದ್ಧವಾಗಿ ಕೇಳಿ ಬರುತ್ತದೆ. ಬಹುತೇಕ ಜಾತ್ರೆಗಳಲ್ಲಿ ಕೊನೆಯ ದಿನವೇ ಭಂಡಾರ ಹಾರಿಸಲಾಗುತ್ತದೆ. ಅಂದು ಮಳೆ ಬೆಳೆ ಹೇಗೆಲ್ಲ ಇದೆ ಎಂಬ ಹೇಳಿಕೆಗಳನ್ನು (ಭವಿಷ್ಯ ನುಡಿ) ಜನರು ಕುತೂಹಲದಿಂದ ಕೇಳುತ್ತಾರೆ. ದೇವರ ನಿವ್ವಾಳಕಿಯು ಆಗಮಿಸುತ್ತಿದ್ದಂತೆ ಭಕ್ತ ಸಮೂಹ ದೇವರಮೂರ್ತಿ, ಪಲ್ಲಕ್ಕಿ, ಶಿಖರ, ದೇವರ ಕುದುರೆ, ಎತ್ತುಗಳ ಮೇಲೆಲ್ಲ ಭಂಡಾರ ತೂರಿ ಕೈ ಮುಗಿದು ನಮಿಸಿ ತಮ್ಮ ತಮ್ಮ ಊರಿನತ್ತ ಹೆಜ್ಜೆ ಹಾಕುವ ಮೂಲಕ ಜಾತ್ರೆಗಳು ಸಂಪನ್ನಗೊಳ್ಳುತ್ತವೆ.
ಲಕ್ಷಾಂತರ ಭಕ್ತರು ಸೇರುವ ಪಟ್ಟಣಕಡೋಲಿ, ಹುಲಜಂತಿ, ಅಪ್ಪಾಚಿವಾಡಿ, ಅರಕೇರಿ ಮುಂತಾದ ಕಡೆ ನಡೆಯುವ ಭಂಡಾರ ಜಾತ್ರೆಯಲ್ಲಿ ಬೇರೆ ಬೇರೆ ಗ್ರಾಮಗಳಿಂದ ನೂರಾರು ಪಲ್ಲಕ್ಕಿಗಳು ಸಮಾಗಮ ಆಗುವುದನ್ನು ನೋಡುವುದೇ ಬಲು ಚೆಂದ. ಡೊಳ್ಳು ಭಾರಿಸುವ ಮೂಲಕ ಛತ್ರಿ ಚಾಮರಗಳೊಂದಿಗೆ ಸಾಲಾಗಿ ಪಲ್ಲಕ್ಕಿ ಬರುತ್ತಲೇ ಭಕ್ತಗಣ ‘ಉಘೇ ಉಘೇ’ ಎನ್ನುತ್ತ ಭಂಡಾರ ತೂರುತ್ತಿದ್ದರೆ ಆಗಸದಿಂದ ಹಳದಿ ಬಣ್ಣದ ಉಲ್ಕೆಗಳು ಬೀಳುತ್ತಿರುವಂತೆ ಶೋಭಿಸುತ್ತದೆ.
ಭಕ್ತರು ತಮ್ಮ ಭಕ್ತಿ ಹಾಗೂ ಶಕ್ತಿ ಅನುಸಾರ ಐದು ಕೆಜಿ, ಹತ್ತು ಕೆಜಿ, ಐವತ್ತು ಕೆಜಿ, ಒಂದು ಕ್ವಿಂಟಲ್, ಎರಡು ಕ್ವಿಂಟಲ್, ಐದು ಕ್ವಿಂಟಲ್ ಭಂಡಾರವನ್ನು ದೇವರ ಮೇಲೆ ಹಾರಿಸುವುದಾಗಿ ಹರಕೆ ಹೊರುತ್ತಾರೆ. ಕೆಲವರು ತಮ್ಮ ಇಷ್ಟಾರ್ಥ ಈಡೇರಲಿ ಎಂದು ಭಂಡಾರ ತೂರಿದರೆ, ಇನ್ನು ಕೆಲವರು ಇಷ್ಟಾರ್ಥ ಈಡೇರಿದ್ದಕ್ಕೆ ಭಂಡಾರ ತೂರುವ ಮೂಲಕ ಹರಕೆ ತೀರಿಸುತ್ತಾರೆ. ಭಕ್ತವೃಂದ ಭಂಡಾರ ತೂರಿದರೆ, ನೆಲ ಮುಗಿಲಿಗೆ ಹಳದಿ ಬಣ್ಣ ಏಣಿ ಹಾಕಿದಂತೆ ಕಾಣುತ್ತದೆ. ನೇಸರನ ಬಳಕಿನ ಕಿರಣಗಳಿಂದ ಭಂಡಾರ ಧೂಳಿನ ಕಣಗಳು ಚಿನ್ನದ ಮಳೆಯೇ ಸುರಿಯುತ್ತಿರುವಂತೆ ತೋರುತ್ತದೆ. ದೇವಸ್ಥಾನದ ಆವರಣವೂ ಸೇರಿದಂತೆ ಇಡೀ ಊರಿಗೆ ಊರೇ ಹಳದಿಮಯವಾಗಿ ಕಾಣುತ್ತಿರುತ್ತದೆ.
ಕೆಲವೊಂದು ಕಡೆಗೆ ರಾಸಾಯನಿಕ ಮಿಶ್ರಣ ಮಾಡಿದ ಭಂಡಾರವನ್ನು, ಇನ್ನು ಕೆಲವು ಕಡೆಗೆ ಶುದ್ಧ ಅರಿಸಿನದಿಂದ ತಯಾರಿಸಿದ ಭಂಡಾರವನ್ನು ಜಾತ್ರೆಗಳಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಾರೆ. ಬಹುತೇಕ ದೇವಸ್ಥಾನಗಳ ಜಾತ್ರೆಯಲ್ಲಿ ಆಯಾ ಜಾತ್ರಾ ಸಮಿತಿಯು ರಾಸಾಯನಿಕ ಮಿಶ್ರಿತ ಭಂಡಾರ ಮಾರಾಟ ನಿಷೇಧಿಸಿದ್ದು, ಅಂತಹ ಪ್ರಕರಣ ಕಂಡು ಬಂದಲ್ಲಿ ಅವರಿಗೆ ದಂಡ ಹಾಕಿದ ಉದಾಹರಣೆಗಳೂ ಇವೆ.
ಗಡಿ ಭಾಗದಲ್ಲಿ ನಡೆಯುವ ಭಂಡಾರ ಜಾತ್ರೆಗಳಲ್ಲಿ ವರ್ಷದಿಂದ ವರ್ಷಕ್ಕೆ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಭಂಡಾರ ತೂರುವ ಪ್ರಮಾಣವೂ ಹೆಚ್ಚಾಗುತ್ತಿದೆ.
ಕರ್ನಾಟಕ-ಮಹಾರಾಷ್ಟ್ರದ ನಡುವೆ ಭಂಡಾರ ಜಾತ್ರೆಗಳು ಬಾಂಧವ್ಯ ಬೆಸೆಯುವ ಕೊಂಡಿ ಎಂದು ಹೇಳಬಹುದು. ಎರಡೂ ರಾಜ್ಯಗಳ ಜನರ ನಡುವಿನ ಬಾಂಧವ್ಯ ಇಂತಹ ಜಾತ್ರೆಗಳಿಂದ ಮತ್ತಷ್ಟು ಗಟ್ಟಿಗೊಳ್ಳುತ್ತವೆಶಿವಪ್ರಸಾದ ದೇವರು, ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠ ಚಿಂಚಣಿ.
ಅರಿಸಿನಕ್ಕೆ ಹೃದಯದ ಆರೋಗ್ಯ ಕಾಪಾಡುವ ಉರಿಯೂತ ನಿವಾರಿಸುವ ಕೀಲುಗಳ ಬಿಗಿತನ ತಡೆಯುವ ಹಾಗೂ ಚರ್ಮದ ಆರೋಗ್ಯ ಕಾಪಾಡುವ ಶಕ್ತಿ ಇದೆ ಎಂಬ ಕಾರಣಕ್ಕಾಗಿ ಭಂಡಾರ ರೂಪದಲ್ಲಿ ಬಳಸುವುದೇ ಆಚರಣೆಯ ಉದ್ದೇಶ ಇರಬಹುದು ಎಂದೆನಿಸುತ್ತದೆರವೀಂದ್ರ ಪಾಟೀಲ ಕೇರೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.