
ಭಾಷಾ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕು ಎಂಬ ಕೂಗಿನ ಮಧ್ಯೆಯೇ ಮತ್ತೊಂದು ಹಿಂದಿ ದಿವಸ ಬಂದಿದೆ. ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯನ್ನು ಹೇರುವುದನ್ನು ವಿರೋಧಿಸುತ್ತಲೇ, ಭಾಷಾ ಸೌಹಾರ್ದತೆಯನ್ನೂ ಕಾಪಾಡಿಕೊಳ್ಳಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಇದು ಹಿಂದಿ ದಿವಸದ ಸಂದರ್ಭವಾದುದರಿಂದ, ಕನ್ನಡ–ಹಿಂದಿಯ ಸಂಬಂಧದತ್ತ ನೋಡುವುದು ಸೂಕ್ತವಾದೀತು.
ತ್ರಿಭಾಷಾ ಸೂತ್ರದಿಂದಲೇ ಹಿಂದಿ ನಮ್ಮನಾಡಿಗೆ ಬಂದ್ದದು ಎಂಬುದು ನಮಗೆ ಗೊತ್ತಾದದ್ದು ನಮ್ಮ ಹಿರಿಯರಿಂದಲೇ. ಸರ್ಕಾರಿ ಕಚೇರಿಗಳಲ್ಲಿ, ರೈಲು ನಿಲ್ದಾಣಗಳಲ್ಲಿ, ಬ್ಯಾಂಕ್‌ಗಳಲ್ಲಿ, ಅಂಚೆ ಕಚೇರಿಗಳಲ್ಲಷ್ಟೇ ಕಾಣಸಿಗುತ್ತಿದ್ದ ಭಾಷೆ ಹಿಂದಿ. ಹಿಂದಿಯು ನಮ್ಮ ಮನೆಯೊಳಗೂ ಕೇಳುವಂತೆ ಮಾಡಿದ್ದು ಬಾಲಿವುಡ್ ಸಿನಿಮಾಗಳು, ಮಹಮದ್ ರಫಿಯ ಗೀತೆಗಳು... ಹೀಗೆ ನಮಗೆ ಆಪ್ತವೆನಿಸುವ ಸಂಗತಿಗಳ ಪಟ್ಟಿ ದೊಡ್ಡದೇ ಇದೆ.
ಬೆಂಗಳೂರಿನಂತಹ ನಗರಗಳಿಗೆ ಹಿಂದಿ ಬಹಳ ಬೇಗನೇ ಬಂದಿದೆ. ಇಲ್ಲೆಲ್ಲಾ ಒಡವೆ–ಗಿರವಿ ಅಂಗಡಿ, ಹಾರ್ಡ್‌ವೇರ್ ಶಾಪ್‌ಗಳಲ್ಲಿ ಮಾರ್ವಾಡಿ–ಸೇಠುಗಳದ್ದೇ ಮೇಲುಗೈ. ದೂರದ ರಾಜಸ್ಥಾನದಿಂದಲೋ, ಉತ್ತರ ಪ್ರದೇಶದಿಂದಲೋ ಇಲ್ಲಿಗೆ ಬಂದು ಅಂಗಡಿ ತೆರೆದ ಸೇಠುಗಳು ಮೊದಲು ಮಾಡಿದ ಕೆಲಸ, ಕನ್ನಡ ಕಲಿತದ್ದು. ಕರುನಾಡಿನ ಸಂದರ್ಭದಲ್ಲಿ ಕನ್ನಡ ಅವರ ಜೀವನೋಪಾಯದ ಅಗತ್ಯವೂ ಆಗಿತ್ತು. ನನ್ನ ಕಿವಿಗೆ ಮುರಾ ಸಿಕ್ಕಿಸಿದ ಸೇಠಪ್ಪ ಈಗ ಸಿಕ್ಕಗಾಲೂ, ‘ನಿನ್ನ ಕಿವಿ ಚುಚ್ಚಿದ್ದು ನಾನೇ. ಹೊಸ ಮುರಾ ಬಂದಿದೆ. ಮತ್ತೆ ಚುಚ್ಚಲಾ’ ಎಂದು ಮನೆಪಕ್ಕದ ಆಚಾರಿಯ ಶೈಲಿಯಲ್ಲಿಯೇ ಕಿಚಾಯಿಸುತ್ತಾರೆ. ಅವರೇ ಮುಂದಾಗಿ ಕನ್ನಡ ಕಲಿತ ಕಾರಣಕ್ಕೆ, ಸಂಘರ್ಷದ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.
ಆದರೆ, ಇದೆಲ್ಲಾ ಬದಲಾಗಿದ್ದು ತೀರಾ ಈಚಿನ ವರ್ಷಗಳಲ್ಲಿ. ನನ್ನೂರು ಬೆಂಗಳೂರಿನ ಯಾವ ಕಡೆ ಅಡ್ಡಾಡಿದರೂ ಹತ್ತಾರು ಮಂದಿ ಹಿಂದಿವಾಲಾಗಳು ಸಿಗುತ್ತಾರೆ. ಇಲ್ಲೀಗ ಪೇಂಟರ್, ಪ್ಲಂಬರ್, ಗಾರೆ, ಗ್ಯಾರೇಜ್‌ಗಳಲ್ಲಿ ಮೊದಲಾದ ಕೂಲಿ ಕೆಲಸಗಳಲ್ಲಿ ಹಿಂದಿವಾಲಾಗಳೇ ಇದ್ದಾರೆ. ನಂದಿನಿ ಹಾಲಿನ ಬೂತಿನವರು, ಪೇಪರ್‌ಬಾಯ್‌ಗಳು, ರಸ್ತೆ ಬದಿ ತರಕಾರಿ ಮಾರುವವರನ್ನು ಬಿಟ್ಟರೆ ಉಳಿದೆಲ್ಲಾ ಕಡೆ ಅಡಿಗಡಿಗೂ ಹಿಂದಿಯವರೇ ಸಿಗುತ್ತಾರೆ. ನಮಗೊಂದು ಬಟ್ಟೆ ಬೇಕೆಂದರೆ, ಗ್ಯಾಸ್ ಸ್ಟೌವ್ ರಿಪೇರಿ ಆಗಬೇಕಾದರೆ, ಹೇರ್‌ಕಟ್ ಮಾಡಿಸಬೇಕೆಂದರೆ, ಚಪ್ಪಲಿ ಅಂಗಡಿಗಳಲ್ಲೂ ಹಿಂದಿವಾಲಾಗಳೊಂದಿಗೇ ವ್ಯವಹರಿಸಬೇಕು. ಕನ್ನಡದ ಒಂದು ಪದವನ್ನೂ ಆಡದ ಅವರೊಂದಿಗೆ, ಅನಿವಾರ್ಯವಾಗಿ ಹಿಂದಿಯಲ್ಲಿ ವ್ಯವಹರಿಸುವಷ್ಟರಲ್ಲಿ ಸಾಕಾಗಿ ಬಿಡುತ್ತದೆ. ಏಕೆಂದರೆ ನಾವು ಶಾಲೆಯಲ್ಲಿ ಮತ್ತು ಹಿಂದಿ ಸಿನಿಮಾಗಳಲ್ಲಿ ಕಲಿತ ಹಿಂದಿಯೂ ಅವರಿಗೆ ಬರುವುದಿಲ್ಲ. ಅವರ ಹಿಂದಿಯೂ ನಮಗರ್ಥವಾಗುವುದಿಲ್ಲ. ಸ್ವಿಗ್ಗಿ, ಬ್ಲಿಂಕ್‌ಇಟ್ ಡೆಲಿವರಿ ಮಾಡುವವರಲ್ಲಿ ಆಗೊಮ್ಮೆ, ಈಗೊಮ್ಮೆ ಕನ್ನಡಿಗರು ಸಿಗುತ್ತಾರೆ ಎಂಬುದಷ್ಟೇ ಸಮಾಧಾನ.
ಹತ್ತಾರು ವರ್ಷಗಳ ಹಿಂದೆ ಇಲ್ಲಿಗೆ ಬಂದ ಹಿಂದಿಯವರು, ನಮ್ಮೊಂದಿಗೆ ವ್ಯವಹರಿಸುತ್ತಲೇ ಕನ್ನಡ ಕಲಿಯುತ್ತಿದ್ದರು. ನಾವು ಹಿಂದಿಯಲ್ಲೇ ಅವರನ್ನು ಇಲ್ಲಿಗೆ ಬರಮಾಡಿಕೊಂಡರೂ, ನಾಲ್ಕಾರು ವಾರಗಳಲ್ಲಿ ಅವರ ಬಾಯಿಯಿಂದ ಕನ್ನಡ ಕೇಳುತ್ತಿತ್ತು. ಆದರೆ ಈಗ ಹಾಗಿಲ್ಲ. ಅವರು ಹೆಚ್ಚು ವ್ಯವಹರಿಸಬೇಕಿರುವುದು ಹಿಂದಿಯವರೊಂದಿಗೇ ಅಥವಾ ಹಿಂದಿಯಲ್ಲೇ ವ್ಯವಹರಿಸುತ್ತೇವೆ ಎಂಬಲ್ಲಿಗೆ ಅವರು ಬಂದು ನಿಂತಿದ್ದಾರೆ. ಅದು ಎಷ್ಟರಮಟ್ಟಿಗೆ ಎಂದರೆ, ‘ಹಿಂದಿ ನ್ಯಾಷನಲ್ ಲ್ಯಾಂಗ್ವೇಜ್’ ಎಂಬ ಹಸಿಸುಳ್ಳನ್ನು ವ್ಯಾವಹಾರಿಕ ಹಂತದಲ್ಲಿ ನಿಜ ಮಾಡಲು ಹೊರಟಂತಿದೆ.
ಇಷ್ಟೆಲ್ಲಾ ಕಿರಿಕಿರಿ ಏಕಾಗುತ್ತದೆ ಎಂಬ ಅನುಭವ ನಿಮಗೂ ಆಗಿರಬಹುದು. ನನ್ನಿಷ್ಟದ ಗೋಲ್‌ಗಪ್ಪಾ ತಿನ್ನಲು ಹೊರಟರೆ, ಹಿಂದಿವಾಲಾಗಳದ್ದೇ ಸಮಸ್ಯೆ. ನಾನು ಕಾಲೇಜಿನಲ್ಲಿದ್ದಾಗ ನಮಗೆಲ್ಲಾ ಗೋಲ್‌ಗಪ್ಪಾ ಕನ್ನಡದಲ್ಲೇ ಸಿಗುತ್ತಿತ್ತು. ಈಗ ಬೆಂಗಳೂರಿನಲ್ಲಿ ಸಿಗುವುದು ಹಿಂದಿಯ ಗೋಲ್‌ಗಪ್ಪಾ ಮಾತ್ರ ಎಂಬಂತಾಗಿದೆ. ‘ಅಣ್ಣಾ, ದಪ್ಪ ಪುರಿ ಬೇಡ. ಸಣ್ಣದು ಕೊಡಿ’ ಎಂದು ನಾವು ಕೇಳಿದರೆ ಆತ ಹು ಎಂದು ತಲೆಯಾಡಿಸುತ್ತಾನೆ. ಆದರೆ ಮೊದಲಿಗಿಂತ ದಪ್ಪದ್ದೇ ಪುರಿ ಕೊಡುತ್ತಾನೆ. ಅದನ್ನು ನುಂಗಲೂ ಆಗದು, ಬಿಸಾಡಲೂ ಆಗದು. ‘ಎಷ್ಟಾಯಿತು’ ಎಂದಾಗ, ‘ಪಛೀಸ್’ ಅನ್ನುತ್ತಾನೆ. ಅದು ಐವತ್ತೋ ಅಥವಾ ಇಪ್ಪತ್ತೈದೋ ಎಂದು ತಲೆ ಕರೆದುಕೊಳ್ಳುವಷ್ಟರಲ್ಲಿ ಗೋಲ್‌ಗಪ್ಪಾ ತಿಂದ ಮಜವೇ ಹೋಗಿಬಿಟ್ಟಿರುತ್ತದೆ. ವರ್ಷವಾದರೂ ಈ ಕಿರಿಕಿರಿ ತಪ್ಪುತ್ತಿಲ್ಲ ಎಂಬುದೇ ಈಗಿನ ಸಮಸ್ಯೆ. ನಮಗೆ ಗೋಲ್‌ಗಪ್ಪಾ ಬೇಕು, ಅವ ಕನ್ನಡ ಕಲಿಯುವುದಿಲ್ಲ. ಏನು ಮಾಡುವುದು...
ನನಗೆ ಗೋಲ್‌ಗಪ್ಪಾವೂ ಬೇಕು, ಆಲೂ ಪರಾಟವೂ ಬೇಕು. ಆದರೆ ಕನ್ನಡದಲ್ಲಿ ಬೇಕು. ಸ್ಫೋಟಿಫೈನಲ್ಲಿ ಮಹಮದ್ ರಫಿಯ, ‘ಬಹಾರೋಂ ಫೂಲ್ ಬರಸಾವೋ, ಮೇರಾ ಮೆಹಬೂಬು ಆಯಾಹೆ...’ ಕಿವಿತುಂಬಿಕೊಳ್ಳುತ್ತಾ ಅವನ್ನು ಆಸ್ವಾದಿಸಬೇಕು ಎಂಬಂತಹ ಸ್ಥಿತಿಯನ್ನು ಹಿಂದಿ ದಿವಸ ತಂದುಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.