ADVERTISEMENT

ಅಂಚೆಚೀಟಿಯಲಿ ಕೊರೊನಾ

ಎನ್.ಜಗನ್ನಾಥ ಪ್ರಕಾಶ್
Published 10 ಮೇ 2020, 3:02 IST
Last Updated 10 ಮೇ 2020, 3:02 IST
ಚೀನಾದ ಅಂಚೆಚೀಟಿ
ಚೀನಾದ ಅಂಚೆಚೀಟಿ   
""
""
""

ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್‌ ಯಾರ ಅಂಕೆಗೂ ಸಿಗದೆ ಸಾವು- ನೋವುಗಳನ್ನು ಹೆಚ್ಚಿಸುತ್ತಿದೆ. ಮಾಧ್ಯಮಗಳು ಈ ಮಹಾಮಾರಿಯ ಕುರಿತ ಸುದ್ದಿಗಳನ್ನು ವಿಶ್ವದ ಮುಂದಿಡುತ್ತಿದ್ದರೆ, ಇನ್ನೊಂದೆಡೆ ಅಂಚೆಚೀಟಿಗಳು ಕೊರೊನಾ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮಗಳ ಜೊತೆಗೆ ಪೈಪೋಟಿ ನಡೆಸುತ್ತಿವೆ.

ಅಂಚೆಚೀಟಿಗಳು ಈಗ ವೈವಿಧ್ಯಮಯ. ಪ್ರಪಂಚದಲ್ಲಿ ಏನೇ ಹೊಸ ವಿದ್ಯಮಾನ ಸಂಭವಿಸಿದರೂ ಅಂಚೆಚೀಟಿಗಳ ಮೂಲಕ ಅವುಗಳಿಗೆ ಸ್ಪಂದಿಸುವುದು ನಡೆದಿದೆ. ಇವುಗಳ ಸಂಗ್ರಹಕಾರರಿಗೂ ಹೊಸತೆಂದರೆ ಒಲವು ಹೆಚ್ಚು. ಈ ರೀತಿಯ ವಿಭಿನ್ನ ಅಂಚೆಚೀಟಿಗಳು ಬಂದರೆ ಪೈಪೋಟಿಯಲ್ಲಿ ಅವುಗಳನ್ನು ಸಂಗ್ರಹಿಸುವವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ.

ಇರಾನ್‌ನ ಅಂಚೆಚೀಟಿ

‘ಕೊರೊನಾಗೆ ಅವಕಾಶ ಕೊಡಬೇಡಿ. ಅದನ್ನು ಆತ್ಮವಿಶ್ವಾಸದಿಂದ ಎದುರಿಸಿ...’ ಎನ್ನುವುದು ಹೊಸ ಕೊರೊನಾ ಅಂಚೆಚೇಟಿಗಳು ಹೊತ್ತು ತಂದಿರುವ ಸಂದೇಶ. ಜನರಲ್ಲಿ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯ ಸಿಬ್ಬಂದಿ ಮತ್ತು ಇತರೇ ಕೊರೊನಾ ವಾರಿಯರ್ಸ್‌ಗಳನ್ನು ಗೌರವಿಸಲು ಹಲವು ದೇಶಗಳು ಅಂಚೆಚೀಟಿಗಳ ಮೊರೆ ಹೋಗಿವೆ. ‘ಮುಖಗವಸು ಧರಿಸಿ, ಕೈಗಳನ್ನು ತೊಳೆದು ಶುಚಿಯಾಗಿಟ್ಟುಕೊಳ್ಳಿ...’ ಮುಂತಾದ ಸಂದೇಶಗಳನ್ನು ಅಂಚೆಚೀಟಿಗಳ ಮೇಲೆ ಮುದ್ರಿಸುವ ಮೂಲಕ ಕೆಲವು ದೇಶಗಳು ಜಾಗೃತಿ ಕೆಲಸ ಆರಂಭಿಸಿವೆ.

ADVERTISEMENT

ಆಯಾ ದೇಶಗಳು ಕೊರೊನಾ ವಿರುದ್ಧ ಹೋರಾಡುವ ಸಂದೇಶಗಳನ್ನು ತಮ್ಮದೇ ಭಾಷೆಗಳಲ್ಲಿ ಮುದ್ರಿಸಿವೆ.ವಿನ್ಯಾಸ, ವರ್ಣ ಸಂಯೋಜನೆ, ಉತ್ತಮವಾಗಿದ್ದಷ್ಟೂ ಅಂತಹ ಅಂಚೆಚೀಟಿಗಳಿಗೆ ಬೇಡಿಕೆ ಹೆಚ್ಚು. ಕೊರೊನಾ ಅಂಚೆಚೀಟಿಗಳನ್ನು ಪ್ರಕಟಿಸಿರುವ ದೇಶಗಳು ಪೈಪೋಟಿಯಲ್ಲಿ ವಿವಿಧ ವಿನ್ಯಾಸಗಳಲ್ಲಿ ಹೊರತಂದಿವೆ. ಈ ವೈರಸ್ ಹಾವಳಿಯಿಂದ ಹೆಚ್ಚು ತೊಂದರೆಗೆ ಒಳಗಾಗಿರುವ ಸ್ಪೇನ್‌, ಇಟಲಿ ದೇಶಗಳೂ ಅಂಚೆಚೀಟಿಗಳನ್ನು ಪ್ರಕಟಿಸುವಲ್ಲಿ ಹಿಂದೆ ಬಿದ್ದಿಲ್ಲ.

ಸ್ಪೇನ್‌ನ ಅಂಚೆಚೀಟಿ

ಜಗತ್ತಿನ ಮೇಲೆ ಕೊರೊನಾ ವೈರಸ್ ಅನ್ನು ಹರಿಯಬಿಟ್ಟ ಆರೋಪ ಎದುರಿಸುತ್ತಿರುವ ಚೀನಾ ಕೂಡ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಅಂಚೆಚೀಟಿಗಳನ್ನು ಸಿದ್ಧಪಡಿಸಿದ್ದು, ಅವು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ಅಂಚೆಚೀಟಿಗಳು ಮಾತ್ರವಲ್ಲ, ಮೊದಲ ದಿನದ ಲಕೋಟೆ, ಆಕರ್ಷಕ ಮೊಹರುಗಳೂ ಕೊರೊನಾ ಸ್ಮರಣಾರ್ಥ ಹೊರಬಂದಿದ್ದು, ಅಂಚೆ ದಸ್ತಾವೇಜುಗಳಲ್ಲಿ ಸ್ಥಾನ ಪಡೆದಿವೆ. ಸಂಕಷ್ಟದಲ್ಲಿರುವ ದೇಶಗಳು ಒಗ್ಗಟ್ಟಿನಿಂದ ಈ ರೋಗದ ವಿರುದ್ಧ ಹೋರಾಡುತ್ತಿರುವ ತಮ್ಮ ದೇಶವಾಸಿಗಳನ್ನು ಶ್ಲಾಘಿಸಿದ, ವೈದ್ಯ ಸಿಬ್ಬಂದಿಯ ತ್ಯಾಗ ಮನೋಭಾವವನ್ನು ಪ್ರಶಂಸಿರುವ ಸಂದೇಶಗಳು ಅಂಚೆಚೀಟಿ ಮತ್ತು ಲಕೋಟೆಗಳ ಮೇಲೆ ಕಾಣಿಸಿಕೊಂಡಿರುವುದು ಸ್ವಾಗತಾರ್ಹ. ಜನರ ನೈತಿಕ ಸ್ಥೈರ್ಯ ಹೆಚ್ಚಿಸುವಲ್ಲಿ ಇವು ತಮ್ಮದೇ ಆದ ಕೊಡುಗೆ ನೀಡಲಿವೆ.

ಇಂಗ್ಲೆಂಡ್‌, ಚೀನಾ ಮುಂತಾದ ಕೆಲವು ದೇಶಗಳು ಕೊರೊನಾ ಕುರಿತ ಅಂಚೆಚೀಟಿಗಳನ್ನು ಪ್ರಕಟಿಸಲು ತಯಾರಿ ನಡೆಸಿದ್ದರೂ, ಅವು ಅಧಿಕೃತ ಪ್ರಕಟಣೆಯನ್ನು ನೀಡಿಲ್ಲ.

ವಿಯೆಟ್ನಾಂನ ಅಂಚೆಚೀಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.