ADVERTISEMENT

ಎತ್ತಿನಬಂಡಿ ಓಟದ ಬಹುಮಾನಗಳ ಸರದಾರ 'ಹೆಲಿಕಾಪ್ಟರ್‌ ಬೈಜ್ಯಾ'

ಇಮಾಮ್‌ಹುಸೇನ್‌ ಗೂಡುನವರ
Published 21 ಡಿಸೆಂಬರ್ 2025, 0:29 IST
Last Updated 21 ಡಿಸೆಂಬರ್ 2025, 0:29 IST
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬೋರಗಾಂವ್‌ನಲ್ಲಿ ನಡೆದ ಎತ್ತುಗಳ ಓಟದ ಸ್ಪರ್ಧೆ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬೋರಗಾಂವ್‌ನಲ್ಲಿ ನಡೆದ ಎತ್ತುಗಳ ಓಟದ ಸ್ಪರ್ಧೆ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು   

ಅದು ಆರೂವರೆ ಕಿಲೋಮೀಟರ್‌ ಎತ್ತಿನಬಂಡಿ ಓಟದ ಸ್ಪರ್ಧೆ. ಕಟ್ಟುಮಸ್ತಾದ ಆ ಎತ್ತುಗಳು ಬಂಡಿಯನ್ನು ಎಳೆದುಕೊಂಡು ಮಿಂಚಿನ ವೇಗದಲ್ಲಿ ಓಡತೊಡಗಿದವು. ಅರ್ಧದಷ್ಟು ದಾರಿ ಕ್ರಮಿಸುತ್ತಲೇ ಎತ್ತುಗಳ ಮೇಲೆ ಬಣ್ಣ ಎರಚಿ ಹುರುಪು ತುಂಬಲಾಯಿತು. ಗುರಿ ಹತ್ತಿರವಾಗುತ್ತಿದ್ದಾಗ ಜನಸ್ತೋಮ ಹುಚ್ಚೆದ್ದು ಕೂಗುತ್ತಾ, ಅವುಗಳನ್ನೇ ಹಿಂಬಾಲಿಸುತ್ತಾ ಓಡುತ್ತಿದ್ದರು. ಆಗ ಎತ್ತುಗಳು ಬಾಲವನ್ನು ಗಾಳಿಯಲ್ಲಿ ಹಾರಿಸುತ್ತ, ಚಂಗನೆ ನೆಗೆಯುತ್ತಾ ಓಡುತ್ತಿದ್ದವು. ಸಿಳ್ಳೆ ಚಪ್ಪಾಳೆ ಕೇಕೆ ಇಡೀ ಮೈದಾನವನ್ನು ತುಂಬಿತ್ತು. ದೂಳಿನಿಂದ ಆವರಿಸಿದ್ದ ಮೈದಾನದಲ್ಲಿ ಹನ್ನೊಂದುವರೆ ನಿಮಿಷಗಳಲ್ಲಿ ಹೆಲಿಕಾಪ್ಟರ್‌ ಬೈಜ್ಯಾ ಜೋಡೆತ್ತುಗಳು ಮೊದಲಿಗೆ ಗುರಿ ಮುಟ್ಟಿದವು. ಐಷಾರಾಮಿ ‘ಫಾರ್ಚ್ಯೂನರ್‌’ ಕಾರನ್ನು ಬಹುಮಾನವಾಗಿ ಪಡೆದು ಬೀಗಿದವು. ಆಗ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಬೋರಗಾಂವ್‌ನಲ್ಲಿ ಆಯೋಜಿಸಿದ್ದ ದೇಶದ ಅತೀ ದೊಡ್ಡ ಪ್ರಮಾಣದ ಎತ್ತುಗಳ ಬಂಡಿ ಓಟದ ಸ್ಪರ್ಧೆಯಲ್ಲಿ ದುಬಾರಿ ಬೆಲೆಯ ಬಹುಮಾನ ಗೆದ್ದ ಜೋಡಿಯಲ್ಲಿ ಒಂದು ಎತ್ತು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಶಿರೂರಿನದ್ದು. ಅದೇ ‘ಹೆಲಿಕಾಪ್ಟರ್‌ ಬೈಜ್ಯಾ’!

‘ಅರರೇ, ಇದೇನಿದು ಇಂಥ ಹೆಸರು’ ಎಂದು ಹುಬ್ಬೇರಿಸಬೇಡಿ. ಮೈದಾನದಲ್ಲಿ ಹೆಲಿಕಾಪ್ಟರ್‌ ಇಳಿಯುವಾಗ ಇಲ್ಲವೇ ಮೇಲೇರುವಾಗ ಸುತ್ತಲೂ ದೂಳು ಆವರಿಸುತ್ತದೆ. ಅದೇ ರೀತಿ ಈ ಎತ್ತು ಓಡಲು ಆರಂಭಿಸಿದರೆ ಇಡೀ ಮೈದಾನ ದೂಳುಮಯವಾಗುತ್ತದೆ. ಅದಕ್ಕೆ ‘ಹೆಲಿಕಾಪ್ಟರ್‌ ಬೈಜ್ಯಾ’ ಎಂದು ಅಭಿಮಾನಿಗಳೇ ಹೆಸರಿಟ್ಟಿದ್ದಾರೆ.

ADVERTISEMENT

ರೈತ ಬಾಳು ಹಜಾರೆ ಅವರಿಗೆ ಸೇರಿದ ಈ ಎತ್ತು ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತುಂಬಾ ಫೇಮಸ್ಸು. ಎಂಟು ವರ್ಷ ವಯಸ್ಸಿನ ಸದೃಢ ಮೈಕಟ್ಟಿನ ಈ ಎತ್ತು ಈವರೆಗೆ ನೂರಕ್ಕೂ ಅಧಿಕ ಸ್ಪರ್ಧೆಗಳಲ್ಲಿ ಗೆದ್ದಿದೆ. ಬುಲೆಟ್‌ ಬೈಕುಗಳು, ಬೈಕ್‌ಗಳು, ಟ್ರ್ಯಾಕ್ಟರ್‌ಗಳು, ಬೆಳ್ಳಿಯ ಗದೆಗಳು, ನಗದು ಬಹುಮಾನ ಹೀಗೆ... ಈವರೆಗೆ ಇದು ಪಡೆದ ಒಟ್ಟು ಬಹುಮಾನದ ಮೊತ್ತ ಸುಮಾರು ₹2 ಕೋಟಿ!

ಖಿಲಾರಿ ತಳಿಯ ಎತ್ತು

‘ನಾಲ್ಕು ವರ್ಷಗಳ ಹಿಂದೆ ₹6.5 ಲಕ್ಷಕ್ಕೆ ಇದನ್ನು ಖರೀದಿಸಿದೆ. ಆಹಾರವಾಗಿ ಮೇವು, ಹಿಂಡಿ ನೀಡುತ್ತೇವೆ. ನಿಯಮಿತವಾಗಿ ನೀರು ಕುಡಿಸುತ್ತೇವೆ. ವ್ಯಾಯಾಮಕ್ಕಾಗಿ ನೇಗಿಲು ಹೊಡೆಸುತ್ತೇವೆ. ಸಣ್ಣ ಆರೋಗ್ಯ ಸಮಸ್ಯೆಯಾದರೂ ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುತ್ತೇವೆ. ನಮ್ಮ ಮನೆಯ ಮಗುವಿನಂತೆ ಆರೈಕೆ ಮಾಡುತ್ತೇವೆ. ದಷ್ಟಪುಷ್ಟವಾಗಿರುವ ಖಿಲಾರಿ ತಳಿಯ ಎತ್ತು ಈಗ ಏನಿಲ್ಲವೆಂದರೂ ₹1 ಕೋಟಿ ಬೆಲೆ ಬಾಳುತ್ತದೆ’ ಎನ್ನುವಾಗ ಬಾಳು ಹಜಾರೆ ಮೊಗದಲ್ಲಿ ಸಂಭ್ರಮ ಉಕ್ಕಿಬರುತ್ತಿತ್ತು.

‘ನಾನು ಏಳು ಎತ್ತುಗಳನ್ನು ಸಾಕುತ್ತಿದ್ದೇನೆ. ಆದರೆ, ‘ಹೆಲಿಕಾಪ್ಟರ್‌ ಬೈಜ್ಯಾ’ ಎತ್ತಿನ ಸಾಮರ್ಥ್ಯಕ್ಕೆ ಸರಿಸಾಟಿ
ಯಾಗಬಲ್ಲ ಮತ್ತೊಂದು ಎತ್ತು ಸಿಗುತ್ತಿಲ್ಲ. ಹಾಗಾಗಿ ಬೋರಗಾಂವ್‌ನಲ್ಲಿ ನಡೆದ ಸ್ಪರ್ಧೆಗೆ ಹೋದಾಗ, ಇದಕ್ಕೆ ಸಾಂಗ್ಲಿಯ ‘ಬ್ರೇಕ್‌ಫೇಲ್‌’ ಖ್ಯಾತಿಯ ಎತ್ತು ಹುಡುಕಿ ಮೈದಾನಕ್ಕೆ ಇಳಿಸಿದೆವು. ಎರಡರ ಸಾಮರ್ಥ್ಯ, ದೇಹದಾರ್ಢ್ಯತೆಯಲ್ಲಿ ಭಿನ್ನತೆ ಇತ್ತು. ಆದರೆ, ನಮ್ಮ ಎತ್ತು ತನ್ನೊಂದಿಗೆ ಆ ಎತ್ತನ್ನು ವೇಗವಾಗಿ ಓಡಿಸಿಕೊಂಡು ಹೋಗಿ ಗುರಿ ಮುಟ್ಟಿತು’ ಎಂದು ಬಾಳು ಹೆಮ್ಮೆಯಿಂದ ಹೇಳುತ್ತಾರೆ.

‘ಬೇರೆ ಎತ್ತಿನೊಂದಿಗೆ ನಮ್ಮ ಎತ್ತನ್ನು ಓಡಿಸಿ ಗೆದ್ದಾಗ ಪ್ರಶಸ್ತಿ ಹಂಚಿಕೊಳ್ಳುತ್ತೇವೆ. ಬಹುಮಾನವಾಗಿ ಬಂದ ವಾಹನವನ್ನು ನಾವು ಪಡೆದರೆ, ಮತ್ತೊಂದು ಎತ್ತಿನ ಮಾಲೀಕರಿಗೆ ಅವರ ಅಪೇಕ್ಷೆಯಂತೆ ಹಣ ನೀಡುತ್ತೇವೆ. ಈವರೆಗೆ ಒಂದೇ ಒಂದು ಸ್ಪರ್ಧೆಯಲ್ಲೂ ‘ಹೆಲಿಕಾಪ್ಟರ್‌ ಬೈಜ್ಯಾ’ ಸೋತಿಲ್ಲ’ ಎಂದು ಅವರು ಬೀಗುತ್ತಾರೆ.ಗೆದ್ದವರಿಗೆ ಫಾರ್ಚ್ಯೂನರ್‌ ಕಾರ್‌

ಬೇರೆ ಬೇರೆ ಕಡೆ ನಡೆಯುವ ಎತ್ತಿನಬಂಡಿ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಸಣ್ಣಪುಟ್ಟ ಬಹುಮಾನ ನೀಡುವುದು ಸಾಮಾನ್ಯ. ಆದರೆ, ಬೋರಗಾಂವ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಗೆದ್ದವರಿಗೆ ತಲಾ ಎರಡು ಫಾರ್ಚ್ಯೂನರ್‌, ಥಾರ್‌ ಜೀಪ್‌, ಏಳು ಟ್ರ್ಯಾಕ್ಟರ್‌ ಮತ್ತು 150ಕ್ಕೂ ಅಧಿಕ ಬೈಕ್‌ ಬಹುಮಾನವಾಗಿ ನೀಡಲಾಯಿತು.

ಒಂದು ಫಾರ್ಚ್ಯೂನರ್‌ ‘ಹೆಲಿಕಾಪ್ಟರ್‌ ಬೈಜ್ಯಾ’ ಮತ್ತು ‘ಬ್ರೇಕ್‌ಫೇಲ್‌’ ಪಾಲಾದರೆ, ಒಂದು ಸಾವಿರ ಅಡಿಯ ಓಟದ ಸ್ಪರ್ಧೆಯಲ್ಲಿ ಗೆದ್ದ ಮಹಾರಾಷ್ಟ್ರದ ಔರಂಗಾಬಾದ್‌ನ ಸಂಭಾಜಿ ನಗರದ ‘ಲಖನ್‌’ ಮತ್ತು ಹಿಂಗೋಲಿಯ ‘ಸರ್ಜಾ’ ಎತ್ತಿನಜೋಡಿ ಮತ್ತೊಂದು ಫಾರ್ಚ್ಯೂನರ್‌ ಗೆದ್ದುಕೊಂಡವು.

ಅಲ್ಲಿ ಎತ್ತುಗಳ ಓಟದ ಸ್ಪರ್ಧೆ ಕಣ್ತುಂಬಿಕೊಳ್ಳಲೆಂದೇ ಲಕ್ಷಾಂತರ ಜನ ಸೇರುತ್ತಾರೆ. ಎತ್ತ ನೋಡಿದರೂ ಜನವೋ ಜನ. ದೇಶದ ವಿವಿಧೆಡೆಯಿಂದ ಬಂದಿದ್ದ ಜನರು ಇಲ್ಲಿನ ಬಹುಮಾನಗಳನ್ನು ಕಂಡು ಒಂದರೆಕ್ಷಣ ದಂಗಾದರು.

ಮೂರು ವರ್ಷಗಳಿಂದ ಆಯೋಜನೆ

ಎತ್ತಿನಬಂಡಿಗಳ ಓಟದ ಸ್ಪರ್ಧೆಗೆ ಸಾಂಗ್ಲಿ ಹೆಸರುವಾಸಿ. ಪಶ್ಚಿಮ ಮಹಾರಾಷ್ಟ್ರದ ಕೃಷಿ ಸಮುದಾಯದಲ್ಲಿ ಎತ್ತುಗಳನ್ನು ಓಡಿಸಿ ಸಂಭ್ರಮಿಸುವ ಈ ಸಂಪ್ರದಾಯ ಬೇರೂರಿದೆ. ಹಲವು ದಶಕಗಳಿಂದಲೂ ಇಂಥ ಸ್ಪರ್ಧೆಗಳನ್ನು ಸಂಘಟಿಸಲಾಗುತ್ತಿದೆ. ಅವು ಸಣ್ಣ ಪ್ರಮಾಣದಲ್ಲಿ ಇರುತ್ತಿದ್ದವು. ಆದರೆ, ಕುಸ್ತಿಪಟುವೂ ಆಗಿರುವ ರಾಜಕಾರಣಿ ಚಂದ್ರಹಾರ ಪಾಟೀಲ ಅವರು, ಚಂದ್ರಹಾರ ಪಾಟೀಲ ಯೂಥ್‌ ಫೌಂಡೇಷನ್‌ ವತಿಯಿಂದ ಈಚೆಗೆ ಆಯೋಜಿಸಿದ್ದ ದೊಡ್ಡ ಪ್ರಮಾಣದ ಎತ್ತಿನಬಂಡಿ ಸ್ಪರ್ಧೆ ಇಡೀ ದೇಶದ ಗಮನ ಸೆಳೆಯಿತು. ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳ 1,200 ಎತ್ತಿನ ಜೋಡಿಗಳು ಪಾಲ್ಗೊಂಡು, ತಮ್ಮ ತಾಕತ್ತು ಪ್ರದರ್ಶಿಸಿದವು.

‘ರಾಸುಗಳ ಬಗ್ಗೆ ರೈತರಿಗೆ ಕಾಳಜಿ ಹೆಚ್ಚಲಿ. ಗ್ರಾಮೀಣ ಕ್ರೀಡೆಯೂ ಉಳಿಯಲೆಂದು 2023 ರಿಂದ ಎತ್ತಿನಬಂಡಿ ಓಟದ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆ. ವಿವಿಧ ಊರುಗಳಲ್ಲಿ ನಡೆಯುವ ಸ್ಪರ್ಧೆಗಳಂತೆ ಇದು ಇರಬಾರದು. ವಿಶಿಷ್ಟವಾಗಿ ಆಯೋಜಿಸಬೇಕು ಎಂದುಕೊಂಡು ಹಿಂದಿನ ಸ್ಪರ್ಧೆಗಳಲ್ಲಿ ಥಾರ್‌ ಜೀಪ್‌, ಟ್ರ್ಯಾಕ್ಟರ್‌ಗಳನ್ನು ಬಹುಮಾನವಾಗಿ ನೀಡಿದ್ದೆವು. ಈ ಬಾರಿ ಇನ್ನಷ್ಟು ದುಬಾರಿ ಬೆಲೆಯ ಬಹುಮಾನ ನೀಡಿ ದೇಶದ ಗಮನ ಸೆಳೆದೆವು. ವರ್ಷದಿಂದ ವರ್ಷಕ್ಕೆ ನಮ್ಮ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಚಂದ್ರಹಾರ ಪಾಟೀಲ ಖುಷಿಯಿಂದ ಹೇಳುತ್ತಾರೆ.

ಮುಂದಿನ ವರ್ಷ ನಡೆಯುವ ಸ್ಪರ್ಧೆಯಲ್ಲಿ ಗೆದ್ದ ಎತ್ತಿನಜೋಡಿಗೆ ‘ಬಿಎಂಡಬ್ಲ್ಯು ಕಾರು’ ಬಹುಮಾನವಾಗಿ ನೀಡಲು ಚಿಂತನೆ ನಡೆಸಿದ್ದಾರೆ.

ಎತ್ತಿನಬಂಡಿ ಓಟದ ಸ್ಪರ್ಧೆಯ ವಿಹಂಗಮ ನೋಟ

700 ಎಕರೆಯಲ್ಲಿ ಸ್ಪರ್ಧೆ

ಈ ಸ್ಪರ್ಧೆಯನ್ನು ಹತ್ತಲ್ಲ, ಇಪ್ಪತ್ತಲ್ಲ; 700 ಎಕರೆ ಪ್ರದೇಶದಲ್ಲಿ ಆಯೋಜಿಸಲಾಗುತ್ತದೆ. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳೆಲ್ಲ ರೋಚಕತೆಯಿಂದ ಕೂಡಿದ್ದವು. ಸ್ಪರ್ಧೆ ಆಯೋಜನೆಗೆ ಎರಡು ತಿಂಗಳು ಮೊದಲೇ ತಯಾರಿ ಆರಂಭಿಸಲಾಗುತ್ತದೆ. ಚಂದ್ರಹಾರ ಪಾಟೀಲ ಯೂಥ್‌ ಫೌಂಡೇಷನ್‌ನ ಸ್ವಯಂಸೇವಕರಿಗೆ ಜವಾಬ್ದಾರಿ ಹಂಚಿಕೆಯಾಗುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಮತ್ತು ವೀಕ್ಷಣೆಗೆ ಬಂದವರಿಗೆ ಕುಡಿಯುವ ನೀರು, ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗುತ್ತದೆ.

‘ವಿವಿಧ ಜಾತ್ರೆ, ಉತ್ಸವಗಳಲ್ಲಿ ನಡೆಯುವ ಎತ್ತಿನಬಂಡಿ ಓಟದ ಸ್ಪರ್ಧೆಗಳಿಗೆ ಸಾಕ್ಷಿಯಾಗಿದ್ದೇನೆ. ಆದರೆ, ಸಾಂಗ್ಲಿಯಲ್ಲಿ ನಡೆಯುವಂಥ ಸ್ಪರ್ಧೆ ಜೀವನದಲ್ಲೇ ನೋಡಿಲ್ಲ. ಯಾವುದೇ ಜಾತ್ರೆಗಿಂತ ಹತ್ತು ಪಟ್ಟು ಹೆಚ್ಚು ಜನ ಅಲ್ಲಿ ಸೇರಿರುತ್ತಾರೆ. ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಾಲಿಡದಷ್ಟು ದಟ್ಟಣೆ ಕಂಡುಬರುತ್ತದೆ’ ಎಂದು ಮುಖಂಡ ಶುಭಂ ಪಾಟೀಲ ಹೇಳುತ್ತಾರೆ.

‘ನಾವು ಬಹಳಷ್ಟು ಕಡೆ ಎತ್ತುಗಳ ಓಟದ ಸ್ಪರ್ಧೆಗೆ ಹೋಗಿದ್ದೇವೆ. ಆದರೆ, ಬೋರಗಾಂವ್‌ನಲ್ಲಿ ನಡೆದಿದ್ದು ಸ್ಪರ್ಧೆಯಷ್ಟೇ ಅಲ್ಲ; ಒಂದು ಜಾತ್ರೆ. ಅಲ್ಲಿ ಸೇರಿದ್ದ ಜನರನ್ನು ಕಂಡು ಮತ್ತಷ್ಟು ಹುರುಪು ಬಂದಿತು’ ಎನ್ನುತ್ತಾರೆ ಬಾಳು ಅವರ ಸಹೋದರ ಅಪ್ಪಾಸಾಹೇಬ ಹಜಾರೆ.

ರೈತಾಪಿಗಳು ದಿನವೂ ಹೊಲ ಗದ್ದೆ ತೋಟಗಳಲ್ಲಿ ದುಡಿದು ದಣಿದಿರುತ್ತಾರೆ. ಇಂಥ ಸಮುದಾಯ ತನ್ನ ನೋವು, ದಣಿವು ಮರೆತು ಸಂಭ್ರಮಿಸಬೇಕು ಎನ್ನುವ ಕಾರಣಕ್ಕಾಗಿಯೇ ಹಲವು ಆಚರಣೆ, ಸಂಪ್ರದಾಯ, ಸಾಹಸ ಸ್ಪರ್ಧೆಗಳನ್ನು ಅನುಸರಿಸಿಕೊಂಡು ಬರಲಾಗುತ್ತಿದೆ. ಸಂಕ್ರಾಂತಿ ಹಬ್ಬದ ವೇಳೆಯಲ್ಲಿ ರಾಸುಗಳ ಜಾತ್ರೆಗಳು ಹೆಚ್ಚಾಗಿ ನಡೆಯುತ್ತವೆ. ಆದರೆ, ಬೋರಗಾಂವ್‌ನಲ್ಲಿ ನಡೆಯುವ ಎತ್ತಿನಬಂಡಿ ಓಟ ಸ್ಪರ್ಧೆ ಮತ್ತೊಂದು ಹಂತವನ್ನು ತಲುಪಿದೆ. ಇದನ್ನು ಕಣ್ತುಂಬಿಕೊಳ್ಳಲು ಸೇರುವ ಜನರೇ ಇದರ ಜನಪ್ರಿಯತೆಗೆ ಸಾಕ್ಷಿ.

ಅಂದಹಾಗೆ, ನಮ್ಮ ನೆಲದ ‘ಹೆಲಿಕಾಪ್ಟರ್‌ ಬೈಜ್ಯಾ’ ಹೀಗೆಯೇ ಗೆಲ್ಲುತ್ತಲೇ ಇರಲಿ.

ಇವೇ ನೋಡಿ ಬಹುಮಾನಗಳು!

ಫ್ಲೆಕ್ಸ್‌ಗಳಲ್ಲೂ ‘ಹೆಲಿಕಾಪ್ಟರ್‌ ಬೈಜ್ಯಾ’ ಹವಾ

‘ಸಾಂಗ್ಲಿ ಜಿಲ್ಲೆಯಲ್ಲಿ ನಡೆಯುವ ಎತ್ತಿನಬಂಡಿ ಸ್ಪರ್ಧೆಗಳಲ್ಲಿ ಸತತ ಮೂರು ವರ್ಷ ಗೆದ್ದಿದ್ದೇವೆ. ಮೊದಲ ವರ್ಷ ಟ್ರ್ಯಾಕ್ಟರ್‌, ಎರಡನೇ ವರ್ಷ ಥಾರ್‌ ಜೀಪ್‌ ಮತ್ತು ಮೂರನೇ ವರ್ಷ ಫಾರ್ಚ್ಯೂನರ್‌ ನಮ್ಮ ಪಾಲಾಗಿದೆ. ನಮ್ಮ ಎತ್ತು ಯಾವುದೇ ಊರಿನ ಸ್ಪರ್ಧೆಗೆ ಹೋದರೂ ಬ್ಯಾನರ್‌ ಮತ್ತು ಫ್ಲೆಕ್ಸ್‌ಗಳಲ್ಲಿ ಅದರ ಫೋಟೊ ಹಾಕಿ ಅಭಿಮಾನಿಗಳು ಸಂಭ್ರಮಿಸುತ್ತಾರೆ. ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ಬಂದ ನಂತರ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರ ಪ್ರದೇಶದಿಂದಲೂ ಜನರು ಮನೆಗೆ ಬಂದು ನಮ್ಮನ್ನು ಸತ್ಕರಿಸುತ್ತಾರೆ. ಇದು ಅಭಿಮಾನದ ಸಂಗತಿ’ ಎನ್ನುತ್ತಾರೆ ರೈತ ಬಾಳು ಹಜಾರೆ.

ಬೋರಗಾಂವ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಫಾರ್ಚ್ಯೂನರ್‌ ಗೆದ್ದ ಅಥಣಿ ತಾಲ್ಲೂಕಿನ ಶಿರೂರಿನ ‘ಹೆಲಿಕಾಪ್ಟರ್‌ ಬೈಜ್ಯಾ’ ಖ್ಯಾತಿಯ ಎತ್ತಿನ ಜೊತೆಯಲ್ಲಿ ಬಾಳು ಹಜಾರೆ(ಎಡದಲ್ಲಿರುವವರು)

ಆ ಕ್ಷಣ ರೋಮಾಂಚನಕಾರಿ...

‘ನಾನು ಎತ್ತಿನಬಂಡಿ ಓಡಿಸುವ ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಬೋರಗಾಂವ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಬೇರೆಯೇ ಚಿತ್ರಣವಿತ್ತು. ಅಲ್ಲಿ ಸೇರಿದ್ದ ಲಕ್ಷ ಲಕ್ಷ ಜನರ ಹರ್ಷೋದ್ಗಾರದ ಮಧ್ಯೆ ಎತ್ತಿನಬಂಡಿ ಓಡಿಸಿದ ಕ್ಷಣ ಮೈ-ಮನದಲ್ಲಿ ರೋಮಾಂಚನ ಉಂಟು ಮಾಡಿತು. ಖುಷಿಯಿಂದ ಎತ್ತಿನಗಾಡಿ ಓಡಿಸಿ ಗುರಿ ಮುಟ್ಟಿದೆ. ನಮ್ಮ ಎತ್ತುಗಳು ಓಡುವ ವೇಗ ನೋಡಿದರೆ, ಯಾವುದೋ ವಾಹನದಲ್ಲಿ ಹೋಗುತ್ತಿರುವ ಅನುಭವವಾಗುತ್ತಿತ್ತು’ ಎಂದು ರಾವಸಾಹೇಬ ಚೌಗಲೆ ಆ ಕ್ಷಣಗಳನ್ನು ನೆನಪಿಸಿಕೊಂಡರು.

ಬೋರಗಾಂವ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಫಾರ್ಚ್ಯೂನರ್‌ ಗೆದ್ದ ‘ಹೆಲಿಕಾಪ್ಟರ್‌ ಬೈಜ್ಯಾ’(ಎಡದಲ್ಲಿರುವುದು)ಮತ್ತು ‘ಬ್ರೇಕ್‌ಫೇಲ್‌’  ಖ್ಯಾತಿಯ ಎತ್ತಿನ ಜೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.