
ಮಹಿಳೆ–ಪುರುಷ ಇಬ್ಬರನ್ನೂ ಬಾಧಿಸುವ ಕ್ಯಾನ್ಸರ್ ಹೊರತಾಗಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಥವಾ ಮಹಿಳೆಯರಿಗೆ ಮಾತ್ರ ಬರುವ ಕೆಲವು ಕ್ಯಾನ್ಸರ್‌ಗಳಿವೆ. ಅವುಗಳಲ್ಲಿ ಸ್ತನ, ಗರ್ಭಗೊರಳು ಅಥವಾ ಸರ್ವೈಕಲ್, ಗರ್ಭಾಶಯ ಅಥವಾ ಎಂಡೋಮೆಟ್ರಿಯಲ್, ಅಂಡಾಶಯ, ಗೊಲ್ಲಿ ಅಥವಾ ವಲ್ವ, ಯೋನಿ, ಗರ್ಭನಾಳದ ಕ್ಯಾನ್ಸರ್‌ಗಳು ಪ್ರಮುಖವಾಗಿವೆ. ಅಜ್ಞಾನ, ಅರೆ ಅರಿವು, ಜಾಗೃತಿಯ ಕೊರತೆ, ಕ್ಯಾನ್ಸರ್ ಬಗೆಗಿನ ಹಲವಾರು ಮಿಥ್ಯೆಗಳು ಈ ರೋಗ ಬೇಗ ಪತ್ತೆಯಾಗದೇ ಇರುವುದಕ್ಕೆ ಮತ್ತು ಪತ್ತೆಯಾದರೂ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇರುವುದಕ್ಕೆ ಸಾಮಾನ್ಯ ಕಾರಣಗಳು. ಒಮ್ಮೆ ಕ್ಯಾನ್ಸರ್ ಪತ್ತೆಯಾದರೆ ಎದೆಗುಂದಬಾರದು, ಪ್ರಸ್ತುತ ಲಭ್ಯವಿರುವ ಸೂಕ್ತ ಚಿಕಿತ್ಸಾ ವಿಧಾನಗಳನ್ನು ಅರಿತು ಚಿಕಿತ್ಸೆ ಪಡೆಯಬೇಕು; ಉಚಿತವಾಗಿ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಸ್ಥೈರ್ಯ ಬಹಳ ಮುಖ್ಯ ಎಂಬುದನ್ನು ವಿಶ್ವ ಕ್ಯಾನ್ಸರ್ ದಿನದ (ಫೆ. 4) ಈ ಸಂದರ್ಭ ನಮಗೆ ನೆನಪಿಸುತ್ತಿದೆ.
ಕಾರಣ: ಈ ಕ್ಯಾನ್ಸರ್‌ಗೆ ಒಳಗಾದ ಶೇಕಡ 7ರಷ್ಟು ಮಹಿಳೆಯರಿಗೆ ಆನುವಂಶೀಯತೆ ಕಾರಣವಾಗಿರುತ್ತದೆ. ಅತಿಯಾದ ಬೊಜ್ಜು ಇರುವವರಲ್ಲಿ ಇದು ಬರುವ ಸಂಭವ ಮೂರು ಪಟ್ಟು ಹೆಚ್ಚು. ಪ್ರಮುಖ ಕಾರಣಗಳೆಂದರೆ, ದೀರ್ಘಾವಧಿ ಹಾರ್ಮೋನ್ ಚಿಕಿತ್ಸೆ, ಕೆಲವು ಬಗೆಯ ಮಾತ್ರೆ ಸೇವನೆ, ಮಕ್ಕಳನ್ನು ಹೆರದೇ ಇರುವುದು, ಪಿಸಿಒಡಿ ಸಮಸ್ಯೆ, ಮಧುಮೇಹ, ಏರು ರಕ್ತದೊತ್ತಡ...
ಮುಂಜಾಗ್ರತೆ: ವೈದ್ಯರ ಮೇಲ್ವಿಚಾರಣೆ ಇಲ್ಲದೆ ಹಾರ್ಮೋನ್ ಚಿಕಿತ್ಸೆ ತೆಗೆದುಕೊಳ್ಳಬಾರದು.
ಮುಟ್ಟಿನ ನಂತರದ ರಕ್ತಸ್ರಾವ, ಎರಡು ಮುಟ್ಟುಗಳ ನಡುವೆ ರಕ್ತಸ್ರಾವ ಆಗುತ್ತಿದ್ದರೆ ತಪಾಸಣೆಗೆ ಒಳಗಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಸಮತೂಕ ಹೊಂದಲು ಪ್ರಯತ್ನಿಸಬೇಕು.
ಇದು ಪುರುಷರಲ್ಲಿಯೂ ಉಂಟಾಗಬಹುದಾದರೂ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಈ ರೋಗದ ಲಕ್ಷಣಗಳ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಲು ಮಹಿಳೆಯರು ಸಂಕೋಚ ಪಡುವುದರಿಂದ, ಹೆಚ್ಚಿನವರಲ್ಲಿ ಅದು ತಡವಾಗಿ ಪತ್ತೆಯಾಗುತ್ತದೆ. ಆರಂಭದಲ್ಲೇ ಪತ್ತೆಹಚ್ಚಿದರೆ ಬದುಕುಳಿಯುವ ಸಾಧ್ಯತೆ ಹೆಚ್ಚು.
ಲಕ್ಷಣ: ಸ್ತನದಲ್ಲಿ ಗಂಟು, ಸ್ತನದ ಚರ್ಮ ಕುಗ್ಗುವುದು, ತೊಟ್ಟು ಒಳಗೆಳೆದುಕೊಂಡಂತೆ ಇರುವುದು, ತೊಟ್ಟಿನಲ್ಲಿ ರಕ್ತಸ್ರಾವ.
ಕಾರಣ: ಆನುವಂಶೀಯತೆ, ಬೇಗನೆ ಮೈನೆರೆದು ತಡವಾಗಿ ಮುಟ್ಟು ನಿಲ್ಲುವುದು, ಜಡವಾದ ಜೀವನಶೈಲಿ, ತಡವಾದ ತಾಯ್ತನ, ಬಂಜೆತನದ ಚಿಕಿತ್ಸೆ, ಮಗುವಿಗೆ ಎದೆ ಹಾಲುಣಿಸದೇ ಇರುವುದು, ಒತ್ತಡ, ನಿದ್ರಾಹೀನತೆ, ನಿರಂತರವಾಗಿ ಪಡೆಯುವ ಹಾರ್ಮೋನ್ ಚಿಕಿತ್ಸೆ, ಅತಿಯಾದ ರಾಸಾ ಯನಿಕಗಳಿಗೆ ಒಡ್ಡಿ ಕೊಳ್ಳುವುದು, ಅತಿಯಾದ ಪ್ಲಾಸ್ಟಿಕ್ ಬಳಕೆ...
ಮುಂಜಾಗ್ರತೆ: ಸ್ವಯಂ ಸ್ತನ ತಪಾಸಣೆಯನ್ನು ನಿಯಮಿತವಾಗಿ ಮಾಡಿಕೊಳ್ಳುತ್ತಿರಬೇಕು.
ಅಸಹಜ ಎನಿಸುವ ಗಡ್ಡೆ ಏನಾದರೂ ಕಂಡುಬಂದರೆ ವೈದ್ಯರ ಸಲಹೆಯ ಮೇರೆಗೆ ಮ್ಯಾಮೊಗ್ರಫಿ, ಬಯಾಪ್ಸಿ ಪರೀಕ್ಷೆಗಳಿಗೆ ಒಳಗಾಗಬೇಕು.
ಲಕ್ಷಣ: ಇದನ್ನು ‘ಮೌನ ಹಂತಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಈ ಕ್ಯಾನ್ಸರ್ ಯಾವುದೇ ಆರಂಭಿಕ ರೋಗಲಕ್ಷಣಗಳನ್ನು ನೀಡುವುದಿಲ್ಲ. ಆದರೆ ಸದಾ ಹೊಟ್ಟೆ ತುಂಬಿದಂತೆ ಇರುವುದು, ಕೆಳಹೊಟ್ಟೆಯಲ್ಲಿ ಸೆಳೆತ ಆಗುವುದು.
ವಾಂತಿ, ವಾಕರಿಕೆಯಂತಹ ಅನುಭವಗಳು ಪದೇ ಪದೇ ಆಗುತ್ತಿದ್ದಲ್ಲಿ ಅದನ್ನು ನಿರ್ಲಕ್ಷಿಸಬಾರದು. ವೈದ್ಯರನ್ನು ಕಾಣಲು ಹಿಂಜರಿಯಬಾರದು. ಅವರ ಸಲಹೆಯ ಮೇರೆಗೆ ಸೂಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.
ಆನುವಂಶೀಯತೆಯು ಇದಕ್ಕೆ ಒಂದು ಕಾರಣವಾಗಿರುತ್ತದೆ. ಜೊತೆಗೆ ಬಂಜೆತನ, ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳದೇ ಇರುವವರು , ಸರಿಯಾಗಿ ಸ್ತನ್ಯಪಾನ ಮಾಡಿಸದೇ ಇರುವವರಲ್ಲಿ ಈ ಬಗೆಯ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ.
ಲಕ್ಷಣ: ಎರಡು ಋತುಚಕ್ರಗಳ ನಡುವೆ ರಕ್ತಸ್ರಾವ, ಋತುಬಂಧ ಅಥವಾ ಮೆನೊಪಾಸ್ ನಂತರ ರಕ್ತಸ್ರಾವ, ಸಂಭೋಗದ ಬಳಿಕ ರಕ್ತಸ್ರಾವ, ದುರ್ವಾಸನೆಯುಳ್ಳ ಕೆಂಪುಮಿಶ್ರಿತ ಬಿಳಿಮುಟ್ಟು, ನಿರಂತರ ಹೊಟ್ಟೆಯುಬ್ಬರ, ಬೇಗನೆ ಹೊಟ್ಟೆ ತುಂಬಿದ ಅನುಭವ, ಕೆಳಹೊಟ್ಟೆಯ ಒತ್ತಡ, ನೋವು...
ಕಾರಣ: ಚಿಕ್ಕವಯಸ್ಸಿನಲ್ಲೇ ಲೈಂಗಿಕ ಚಟುವಟಿಕೆಯಲ್ಲಿ ತೊಡಗುವುದು, ಬಾಲ್ಯವಿವಾಹ, ಪದೇ ಪದೇ ಹೆಚ್ಚು ಮಕ್ಕಳನ್ನು ಹಡೆಯುವುದು, ಒಬ್ಬರಿಗಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದು, ಅಪೌಷ್ಟಿಕತೆ, ಸ್ವಚ್ಛತೆಯ ಕೊರತೆ, ತಂಬಾಕು ಸೇವನೆ...
ಶೇ 80ರಷ್ಟು ಪ್ರಕರಣಗಳಿಗೆ ಎಚ್‌ಪಿವಿ ಎಂಬ ಸೋಂಕು ಕಾರಣವಾಗಿದ್ದು, ಇದಕ್ಕೆ ಲಸಿಕೆ ಲಭ್ಯವಿದೆ. ಹೀಗಾಗಿ, ಇದನ್ನು ‘ತಡೆಗಟ್ಟಬಹುದಾದ ಕ್ಯಾನ್ಸರ್’ ಎಂದು ಗುರುತಿಸಲಾಗಿದೆ.
ಸರ್ಕಾರದ ವತಿಯಿಂದ ಲಸಿಕೆ ನೀಡಲಾಗುತ್ತದೆ. 9ರಿಂದ 14 ವರ್ಷದ ಒಳಗಿನವರಿಗೆ, ಅಂದರೆ ಲೈಂಗಿಕವಾಗಿ ಸಕ್ರಿಯರಾಗುವ ಮೊದಲೇ ಈ ಲಸಿಕೆ ಹಾಕಿಸಿದಾಗ ಮುಂದೆ ಗರಿಷ್ಠ ಫಲಿತಾಂಶ ಸಾಧ್ಯ.
* ಸ್ತನ ಅಥವಾ ಇತರ ಯಾವುದಾದರೂ ಭಾಗದಲ್ಲಿ ನೋವಿಲ್ಲದ ಗಂಟು
* ದೀರ್ಘಕಾಲ ಕೆಮ್ಮು/ ಧ್ವನಿ ಒಡೆಯುವುದು
* ಕಫದಲ್ಲಿ ರಕ್ತ, ಕಾರಣವಿಲ್ಲದೇ ಉಸಿರಾಟಕ್ಕೆ ತೊಂದರೆಯಾಗುವುದು
* ಕುತ್ತಿಗೆ, ಕಂಕುಳಲ್ಲಿ ಗಟ್ಟಿಯಾದ ದೀರ್ಘಕಾಲಿಕ ಗಂಟುಗಳು
* ಜೀರ್ಣಕ್ರಿಯೆ, ಮಲ ವಿಸರ್ಜನೆಯಲ್ಲಿ ಪದೇ ಪದೇ ವ್ಯತ್ಯಾಸ
* ಅಕಾರಣವಾಗಿ ತೂಕ ಇಳಿಯುವುದು
* ಆಹಾರ ನುಂಗಲು ತೊಂದರೆ
ಈ ಮೇಲಿನ ಯಾವುದೇ ಲಕ್ಷಣಗಳು ಸಂದೇಹ ಮೂಡಿಸಿದರೆ ತಪಾಸಣೆಗೆ ಒಳಗಾಗಲೇಬೇಕು.
ಆನುವಂಶೀಯ ಕಾರಣ ಕೇವಲ ಶೇ 5– 10 (ಸ್ತನ, ಅಂಡಾಶಯ, ಕರುಳಿನ ಕ್ಯಾನ್ಸರ್ ಇತ್ಯಾದಿಗಳಲ್ಲಿ ಮಾತ್ರ). ಹೆಪಟೈಟಿಸ್ ಬಿ, ಎಚ್‌ಪಿವಿ ವೈರಸ್ ಸೋಂಕು, ತಂಬಾಕು ಸೇವನೆ, ಮದ್ಯಪಾನ, ಧೂಮಪಾನ, ವಿಟಮಿನ್ ‘ಸಿ’ ಮತ್ತು ‘ಎ’ ಕೊರತೆ, ಆಹಾರ ತಯಾರಿಕೆಯಲ್ಲಿ ಎಗ್ಗಿಲ್ಲದೇ ಬಳಸುತ್ತಿರುವ ಕೃತಕ ರಾಸಾಯನಿಕಗಳು, ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ರಸಗೊಬ್ಬರ– ಕೀಟನಾಶಕಗಳ ಅತಿಯಾದ ಬಳಕೆ, ಮಿತಿಮೀರಿದ ಪ್ಲಾಸ್ಟಿಕ್ ಬಳಕೆ, ಹಾರ್ಮೋನ್ ಅಸಮತೋಲನ, ಅತಿಯಾಗಿ ಯು.ವಿ. ಕಿರಣಗಳಿಗೆ ಒಡ್ಡಿಕೊಳ್ಳುವುದು, ಹದಗೆಟ್ಟ ಜೈವಿಕ ಗಡಿಯಾರ, ಜಲ- ವಾಯುಮಾಲಿನ್ಯ...
* ಸೌಂದರ್ಯವರ್ಧಕಗಳ ಬಳಕೆ ಕಡಿಮೆಯಾಗಲಿ
* ಸೂಕ್ತ ಆಹಾರ ಪದ್ಧತಿ ಅನುಸರಿಸಬೇಕು
* ಕರಿದ, ಹುರಿದ, ಸಂಸ್ಕರಿಸಿದ ಆಹಾರ, ಕೃತಕ ರಾಸಾಯನಿಕಗಳ ಬಳಕೆ ಕಡಿಮೆ ಮಾಡಬೇಕು
* ಹಸಿರುಸೊಪ್ಪು, ತರಕಾರಿ, ಹಣ್ಣು, ಬೇಳೆಕಾಳು ಉಪಯೋಗಿಸಬೇಕು
* ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಿತ್ತಳೆ, ಕ್ಯಾರೆಟ್, ಕುಂಬಳಬೀಜ, ಈರುಳ್ಳಿ, ಬೆಳ್ಳುಳ್ಳಿ, ನೆಲ್ಲಿಕಾಯಿ ಇತ್ಯಾದಿಗಳನ್ನು ಹೆಚ್ಚು ಸೇವಿಸಬೇಕು. ಕುಟುಂಬದವರಿಗೂ ಈ ಬಗ್ಗೆ ಮನವರಿಕೆ ಮಾಡಬೇಕು.
* ಬೊಜ್ಜು ನಿವಾರಿಸಿಕೊಂಡು ಸರಿಯಾದ ತೂಕ ಕಾಯ್ದುಕೊಳ್ಳಬೇಕು.
* ಪ್ರತಿದಿನ ಕನಿಷ್ಠ ಒಂದು ಗಂಟೆ ದೈಹಿಕ ಚಟುವಟಿಕೆ ಅಗತ್ಯ
* ದಿನವೂ ರಾತ್ರಿ 6– 8 ಗಂಟೆ ನಿದ್ದೆ
* ಸದಾ ಸಾಧ್ಯವಾದಷ್ಟು ದೀರ್ಘವಾಗಿ ಉಸಿರಾಡುವುದು
* ಸಕಾರಾತ್ಮಕ ಚಿಂತನೆ
* ಜೀವನಶೈಲಿ ಸುಧಾರಣೆ ಮಾತ್ರದಿಂದಲೇ ಶೇ 50ರಷ್ಟು ಕ್ಯಾನ್ಸರ್ ತಡೆಗಟ್ಟಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.