ADVERTISEMENT

ಆಪ್ತತೆಯ ಪ್ರತಿರೂಪ ಅಪ್ಪ: ಮಂಡ್ಯ ರಮೇಶ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 9:18 IST
Last Updated 15 ಜೂನ್ 2019, 9:18 IST
ತಂದೆ ಎನ್‌.ಸುಬ್ರಹ್ಮಣ್ಯಂ ಅವರೊಂದಿಗೆ ನಟ ಮಂಡ್ಯ ರಮೇಶ್
ತಂದೆ ಎನ್‌.ಸುಬ್ರಹ್ಮಣ್ಯಂ ಅವರೊಂದಿಗೆ ನಟ ಮಂಡ್ಯ ರಮೇಶ್   

ಅಪ್ಪ ಎಂದರೆ ನನಗೆ ಆಕಾಶ ಭೂಮಿಗಿಂತಲೂ ಮಿಗಿಲು. 88 ವರ್ಷದ ನನ್ನಪ್ಪ ಎನ್‌.ಸುಬ್ರಹ್ಮಣ್ಯಂ ಅವರು ಚಿಕ್ಕಂದಿನಿಂದ ಇಂದಿನವರೆಗೂ ಸ್ವಾಭಿಮಾನ, ಪ್ರೀತಿ, ಅಂತಃಕರಣವನ್ನು ಕೊಟ್ಟವರು. ಜೀವನದಲ್ಲಿ ಎಲ್ಲ ವಿಚಾರಗಳಿಗೂ ಪರ್ಯಾಯಗಳನ್ನು ಕಂಡುಕೊಳ್ಳಬಹುದು. ಆದರೆ, ಅಪ್ಪನಿಗೆ ಪರ್ಯಾಯವಾದುದು ಯಾವುದೂ ಇಲ್ಲ.

ಈಗಲೂ ನನ್ನಪ್ಪ ಐದು ಗಂಟೆ ನಾಟಕ ವೀಕ್ಷಿಸಿ, ವಿಮರ್ಶೆ ಬರೆಯುತ್ತಾರೆ. ಮಾತನಾಡುತ್ತಾರೆ. ಈಚೆಗೆ ಒಂದು ಪುಸ್ತಕವನ್ನೂ ಬರೆದಿದ್ದಾರೆ. ಯಾರಾದರೂ ಓದಬೇಕು, ಮೆಚ್ಚಬೇಕು ಎಂಬ ನಿರೀಕ್ಷೆ ಅವರಿಗಿಲ್ಲ. ಪತ್ರಿಕೆಗಳಿಗೂ ಆಗಾಗ ಲೇಖನ ಬರೆಯುತ್ತಲೇ ಇರುತ್ತಾರೆ. ಜಾತಿ, ಧರ್ಮಗಳನ್ನು ಮೀರಿದವರು. ನಮಗೂ ಅದನ್ನೇ ಹೇಳಿಕೊಟ್ಟವರು. ನಾವುಯಾರನ್ನಾದರೂ ಮನೆಗೆ ಕರೆದುಕೊಂಡು ಹೋದರೂ ಮೊದಲು ಅವರಿಗೆ ಊಟ ಬಡಿಸು ಎನ್ನುತ್ತಾರೆ.

ಆಪ್ತತೆಯ ಪ್ರತಿರೂಪ ಅವರು. ಅಪಾರ ಜೀವನೋತ್ಸಾಹ ಅವರದ್ದು. ನಮ್ಮಪ್ಪ ತುಂಬಾ ಲವಲವಿಕೆಯಿಂದ ಇದ್ದವರು. ನನ್ನ ತಾಯಿ ನಾಗಲಕ್ಷ್ಮಿ ತೀರಿಕೊಂಡರು. ತಂದೆಯನ್ನು ಕರೆದುಕೊಂಡು ತಾಯಿಯ ಶವದ ಮುಂದೆ ನಿಲ್ಲಿಸಿದೆ. ತಾಯಿಯ ಶವವನ್ನು ನೊಡಿ, ‘ಹೋಗಿಬಿಟ್ಟಳಲ್ಲಯ್ಯಾ ಇವಳು... ನಾಳೆಯಿಂದ ಜಗಳ ಮಾಡಲೂ ಯಾರೂ ಇಲ್ಲವಲ್ಲಯ್ಯ ರಮೇಶ... ಯಾರ ಬಳಿ ಜಗಳ ಮಾಡಲಿ’ ಎಂದು ಕೇಳಿದರು. ನನಗೆ ಅಲ್ಲಿಯವರೆಗೂ ಕಣ್ಣಲ್ಲಿ ನೀರೇ ಬಂದಿರಲಿಲ್ಲ. ನನ್ನಪ್ಪನ ಈ ಮಾತನ್ನು ಕೇಳಿದ ಕೂಡಲೇ ಪಟ್ಟನೇ ನೀರು ಸುರಿಯಿತು.

ADVERTISEMENT

ಮಂಡ್ಯ ರಮೇಶ್‌, ಹಿರಿಯ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.