ADVERTISEMENT

Central College | ನೂರೈವತ್ತು ವರುಷ; ಸೆಂಟ್ರಲ್ ಕಾಲೇಜಿಗೆ ಹರುಷ

ಗಾಣಧಾಳು ಶ್ರೀಕಂಠ
Published 25 ಜನವರಿ 2025, 23:30 IST
Last Updated 25 ಜನವರಿ 2025, 23:30 IST
<div class="paragraphs"><p>ಸೆಂಟ್ರಲ್‌ ಕಾಲೇಜಿನ ಕ್ಲಾಕ್ ಟವರ್ ಕಟ್ಟಡ.</p></div>

ಸೆಂಟ್ರಲ್‌ ಕಾಲೇಜಿನ ಕ್ಲಾಕ್ ಟವರ್ ಕಟ್ಟಡ.

   

 ಚಿತ್ರ: ಪ್ರಶಾಂತ್‌ ಎಚ್.ಜಿ.

ಬೆಂಗಳೂರಿನ ಸೆಂಟ್ರಲ್ ಕಾಲೇಜು, ಸಾಹಿತ್ಯ, ಸಂಗೀತ, ವಿಜ್ಞಾನ, ರಾಜಕೀಯ, ಹೋರಾಟ.. ಹೀಗೆ ಹತ್ತು ಹಲವು ಕ್ಷೇತ್ರಗಳ ಸಾಧಕರ ಗರಡಿ ಮನೆ. 150 ವರ್ಷದ ಹರೆಯದರಲ್ಲಿ ಮಿರಿಮಿರಿ ಮಿಂಚುತ್ತಿರುವ ಈ ಕಾಲೇಜಿನ ಹೆಜ್ಜೆಗುರುತುಗಳು ಇಲ್ಲಿವೆ..

‘ಇದೇ ಕೊಠಡಿಯಲ್ಲೇ ರಾಜಾಜಿಯವರು ಪಾಠ ಕೇಳುತ್ತಿದ್ದುದು. ಅದೇ ಕೊಠಡಿಯಲ್ಲಿ, ಸರ್ ಸಿ.ವಿ ರಾಮನ್, ‘ರಾಮನ್ ಎಫೆಕ್ಟ್’ ಕುರಿತು ಉಪನ್ಯಾಸ ನೀಡಿದ್ದು. ಈ ಕ್ರೀಡಾಂಗಣದಲ್ಲೇ ಮೈಸೂರು ರಾಜ್ಯ ಘೋಷಣೆಯಾಗಿದ್ದು. ಮೈಸೂರು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಆರಂಭವಾಗಿದ್ದು ಇಲ್ಲೇ.’

ADVERTISEMENT

ನೂರೈವತ್ತರ ಹರೆಯದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಮಹತ್ವದ ಘಟನೆಗಳನ್ನು ಸಿಬ್ಬಂದಿ ಉಮೇದಿನಿಂದ ವಿವರಿಸುತ್ತಿದ್ದರೆ, ಅಂದಿನ ಘಟನೆಗಳೆಲ್ಲಾ ಮೆರವಣಿಗೆ ಹೊರಟು ರೋಮಾಂಚನವಾಯಿತು.

ಸೆಂಟ್ರಲ್ ಕಾಲೇಜು, ಮೂರು ‘ಭಾರತ ರತ್ನಗಳು, ಜ್ಞಾನಪೀಠ ಪುರಸ್ಕೃತರು, ಸಾಹಿತಿಗಳು, ಕಾನೂನು ಪರಿಣತರು, ಮುಖ್ಯಮಂತ್ರಿಗಳು, ನ್ಯಾಯಮೂರ್ತಿಗಳು, ವಿಜ್ಞಾನಿಗಳು, ಎಂಜಿನಿಯರ್‌ಗಳು, ಸಂಗೀತಗಾರರು, ಕ್ರೀಡಾಪಟುಗಳು, ಪತ್ರಕರ್ತರು–ಹೀಗೆ ನಾನಾ ಕ್ಷೇತ್ರಗಳ ‘ತಾರೆ’ಗಳು ಮಿನುಗಲು ಕಾರಣ ಇದೇ ಕಾಲೇಜು. ಬ್ರಿಟಿಷರ ಶೈಕ್ಷಣಿಕ ಕಕ್ಕುಲತೆಯಿಂದ ನಿರ್ಮಾಣವಾದ ಇದು ಜಗವೇ ಕೊಂಡಾಡುವಂತಹ ‘ರತ್ನ’ಗಳನ್ನು ನೀಡಿದೆ.

ಬೆಂಗಳೂರಿನ ಅರಮನೆ ರಸ್ತೆಯ ಎರಡು ಬದಿಯಲ್ಲಿ 43 ಎಕರೆಯಲ್ಲಿ ಕೆಂಪು ಕಟ್ಟಡಗಳೊಂದಿಗೆ ಕಂಗೊಳಿಸುತ್ತಿರುವ ಸೆಂಟ್ರಲ್ ಕಾಲೇಜು ಆರಂಭವಾಗಿದ್ದು 1858ರಲ್ಲಿ. ಅದೂ ಪುಟ್ಟ ಶೆಡ್‌ನಲ್ಲಿ. ಆರಂಭದಲ್ಲಿ ಇದು ‘ಬೆಂಗಳೂರು ಪ್ರೌಢಶಾಲೆ’ಯಾಗಿತ್ತು. ನಂತರ ‘ಸೆಂಟ್ರಲ್ ಹೈಸ್ಕೂಲ್’ ಆಯಿತು.

ಬ್ರಿಟಿಷ್ ಶಿಕ್ಷಣ ತಜ್ಞ ರೆವರೆಂಡ್ ಜಾನ್ ಗ್ಯಾರೆಟ್ ಸಂಸ್ಥೆಯ ಸ್ಥಾಪಕ ಪ್ರಾಚಾರ್ಯರು. 1860ರಲ್ಲಿ ಬಿ.ಎಲ್.ರೈಸ್, ಪ್ರಾಚಾರ್ಯರಾದರು. ಅದೇ ವರ್ಷದಲ್ಲೇ ಐತಿಹಾಸಿಕ ಸೆಂಟ್ರಲ್ ಬ್ಲಾಕ್ ಗಡಿಯಾರ ಗೋಪುರದ ಕಟ್ಟಡ ನಿರ್ಮಾಣವಾಗಿದ್ದು. 1875ರಲ್ಲಿದ್ದ ಹೈಸ್ಕೂಲ್‌ ತದನಂತರ ‘ಸೆಂಟ್ರಲ್ ಕಾಲೇಜು’ ಆಯಿತು.

ಡಿಸೆಂಬರ್ 11 1958ರಂದು ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಶತಮಾನೋತ್ಸವ ಸಮಾರಂಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಾಚಾರಿ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಸರ್ ಎಂ. ವಿಶ್ವೇಶ್ವರಯ್ಯ ಎಸ್.ನಿಜಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು 

ಆರಂಭದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ತೆಕ್ಕೆಯಲ್ಲಿತ್ತು. ಆಗ ಕಾಲೇಜಿನಲ್ಲಿ ಕೇವಲ 43 ವಿದ್ಯಾರ್ಥಿಗಳಿದ್ದರು. 1916ರಲ್ಲಿ, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದಾಗಿ, ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಸೆಂಟ್ರಲ್ ಕಾಲೇಜು, ಮೈಸೂರು ವಿವಿ ವ್ಯಾಪ್ತಿಗೆ ಸೇರಿತು. ಮೈಸೂರು ವಿವಿಯಲ್ಲಿ ಮಹಾರಾಜ ಕಾಲೇಜು ‘ಕಲಾ’ ಕಾಲೇಜಾದರೆ, ಬೆಂಗಳೂರಿನ ಸೆಂಟ್ರಲ್ ಕಾಲೇಜು ‘ವಿಜ್ಞಾನ ಕ್ಯಾಂಪಸ್’ ಎಂದೇ ಪ್ರಸಿದ್ಧವಾಯಿತು.

ಸೆಂಟ್ರಲ್ ಕಾಲೇಜು ಆರಂಭವಾದಾಗಿನಿಂದ ಸುಮಾರು ನಲವತ್ತರ ದಶಕದವರೆಗೆ ಬ್ರಿಟಿಷ್‌ ಶಿಕ್ಷಣ ತಜ್ಞರಾದ ಚಾರ್ಲ್ಸ್ ವಾಲ್ಟರ್ಸ್, ಜಾನ್ ಕುಕ್, ಜೆ.ಜಿ. ಟೈಟ್, ಇ.ಪಿ. ಮೆಟ್‌ಕಾಲ್ಫ್, ಎಫ್.ಆರ್. ಸೆಲ್, ಮೆಕಾಲ್ಪೈನ್, ಮ್ಯಾಕಿಂತೋಷ್‌ನಂತಹ ಅನೇಕ ದಿಗ್ಗಜರು ಪ್ರಾಂಶುಪಾಲರಾಗಿದ್ದರು. 1942ರಲ್ಲಿ ಎ.ಸುಬ್ಬರಾವ್‌ ಪ್ರಾಚಾರ್ಯರಾಗಿ ನೇಮಕವಾದರು. ಇವರು ಕಾಲೇಜಿನ ಮೊದಲ ಭಾರತೀಯ ಪ್ರಾಚಾರ್ಯ.

ಹೆಮ್ಮೆಯ ಗುರುಗಳು, ವಿಧೇಯ ವಿದ್ಯಾರ್ಥಿಗಳು..

ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಸಿ. ರಾಜಗೋಪಾಲಚಾರಿ, ಸರ್ ಎಂ. ವಿಶ್ವೇಶರಯ್ಯ ಮತ್ತು ಸಿ.ಎನ್.ಆರ್. ರಾವ್, ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ ಮತ್ತು ಡಿ. ದೇವರಾಜ ಅರಸು, ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಸರು ಮಾಡಿದ ಎಂ.ಎನ್. ವೆಂಕಟಾಚಲಯ್ಯ, ನಿಟ್ಟೂರು ಶ್ರೀನಿವಾಸ ರಾವ್, ಸಂತೋಷ್ ಹೆಗ್ಡೆ ಇಲ್ಲಿನ ಪ್ರತಿಭೆಗಳು.

ಜ್ಞಾನಪೀಠ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಿದ್ದಗಂಗಾ ದ ಮಠಾಧೀಶರಾಗಿದ್ದ ಶಿವಕುಮಾರ ಸ್ವಾಮೀಜಿ, ಕಥಕ್ ನೃತ್ಯಗಾರ್ತಿ ಮಾಯಾರಾವ್, ವೈಣಿಕ ಎಲ್. ರಾಜಾರಾವ್‌, ಚಲನಚಿತ್ರ ಸಾಹಿತಿ ಆರ್.ಎನ್. ಜಯಗೋಪಾಲ್, ಸರೋದ್ ವಾದಕ ರಾಜೀವ್ ತಾರಾನಾಥ್, ಶಿಕ್ಷಣ ತಜ್ಞ ಎಚ್. ನರಸಿಂಹಯ್ಯ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕ್ರಿಕೆಟಿಗರಾದ ಜಿ.ಆರ್‌. ಜಗನ್ನಾಥ್, ವೈ.ವಿ.ಪಟೇಲ್‌ ಇಲ್ಲಿಯೇ ಕಲಿತಿದ್ದು.

1935ರಲ್ಲಿ ನಿರ್ಮಾಣಗೊಂಡ ಕ್ರೀಡಾ ಮೈದಾನದಲ್ಲಿರುವ ಪೆವಿಲಿಯನ್ 

ರಂಗಕರ್ಮಿ ಪ್ರಸನ್ನ, ಕವಿಗಳಾದ ಎಚ್.ಎಸ್. ವೆಂಕಟೇಶಮೂರ್ತಿ, ದೊಡ್ಡರಂಗೇಗೌಡ, ಎಸ್.ಜಿ. ಸಿದ್ದರಾಮಯ್ಯ, ಶಿಕ್ಷಣ ತಜ್ಞ ಚಿ.ನಾ. ಮಂಗಳಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತನಾಮರಾಗಿರುವ ಸಾವಿರಾರು ಮೇಧಾವಿಗಳು ಪದವಿ ಪಡೆದದ್ದು ಇದೇ ಕಾಲೇಜಿನಿಂದ.

ಇಂಥ ಘಟಾನುಘಟಿ ಸಾಧಕರಿಗೆ ಪಾಠ ಹೇಳಿದವರೇನೂ ಕಡಿಮೆ ಇಲ್ಲ. ಕುವೆಂಪು, ಎ.ಆರ್. ಕೃಷ್ಣಶಾಸ್ತ್ರಿ, ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ, ಜಿ.ಪಿ. ರಾಜರತ್ನಂ, ವಿ. ಸೀತಾರಾಮಯ್ಯ, ತೀ.ನಂ. ಶ್ರೀಕಂಠಯ್ಯ, ಎ.ಎನ್. ಮೂರ್ತಿರಾವ್, ಎಲ್.ಎಸ್. ಶೇಷಗಿರಿರಾವ್, ಎಸ್.ವಿ. ರಂಗಣ್ಣ, ರಂ.ಶ್ರೀ. ಮುಗಳಿ, ಜಿ.ಎಸ್. ಶಿವರುದ್ರಪ್ಪ, ಎಂ.ಚಿದಾನಂದಮೂರ್ತಿ, ಚಂದ್ರಶೇಖರ ಕಂಬಾರ, ನಿಸಾರ್ ಅಹಮದ್, ಪಿ.ಲಂಕೇಶ್, ಕಿ.ರಂ. ನಾಗರಾಜ್, ಹಂ.ಪ. ನಾಗರಾಜಯ್ಯ, ದೇ.ಜವರೇಗೌಡ,
ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಬರಗೂರು ರಾಮಚಂದ್ರಪ್ಪ, ಕೆ. ಮರುಳಸಿದ್ದಪ್ಪ ಸೇರಿದಂತೆ ಹಲವರು ಸೆಂಟ್ರಲ್ ಕಾಲೇಜಿನಲ್ಲಿ ಪಾಠ ಮಾಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಸಿ.ರಾಜಗೋಪಾಲಚಾರಿ ಅವರು ಪಾಠಕೇಳುತ್ತಿದ್ದ ತರಗತಿ ಈಗಿನ ‘ರಾಜಾಜಿ ಹಾಲ್’

ರಾಮನ್‌, ರಾಜಾಜಿ ಹಾಲ್‌...

ಭಾರತ ರತ್ನ ಸರ್‌ ಸಿ.ವಿ. ರಾಮನ್ ನೊಬೆಲ್‌ ಪುರಸ್ಕಾರ ಪಡೆಯುವುದಕ್ಕೆ ಎರಡು ವರ್ಷ ಮುಂಚೆ (ಮಾ.16, 1928) ಸೆಂಟ್ರಲ್ ಕಾಲೇಜಿನ ಕೊಠಡಿಯೊಂದರಲ್ಲಿ ‘ರಾಮನ್ ಎಫೆಕ್ಟ್‘ನ ಉಪನ್ಯಾಸ ನೀಡಿದ್ದರು. 1930ರಲ್ಲಿ ಅವರಿಗೆ ಭೌತಶಾಸ್ತ್ರದ ಈ ಸಂಶೋಧನೆಗೆ ನೊಬೆಲ್‌ ಪುರಸ್ಕಾರ ಲಭಿಸಿತು. ಆ ನೆನಪಿಗಾಗಿ ಉಪನ್ಯಾಸ ನೀಡಿದ ಕೊಠಡಿಗೆ ‘ರಾಮನ್‌ ಹಾಲ್‌’ ಎಂದು ಹೆಸರಿಡಲಾಗಿದೆ. ಇವತ್ತಿಗೂ ಆ ಸಭಾಂಗಣದಲ್ಲೇ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಬೋಧಿಸಲಾಗುತ್ತಿದೆ.

ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ ಪಾಠ ಕೇಳುತ್ತಿದ್ದ ತರಗತಿಯನ್ನು ನವೀಕರಣಗೊಳಿಸಿ ‘ರಾಜಾಜಿ ಹಾಲ್‌’ ಮಾಡಲಾಗಿದೆ. ಮುಂದೆ ಅದು ‘ಹಾಲ್ ಆಫ್ ಫೇಮ್’ ಎಂಬ ಹೆಸರಿನ ತಾಣವಾಗಿ ರೂಪಿಸಲು ಯೋಜನೆ ಸಿದ್ಧವಾಗುತ್ತಿದೆ.

ಸಾಹಿತ್ಯ, ರಂಗಭೂಮಿ, ಚಳವಳಿ...

ಸೆಂಟ್ರಲ್ ಕಾಲೇಜು, ಶಿಕ್ಷಣವಲ್ಲದೆ ಸಾಹಿತ್ಯ, ರಂಗಭೂಮಿ ಸೇರಿದಂತೆ ವಿವಿಧ ಸಾಹಿತ್ಯ‌ ಚಟುವಟಿಕೆ ಹಾಗೂ ಚಳವಳಿಗಳ ನೆಲೆಯಾಗಿತ್ತು. ಸಾಹಿತ್ಯ ಚಟುವಟಿಕೆಗಳಿಗಾಗಿಯೇ ಎ.ಆರ್. ಕೃಷ್ಣಶಾಸ್ತ್ರಿಯವರ ನೇತೃತ್ವದಲ್ಲಿ 1918ರಲ್ಲಿ ‘ಸೆಂಟ್ರಲ್ ಕಾಲೇಜು ಕರ್ನಾಟಕ ಸಂಘ’ ಪ್ರಾರಂಭವಾಯಿತು. ಸಂಘದ ಮೊದಲ ಅಧ್ಯಕ್ಷರು ಪ್ರೊ. ವೆಂಕಟನಾರಾಯಣಪ್ಪ, ಬಳಿಕ ಜಿ.ಪಿ.ರಾಜರತ್ನಂ ಆದರು.

ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣದ ಹೋರಾಟ ಕಾವೇರಲು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಗಳ ಪಾತ್ರ ಹಿರಿದು. ಗೋಕಾಕ್ ಚಳವಳಿಯ ಪೂರಕ ಹೋರಾಟಗಳು ನಡೆದಿದ್ದು ಇದೇ ಕಾಲೇಜಿನಲ್ಲಿ. ಇದು ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಿತ್ತು ಎಂದು ಹಳೇ ವಿದ್ಯಾರ್ಥಿಗಳು ನೆನಪಿಸಿಕೊಳ್ಳುತ್ತಾರೆ.

1958ರಲ್ಲಿ ಸೆಂಟ್ರಲ್‌ ಕಾಲೇಜಿನ ಸಮಾರಂಭವೊಂದರಲ್ಲಿ ರಾಜಗೋಪಾಲಚಾರಿ ಮತ್ತು ಸರ್‌ ಎಂ.ವಿಶ್ವೇಶ್ವರಯ್ಯ ಭಾಗವಹಿಸಿದ್ದರು.

ಸೆಂಟ್ರಲ್ ಕಾಲೇಜು ವಿಜ್ಞಾನ ಕಾಲೇಜೆಂದು ಗುರುತಿಸಿಕೊಂಡರೂ, ಜಿ.ಪಿ.ರಾಜರತ್ನಂ, ಜಿ.ಎಸ್‌. ಶಿವರುದ್ರಪ್ಪನವರಂಥ ಸಾಹಿತ್ಯದ ಮೇರು ಪರ್ವತಗಳಿಂದ ಕನ್ನಡ ವಿಭಾಗದ ಬೇರುಗಳು ಗಟ್ಟಿಯಾದವು.

‘ಜಿ.ಪಿ.ರಾಜರತ್ನಂ ನಿವೃತ್ತಿಯ ನಂತರವೂ ವೇತನವಿಲ್ಲದೇ ಎರಡು ವರ್ಷ ಪಾಠ ಮಾಡಿದ್ದರು. ಕರ್ನಾಟಕ ಸಂಘ ಬಹಳ ಕ್ರಿಯಾಶೀಲವಾಗಿತ್ತು. ಕ.ವೆಂ.ರಾಜಗೋಪಾಲ್ ಅವರು ‘ಅಶ್ವತ್ಥಾಮನ್’ ನಾಟಕವನ್ನು ಮಾಡಿಸಿದ್ದರು. ರಾಜರತ್ನಂ ಅವರು ನಾನು ಮಾಡಿದ ಅಶ್ವತ್ಥಾಮನ ಪಾತ್ರವನ್ನು ಮೆಚ್ಚಿದ್ದರು’ ಎಂದು ಸಾಹಿತಿ ಪ್ರೊ. ಸಿ. ವೀರಣ್ಣ ನೆನಪಿಸಿಕೊಂಡರು.

ಸಾಹಿತಿ ಪ್ರೊ ಎಸ್.ಜಿ. ಸಿದ್ದರಾಮಯ್ಯ, ‘ಪ್ರಗತಿಪರ ವಿದ್ಯಾರ್ಥಿಗಳ ಗುಂಪು ಮಾಡಿಕೊಂಡು, ಸಮಕಾಲೀನ ಸಾಹಿತ್ಯ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದೆವು. ಓದಿನ ಅಭಿರುಚಿ ಹೆಚ್ಚಾಗಿದ್ದು ಈ ಗುಂಪಿನಿಂದ. ಇವತ್ತಿನ ನನ್ನಂಥ ಅನೇಕರ ಬೆಳವಣಿಗೆಗೆ, ಕಾಲೇಜಿನಲ್ಲಿದ್ದ ಸಾಹಿತ್ಯದ ವಾತಾವರಣ, ಜಿಎಸ್‌ಎಸ್‌ ಅವರಂಥವರ ಮಾರ್ಗದರ್ಶನ ಕಾರಣ’ ಎಂದು ನೆನಪಿಸಿಕೊಳ್ಳುತ್ತಾರೆ.

ಸೆಂಟ್ರಲ್ ಕರ್ನಾಟಕ ಸಂಘ ಬಹಳ ಕ್ರಿಯಾಶೀಲವಾಗಿತ್ತು. ಜಿ.ಎಸ್‌.ಶಿವರುದ್ರಪ್ಪನವರು ಕನ್ನಡ ಸಾಹಿತ್ಯ ಕುರಿತು ದೊಡ್ಡ ವಿಚಾರ ಸಂಕಿರಣ ಏರ್ಪಡಿಸಿದ್ದರು. ಅದರಲ್ಲಿ ನವೋದಯ ಮತ್ತು ನವ್ಯ ಸಾಹಿತಿಗಳನ್ನು ಮುಖಾಮುಖಿಯಾಗಿಸಿದ್ದರು. ಒಂದು ಕಡೆ ಲಂಕೇಶ್‌, ಇನ್ನೊಂದು ಕಡೆ ಶಿವರಾಮ ಕಾರಂತರು ವಿಚಾರ ಮಂಡಿಸಿದ್ದರು ಎನ್ನುವುದು ರಂಗಕರ್ಮಿ ಪ್ರಸನ್ನ ಅವರ ಸ್ಮೃತಿಪಟಲದಲ್ಲಿದೆ.

ಆ ಕಾಲದಲ್ಲಿ ಓದಿದ ಸೆಂಟ್ರಲ್ ಕಾಲೇಜಿನ ಯಾವುದೇ ವಿದ್ಯಾರ್ಥಿಯನ್ನು ಮಾತನಾಡಿಸಿದರೂ ಇಂಥ ನೂರಾರು ನೆನಪುಗಳನ್ನು ಮೊಗೆದು ಹರವಿಕೊಂಡು, ಸಂಭ್ರಮಿಸುತ್ತಾರೆ.

ಸೆಂಟ್ರಲ್ ಕಾಲೇಜು ಕ್ಯಾಂಪಸ್ 1958ರಲ್ಲಿ

‘ಸೆಂಟ್ರಲ್’ ಕ್ರೀಡೆಗಳು

ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲೂ ಸೆಂಟ್ರಲ್‌ ಕಾಲೇಜಿನ ಮುಡಿಯಲ್ಲಿ ಹಲವು ಗರಿಗಳಿವೆ. 1935, ಸೆಂಟ್ರಲ್ ಕಾಲೇಜಿನ ವಜ್ರ ಮಹೋತ್ಸವ ವರ್ಷ. ಇದರ ನೆನಪಿಗಾಗಿ ಕಾಲೇಜಿನಲ್ಲಿ ಕ್ರೀಡಾ ಮೈದಾನ ಉದ್ಘಾಟನೆಗೊಂಡಿತು. ಇ.ಎ.ಎಸ್. ಪ್ರಸನ್ನ, ಜಿ.ಆರ್. ವಿಶ್ವನಾಥ್ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಸೇರಿದಂತೆ ಹಲವು ಖ್ಯಾತ ಕ್ರಿಕೆಟಿಗರು ಈ ಮೈದಾನದಲ್ಲಿ ಫೋರು, ಸಿಕ್ಸರ್ ಬಾರಿಸಿದ್ದಾರೆ. ಗ್ಯಾರಿ ಸೋಬರ್ಸ್‌ ಸೇರಿದಂತೆ ಹಲವು ವಿದೇಶಿ ಕ್ರಿಕೆಟಿಗರು ಆಹ್ವಾನಿತ ಪಂದ್ಯಗಳನ್ನಾಡಿದ್ದಾರೆ. ಸೆಂಟ್ರಲ್ ಮೈದಾನ 50 ಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಹಾಕಿ, ಬ್ಯಾಡ್ಮಿಂಟನ್, ಈಜು, ಅಥ್ಲೆಟಿಕ್ಸ್‌ ಎಲ್ಲದರಲ್ಲೂ ಸೆಂಟ್ರಲ್ ಕಾಲೇಜು ವಿದ್ಯಾರ್ಥಿಗಳೇ ಚಾಂಪಿಯನ್‌ ಗಳಾಗುತ್ತಿದ್ದರು. ‘ನಾನು 1958–60ರ ಅವಧಿಯಲ್ಲಿ ಸೆಂಟ್ರಲ್ ಕಾಲೇಜಿನ ಹಾಕಿ ತಂಡದ ಕ್ಯಾಪ್ಟನ್ ಆಗಿದ್ದೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೆನಪಿನ ಬುತ್ತಿ ಬಿಚ್ಚಿಡುತ್ತಾರೆ.

ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರು ಮೈಸೂರು ರಾಜ್ಯವೆಂದು ಘೋಷಣೆ ಮಾಡಿದ್ದು ಇದೇ ಕ್ರೀಡಾಂಗಣದಲ್ಲಿ. ಹಾಗಾಗಿ ಇದು ಸೆಂಟ್ರಲ್ ಕಾಲೇಜಿನಷ್ಟೇ, ನಾಡಿನ ಹೆಗ್ಗುರುತುಗಳ ಐತಿಹಾಸಿಕ ತಾಣವೂ ಹೌದು ಎಂದು ನೆನಪಿಸಿಕೊಳ್ಳುತ್ತಾರೆ ಹಳೆಯ ವಿದ್ಯಾರ್ಥಿಗಳು.

ಸೆಂಟ್ರಲ್ ಕಾಲೇಜು @1958

ವಿಶ್ವವಿದ್ಯಾಲಯದ ನಂತರ..

1964ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ರಚನೆಯಾದ ನಂತರ ಸೆಂಟ್ರಲ್ ಕಾಲೇಜಿನಲ್ಲೇ ವಿಶ್ವವಿದ್ಯಾಲಯ ನಡೆಯುತ್ತಿತ್ತು. 1972ರಲ್ಲಿ ಜ್ಞಾನಭಾರತಿ ಕ್ಯಾಂಪಸ್ ಆರಂಭದ ಮೇಲೆ, ಇಲ್ಲಿನ ಬಹುತೇಕ ವಿಭಾಗಗಳು ಅಲ್ಲಿಗೆ ಸ್ಥಳಾಂತರಗೊಂಡವು. ಸೆಂಟ್ರಲ್ ಕಾಲೇಜು ‘ಸಿಟಿ ಕ್ಯಾಂಪಸ್’ ಆಯಿತು. 2017ರಿಂದ ಬೆಂಗಳೂರು ನಗರ ವಿಶ್ವವಿದ್ಯಾಲಯವಾಗಿ ರೂಪಾಂತರಗೊಂಡಿದೆ.

ನೂರೈವತ್ತರ ಸಂಭ್ರಮದಲ್ಲಿರುವ ಸೆಂಟ್ರಲ್ ಕಾಲೇಜು ‘ಇತಿಹಾಸ ಮತ್ತು ಆಧುನಿಕತೆ’ ಎರಡರ ಸಮ್ಮಿಶ್ರಣದೊಂದಿಗೆ ಹಳೇ ವೈಭವವನ್ನು ಪಡೆದುಕೊಳ್ಳುವತ್ತ ಹೆಜ್ಜೆ ಹಾಕಿದೆ. 

ಈಗ ಜ್ಞಾನಜ್ಯೋತಿ

2017–18ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮೂರು ಭಾಗವಾದ ನಂತರ, ಬೆಂಗಳೂರು ನಗರ ವಿಶ್ವವಿದ್ಯಾಲಯ ಹುಟ್ಟಿಕೊಂಡಿದೆ. ಸೆಂಟ್ರಲ್ ಕಾಲೇಜು, ಈಗ ‘ಜ್ಞಾನ ಜ್ಯೋತಿ‘ ಹೆಸರಿನ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯಾಗಿದೆ.

‘ಕುವೆಂಪು ಅವರ ವಿಶ್ವಮಾನವ ಆಶಯದೊಂದಿಗೆ ಸಾಗುತ್ತಿರುವ ವಿಶ್ವವಿದ್ಯಾಲಯ, ಕುವೆಂಪು ಅವರ ಆಗು ನೀ ಅನಿಕೇತನ ವಿಶ್ವವಿದ್ಯಾಲಯದ ಧ್ಯೇಯವಾಕ್ಯವಾಗಿಸಿಕೊಂಡಿದೆ‘ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಹೇಳುತ್ತಾರೆ.

ಕ್ಯಾಂಪಸ್‌ನಲ್ಲಿರುವ ಕಟ್ಟಡಗಳನ್ನು ₹155 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಪಾರಂಪರಿಕ ವಾಸ್ತುಶಿಲ್ಪವನ್ನು ಉಳಿಸಿಕೊಂಡು ಕಾಲೇಜಿಗೆ ಹೊಸ ರೂಪ ಕೊಡಲಾಗಿದೆ. ಕಾಲೇಜು ಅವರಣದಲ್ಲಿ ಹಸುರೀಕರಣ, ಇಂಗು ಗುಂಡಿಗಳ ರಚನೆಗಳಿವೆ. ಪರಿಸರ ಸ್ನೇಹಿ ಕ್ಯಾಂಪಸ್ ಆಗಿದೆ. ಏಳು ಅಂತಸ್ತಿನ ಶೈಕ್ಷಣಿಕ ಸಂಕೀರ್ಣ, ಸುಸಜ್ಜಿತ ಕ್ರೀಡಾ ಸಂಕೀರ್ಣ, ಒಲಿಂಪಿಕ್ ದರ್ಜೆಯ ಈಜುಕೊಳ ಸ್ಥಾಪಿಸಲಾಗಿದೆ. ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಕಾಲೇಜಿಗೆ 150 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅವರು.

ಸೆಂಟ್ರಲ್ ಕಾಲೇಜಿನ ‘ಕರ್ನಾಟಕ ಸಂಘ’ದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಟ.ಕೆ.ತುಕೋಳ ಸಾಹಿತಿ ಡಿ.ವಿ.ಗುಂಡಪ್ಪ ಮತ್ತು ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್(16–9–1970ಯಲ್ಲಿ ತೆಗೆದ ಚಿತ್ರ) 

ಈಗ ಜ್ಞಾನಜ್ಯೋತಿ

2017–18ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮೂರು ಭಾಗವಾದ ನಂತರ ಬೆಂಗಳೂರು ನಗರ ವಿಶ್ವವಿದ್ಯಾಲಯ ಹುಟ್ಟಿಕೊಂಡಿದೆ. ಸೆಂಟ್ರಲ್ ಕಾಲೇಜು ಈಗ ‘ಜ್ಞಾನ ಜ್ಯೋತಿ‘ ಹೆಸರಿನ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯಾಗಿದೆ.

‘ಕುವೆಂಪು ಅವರ ವಿಶ್ವಮಾನವ ಆಶಯದೊಂದಿಗೆ ಸಾಗುತ್ತಿರುವ ವಿಶ್ವವಿದ್ಯಾಲಯ ಕುವೆಂಪು ಅವರ ಆಗು ನೀ ಅನಿಕೇತನ ವಿಶ್ವವಿದ್ಯಾಲಯದ ಧ್ಯೇಯವಾಕ್ಯವಾಗಿಸಿಕೊಂಡಿದೆ‘ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಹೇಳುತ್ತಾರೆ.

ಕ್ಯಾಂಪಸ್‌ನಲ್ಲಿರುವ ಕಟ್ಟಡಗಳನ್ನು ₹155 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ. ಪಾರಂಪರಿಕ ವಾಸ್ತುಶಿಲ್ಪವನ್ನು ಉಳಿಸಿಕೊಂಡು ಕಾಲೇಜಿಗೆ ಹೊಸ ರೂಪ ಕೊಡಲಾಗಿದೆ. ಕಾಲೇಜು ಅವರಣದಲ್ಲಿ ಹಸುರೀಕರಣ ಇಂಗು ಗುಂಡಿಗಳ ರಚನೆಗಳಿವೆ. ಪರಿಸರ ಸ್ನೇಹಿ ಕ್ಯಾಂಪಸ್ ಆಗಿದೆ. ಏಳು ಅಂತಸ್ತಿನ ಶೈಕ್ಷಣಿಕ ಸಂಕೀರ್ಣ ಸುಸಜ್ಜಿತ ಕ್ರೀಡಾ ಸಂಕೀರ್ಣ ಒಲಿಂಪಿಕ್ ದರ್ಜೆಯ ಈಜುಕೊಳ ಸ್ಥಾಪಿಸಲಾಗಿದೆ. ಹೊಸ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಕಾಲೇಜಿಗೆ 150 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಅವರು.

1951ರಲ್ಲಿ ತೆಗೆದ ಸೆಂಟ್ರಲ ಕಾಲೇಜಿನ ಕರ್ನಾಟಕ ಸಂಘದ ಸದಸ್ಯರ ಗ್ರೂಪ್ ಫೋಟೊ

ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘದ ಪದಾಧಿಕಾರಿಗಳ ಗ್ರೂಪ್ ಫೋಟೊ ಚಿತ್ರ ಕೃಪೆ: ವಿಕಿಕಾಮನ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.