ನಮ್ಮ ಕಾಡುಗಳು ವನವಾಸಿಗಳ ಕುಲ ಚಿಹ್ನೆ ಹಿನ್ನೆಲೆಯ ಸಸ್ಯ ನಂಬಿಕೆಗಳಿಂದ ಉಳಿದಿರುವುದು ಸತ್ಯ. ಇವು ಕೆಲವೊಮ್ಮೆ ಮೂಢನಂಬಿಕೆಗಳಂತೆ ಕಂಡರೂ ಕಾಡುಗಳ ಸಂರಕ್ಷಣೆಗೆ ದೊಡ್ಡ ಕೊಡುಗೆಯನ್ನೇ ನೀಡಿವೆ. ಇಂಥ ವನವಾಸಿ ಪರಂಪರೆಯ ವೃಕ್ಷ ನಂಬಿಕೆ ಆಧರಿಸಿ ಸಸ್ಯಾಭಿವೃದ್ಧಿಯ ಪರ್ಯಾಯ ದಾರಿಗಳು ಹಾಗೂ ಈಗ ನಾವೇನು ಮಾಡಲು ಸಾಧ್ಯ? ಎನ್ನುವ ಕುರಿತು ಲೇಖಕರು ಚರ್ಚಿಸಿದ್ದಾರೆ.
ಕಾಡು ಮರಗಳ ಸುತ್ತ ನಮ್ಮದೇ ನಂಬಿಕೆಯ ಆಪ್ತ ಬೇರುಗಳಿವೆ, ಸೋಜಿಗದ ಕಥನಗಳಿವೆ. ಆದರೆ ನಮ್ಮ ಅರಣ್ಯ ನೀತಿಗಳು ತೇಗ, ವಾಣಿಜ್ಯ ನೆಡುತೋಪಿನ ಅಬ್ಬರದಲ್ಲಿ ಶತಮಾನಗಳಿಂದಲೂ ದೇಸಿತನ ಮರೆತಿವೆ.
ವನವಾಸಿ ಸೋಲಿಗರ ಒಂದು ಕುಲಕ್ಕೆ ‘ಹೊಂಗೆಲರ ಕುಲ’ ಎಂಬ ಹೆಸರಿದೆ. ಸಿದ್ಧೇಶ್ವರ ಕುಲ ದೇವರಾದ ಇವರೊಮ್ಮೆ ಕಲ್ಲು ಬಂಡೆ ಸನಿಹದಲ್ಲಿದ್ದ ಹೊಂಗೆಯ ಮರ ಕಡಿದರಂತೆ, ಅಷ್ಟರಲ್ಲಿ ಮರದಲ್ಲಿ ದೇವತೆಯಿರುವುದು ತಿಳಿಯಿತು. ತಮ್ಮಿಂದಾದ ಅಪರಾಧ ಗಮನಿಸಿ ಪ್ರಾಯಶ್ಚಿತವಾಗಿ ಮುಂದೆಂದೂ ಹೊಂಗೆಯ ಮರ ಕಡಿಯಬಾರದು, ಸುಡಬಾರದೆಂಬ ಸ್ವಯಂ ನಿರ್ಧಾರ ಮಾಡುತ್ತಾರೆ. ಇವರನ್ನು ಹೊಂಗೆಲರ ಕುಲವೆಂದು ಗುರುತಿಸಲಾಗುತ್ತದೆ.
ಇನ್ನೊಂದು ಪ್ರಸಂಗ ಕುಮರಿ ಮರಾಠಿಗರ ನಂಬಿಕೆಯಲ್ಲಿದೆ. ಇವರು ಬೇಟೆಗೆ ಹೋಗಿದ್ದರು. ಕಾಟಿ (ಕಾಡೆಮ್ಮೆ)ಯೊಂದು ಒಬ್ಬರನ್ನು ಕೋಡಿನಿಂದ ತಿವಿದು ಸಾಯಿಸಿತು. ಘಟನೆ ಬಳಿಕ ಹಿರಿಯರ ಸಮ್ಮುಖದಲ್ಲಿ ಜನಾಂಗದ ಸಭೆ ನಡೆಯಿತು. ಜೀವನ ಪರ್ಯಂತ ಕಾಡಿನಲ್ಲಿರುವ ನಮ್ಮವರು ಕಾಡೆಮ್ಮೆ ತಿವಿತದಿಂದ ಸಾಯುವುದು ಅವಮಾನವಲ್ಲವೇ? ಮರವೇರಿ ತಪ್ಪಿಸಿಕೊಳ್ಳಬೇಕಿತ್ತೆಂಬ ಚರ್ಚೆ ನಡೆಯಿತು. ಆದರೆ ಆ ಬೇಟೆಗಾರ ಅಲ್ಲೇ ಇದ್ದ ಕೌಲು ಮರ ಏರಿದ್ದನು, ಆದರೆ ಪುನಃ ಮರವೇ ನೆಲಕ್ಕೆ ಬಾಗಿದ್ದರಿಂದ ಕಾಡೆಮ್ಮೆಯ ದಾಳಿಗೆ ಸಿಲುಕುವಂತಾಯಿತೆಂಬ ವಿವರ ದೊರೆಯಿತು. ಭೂಮಿಗೆ ಕೌಲು ಮರವನ್ನು ತಂದಿದ್ದು ಕಾಡೆಮ್ಮೆಗಳೆಂಬ ನಂಬಿಕೆಯಿದೆ. ಭೂಮಿಗೆ ತಂದ ಪ್ರಾಣಿಗೆ ನೆರವಾಗುವುದು ಮುಖ್ಯವೆಂದು ಕೌಲು ಮರವು ನೆಲಕ್ಕೆ ಬಾಗಿದ್ದರಿಂದ ಬೇಟೆಗಾರ ಸಾಯಬೇಕಾಯಿತೆಂದು ಹಿರಿಯರು ಗುರುತಿಸಿದರು. ನಂತರ ಕುಮರಿ ಮರಾಠಿಗರು ಕೌಲು ಮರ ಏರಬಾರದು, ಕಡಿಯಬಾರದೆಂದು ತೀರ್ಮಾನಿಸಿದರು. ವನವಾಸಿ ನಂಬಿಕೆಗಳೆಲ್ಲ ಮರದ ಬುಡದಲ್ಲಿ ಜ್ಞಾನೋದಯವಾಗುವಂತೆ ಶತಶತಮಾನಗಳ ಕಾಡು ಒಡನಾಟದಲ್ಲಿ ಮೂಡಿವೆ.
ಸಾವಿರದ ಸಸ್ಯ ನಂಬಿಕೆಗಳು
ನಮ್ಮದು ಇಂಥ ಬಳಿ, ಇಂಥ ಕುಲವೆಂದು ಗುರುತಿಸಿಕೊಳ್ಳುತ್ತೇವೆ. ದೊಡ್ಡ ದೊಡ್ಡ ಕುಟುಂಬಗಳನ್ನು ಪರಿಚಯಿಸುವಾಗ ಇವರ ಬಳಿ ಬಹಳ ದೊಡ್ಡದೆನ್ನುತ್ತೇವೆ. ಆಲದ ಮನೆ ರಾಮೇಗೌಡ, ಅಪ್ಪೆ ರಾಮೈ ಹೆಗಡೆ, ಹಲಸಿನಹಳ್ಳಿ ಮನೆತನ, ಮತ್ತಿಕೊಪ್ಪದ ಗೌಡರು, ಲಕ್ಕಿಜಡ್ಡಿಯ ಸಾಹುಕಾರರು, ಹೊನ್ನೆ ಹಕ್ಲು ಶೆಟ್ಟರು...ಹೀಗೆ ಸಸ್ಯಗಳ ಮೂಲಕ ಗುರುತಿಸಿಕೊಂಡ ಹಳ್ಳಿ, ಮನೆತನಗಳು ಸಿಗುತ್ತವೆ. ಬುಡಕಟ್ಟು ಜನಾಂಗಗಳು ಕುಲಚಿಹ್ನೆಯನ್ನು ಸಸ್ಯ, ಪ್ರಾಣಿಗಳಿಂದ ಗುರುತಿಸುವರು. ಕುಲದ ಚಿಹ್ನೆಯಾದ ಸಸ್ಯ/ಪ್ರಾಣಿ ಸಂರಕ್ಷಿಸುವುದು ತಮ್ಮ ಜನಾಂಗದ ಕರ್ತವ್ಯವೆಂಬ ಭಾವನೆಯಿದೆ. ಹಾಲಕ್ಕಿ, ಮುಕ್ರಿ, ನಾಮಧಾರಿ, ನಾಡವ, ಕರೆವೊಕ್ಕಲಿಗ, ಲಮಾಣಿ, ಗೌಳಿ, ಸಿದ್ಧಿ, ಹಸಲರ... ಹೀಗೆ ನಾಡಿನ ನೂರಾರು ಜನಾಂಗಗಳ ಮರ ನಂಬಿಕೆಯಲ್ಲಿ ಹಲವು ಸಸ್ಯ ಬಳಿಗಳಿವೆ. ಮಲ್ಲಿಗೆ ಬಳಿ, ಕಾಯಿ(ತೆಂಗು)ಬಳಿ, ಹೂಲಿ ಬಳಿ, ಕೆಂದಗಿ ಬಳಿ, ಸೀಗೆ ಬಳಿ, ಹೊನ್ನೆ ಬಳಿ, ಕೊಡಸಿಗ ಬಳಿ, ಬೆತ್ತದ ಬಳಿ... ಹೀಗೆ ಸಸ್ಯ ಕುಲ ಚಿಹ್ನೆಗಳಾಗಿವೆ.
ಬನವಾಸಿಯನ್ನು ರಾಜಧಾನಿಯಾಗಿಸಿದ ಮೊಟ್ಟ ಮೊದಲ ಕನ್ನಡ ರಾಜವಂಶ ಕದಂಬರು. ‘ಕದಂಬ ವೃಕ್ಷ’ ಕಾರಣದಿಂದ ಅರಸುಕುಲ ಚಿರಪರಿಚಿತವಾಗಿದೆ. ಎಕ್ಕೆಯ ಗಿಡವನ್ನು ರಾಣೆಬೆನ್ನೂರಿನ ಕೆಲವು ಪ್ರದೇಶಗಳಲ್ಲಿ ‘ಗುಡ್ಡದಯ್ಯನ ಬಿಲ್ಲು’ ಎಂದು ಪವಿತ್ರ ಭಾವನೆಯಿಂದ ನೋಡುವರು. ಕಡಿಯುವುದಿಲ್ಲ, ಕೀಳುವುದಿಲ್ಲ. ಈಶ್ವರನ ಅರ್ಚನೆಗೆ ಬಳಸುವ ಬಿಲ್ವಪತ್ರೆ ಮರ ಯಾರೂ ಕಡಿಯುವುದಿಲ್ಲ, ಹಲವು ಕಡೆ ಬಿಲ್ವವನಗಳು ಸುರಕ್ಷಿತವಾಗಿವೆ. ಪೂಜಾರ್ಹ ವೃಕ್ಷ ಬನ್ನಿಯಲ್ಲಿ ಪಾಂಡವರು ಅಜ್ಞಾತವಾಸಕ್ಕೆ ಕಾಡಿಗೆ ಹೋಗುವಾಗ ಆಯುಧಗಳನ್ನು ಇಟ್ಟರಂತೆ.... ‘ಕಲ್ಲು ಕಡಬು ಮಾಡಿ, ಮುಳ್ಳ ಶಾವಿಗೆ ಮಾಡಿ, ಬನ್ನಿಯ ಎಲೆಯಾಗ ಎಡೆಮಾಡಿ ಪಾಂಡವರು ಉಂಡು ಹೋಗ್ಯಾರೋ ವನವಾಸೋ’ ಜನಪದರು ಹಾಡಿದ್ದಾರೆ. ಬನ್ನಿ ಮರ ಯಾರೂ ಕಡಿಯುವುದಿಲ್ಲ.
ಪುರಾತನ ಗ್ರಂಥಗಳಲ್ಲಿ 27 ನಕ್ಷತ್ರಗಳಿಗೊಂದು ವೃಕ್ಷವಿದೆ. ಅಶ್ವಿನಿ ನಕ್ಷತ್ರಕ್ಕೆ ಕಾಸರಕ, ಭರಣಿಗೆ ನೆಲ್ಲಿ, ಕೃತಿಕಾ ಅತ್ತಿ, ರೋಹಿಣಿ ನೇರಳೆ, ಮೃಗಶಿರಾಕ್ಕೆ ಖೈರ, ಆರ್ದ್ರಾಕ್ಕೆ ಶಿವಣೆ ಮುಂತಾದ ವೃಕ್ಷಗಳಿವೆ. ಮನುಷ್ಯ ಭೂಮಿಗೆ ಬರುವುದಕ್ಕಿಂತ ಮೂರು ಯುಗಗಳ ಮುಂಚೆ ದೇವರು ಸಸ್ಯಗಳನ್ನು ಬೆಳೆಸಿದನೆಂಬ ಮಾತಿದೆ. ಒಮ್ಮೆ ದೇವತೆಗಳ ಮಕ್ಕಳು ದೇವಲೋಕದಲ್ಲಿ ಆಟವಾಡುವಾಗ ಬೆಳದಿಂಗಳು ಚೆಲ್ಲಿದ ವಿಶಾಲ ಭೂಮಿ ನೋಡಿದರು. ಮಕ್ಕಳಿಗೆ ಈ ದೊಡ್ಡ ಬಯಲಿನಲ್ಲಿ ಆಟವಾಡುವ ಆಸೆಯಾಯಿತು. ‘ನಾವು ಬಯಲು ಭೂಮಿಗೆ ಹೋಗಿ ಆಟವಾಡಿ ಬರಬಹುದೇ?’ ದೇವಾನುದೇವತೆಗಳಲ್ಲಿ ಕೇಳಿದರು. ‘ಮಕ್ಕಳೇ, ನೀವು ಬೆಳದಿಂಗಳಲ್ಲಿ ಆಟವಾಡಲು ಭೂಮಿಗೆ ಹೋಗಬಹುದು, ಆದರೆ ಬೆಳಗಾಗುವ ಮುಂಚೆ ದೇವಲೋಕಕ್ಕೆ ಮರಳಿ ಬರಬೇಕು’ ಎಂದು ದೇವತೆಗಳು ಸೂಚಿಸಿದರು. ಹಿರಿಯರ ಸಮ್ಮತಿ ಪಡೆದು ಭೂಮಿಗೆ ಬೆಳದಿಂಗಳಲ್ಲಿ ಆಡಲು ಬಂದ ಮಕ್ಕಳು ಆಟದಲ್ಲಿ ಮೈಮರೆತರು, ಅಷ್ಟರಲ್ಲಿ ಬೆಳಗಾಯಿತು! ಅಂದು ಆಡಲು ಭೂಮಿಗೆ ಬಂದ ದೇವತೆಗಳ ಮಕ್ಕಳೆಲ್ಲ ಭೂಮಿಯ ಮರಗಳಾದವಂತೆ! ಕಾಡು ಓದು ಪುರಾಣಗಳ ಜೊತೆಗಿದೆ.
ದಕ್ಷಿಣಾ ಪಥದಲ್ಲಿ ನೀರಿಗೆ ಕೊರತೆಯಾದಾಗ ಅಗಸ್ತ್ಯರು ಜಲರೂಪದಲ್ಲಿ ಲೋಪಾಮುದ್ರೆಯನ್ನು ಕಮಂಡಲಿನಲ್ಲಿ ತುಂಬಿಕೊಂಡು ಸಹ್ಯಾದ್ರಿಯ ಪರ್ವತಕ್ಕೆ ತಂದರು. ಬ್ರಹ್ಮಗಿರಿಯಲ್ಲಿ ವಿಷ್ಣು ಆಮಲಕ (ನೆಲ್ಲಿ) ವೃಕ್ಷದ ರೂಪದಲ್ಲಿದ್ದುದು ಗಮನಿಸಿ ವಿಷ್ಣುವಿನ ಸನಿಹವಿಟ್ಟರು. ಕೈಲಾಸದಿಂದ ತಂದ ಅಗಸ್ತ್ಯರ ಕಮಂಡಲದ ಲೋಪಾಮುದ್ರೆ ನೆಲಕ್ಕುರುಳಿತು. ಇದೇ ಪವಿತ್ರ ತಲಕಾವೇರಿಯಾಯಿತು. ನದಿ ನಂಬಿದವರಿಗೆ ನೆಲ್ಲಿ ಅಕ್ಕರೆಯ ವೃಕ್ಷವಾಗಬಹುದು. ವಿಶಾಲ ಆಲದಮರದ ಬೇರು ಸಾಕ್ಷಾತ್ ಶಿವನ ಜಟೆಯಂತೆ ಕಾಣುತ್ತದೆ. ಭಕ್ತಿ, ಮುಕ್ತಿ ಮಾರ್ಗಕ್ಕೆ ಆಲದಮರ ಸಾಕ್ಷಾತ್ ಶಿವನಿದ್ದಂತೆಯೆಂಬ ನಂಬಿಕೆಯಿದೆ. ಅರಳಿ, ಔದುಂಬರ ವೃಕ್ಷಗಳಡಿ ಸಾಧು ಸಂತರು ತಪಸ್ಸನ್ನಾಚರಿಸಿ ಜ್ಞಾನೋದಯ ಪಡೆದ ಕಥೆಯಿದೆ. ಹಿಪ್ಪೆ, ಮತ್ತಿ ಮರ ಬೆಳೆಸಿದರೆ ಪ್ರಶಂಸೆ ಹೆಚ್ಚುತ್ತದೆ. ಕಗ್ಗಲಿ (ಖೈರ) ಮರ ಸ್ವರ್ಗ ನೀಡುತ್ತದೆ, ಮಾವು ಇಷ್ಟಾರ್ಥ ದಯಪಾಲಿಸುತ್ತದೆ, ಬಿಲ್ವ ದೀರ್ಘಾಯುಷ್ಯ, ನೇರಳೆ ಹೆಚ್ಚು ಸಂಪತ್ತು, ಬೂರಗ ಮರದಿಂದ ಕುಲಾಭಿವೃದ್ಧಿ, ನೀರಂಜಿ ಮರದಿಂದ ದೇಹ-ಬುದ್ದಿಯ ಬಲ, ಅಶೋಕ ಸಸ್ಯ ಬೆಳೆಸಿದರೆ ಶೋಕನಾಶ, ಅಶ್ವಗಂಧ ಸಸ್ಯದಿಂದ ಮಾನಸಿಕ ಸಮಸ್ಯೆ ದೂರ, ಪಲಾಶ (ಮುತ್ತುಗ) ಮರದಿಂದ ಮನಸ್ಸು ಪ್ರಶಾಂತ... ಹೀಗೆ ನಮ್ಮ ಸುತ್ತಮುತ್ತಲ ಮರಗಳಲ್ಲಿ ನಂಬಿಕೆ ಕಟ್ಟಿಕೊಂಡು ಸಮಾಜ ಬೆಳೆದಿದೆ.
ವಿಜ್ಞಾನ ಇಂಥ ನಂಬಿಕೆಗಳನ್ನು ಒಪ್ಪಬೇಕಿಲ್ಲ, ಆದರೆ ಭೂಮಿಯಲ್ಲಿ ಬೆಳೆದ ಯಾವುದೇ ಮರದ ಲಾಭ ಪರಿಸರಕ್ಕೆ ಇದ್ದೇ ಇದೆಯಲ್ಲವೇ? ಕ್ರಿ.ಶ. 1938-39ರಲ್ಲಿ ತಾಳಗುಪ್ಪ ರೈಲು ಮಾರ್ಗ ನಿರ್ಮಾಣ ಕಾಲಕ್ಕೆ ಮಾರ್ಗದಲ್ಲಿದ್ದ ತಾರೆ ಮರವನ್ನು ಕಡಿಯಬೇಕಿತ್ತು. ಈ ಶಾಂತಿ ಮರದಲ್ಲಿ ಶನಿದೇವರು ನೆಲೆಸಿದ್ದಾನೆಂಬ ಭಯದಿಂದ ಸ್ಥಳೀಯ ಕೂಲಿಗಳು ಹೆದರಿದರು, ಜನ ನಂಬಿಕೆಯಲ್ಲಿ ಕಡಿಯದ ಮರಗಳ ಪಟ್ಟಿಯಿದೆ.
ಬೇರು ಮರೆತ ಅರಣ್ಯ ನೀತಿ!
ಗೊಂಡರು ಗೊಂಡ್ವಾನ ಭೂಮಿಯ ಮೊದಲಿಗರೆಂಬ ಮಾತಿದೆ. ಸುಮಾರು 200-300 ಮಿಲಿಯನ್ ವರ್ಷಗಳ ಹಿಂದೆ ಭೂಮಿ ಇಡಿಯಾಗಿ ಒಂದಾಗಿತ್ತು. ಗ್ರೀಕ್ ಭಾಷೆಯಲ್ಲಿ ಇದನ್ನು ‘ಪ್ಯಾಂಜಿಯ’ ಎನ್ನುವರು. ಸುಮಾರು 144 ಮಿಲಿಯನ್ ವರ್ಷಗಳ ಹಿಂದೆ ಎರಡು ಭಾಗಗಳಾಗಿ ವಿಂಗಡನೆಯಾಗಿ ಉತ್ತರದ ಟೆರೇಶಿಯಾ, ದಕ್ಷಿಣದ ಗೊಂಡ್ವಾನ ಭಾಗವಾಗಿ ದೂರ ಸರಿಯಲ್ಪಟ್ಟಿತು. ಇಲ್ಲಿನ ಗೊಂಡ್ವಾನ ಭೂಮಿ ಪುನಃ ಐದು ಖಂಡಗಳಾಗಿ ವಿಂಗಡನೆಯಾಯಿತು. ಏಷ್ಯಾ ಅಥವಾ ಜಂಬೂ ದ್ವೀಪ, ಆಫ್ರಿಕಾ, ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಅಂಟಾರ್ಟಿಕವೆಂಬ ಖಂಡಗಳಾದವು. ಈ ಐದು ಖಂಡಗಳಲ್ಲಿ ದೊರೆಯುವ ಖನಿಜ, ಸಸ್ಯ, ಜೀವ ಸಂಪತ್ತುಗಳು ಪರಸ್ಪರ ಹೋಲಿಕೆಯಾಗುತ್ತಿರುವುದರಿಂದ ಇವನ್ನು ‘ಗೊಂಡ್ವಾನ ಲ್ಯಾಂಡ್’ ಸಿದ್ಧಾಂತವೆಂದರು.
ರಾಜ್ಯದ ಹಿರಿಯ ಸಂಶೋಧಕರಾದ ಎಂ. ಆರ್. ಪಂಪನಗೌಡ, ಕೆ.ಎಂ. ಮೇತ್ರಿ ಗೊಂಡ್ವಾನ ಕುಲ, ಚಿಹ್ನೆಗಳ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಲಾಳಗೊಂಡವೆಂಬ ಜನಾಂಗವು ಲಾಂಜಿಗಢದಿಂದ ಬಂದ ಗೊಂಡರ ನಾಲ್ಕು ದೇವತಾ ಗುಂಪುಗಳಾಗಿದ್ದು ಇವರನ್ನು ನೇತಾಮ್ ಎಂಬ ಗೋತ್ರದವರೆನ್ನುವರು. ತೇಗದ ಮರ, ಆಮೆ, ಕಾಡುಹಂದಿ, ನಾಯಿ ಇವರ ಗುಂಪುಗಳಿಗೆ ಕುಲಚಿಹ್ನೆಯಾಗಿವೆ. ಹುಲಿ ಬಳಿಯವರು ಹುಲಿ ಕೊಲ್ಲುವುದಿಲ್ಲ, ಹಾವಿನ ಬಳಿಯವರು ಹಾವಿಗೆ ತೊಂದರೆ ನೀಡುವುದಿಲ್ಲ. ಮತ್ತಿ, ಕೌಲು, ದೇವಣಿಗೆ, ತುಳಸಿ, ಬಿದಿರು... ಹೀಗೆ ಬಳಿ ವಿಂಗಡನಾ ಪರಂಪರೆಯಿದೆ, ನೆಲ ಮೂಲದ ವನವಾಸಿಗರು ಯಾವತ್ತೂ ಮರದ ಬಳಿಯೇ ಇದ್ದರೂ ಇವರ ಜ್ಞಾನಕ್ಕೆ ಸರ್ಕಾರಿ ಅರಣ್ಯ ನೀತಿಗಳಲ್ಲಿ ಆದ್ಯತೆಯಿಲ್ಲ. ಅಪ್ಪಟ ಬರದ ಸೀಮೆಯಲ್ಲಿಯೂ ಮರ ಬೆಳೆಸುವ ಭರವಸೆಯಾಗಿ ದೇವರ ಮರ, ದೇವರ ಕಾಡು ಉಳಿದಿದ್ದು ನೆಲದ ಸತ್ವ ಸಾಕ್ಷಿ.
ಬ್ರಿಟಿಷರ ಮರ ಬಳಕೆಗೆ ತಕ್ಕಂತೆ ಭಾರತೀಯ ಅರಣ್ಯ ಕಾನೂನು ಹುಟ್ಟಿದೆ. ಅರಸರ ಹಕ್ಕಿನ ಮರವೆಂದು ಹೈದರ್ ಗುರುತಿಸಿದ ತೇಗದ ಮರಗಳ ಸುತ್ತವೇ ಬ್ರಿಟಿಷರು ತಿರುಗಿದವರು. ಕ್ರಿ.ಶ. 1830-1849 ಕಾಲದ ಅರಣ್ಯ ನೀತಿಯಲ್ಲಿ ತೇಗದ ಪ್ರೀತಿ ಮೆರೆದರು. 1980 ರವರೆಗೂ ನೈಸರ್ಗಿಕ ಕಾಡು ಕಡಿದು ತೇಗ ಬೆಳೆಸುವುದು ಮುಖ್ಯ ಕೆಲಸವಾಯಿತು. ಮರಗಳನ್ನು ಕತ್ತರಿಸಿ ನದಿಗಳ ಮೂಲಕ ಸಮುದ್ರ ತೀರಕ್ಕೆ ಒಯ್ದು ವಿದೇಶಕ್ಕೆ ಸಾಗಿಸಲು ನದಿ, ನಾಲಾ ಗಡಿಯಲ್ಲಿ ಅರಣ್ಯ ಕಾರ್ಯ ಯೋಜನೆಗಳಾಗಿವೆ. ಅರಣ್ಯ ಆದಾಯದ ಮೂಲವೆಂದು ಸರ್ಕಾರ ಯೋಚಿಸಿತು. ನೀಲಗಿರಿ, ಅಕೇಶಿಯಾ, ಗಾಳಿ, ಫೈನಸ್ ಮುಂತಾದ ಬೆರಳೆಣಿಕೆಯ ಸಸ್ಯಗಳ ವ್ಯಾಪಕ ಅರಣ್ಯೀಕರಣಕ್ಕೆ ಮುಂದೆ ನಿಂತಿತು, ಮರ ನಂಬಿಕೆಗಳ ಸೂತ್ರಗಳು ಹಳಿ ತಪ್ಪಿದವು.
ಸಸ್ಯ ಜಾಗೃತಿಗೆ ಪರಿಣಾಮಕಾರಿ ಮಾರ್ಗ
ಆಫ್ರಿಕಾದ ಬ್ಯಾಬಬ್ ವೃಕ್ಷದ ಬೀಜಗಳನ್ನು ವರ್ಷದ ಹಿಂದೆ ಬ್ರಿಜೇಶ್ ಹೆಗಡೆ ಸನೆಗಲ್‌ನಿಂದ ಕಳಿಸಿದ್ದರು. ಕರ್ನಾಟಕ ಅರಣ್ಯ ಇಲಾಖೆ ಯಲ್ಲಾಪುರ ವಿಭಾಗದ ಅರಣ್ಯ ನರ್ಸರಿಯಲ್ಲಿ ಚೆಂದದ ಸಸಿಯಾದವು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್, ಉಪ ವಲಯ ಅರಣ್ಯಾಧಿಕಾರಿ ಮನೋಜ್ ದೇಶಭಾಗರ ಜೊತೆ ಸೇರಿ ಮಹಾವೃಕ್ಷದ ಸಸಿ ನಾಟಿಗೆ ನಾವು ಪರಿಕಲ್ಪನೆ ರೂಪಿಸಿದೆವು. 30 ಮೀಟರ್ ಸುತ್ತಳತೆ ಬೆಳೆಯಬಹುದಾದ ಜಗತ್ತಿನ ಅತಿದೊಡ್ಡ ಮರ, 5150 ವರ್ಷಗಳಿಂದಲೂ ಬದುಕಿರುವ ಸಸ್ಯ ಕುಲವನ್ನು ಚಾರಿತ್ರಿಕ ನೆನಪಿಗೆ ದೇಗುಲಗಳಿಗೆ ಉಚಿತವಾಗಿ ಕೊಡಲು ನಿರ್ಧಾರವಾಯಿತು.
ಸಾಮಾಜಿಕ ಜಾಲತಾಣ, ಪತ್ರಿಕೆ ಮೂಲಕ ಮಾಹಿತಿ ಹಂಚಲಾಯಿತು. ಸವಣೂರಿನಲ್ಲಿ ನಾಥಪಂಥದ ಸ್ವಾಮಿಗಳು ನಾಟಿ ಮಾಡಿದ ವೃಕ್ಷಕ್ಕೆ 600 ವರ್ಷಗಳು, ಶ್ರೀಕೃಷ್ಣ ಇದನ್ನು ಭೂಮಿಗೆ ತಂದನೆಂಬ ಉಲ್ಲೇಖಗಳ ಸಹಿತ ಬರಹಗಾರ ಎಚ್. ಆರ್. ಕೃಷ್ಣಮೂರ್ತಿಯವರು ಕಲ್ಪವೃಕ್ಷವೆಂದು ಗುರುತಿಸಿದ ವಿವರಗಳನ್ನು ಹಂಚಿದೆವು. ಒಂದು ಸಸಿ ಪಡೆಯಲು ನೂರಾರು ಕಿಲೋ ಮೀಟರ್ ದೂರಗಳಿಂದಲೂ ಆಸಕ್ತರು ಬಂದರು. ಇಂದು ಹಲವು ದೇಗುಲಗಳ ಸನಿಹದ ಬಯಲಿನಲ್ಲಿ ಸಸಿ ನಾಟಿಯಾಗಿದೆ. ಬ್ಯಾಬಬ್ ಮಾತ್ರವಲ್ಲ, ಚಂದನ, ಏಕನಾಯಕ, ಮತ್ತಿ, ಅರ್ಜುನ, ಹೊನ್ನೆ, ಹೊಂಗೆ, ನೇರಳೆ, ಕಾಸರಕ, ರಾಮಪತ್ರೆ, ಸೀತಾ ಅಶೋಕ, ಮುತ್ತುಗ ಇತ್ಯಾದಿ ನೂರಾರು ಸಸ್ಯಗಳ ಸರಿಯಾದ ಮಾಹಿತಿ ಹಂಚಿದರೂ ಹೀಗೆ ಆಸಕ್ತರು ಸಸಿ ನೆಡಲು ಮುಂದೆ ಬರುತ್ತಾರೆ. ಬುಡಕಟ್ಟು ಪರಂಪರೆ, ನಕ್ಷತ್ರ ವೃಕ್ಷ, ಮರ ನಂಬಿಕೆ ಆಧಾರದಲ್ಲಿ ಮರ ಬೆಳೆಸುವ ಪರ್ಯಾಯ ಸಾಧ್ಯತೆಗಳಿವೆ.
ಕುಟುಂಬ, ಬಳಿ, ಮನೆತನ, ದೇಗುಲ, ಮಠ ಮಂದಿರಗಳ ನೆನಪಿಗೆ ಸೂಕ್ತ ಸಸಿ ಗುರುತಿಕೊಂಡು ಒಂದು ಸಸ್ಯದ ಉಳಿವಿಗೆ ನಮ್ಮದೇ ನಂಬಿಕೆ ಮೂಲಕ ಜೀವನ ಪರ್ಯಂತ ನಿಲ್ಲುವ ನಿರ್ಧಾರ ಮಾಡಿದರೆ ನೂರಾರು ಸಸ್ಯ ಕುಲ ಉಳಿಯುತ್ತವೆ. ಸಸ್ಯದ ಬೀಜ ಸಂಗ್ರಹ, ಸಸ್ಯ ಮಾಹಿತಿ ವಿನಿಮಯ, ಸಸ್ಯಾಭಿವೃದ್ಧಿ, ತಮಗೆ ಗೊತ್ತಿರುವ ವ್ಯಕ್ತಿ, ಸಂಸ್ಥೆಗಳ ನೆರವಿನಿಂದ ಸಸಿ ಹಂಚಿಕೆ, ನಾಟಿ, ಸಂರಕ್ಷಣೆ ಕಾರ್ಯವನ್ನು ಶ್ರದ್ಧೆಯ ಕಾರ್ಯವಾಗಿ ಮಾಡಬಹುದು. ಒಂದು ಮರ ಬೆಳೆಯಲು ಏನು ಬೇಕೋ ಅದನ್ನು ಸರಿಯಾಗಿ ತಿಳಿದು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಾಕೇ ಸಾಕು, ಭೂಮಿಗೆ ಮಹತ್ವದ ಕೊಡುಗೆಯಾಗುತ್ತದೆ. ಬಳಿ ಸಸ್ಯವೆಂದು ಅರಳಿ,ಮಾವು, ಬೇವು, ಹೊಂಗೆ ಮುಂತಾಗಿ ಆಯ್ದು ಮರದ ಪ್ರೀತಿ ಹಬ್ಬಿಸುವ ಕಾರ್ಯ ಶಕ್ತ್ಯಾನುಸಾರ ತಪಸ್ಸಿನಂತೆ ಸಸಿ ನೆಡಸಬಹುದು. ಪರಿಸರ ಬಿಕ್ಕಟ್ಟಿನ ಕಾಲಘಟ್ಟದಲ್ಲಿ ‘ಮರವುಳಿದರೆ ನಾವ್ ಉಳಿವುದು ಸತ್ಯ’ ತಿಳಿಯಬೇಕು. ‘ಸಸ್ಯ ಬಳಿ’ ಪವಿತ್ರ ಸಸ್ಯಾಂದೋಲನವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.