ADVERTISEMENT

ಏನಾದ್ರೂ ಕೇಳ್ಬೋದು: ಭಯದಿಂದ ಹೊರಬರುವುದು ಹೇಗೆ?

ನಡಹಳ್ಳಿ ವಂಸತ್‌
Published 7 ಡಿಸೆಂಬರ್ 2019, 2:01 IST
Last Updated 7 ಡಿಸೆಂಬರ್ 2019, 2:01 IST
   

ನಾನು ಪದವೀಧರ. ಯಾವುದೇ ವಿಷಯದಲ್ಲಿ ಆಸಕ್ತಿಯಿಲ್ಲದೆ ಮಾನಸಿಕವಾಗಿ ಕುಗ್ಗಿಹೋಗಿದ್ದೇನೆ. ಕಾಡುವ ನಕಾರಾತ್ಮಕ ಭಾವನೆಗಳಿಂದ ಬದುಕುವ ಆಸೆಯೇ ಇಲ್ಲದಂತಾಗಿದೆ. ಇದರಿಂದ ಹೊರಬರಲು ಏನು ಮಾಡಬೇಕು?

ಹೆಸರು, ಊರು ಇಲ್ಲ

ಪತ್ರದಲ್ಲಿ ಪೂರ್ಣ ವಿವರಗಳಿಲ್ಲ. ನಕಾರಾತ್ಮಕ ಯೋಚನೆಗಳು ನಿಮ್ಮ ಬಗ್ಗೆ ನಿಮ್ಮೊಳಗೇ ಇರುವ ಬೇಸರ, ಹತಾಶೆಗಳನ್ನು ಸೂಚಿಸುತ್ತಾ ನಿಮಗೆ ಸಹಾಯ ಮಾಡುತ್ತಿದೆ. ಅದು ನಿಮ್ಮ ಪರಿಸ್ಥಿತಿಗೆ ಕಾರಣ ಹೇಗಾದೀತು? ನಿಮ್ಮ ಕಣ್ಣಿನಲ್ಲಿ ನೀವೇ ಯೋಗ್ಯ ವ್ಯಕ್ತಿಯಾಗಲು ಏನು ಮಾಡಬೇಕು ಎಂದು ಪಟ್ಟಿ ಮಾಡಿಕೊಳ್ಳಿ. ಸಣ್ಣಸಣ್ಣ ವಿಚಾರಗಳಿಂದ ಪ್ರಯತ್ನವನ್ನು ಆರಂಭಿಸಿ. ಯಶಸ್ಸನ್ನು ಆನಂದಿಸಿ, ಸೋಲುಗಳನ್ನು ನಿಮ್ಮ ಯೋಗ್ಯತೆಯ ಸೂಚಕವೆಂದುಕೊಳ್ಳದೆ ಒಪ್ಪಿಕೊಳ್ಳಿ. ನಿಧಾನವಾಗಿ ಆಗುವ ಬದಲಾವಣೆಗಳಿಗೆ ಮನಸ್ಸನ್ನು ತೆರೆದಾಗ ಹೆಚ್ಚುವ ಆತ್ಮಗೌರವ ಮುಂದಿನ ಪ್ರಯತ್ನಕ್ಕೆ ಪ್ರೋತ್ಸಾಹ ನೀಡುತ್ತದೆ.

ADVERTISEMENT

53 ವರ್ಷದ ನನ್ನ ಮಗನಿಗೆ ಯಾವಾಗಲೂ ಭಯ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೂ ಕಚೇರಿಯಲ್ಲಿ ಮೇಲಧಿಕಾರಿಗಳಿಗೆ, ಹೆಂಡತಿ ಮಕ್ಕಳಿಗೆ, ಹೊರಗಡೆ ಜನರ ಜೊತೆ ಮಾತನಾಡಲು ಹೆದರುತ್ತಾನೆ. ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಆಹಾರದಿಂದ ಕೂಡ ಆರೋಗ್ಯ ಹದಗೆಡುತ್ತದೆ ಎಂದು ನಂಬಿಕೊಂಡಿದ್ದಾನೆ. ಯಾವುದೇ ಔಷಧಿಗಳು ಸಹಾಯ ಮಾಡುತ್ತಿಲ್ಲ. ಸೂಕ್ತ ಸಲಹೆ ನೀಡಿ.

ಪಾರ್ಥಸಾರಥಿ (ತಂದೆ), ಊರಿನ ಹೆಸರಿಲ್ಲ

ತಂದೆಯಾಗಿ ನಿಮ್ಮ ಕಾಳಜಿ ಸಹಜವಾದದ್ದು. ಮೇಲ್ನೋಟಕ್ಕೆ ಭಯದ ಲಕ್ಷಣಗಳು ಕಂಡರೂ ನಿಮ್ಮ ಮಗನ ಮನಸ್ಸಿನಾಳದಲ್ಲಿ ಅವರ ಬಗ್ಗೆಯೇ ಹಿಂಜರಿಕೆ, ಅನುಮಾನಗಳಿರಬಹುದು. ನಾನು ಈ ಪ್ರಪಂಚದಲ್ಲಿ ಸಮರ್ಥ ಬದುಕನ್ನು ನಡೆಸಲು ಯೋಗ್ಯನೇ? ಎನ್ನುವ ಕುರಿತು ಬಹಳ ವರ್ಷಗಳಿಂದ ಅವರಲ್ಲಿ ಕಾಡುತ್ತಿರುವ ಹಿಂಜರಿಕೆಯಿಂದಾಗಿ ಸುತ್ತಲಿನ ಪರಿಸರದ ಎಲ್ಲಾ ಅಂಶಗಳಲ್ಲಿ ತನಗೆ ಅಪಾಯವಿದೆಯೆಂದು ಅವರು ಗ್ರಹಿಸುತ್ತಾರೆ. ಸಂತೆಯ ಮಧ್ಯೆ ಬಿಟ್ಟಿರುವ ಇಲಿಮರಿಯಂತೆ ಅವರು ಎಲ್ಲವನ್ನೂ ತಪ್ಪಿಸಿಕೊಂಡು ಓಡಲು ಪ್ರಯತ್ನಿಸುತ್ತಾ ಅದು ಅಸಾಧ್ಯವೆಂದು ಬುದ್ಧಿಗೆ ಹೊಳೆದಾಗ ಗೊಂದಲದಿಂದ ನರಳುತ್ತಿದ್ದಾರೆ. ಔಷಧಿಗಳು ಅವರಿಗೆ ಸಹಾಯ ಮಾಡುವುದಿಲ್ಲ. ತಜ್ಞ ಮನೋಚಿಕಿತ್ಸಕರಿಂದ ದೀರ್ಘಕಾಲದ ಸಹಾಯದ ಅಗತ್ಯವಿದೆ. ಈ ಪ್ರಶ್ನೋತ್ತರವನ್ನು ಓದಿ ಪ್ರತಿಕ್ರಿಯೆ ನೀಡುವಂತೆ ಮಗನನ್ನು ಉತ್ತೇಜಿಸಿ.

ನಾನೊಬ್ಬ ಶಿಕ್ಷಕಿ. ಬಹಳ ವರ್ಷಗಳಿಂದ ಭಯದಿಂದ ನರಳುತ್ತಿದ್ದೇನೆ. ಮೊದಲು ವೇದಿಕೆ ಮೇಲೆ ಮಾತನಾಡಲು ಭಯಪಡುತ್ತಿದ್ದೆ. ಈಗ ಮನೆಯವರನ್ನು ಬಿಟ್ಟು ಬೇರೆಯವರ ಜೊತೆ ಮಾತನಾಡಲು ಭಯವಾಗುತ್ತದೆ. 2-3 ವರ್ಷಗಳಿಂದ ಮಾತ್ರೆ ತೆಗೆದುಕೊಂಡರೂ ಪರಿಣಾಮ ಶೂನ್ಯ. ಶಾಲೆಯಲ್ಲಿ ಮಕ್ಕಳು ಹಾಗೂ ಅಧಿಕಾರಿಗಳ ಜೊತೆ ಮಾತನಾಡಲು ಭಯವಾಗುತ್ತದೆ. ಇದರಿಂದ ಹೊರಬರಲು ಪರಿಹಾರ ತಿಳಿಸಿರಿ.

ಹೆಸರು, ಊರು ಬೇಡ

ಭಯ ಮಾನವನ ಪ್ರಾಥಮಿಕ ಅನುಭವ (ಪ್ರೈಮಲ್‌ ಎಮೋಷನ್‌). ನಮ್ಮನ್ನು ರಕ್ಷಿಸಿಕೊಳ್ಳುವ ದೃಷ್ಟಿಯಿಂದ ಪ್ರಕೃತಿ ನಮಗೆ ನೀಡಿರುವ ವರದಾನ ಕೂಡ. ಆದರೆ ನಿಮ್ಮ ಮನಸ್ಸು ಸುತ್ತಲಿನ ಎಲ್ಲಾ ಅಂಶಗಳಲ್ಲಿ ಭಯವನ್ನೇ ನೋಡುತ್ತಿದೆ. ಭಯವನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಾ ಸೋಲುತ್ತಾ ಸಂಪೂರ್ಣ ಗೊಂದಲದಲ್ಲಿದ್ದೀರಿ. ಭಯವನ್ನು ಓಡಿಸದೆ ಅನುಭವಿಸಿ ಅರ್ಥಮಾಡಿಕೊಳ್ಳಿ. ಅದು ನಿಮ್ಮ ಬಗ್ಗೆ ನಿಮ್ಮ ಮನದಾಳದಲ್ಲಿರುವ ಹಿಂಜರಿಕೆ, ಕೀಳರಿಮೆಗಳನ್ನು ಸೂಚಿಸುತ್ತಾ ನಿಮಗೆ ಸಹಾಯಮಾಡಲು ಯತ್ನಿಸುತ್ತಿದೆ. ಆದರೆ ಸ್ನೇಹಿತನನ್ನು ನೀವು ಶತ್ರುವನ್ನಾಗಿ ಮಾಡಿಕೊಂಡಿದ್ದೀರಿ. ಏಕಾಂತದಲ್ಲಿ ಕುಳಿತು ಭಯದ ಸಂದರ್ಭಗಳನ್ನು ಕಲ್ಪಿಸಿಕೊಂಡು ಅದರ ಸಂದೇಶವನ್ನು ಗಮನಿಸಿ. ಅವುಗಳನ್ನು ಬರೆದಿಟ್ಟುಕೊಂಡು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ. ಭಯವನ್ನು ಮೀರುವ ಸಣ್ಣಸಣ್ಣ ಗುರಿಗಳನ್ನಿಟ್ಟುಕೊಂಡು ಪ್ರಯತ್ನಿಸಿ. ನಿಧಾನವಾಗಿ ಭಯವೇ ನಿಮ್ಮ ವ್ಯಕ್ತಿತ್ವ ಅರಳಲು ಸಹಾಯ ಮಾಡುತ್ತದೆ.

27 ವರ್ಷದ ಪೊಲೀಸ್‌ ಕಾನ್‌ಸ್ಟೇಬಲ್‌. ಬಿಳಿಹಾಳೆಯ ಮೇಲೆ ಬರೆಯುವಾಗ ಕೈ ನಡುಗುತ್ತಾ ಮೈ ಬೆವರತೊಡಗುತ್ತದೆ. ತುಂಬಾ ವೈದ್ಯರ ಬಳಿ ತೋರಿಸಿದರೂ ಪ್ರಯೋಜವಾಗಿಲ್ಲ. ಏನು ಮಾಡಬೇಕು ತಿಳಿಸಿ.

ಹೆಸರು, ಊರು ತಿಳಿಸಿಲ್ಲ

ಎದುರಿಗೆ ಕುಳಿತಿರುವವರು ಹೇಳಿದ್ದನ್ನು ಬರೆದುಕೊಳ್ಳುವ ಕ್ರಿಯೆಯನ್ನು ನಿಮ್ಮ ಮೆದುಳು ಹುಲಿಯನ್ನು ಎದುರಿಸಿದ ಅನುಭವದಂತೆ ಸ್ವೀಕರಿಸಿ ಪ್ರತಿಕ್ರಿಯಿಸುತ್ತಿದೆ. ಹಾಗಾಗಿ ಕೈಗಳು ನಡುಗಿ ಮೈಬೆವರಿ ಬರೆಯುವ ಕಡೆ ಗಮನ ಕಳೆದುಕೊಂಡು ತಪ್ಪುಗಳನ್ನು ಮಾಡುತ್ತಾ ಭಯವನ್ನು ಹೆಚ್ಚಿಸಿಕೊಳ್ಳುತ್ತೀರಿ. ಮನೆಯಲ್ಲಿಯೇ ಪೆನ್ನು ಕಾಗದಗಳನ್ನಿಟ್ಟುಕೊಂಡು ಕಚೇರಿಯ ಸಂದರ್ಭವನ್ನು ಕಲ್ಪಿಸಿಕೊಂಡು ಬರೆಯಲು ಆರಂಭಿಸಿ. ಎದೆ ಹೊಡೆದುಕೊಳ್ಳುವುದು ಶುರುವಾದ ಕೂಡಲೆ ಬರೆಯುವುದನ್ನು ನಿಲ್ಲಿಸಿ ದೀರ್ಘವಾಗಿ ಉಸಿರಾಡುತ್ತಾ ದೇಹವನ್ನು ಸಹಜಸ್ಥಿತಿಗೆ ತನ್ನಿ. ಮತ್ತೆ ಬರೆಯಲು ಪ್ರಾರಂಭಿಸಿ. ಇದೇ ಪ್ರಯೋಗವನ್ನು ಸಾಕಷ್ಟು ದಿನಗಳವರೆಗೆ ಮುಂದುವರೆಸಿ. ಅಗತ್ಯವಿದ್ದರೆ ಮನೆಯವರನ್ನು ಅಥವಾ ಸ್ನೇಹಿತರನ್ನು ಎದುರಿಗೆ ಕೂರಿಸಿ ಬರೆಯಬೇಕಾದ್ದನ್ನು ಹೇಳಿಸಿ. ಒಟ್ಟಿನಲ್ಲಿ ಕಚೇರಿಯ ವಾತಾವರಣವನ್ನು ಮನಸ್ಸಿನಲ್ಲಿ ತೀವ್ರವಾಗಿ ಅನುಭವಿಸುತ್ತಾ ಅಭ್ಯಾಸಮಾಡಿ. ನಿಮ್ಮ ಕೈಬರಹದ ಅಂದ, ಶುದ್ಧತೆ, ಕೌಶಲಗಳ ಬಗ್ಗೆ ನಿಮಗೆ ಅನುಮಾನಗಳಿದ್ದರೆ ಸುಧಾರಿಸಿಕೊಳ್ಳಿ.

(ಅಂಕಣಕಾರರು ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.