ಹಸಿರು ಹೊದ್ದ ಚಪ್ಪರದಂತಿರುವ ತೋಟ. ಆ ತೋಟದಲ್ಲಿ ನೆಲದತ್ತ ತಲೆಬಾಗಿ ತೂಗಾಡುತ್ತಿರುವ ಹಸಿರು, ಹಳದಿ ಬಣ್ಣದ ದ್ರಾಕ್ಷಿ ಹಣ್ಣುಗಳ ಗೊಂಚಲು. ಪ್ರಖರ ಬಿಸಿಲಿನಲ್ಲೂ ದ್ರಾಕ್ಷಿ ತೋಟದ ನಡುವಿನ ನಡಿಗೆ ಮನಸ್ಸಿಗೆ ಹಿತ ಎನಿಸಿತು. ಹಣ್ಣು ಬಾಯಲ್ಲಿ ನೀರೂರಿಸಿತು. ಗೊಂಚಲಿಗೆ ತಾನೇ ತಾನಾಗಿ ಕೈ ಹೋಯಿತು. ಒಂದೊಂದೇ ಹಣ್ಣಿನ ರುಚಿಯನ್ನು ಆಸ್ವಾದಿಸುತ್ತಾ ತೋಟದ ಒಳಗೆ ಸಾಗುತ್ತಿದ್ದಾಗ ಮಾಲೀಕ ಪದ್ದು ಚವ್ಹಾಣ (ಹಂಚಿನಾಳ ಎಲ್.ಟಿ) ಎದುರಾದರು. ಪರಿಚಯಕ್ಕೂ ಮುನ್ನವೇ ತಾಜಾ ದ್ರಾಕ್ಷಿ ಗೊಂಚಲನ್ನು ಕೈಗಿತ್ತರು. ಅದೋ ಸಿಹಿ ಜೇನು!
ಇಷ್ಟೊಂದು ರುಚಿಕರ ದ್ರಾಕ್ಷಿ ಬಳ್ಳಿಯನ್ನು ಹೊಲದಲ್ಲಿ ಹಬ್ಬಿಸುವುದು ಹೇಗೆ? ಒಣದ್ರಾಕ್ಷಿಗೆ ಜೇನಿನ ಸ್ವಾದ ನೀಡುವುದು ಹೇಗೆ? ಗೊಬ್ಬರ, ಔಷಧ, ಕೂಲಿ, ಖರ್ಚು, ಆದಾಯ, ಮಾರುಕಟ್ಟೆ, ಇತ್ಯಾದಿ ತಿಳಿಯುವ ಕುತೂಹಲಕರ ಪ್ರಶ್ನೆಗಳಿಗೆ ಪದ್ದು ಚವ್ಹಾಣ ಉತ್ತರವಾದರು.
ದ್ರಾಕ್ಷಿ ಬೆಳೆ ಬೆಳೆಯುವುದು ಎಂದರೆ ನಿಸರ್ಗದೊಂದಿಗೆ ಜೂಜಾಡಿದಂತೆ. ಹವಾಮಾನ ಸ್ವಲ್ಪ ವ್ಯತ್ಯಾಸವಾದರೂ ಇಡೀ ವರ್ಷದ ಶ್ರಮ ವ್ಯರ್ಥ. ಹವಾಮಾನ ಸರಿಯಾಗಿದ್ದರೆ ಬೆಳೆಗಾರರ ನಸೀಬು ಬದಲಾಗುತ್ತದೆ. ದ್ರಾಕ್ಷಿ ಅತ್ಯಂತ ಸೂಕ್ಷ್ಮ ಬೆಳೆ. ಹೂವು, ಕಾಯಿ, ಹಣ್ಣು ಆಗುವಾಗ ಮೋಡವಾದರೂ ಸಮಸ್ಯೆ, ಮಳೆ ಬಂದರೂ ಸಮಸ್ಯೆ, ಇಬ್ಬನಿ ಬಿದ್ದರೂ ಸಮಸ್ಯೆ, ಆಲಿಕಲ್ಲು ಬಿದ್ದರಂತೂ ಜೀವವೇ ಹೋದಂತೆ.
ವರ್ಷಕ್ಕೊಂದೇ ಬೆಳೆಯಾದರೂ ನಿರಂತರವಾಗಿ ಕೃಷಿ ಮಾಡುತ್ತಲೇ ಇರಬೇಕು. ಮೊದಲು ಬಳ್ಳಿ ತಯಾರಾಗಬೇಕು. ಬಳಿಕ ಬಳ್ಳಿ ಕಟಾವು ಮಾಡಬೇಕು. ಅದಕ್ಕೆ ಚಾಟ್ನಿ ಮಾಡಿದ ತಕ್ಷಣ ಯಾವುದೇ ರೋಗ ಬರದಂತೆ ಔಷಧೋಪಚಾರ ಮಾಡುತ್ತಲೇ ಇರಬೇಕು.
‘ಹೂವು ಕಟ್ಟಲು ಔಷಧ, ಮಳೆ ಬಂದರೆ ಔಷಧ, ಇಬ್ಬನಿ ಬಿದ್ದರೆ ಔಷಧ, ಮೋಡ ಕವಿದರೆ ಔಷಧ, ಹಣ್ಣು ಒಣಗಿಸಲು ಔಷಧ ಸಿಂಪಡಿಸಲೇಬೇಕು. ಔಷಧವೇ ದ್ರಾಕ್ಷಿಗೆ ಪರಮೌಷಧ. ದ್ರಾಕ್ಷಿ ಗಿಡಗಳು ಒಂದು ರೀತಿ ಆಸ್ತಮಾ ರೋಗಿ ಇದ್ದಂತೆ’ ಎನ್ನುತ್ತಾರೆ ಪದ್ದು ಚವ್ಹಾಣ.
ಏಪ್ರಿಲ್‌ನಲ್ಲಿ ಗಿಡಗಳನ್ನು ಕತ್ತರಿಸಬೇಕು. ತಿಪ್ಪೆಗೊಬ್ಬರ ಹಾಕಿ ಕೃಷಿ ಮಾಡಬೇಕು. ಜೊತೆಗೆ ರಸಗೊಬ್ಬರ, ನೀರು ಪೂರೈಕೆ ಹಿತಮಿತವಾಗಿ ಮಾಡುತ್ತಿರಬೇಕು. ಅಕ್ಟೋಬರ್‌ಗೆ ಕಾಯಿ ಚಾಟ್ನಿ ಮಾಡಬೇಕು. ಹಣ್ಣುಗಳಿಗೆ ಆಕರ್ಷಕ ಬಣ್ಣ ಬರಬೇಕು ಎಂದರೆ ನಿಯಮಿತವಾಗಿ ನೀರು ನೀಡಬೇಕು.
ಇಡೀ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಒಮ್ಮೆಗೆ ಹಣ್ಣಾಗಿರುವುದು ಹೇಗೆ? ಒಂದೇ ಬಣ್ಣ, ಒಂದೇ ಗಾತ್ರ, ಒಂದೇ ರುಚಿ ಇರುವುದು ಹೇಗೆ? ಎಂಬ ಕುತೂಹಲಕ್ಕೂ ಪದ್ದು ಕರಾರುವಕ್ಕಾದ ಉತ್ತರ ನೀಡಿದರು. ಒಂದು ಬಳ್ಳಿಯಲ್ಲಿ ಕನಿಷ್ಠ 50 ರಿಂದ ಗರಿಷ್ಠ 60 ಗೊನೆ ಇರುವಂತೆ ಆರಂಭದಿಂದಲೇ ನೋಡಿಕೊಳ್ಳಬೇಕು. ಒಂದು ಗೊನೆಯಲ್ಲಿ ಕನಿಷ್ಠ 150 ಹಣ್ಣು ಬರುವಂತೆ ನಿರ್ವಹಣೆ ಮಾಡಬೇಕು. ಕಡಿಮೆ ಗೊನೆಗಳನ್ನು ಇಟ್ಟರೆ ಹಳದಿ ಹಣ್ಣು ಬರುತ್ತದೆ. ಹಸಿರು ಹಣ್ಣು ಮಾಡಬೇಕು ಎಂದರೆ ಗಿಡದಲ್ಲಿ ಎಲೆ ಹೆಚ್ಚಿರಬೇಕು. ಹಣ್ಣಿನ ಗೊನೆ ಮೇಲೆ ಬಿಸಿಲು
ಬೀಳದಂತೆ ನೋಡಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ಇದು ಸಾಧ್ಯ. ಇಂತಹ ಹಣ್ಣುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ,
ಬೆಲೆ ಹೆಚ್ಚು.
‘ಮೂವತ್ತು ವರ್ಷಗಳಿಂದ ದ್ರಾಕ್ಷಿ ಬೆಳೆಯುತ್ತಿದ್ದೇನೆ. ಇದರಲ್ಲೇ ಒಳ್ಳೆಯ ಬದುಕು ಕಂಡುಕೊಂಡಿದ್ದೇನೆ. ಎಕರೆಗೆ ಕನಿಷ್ಠ ₹2 ರಿಂದ ₹3 ಲಕ್ಷ ಖರ್ಚು ಬರುತ್ತದೆ. ಉತ್ತಮ ಬೆಳೆ, ಬೆಲೆ ಸಿಕ್ಕರೆ ಕನಿಷ್ಠ ₹6 ರಿಂದ ₹7 ಲಕ್ಷ ಆದಾಯ ಗ್ಯಾರಂಟಿ. ಹಾಗಂತ ಈ ಮಾತು ಎಲ್ಲರಿಗೂ ಅನ್ವಯವಾಗದು’ ಎಂದರು ಪದ್ದು ಚವ್ಹಾಣ.
ವಿಜಯಪುರ ಸಮೀಪವೇ ಅಲಿಯಾಬಾದ್ ಎಂಬ ಪುಟ್ಟ ಊರಿದೆ. ಈ ಭಾಗದಲ್ಲಿ ಬಹುತೇಕ ಬೆಳೆಗಾರರು ಹೊಲದಲ್ಲಿ ತಾವೇ ಹಸಿರು ಶೆಡ್ ನಿರ್ಮಿಸಿ, ಒಣದ್ರಾಕ್ಷಿ ತಯಾರು ಮಾಡುವುದು ಸಾಂಪ್ರದಾಯಿಕ ಪದ್ಧತಿಯಾಗಿದೆ. ಆ ಊರಿನ ಹೊಲದಲ್ಲಿ ಎಲ್ಲಿ ನೋಡಿದರಲ್ಲಿ ಒಣದ್ರಾಕ್ಷಿ ತಯಾರಿಸುವ ಹಸಿರು ಶೆಡ್‌ಗಳು ಕಾಣಿಸುತ್ತವೆ.
ಅಲಿಯಾಬಾದ್‌ನ ನಾಥೂ ಜಾಧವ್ ಅವರ ದ್ರಾಕ್ಷಿ ಶೆಡ್‌ಗೆ ಹೋದಾಗ ಒಣದ್ರಾಕ್ಷಿಯನ್ನು ತಯಾರಿಸಿ, ಶೇಖರಿಸಿಡುವ ವಿಧಾನವು ರೈತರಿಗೆ ಹೇಗೆ ತಲೆತಲಾಂತರದಿಂದ ಕರಗತವಾಗಿದೆ ಎಂಬುದು ತಿಳಿಯಿತು. ರೈತರು ತಾವೇ ದ್ರಾಕ್ಷಿ ಒಣಗಿಸಿ, ಮಾರಾಟ ಮಾಡಿದರೆ ಲಾಭ ಹೆಚ್ಚು ಸಿಗುತ್ತದೆ ಎನ್ನುತ್ತಾರೆ ನಾಥೂ ಜಾಧವ್.
ಎಲ್ಲ ಹಣ್ಣುಗಳಿಂದ ಒಣದ್ರಾಕ್ಷಿ ಮಾಡಲು ಸಾಧ್ಯವಿಲ್ಲ. ಬೀಜವಿಲ್ಲದ, ಹಳದಿ ಹಣ್ಣುಗಳಿರುವ, ಹೆಚ್ಚು ಸಕ್ಕರೆ ಅಂಶ ಇರುವ ಥಾಮ್‌ಸನ್ ಸೀಡ್‌ಲೆಸ್, ಅರ್ಕಾವತಿ ಹಣ್ಣುಗಳಿಂದ ಮಾತ್ರ ಗುಣಮಟ್ಟದ ಮತ್ತು ಆಕರ್ಷಕವಾದ ಒಣದ್ರಾಕ್ಷಿ ತಯಾರಿಸಬಹುದು.
ದ್ರಾಕ್ಷಿ ಬೆಳೆಯಲು ಬಿಸಿಲಿನ ವಾತಾವರಣ ಅತ್ಯಗತ್ಯ. ಆದರೆ, ಹಣ್ಣನ್ನು ಮಾತ್ರ ನೆರಳಲ್ಲೇ ಒಣಗಿಸಬೇಕು. ಇದಕ್ಕಾಗಿ ಹಸಿರು ಶೆಡ್‌ಗಳು ಅಗತ್ಯ. ಹಸಿರು ಶೆಡ್‌ಗಳಲ್ಲಿ ಹಿತಕರವಾದ ಬಿಸಿಲಿನ ತಾಪಕ್ಕೆ ಹಳದಿ ಬಣ್ಣ ಬರುತ್ತದೆ. ಬಿಸಿಲಿನಲ್ಲಿ ಒಣಗಿಸಿದರೆ ಕೆಂಪು ಬರುತ್ತವೆ. ಔಷಧ ಸಿಂಪಡಿಸಿದರೆ ಸಿಹಿ ಹೆಚ್ಚಾಗುತ್ತದೆ. ಹೆಚ್ಚಿನ ಉಷ್ಣತೆ ಮತ್ತು ಕಡಿಮೆ ತೇವಾಂಶದಲ್ಲಿ ದ್ರಾಕ್ಷಿಯನ್ನು ಒಣಗಿಸುವುದರಿಂದ ಉತ್ತಮ ಗುಣಮಟ್ಟವನ್ನು ಪಡೆಯಲು ಸಾಧ್ಯ ಎಂಬುದು ಜಾಧವ್ ಅವರ ಅನುಭವದ ಮಾತು.
ರೈತರು ತಾವು ಗಿಡದಿಂದ ಕಿತ್ತು ತಂದ ದ್ರಾಕ್ಷಿ ಗೊಂಚಲನ್ನು ಡಿಪ್ಪಿಂಗ್ ಆಯಿಲ್‌ನಲ್ಲಿ ಅದ್ದಿ ತೆಗೆದು, ಬಳಿಕ ನೆರಳಿನಲ್ಲಿ ನೈಲಾನ್ ಜಾಳಿಗೆಯ ಮೇಲೆ ಸಮವಾಗಿ ಹರಡುತ್ತಾರೆ. ಈ ರೀತಿಯಾಗಿ ಹರಡಿದ ದ್ರಾಕ್ಷಿ ಗೊಂಚಲಿಗೆ ಪೊಟ್ಯಾಷಿಯಂ ಕಾರ್ಬೊನೇಟ್ ಮತ್ತು ಇಥೈಲ್ ಓಲಿಯೇಟ್ ಅನ್ನು ನೀರಿನಲ್ಲಿ ಕರಗಿಸಿ, ಸಿಂಪಡಿಸುತ್ತಾರೆ. ನೈಲಾನ್ ಜಾಳಿಗೆ
ಮೇಲೆ ಹರಡಿದ ಗೊಂಚಲುಗಳನ್ನು 10-12 ದಿನ ಒಣಗಿಸುತ್ತಾರೆ. ಈ ಸಂದರ್ಭದಲ್ಲಿ ತೇವಾಂಶ ಕಡಿಮೆ ಮಾಡಿ, ಹಣ್ಣುಗಳು ಒಡೆಯದಂತೆ ಮಾಡಲು ಹಾಗೂ ಹಣ್ಣುಗಳಿಗೆ ಉತ್ತಮ ಬಣ್ಣ ಬರಲು ಗಂಧಕದ ಹೊಗೆ ಕೊಡುತ್ತಾರೆ. ಒಣಗಿಸಿದ ಬಳಿಕ ಜಾಳಿಗೆಯ ಮೇಲೆ ದ್ರಾಕ್ಷಿಯನ್ನು ತಿಕ್ಕಿ, ಸ್ವಚ್ಛಗೊಳಿಸುತ್ತಾರೆ. ಒಣಗಿಸುವ ಪ್ರಕ್ರಿಯೆ ಮುಗಿದ ಬಳಿಕ ಒಣದ್ರಾಕ್ಷಿಯನ್ನು ಯಂತ್ರಕ್ಕೆ ಹಾಕಿ ಗ್ರೇಡಿಂಗ್ ಮಾಡಿ, ಕೋಲ್ಡ್ ಸ್ಟೋರೇಜ್‌ನಲ್ಲೇ
ಸಂಗ್ರಹಿಸಿ ಇಡುತ್ತಾರೆ.
ಒಣದ್ರಾಕ್ಷಿಯ ಇಳುವರಿ ತಾಜಾ ಹಣ್ಣಿನ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಉತ್ತಮ ಗುಣಮಟ್ಟದ ಹಾಗೂ ಹೆಚ್ಚು ಸಕ್ಕರೆ ಪ್ರಮಾಣ ಹೊಂದಿರುವ 3.5 ರಿಂದ 4 ಕೆ.ಜಿ. ತಾಜಾ ಹಣ್ಣಿನಿಂದ ಸುಮಾರು 1 ಕೆ.ಜಿ. ಒಣದ್ರಾಕ್ಷಿ ಸಿಗುತ್ತದೆ. ವಿಜಯಪುರ ಸೇರಿದಂತೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ, ಪಂಢರಪುರ,
ತಾಸಾಗಾಂವ್ ದ್ರಾಕ್ಷಿ ಮಾರುಕಟ್ಟೆಗೆ ಪ್ರಸಿದ್ಧ. ಯಾವ ಮಾರುಕಟ್ಟೆಯಲ್ಲಿ ಹೆಚ್ಚಿನ ದರ ಸಿಗುವುದೋ ಅಲ್ಲಿಗೆ ರೈತರು ದ್ರಾಕ್ಷಿ ಕೊಂಡೊಯ್ದು ಮಾರಾಟ ಮಾಡುತ್ತಾರೆ.
‘ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ದ್ರಾಕ್ಷಿ ಬೆಳೆಯುವ ಕ್ಷೇತ್ರ ಸುಮಾರು 40 ಸಾವಿರ ಹೆಕ್ಟೇರ್ ಇದ್ದು, ಇದರಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಒಣದ್ರಾಕ್ಷಿ ಉತ್ಪಾದನೆ ಮಾಡಲಾಗುತ್ತದೆ. 2.25 ಲಕ್ಷ ಟನ್‌ಗೂ ಅಧಿಕ ಒಣದ್ರಾಕ್ಷಿ ಉತ್ಪಾದನೆಯಾಗುತ್ತದೆ. ಅಂದಾಜು ₹6 ಸಾವಿರ ಕೋಟಿಗೂ ಅಧಿಕ ಮೌಲ್ಯದ ಒಣದ್ರಾಕ್ಷಿ ಉತ್ಪಾದನೆಯಾಗುತ್ತದೆ’ ಎನ್ನುತ್ತಾರೆ ವಿಜಯಪುರ ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಹುಲ್ ಭಾವಿದೊಡ್ಡಿ.
‘ದ್ರಾಕ್ಷಿ ಕಣಜ’ ಎಂದೇ ಪ್ರಸಿದ್ಧವಾದ ವಿಜಯಪುರ ಜಿಲ್ಲೆಯೊಂದರಲ್ಲೇ ಸುಮಾರು 70 ಸಾವಿರ ಎಕರೆ, ಬಾಗಲಕೋಟೆ ಜಿಲ್ಲೆಯಲ್ಲಿ 18 ಸಾವಿರ ಎಕರೆ ಮತ್ತು ಬೆಳಗಾವಿಯಲ್ಲಿ 16 ಸಾವಿರ ಎಕರೆ ದ್ರಾಕ್ಷಿ ಬೆಳೆಯಲಾಗುತ್ತಿದೆ. ಹವಾಮಾನ ವೈಪರೀತ್ಯ, ಹೆಚ್ಚಿನ ಖರ್ಚು, ರೋಗಬಾಧೆ, ಮಾರುಕಟ್ಟೆ ಕೊರತೆ ಪರಿಣಾಮ ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಬೆಳೆಯುವ ಕ್ಷೇತ್ರ ಕಡಿಮೆ ಆಗುತ್ತಿದೆ.
ದ್ರಾಕ್ಷಿ ಗೊಂಚಲು
‘ವಿಜಯಪುರ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಬೆಳೆಯುವ ದ್ರಾಕ್ಷಿಯಲ್ಲಿ ಶೇಕಡ 80 ರಷ್ಟನ್ನು ಒಣದ್ರಾಕ್ಷಿ ಮಾಡಲಾಗುತ್ತದೆ. ಉಳಿದ ಶೇಕಡ 20ರಷ್ಟು ಮಾತ್ರ ಹಸಿದ್ರಾಕ್ಷಿ ತಿನ್ನಲು ಬಳಕೆಯಾಗುತ್ತದೆ. ರಾಜ್ಯದಲ್ಲಿ ಒಣದ್ರಾಕ್ಷಿ ಮಾರುಕಟ್ಟೆ ಮತ್ತು ಕೋಲ್ಡ್ ಸ್ಟೋರೇಜ್ ಘಟಕಗಳ ಕೊರತೆ ಇರುವುದರಿಂದ ನೆರೆಯ ಮಹಾರಾಷ್ಟ್ರಕ್ಕೆ ರೈತರು ಶೇಕಡ 80ರಷ್ಟು ದ್ರಾಕ್ಷಿಯನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ್.
ವಿಜಯಪುರದಲ್ಲಿ ದ್ರಾಕ್ಷಿ ಇ–ಟ್ರೇಡಿಂಗ್ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ. ದಲ್ಲಾಳಿಗಳು ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಸಮರ್ಪಕವಾಗಿ ಬೆಲೆ ಸಿಗದಂತೆ ವಂಚಿಸುತ್ತಿದ್ದಾರೆ ಎಂಬುದು ಬೆಳೆಗಾರರ ಗಂಭೀರ ಆರೋಪ.
ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ. ನೀವು ತಿನ್ನುವ ಹಸಿ ದ್ರಾಕ್ಷಿಹಣ್ಣು, ಒಣದ್ರಾಕ್ಷಿ ಅದ್ಭುತ ಎನ್ನುವಂತಿದ್ದರೆ, ಅದು ನಮ್ಮದೇ ನೆಲೆದಲ್ಲಿ ಬೆಳೆದದ್ದು ಆಗಿರಬಹುದು. ಏಕೆಂದರೆ, ಈ ನೆಲ, ಹವಾಮಾನಕ್ಕೆ ಅಂಥ ಗುಣವಿದೆ.
ವಿಜಯಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಣದ್ರಾಕ್ಷಿ ವಹಿವಾಟು ಸಂಕೀರ್ಣದಲ್ಲಿ ಇ–ಟ್ರೇಡಿಂಗ್‌ನಲ್ಲಿ ಭಾಗವಹಿಸಿದ್ದ ರೈತರು ದ್ರಾಕ್ಷಿಯನ್ನು ಜೋಡಿಸಿಟ್ಟರು
ದ್ರಾಕ್ಷಿ ಬೆಳೆಗಾರರಿಗೆ ಉತ್ತೇಜನ ನೀಡಲು ಹಾಗೂ ದ್ರಾಕ್ಷಿ ಮೌಲ್ಯವರ್ಧನೆ ಸಲುವಾಗಿ ವಿಜಯಪುರ ಸಮೀಪದ ತೊರವಿಯಲ್ಲಿ ವೈನ್ ಪಾರ್ಕ್ ನಿರ್ಮಾಣಕ್ಕಾಗಿ ದಶಕದ ಹಿಂದೆಯೇ ರಾಜ್ಯ ಸರ್ಕಾರ 141 ಎಕರೆ ಕಾಯ್ದಿರಿಸಿದ್ದು, ಅದು ಪಾಳು ಬಿದ್ದಿದೆ.
‘ದ್ರಾಕ್ಷಿ ವೈನ್ ಪಾರ್ಕ್, ಒಣದ್ರಾಕ್ಷಿ ಸಂಸ್ಕರಣ ಘಟಕ, ಒಣದ್ರಾಕ್ಷಿ ಸಂಗ್ರಹಕ್ಕೆ ಕೋಲ್ಡ್ ಸ್ಟೋರೇಜ್ ಆರಂಭಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು. ಇದಕ್ಕಾಗಿ ಕನಿಷ್ಠ ₹100 ಕೋಟಿ ಅನುದಾನ ನೀಡಬೇಕು’ ಎನ್ನುತ್ತಾರೆ ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ್.
‘ವೈನ್ ಪಾರ್ಕ್ ಅಭಿವೃದ್ಧಿಯಿಂದ ಪ್ರತಿ ವರ್ಷ ದ್ರಾಕ್ಷಿ ಮೇಳ, ವೈನ್ ಮೇಳ, ವೈನ್ ಟೇಸ್ಟಿಂಗ್, ವೈನ್ ಜೂಸ್ ಸೇರಿ ಇತರೆ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೂ ಉತ್ತೇಜನ ಲಭಿಸಲಿದೆ. ಇದರಿಂದ ದ್ರಾಕ್ಷಿ ಬೆಳೆಗಾರರಿಗೂ ಅನುಕೂಲ
ವಾಗಲಿದೆ’ ಎನ್ನುತ್ತಾರೆ ವಿಜಯಪುರ ದ್ರಾಕ್ಷಿ ಬೆಳೆಗಾರರ ಸಂಘ ಅಧ್ಯಕ್ಷ ಕೆ.ಎಸ್.ಮುಂಬಾರೆಡ್ಡಿ.
ರಾಜ್ಯದಲ್ಲಿ ಶತಮಾನದ ಈಚೆಗೆ ದ್ರಾಕ್ಷಿ ಕೃಷಿ ಪ್ರಾರಂಭವಾಗಿದೆ ಎಂಬುದು ಸಯ್ಯದ್ ಸಿರಾಜುಲ್ ಹಸನ್ ಬರೆದಿಟ್ಟ ಟಿಪ್ಪಣೆಯಿಂದ ತಿಳಿದುಬರುತ್ತದೆ ಎನ್ನುತ್ತಾರೆ ವಿಜಯಪುರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಎಸ್.ಎಂ.ವಸ್ತ್ರದ. 1904ರಲ್ಲಿ ದೌಲತಾಬಾದ್‌ನಿಂದ ದ್ರಾಕ್ಷಿ ಕಡ್ಡಿಗಳನ್ನು ನಾಸಿಕ್, ಪುಣೆ ಹಾಗೂ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ತೋಟ ಬೆಳೆಸಲಾಗಿದೆ ಎಂಬುದು ಹಸನ್ ಅವರ ಲೇಖನದಲ್ಲಿ ಪ್ರಸ್ತಾವವಾಗಿದೆ.
ಆನ್‌ಲೈನ್ ಮಾರುಕಟ್ಟೆಗೆ ಪೂರಕವಾಗಿ ಒಣದ್ರಾಕ್ಷಿಯ ಗುಣಮಟ್ಟಕ್ಕೆ ಅನುಗುಣವಾಗಿ ಗ್ರೇಡಿಂಗ್ ಮತ್ತು ಸರ್ಟಿಫೈ ಮಾಡುವ ಏಜೆನ್ಸಿ ಅಗತ್ಯವಿದೆ. ಈ ವ್ಯವಸ್ಥೆಯಾದರೆ ಒಣದ್ರಾಕ್ಷಿ ರಫ್ತಿಗೆ ಉತ್ತೇಜನ ಲಭಿಸಲಿದೆಮುಂಬಾರೆಡ್ಡಿ, ದ್ರಾಕ್ಷಿ ಬೆಳಗಾರ ವಿಜಯಪುರ
₹ 40 ಕೋಟಿ ವೆಚ್ಚದಲ್ಲಿ ತೊರವಿಯಲ್ಲಿ ಸದ್ಯ ಹತ್ತು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆರಾಹುಲ್ ಭಾವಿದೊಡ್ಡಿ , ಉಪ ನಿರ್ದೇಶಕ ವಿಜಯಪುರ ತೋಟಗಾರಿಕೆ ಇಲಾಖೆ
ರಾಜ್ಯದಲ್ಲಿ ಶತಮಾನದ ಈಚೆಗೆ ದ್ರಾಕ್ಷಿ ಕೃಷಿ ಪ್ರಾರಂಭವಾಗಿದೆ ಎಂಬುದು ಸಯ್ಯದ್ ಸಿರಾಜುಲ್ ಹಸನ್ ಬರೆದಿಟ್ಟ ಟಿಪ್ಪಣೆಯಿಂದ ತಿಳಿದುಬರುತ್ತದೆ ಎನ್ನುತ್ತಾರೆ ವಿಜಯಪುರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಎಸ್.ಎಂ.ವಸ್ತ್ರದ. 1904ರಲ್ಲಿ ದೌಲತಾಬಾದ್‌ನಿಂದ ದ್ರಾಕ್ಷಿ ಕಡ್ಡಿಗಳನ್ನು ನಾಸಿಕ್ ಪುಣೆ ಹಾಗೂ ಬೆಂಗಳೂರಿಗೆ ತೆಗೆದುಕೊಂಡು ಹೋಗಿ ತೋಟ ಬೆಳೆಸಲಾಗಿದೆ ಎಂಬುದು ಹಸನ್ ಅವರ ಲೇಖನದಲ್ಲಿ ಪ್ರಸ್ತಾವವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.