ADVERTISEMENT

ಕಲ್ಲೂಡಿ ಹಪ್ಪಳ ಎಲ್ಲೆಲ್ಲೂ ಸಪ್ಪಳ!

ಡಿ.ಎಂ.ಕುರ್ಕೆ ಪ್ರಶಾಂತ
Published 26 ಅಕ್ಟೋಬರ್ 2025, 0:28 IST
Last Updated 26 ಅಕ್ಟೋಬರ್ 2025, 0:28 IST
ಕಲ್ಲೂಡಿ ಮನೆಯೊಂದರ ತಾರಸಿಯಲ್ಲಿ ಒಣಗುತ್ತಿರುವ ಹಪ್ಪಳ
ಕಲ್ಲೂಡಿ ಮನೆಯೊಂದರ ತಾರಸಿಯಲ್ಲಿ ಒಣಗುತ್ತಿರುವ ಹಪ್ಪಳ   

ಕಲ್ಲೂಡಿ, ಗೌರಿಬಿದನೂರು ತಾಲ್ಲೂಕು ಕೇಂದ್ರದ ಅಂಚಿನಲ್ಲಿರುವ ಗ್ರಾಮ. ಈಗ ನಗರದೊಳಗೆ ಸೇರಿ ನಗರಸಭೆಯ ವಾರ್ಡ್ ನಂಬರ್‌ 25 ಮತ್ತು 26ರ ಹಣೆಪಟ್ಟಿ ಹಚ್ಚಿಕೊಂಡಿದೆ. ಇಂತಿಪ್ಪ ಪ್ರದೇಶದಲ್ಲಿ ಇನ್ನೂ ಬೆಳಕು ಹರಿದಿರಲಿಲ್ಲ. ಮಬ್ಬುಗತ್ತಲು. ಚುಮುಚುಮು ಚಳಿ. ಅಲ್ಲಿನ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದೆ. ಮನೆ ಮುಂದೆ ಒಲೆ ಹಚ್ಚಿ ದೊಡ್ಡ ತಪ್ಪಲೆಗಳನ್ನಿಟ್ಟು ಉಪ್ಪು, ಖಾರ, ಜೀರಿಗೆಯೊಂದಿಗೆ ಬೇಯಿಸುತ್ತಿರುವ ಅಕ್ಕಿಹಿಟ್ಟಿನ ಘಮಲು ಎಲ್ಲೆಡೆ ಅಡರಿಕೊಂಡಿತ್ತು. ಬೆಂದ ಅಕ್ಕಿಹಿಟ್ಟು ಉಂಡೆಯಾಗಿ, ಒತ್ತುಮಣೆ ಮೇಲೆ ಒತ್ತಿಸಿಕೊಂಡು ಹಪ್ಪಳವಾಗಿ ರೂಪಾಂತರಗೊಳ್ಳುತ್ತಿತ್ತು. ಹೀಗೆ ನಸುಕಿನಲ್ಲೇ ಅಲ್ಲಿನ ಬೀದಿಗಳಲ್ಲಿ ಸಾಗುತ್ತಾ ಹನುಮಂತಪ್ಪ ಅವರ ಮನೆಯ ತಾರಸಿ ಏರಿದ್ದೆ. ಅವರು ಹಪ್ಪಳ ಒತ್ತುತ್ತಾ ಕುಳಿತಿದ್ದರು. ಆ ಹಿರಿಯ ಜೀವದೊಂದಿಗೆ ಮಾತಿಗಿಳಿದೆ.

ಎಪ್ಪತ್ಮೂರರ ಪ್ರಾಯದ ಹನುಮಂತಪ್ಪ ಸಣ್ಣ ಹಿಡುವಳಿದಾರರು. ಇಬ್ಬರು ಹೆಣ್ಣು ಮಕ್ಕಳು. ಸ್ವಲ್ಪ ಜಮೀನಿತ್ತು. ಮೂರ್ನಾಲ್ಕು ದಶಕಗಳ ಹಿಂದೆ ರೇಷ್ಮೆ ಕೃಷಿ ಮಾಡುತ್ತಿದ್ದರು. ಬರ, ಮತ್ತಿತರ ಕಾರಣಗಳಿಂದ ಕೃಷಿ ಲಾಭದಾಯಕ ಅನಿಸಲಿಲ್ಲ. ಕುಟುಂಬ ನಿರ್ವಹಣೆಯೂ ಕಷ್ಟ ಎನ್ನುವ ದುಃಸ್ಥಿತಿ. ಅಂತಹ ದಿನಗಳಲ್ಲಿ ಇವರ ಕುಟುಂಬ ಹಪ್ಪಳ ಮಾಡಲು ಆರಂಭಿಸಿತು. ಆಮೇಲೆ ಇವರ ಬದುಕಿನ ದಿಕ್ಕೇ ಬದಲಾಯಿತು. ‘ಈಗ ನೀವು ನಿಂತಿದ್ದೀರಲ್ಲ, ಈ ಮನೆ ಕಟ್ಟಿದ್ದೂ ಇದೇ ಹಪ್ಪಳದ ಆದಾಯದಿಂದ. ಇನ್ನೂ ಎರಡು ಮನೆಗಳನ್ನು ಕಟ್ಟಿಸಿದ್ದೇನೆ’ ಎಂದು ತಾರಸಿಯಲ್ಲಿ ಒಣಗುತ್ತಿದ್ದ ಹಪ್ಪಳದತ್ತ ಕೈ ತೋರಿದರು ಹನುಮಂತಪ್ಪ.

ಈ ವ್ಯಾಪ್ತಿಯಲ್ಲಿ 800 ರಿಂದ 900 ಮನೆಗಳಿವೆ. ಅವುಗಳಲ್ಲಿ 600ಕ್ಕೂ ಹೆಚ್ಚು ಮನೆಗಳಲ್ಲಿ ಹಪ್ಪಳ ತಯಾರಿಸಲಾಗುತ್ತದೆ. ಹೆಚ್ಚಿನದಾಗಿ ‌ಮಧ್ಯಮ ಮತ್ತು ಬಡ ಕುಟುಂಬಗಳು ವಾಸಿಸುತ್ತಿರುವ ಇಲ್ಲಿನ ಜನರ ಆದಾಯದ ಪ್ರಮುಖ ಮೂಲವೇ ಹಪ್ಪಳ.

ADVERTISEMENT

ಕಲ್ಲೂಡಿಯಲ್ಲಿ ಹಪ್ಪಳ ಹೀಗೆ ಜೋರಾಗಿ ಸಪ್ಪಳ ಮಾಡಲು ಕಾರಣರಾದವರಲ್ಲಿ ಗಂಗಲಕ್ಷ್ಮಮ್ಮ ಪ್ರಮುಖರು. ಇವರು 1988 ರಲ್ಲಿ ಝಾನ್ಸಿ ರಾಣಿ ಆದರ್ಶ ಮಹಿಳಾ ಸಮಾಜ ಸ್ಥಾಪಿಸಿದರು. ಮಹಿಳೆಯರಿಗೆ ಹೊಲಿಗೆ ತರಬೇತಿ ಕೊಡಿಸಿದರು. ನಂತರ ಕೈಗಾರಿಕಾ ಇಲಾಖೆಯ ‘ವಿಶ್ವ’ ಯೋಜನೆ ಮತ್ತು ‘ಸಮಗ್ರ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ’ದ (ಐಆರ್‌ಡಿಪಿ) ಭಾಗವಾದ ಗ್ರಾಮೀಣ ಪ್ರದೇಶದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ (ಡ್ವಾಕ್ರಾ) ಯೋಜನೆಯಡಿ ಮಹಿಳೆಯರಿಗೆ ಗೃಹೋಪಯೋಗಿ ಆಹಾರ ಪದಾರ್ಥಗಳ ತಯಾರಿಕೆ ಬಗ್ಗೆ ತರಬೇತಿ ಕೊಡಿಸಿದರು. ಹಪ್ಪಳ, ಉಪ್ಪಿನಕಾಯಿ ಸೇರಿದಂತೆ ಗೃಹೋಪಯೋಗಿ ಉತ್ಪನ್ನಗಳು ಈ ಊರಿನಲ್ಲಿ ತಯಾರಾಗಲು ಮುನ್ನುಡಿ ಬರೆದರು. 

ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ದೃಷ್ಟಿಯಿಂದ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಸ್ಥಾಪಿಸಿದರು. ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಅಧ್ಯಕ್ಷೆ, ಗಂಗಲಕ್ಷ್ಮಮ್ಮ ಕಾರ್ಯದರ್ಶಿ. ಈ ರೀತಿ ಕಲ್ಲೂಡಿಯಲ್ಲಿ ಮಹಿಳೆಯರ ಆರ್ಥಿಕಾಭಿವೃದ್ಧಿ ಮತ್ತು ಸ್ವಾವಲಂಬನೆಯ ಆಶಯದೊಂದಿಗೆ ಆರಂಭವಾದ ಹಪ್ಪಳ ತಯಾರಿಕೆ, ಈಗ ಗ್ರಾಮದ ಬಹುತೇಕ ಮನೆಗಳನ್ನು ಬೆಳಗಿದೆ. ಮಹಿಳೆಯರು, ಪುರುಷರು, ಮಕ್ಕಳು, ಇಷ್ಟೇ ಏಕೆ ಸರ್ಕಾರಿ ನೌಕರರೂ ಹಪ್ಪಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ನಮ್ಮೂರ ಹೆಣ್ಣು ಮಕ್ಕಳನ್ನು ಬೇರೆ ಕಡೆಗಳಿಗೆ ಮದುವೆ ಮಾಡಿಕೊಟ್ಟಿದ್ದೇವೆ. ಅವರು ಅಲ್ಲಿಯೂ ಹಪ್ಪಳ ತಯಾರಿಕೆ ಮುಂದುವರೆಸಿದ್ದಾರೆ. ನಮ್ಮೂರಿಗೆ ಸೊಸೆಯಾಗಿ ಬಂದವರೂ ಹಪ್ಪಳ ತಯಾರಿಸುವುದನ್ನು ಕಲಿತಿದ್ದಾರೆ. ಜ್ಯೋತಿ ರೆಡ್ಡಿ ಅವರು ಶಾಸಕಿಯಾಗಿದ್ದಾಗ ಶಾಸಕರ ಭವನದ ಕ್ಯಾಂಟೀನ್‌ನಲ್ಲಿಯೂ ಕಲ್ಲೂಡಿ ಹಪ್ಪಳ ಸ್ಥಾನ ಪಡೆದಿತ್ತು. ರಾಜ್ಯದ ಜನತಾ ಬಜಾರ್‌ಗಳಿಗೂ ಹಪ್ಪಳ ಪೂರೈಸಿದ್ದೇವೆ. ಇದು ನಮ್ಮ ಹಪ್ಪಳದ ಪ್ರಚಾರಕ್ಕೆ ಕಾರಣವಾಯಿತು’ ಎನ್ನುತ್ತಾರೆ ಗಂಗಲಕ್ಷ್ಮಮ್ಮ.

‘ಹಪ್ಪಳಗಳನ್ನು ಮಾರಾಟ ಮಾಡುವಾಗ ಅವಮಾನಗಳನ್ನೂ ಅನುಭವಿಸಿದ್ದೇವೆ. ಆರಂಭದ ದಿನಗಳಲ್ಲಿ ಮಾರುಕಟ್ಟೆಗೆ ಬಹಳ ಕಷ್ಟಪಟ್ಟಿದ್ದೇವೆ. ಈಗ ಎಲ್ಲರೂ ಅವರದ್ದೇ ಮಾರುಕಟ್ಟೆ ಕಂಡುಕೊಂಡಿದ್ದಾರೆ’ ಎಂದು ಖುಷಿಯಿಂದ ಹೇಳಿದರು.

ವಿಶೇಷವೆಂದರೆ ಇಲ್ಲಿನ ಹಪ್ಪಳ ತಯಾರಿಕೆ ಬೃಹತ್ ಉದ್ಯಮದ ರೂಪ ಪಡೆದಿಲ್ಲ. ಯಂತ್ರಗಳು ಆವರಿಸಿಲ್ಲ. ಸಾಂಪ್ರದಾಯಿಕ ರೀತಿಯಲ್ಲಿಯೇ ಮನೆಗಳಲ್ಲಿ ಹಪ್ಪಳ ತಯಾರಿಕೆ ನಡೆಯುತ್ತಿದೆ. ಪ್ರತಿ ಮನೆಯಲ್ಲೂ ಅವರ ಶಕ್ತಾನುಸಾರ ನಿತ್ಯ ಐದು, ಹತ್ತು ಕೆ.ಜಿ ಅಕ್ಕಿಹಿಟ್ಟಿನಿಂದ 25 ಕೆ.ಜಿ ಹಿಟ್ಟಿನವರೆಗೂ ಹಪ್ಪಳ ತಯಾರಿಸುತ್ತಾರೆ. 

‘ನಾನು ಮನೆ ಕಟ್ಟಿದೆ’, ‘ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿದೆ’, ‘ಮದುವೆ ಮಾಡಿದೆ’, ‘ಆಟೊ ಖರೀದಿಸಿದೆ’...ಹೀಗೆ ತಮ್ಮ ಬದುಕಿನ ಆರ್ಥಿಕ ಸಾಧನೆಯ ಶ್ರೇಯವನ್ನು ಹಪ್ಪಳಕ್ಕೆ ಸಮರ್ಪಿಸುವವರು ಮನೆ ಮನೆಯಲ್ಲೂ ಸಿಗುತ್ತಾರೆ.

‘ನಾವು ಬಾಡಿಗೆ ಮನೆಯಲ್ಲಿ ವಾಸವಿದ್ದೇವೆ. ಜಮೀನಿಲ್ಲ. ಹಪ್ಪಳ ಇಲ್ಲದೇ ಹೋಗಿದ್ದರೆ ನಮ್ಮ ಪಾಡು ಹೇಳುವುದೇ ಕಷ್ಟವಾಗುತ್ತಿತ್ತು’ ಎನ್ನುವ ಭಾಗ್ಯಮ್ಮ, ‘ತಿಂಗಳಿಗೆ ಕನಿಷ್ಠ ₹15 ಸಾವಿರ ದುಡಿಮೆ ಆಗುತ್ತಿದೆ. ಮತ್ತಷ್ಟು ಗಳಿಸಲು ಅವಕಾಶವಿದೆ. ಆದರೆ ನಾವು ನಮ್ಮ ಕೈಯಲ್ಲಾದಷ್ಟು ಮಾತ್ರ ಮಾಡುತ್ತಿದ್ದೇವೆ. ಕೆಲವರು ಮನೆ ಬಾಗಿಲಿಗೆ ಬಂದು ಹಪ್ಪಳ ಖರೀದಿಸುತ್ತಾರೆ’ ಎನ್ನುವ ಸರಸ್ವತಮ್ಮ ಅವರ ಮಾತುಗಳೇ ಕಲ್ಲೂಡಿಯ ಹಲವು ಮಹಿಳೆಯರ ಮಾತುಗಳಾಗಿವೆ.

ಓದಿಗೂ ಆಸರೆ

‘ಆಗ ಬಿ.ಇಡಿ ಓದುತ್ತಿದ್ದೆ. ಮನೆಯಲ್ಲಿ ತುಂಬಾ ಬಡತನ. ಏನಾದರೂ ಮಾಡಿ ನಾನೇ ಹಣ ಸಂಪಾದಿಸಿ ಓದು ಪೂರ್ಣಗೊಳಿಸಬೇಕು ಎನ್ನುವ ಛಲವಿತ್ತು. ನಮ್ಮೂರಿನ ಒಬ್ಬರ ಬಳಿ ₹100ಕ್ಕೆ ಹಪ್ಪಳ ಖರೀದಿಸಿದೆ. ಅದನ್ನು ಬೆಂಗಳೂರಿನಲ್ಲಿ ₹ 300ಕ್ಕೆ ಮಾರಾಟ ಮಾಡಿದೆ. ಹಪ್ಪಳದಲ್ಲಿ ದುಡ್ಡಿದೆ ಎನ್ನುವುದು ಆಗಲೇ ಗೊತ್ತಾಯಿತು. ಅಲ್ಲಿಂದ ಹಪ್ಪಳದ ಕಾಯಕದಲ್ಲಿ ತೊಡಗಿದ್ದೇನೆ’ ಎನ್ನುತ್ತಾರೆ ಮಂಜುನಾಥ್.

ಈಗ ಮಂಜುನಾಥ್ ನಿತ್ಯ 100 ಕೆ.ಜಿಯಷ್ಟು ಅಕ್ಕಿಹಿಟ್ಟಿನ ಹಪ್ಪಳ ತಯಾರಿಸುತ್ತಾರೆ. ಗ್ರಾಮದಲ್ಲಿ ಗುಡಿ ಕೈಗಾರಿಕೆ ರೀತಿಯಲ್ಲಿ ಹಪ್ಪಳ ತಯಾರಿಸುತ್ತಿರುವವರು ಇವರೊಬ್ಬರೇ. ಇವರ ಘಟಕದಲ್ಲಿ ನಿತ್ಯ ಹತ್ತು ಮಂದಿ ಕೆಲಸ ಮಾಡುತ್ತಾರೆ. 

‘ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಹಪ್ಪಳ ತಯಾರಿಸುತ್ತಿದ್ದೆ. ಕ್ರಮೇಣ ದೊಡ್ಡ ಪ್ರಮಾಣಕ್ಕೆ ಕೈಹಾಕಿದೆ. ನಾನು ಓದಿ ಕೆಲಸ ಪಡೆದಿದ್ದು ಅಷ್ಟೇ ಅಲ್ಲ, ನನ್ನ ತಂಗಿಯರನ್ನು ಇದೇ ದುಡಿಮೆಯಿಂದಲೇ ಮದುವೆ ಮಾಡಿದೆ. ನನ್ನ ಮಗ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇಲ್ಲಿಗೆ ಬಂದು ಕೆಲಸ ಮಾಡು, ಅವರಿಗಿಂತ ಹೆಚ್ಚು ಸಂಬಳ ಕೊಡುತ್ತೇನೆ ಎಂದು ಹೇಳಿದ್ದೇನೆ. ಹಪ್ಪಳದಲ್ಲಿ ಒಳ್ಳೆಯ ಆದಾಯವಿದೆ. ಗುಣಮಟ್ಟ ಕೊಡಬೇಕು ಅಷ್ಟೆ’ ಎನ್ನುತ್ತಾರೆ ಮಂಜುನಾಥ್. 

ಕಲ್ಲೂಡಿಯ ಜನರು ಬೆಂಗಳೂರಿಗೆ ಹಪ್ಪಳ ತೆಗೆದುಕೊಂಡು ಹೋಗಲು ಇರುವ ಕಡಿಮೆ ಖರ್ಚಿನ ಮಾರ್ಗವೆಂದರೆ ರೈಲುಗಳು. ಬೆಳಿಗ್ಗೆ 7 ಮತ್ತು 8ಕ್ಕೆ ಗೌರಿಬಿದನೂರಿನಿಂದ ಬೆಂಗಳೂರಿಗೆ ಹೋಗುವ ರೈಲುಗಳ ಮೂಲಕ ಹಪ್ಪಳವನ್ನು ಕೊಂಡೊಯ್ಯಲಾಗುತ್ತದೆ. ಕೆಲವರು ದೊಡ್ಡ ಪ್ರಮಾಣದಲ್ಲಿ ಹಪ್ಪಳವನ್ನು ಜೀಪುಗಳಲ್ಲಿ ತುಂಬಿಸಿ ರಾಜಧಾನಿಗೆ ಮುಟ್ಟಿಸುತ್ತಾರೆ.

ಬೆಂಗಳೂರಿಗೆ ಹಪ್ಪಳ ಸಾಲದು

ಬೆಂಗಳೂರಿನ ಹೋಟೆಲ್‌ಗಳು, ಮಾಲ್‌ಗಳು, ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಕಲ್ಲೂಡಿ ಹಪ್ಪಳಕ್ಕೆ ಬಲು ಬೇಡಿಕೆ. ಬಹಳಷ್ಟು ಮಂದಿ ಮನೆಗಳಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಮದುವೆ ಸೇರಿದಂತೆ ವಿವಿಧ ಸಮಾರಂಭಗಳಿಗೆ ಅಡುಗೆ ಸಿದ್ಧಗೊಳಿಸುವ ಬಾಣಸಿಗರು ಸಹ ಇಲ್ಲಿಂದ ಹಪ್ಪಳ ಖರೀದಿಸುತ್ತಾರೆ. ನೂರಾರು ಬ್ಯಾಗುಗಳಲ್ಲಿ ಬೆಂಗಳೂರಿಗೆ ಕಲ್ಲೂಡಿ ಹಪ್ಪಳ ನಿತ್ಯ ಪೂರೈಕೆ ಆಗುತ್ತದೆ. ತಯಾರಕರೇ ಹಪ್ಪಳವನ್ನು ಗ್ರಾಹಕರಿಗೆ ತಲುಪಿಸಿದರೆ ಒಂದು ಸಾವಿರ ಹಪ್ಪಳಕ್ಕೆ ₹800ರಿಂದ ₹900. ಅದೇ ಗ್ರಾಹಕರೇ ಕಲ್ಲೂಡಿಗೆ ಬಂದು ಖರೀದಿಸಿದರೆ ಬೆಲೆ ಸ್ವಲ್ಪ ಕಡಿಮೆ ಆಗುತ್ತದೆ. 

‘ಬೆಂಗಳೂರಿನ ಜೊತೆಗೆ ದೊಡ್ಡಬಳ್ಳಾಪುರ, ಸಮೀಪವೇ ಇರುವ ಆಂಧ್ರಪ್ರದೇಶದ ಹಿಂದೂಪುರ ಸೇರಿದಂತೆ ವಿವಿಧ ಕಡೆಗಳಿಗೆ ಹಪ್ಪಳ ಪೂರೈಕೆ ಆಗುತ್ತದೆ. ಕೆಲವರು ಇಲ್ಲಿ ಸಗಟು ದರದಲ್ಲಿ ಖರೀದಿಸಿ ಅವುಗಳನ್ನು ವಿದೇಶಕ್ಕೂ ಕಳುಹಿಸುತ್ತಾರೆ. ‘ಮಹಾಸಾಗರದ ರೀತಿ ಜನರಿರುವ ಬೆಂಗಳೂರಿಗೆ ನಮ್ಮ ಹಪ್ಪಳ ಯಾವ ಮೂಲೆಗೂ ಸಾಲದು’ ಎನ್ನುತ್ತಾರೆ ಹಪ್ಪಳ ತಯಾರಕರು. ನಿತ್ಯ ದೊಡ್ಡ ಪ್ರಮಾಣದಲ್ಲಿ ಹಪ್ಪಳ ತಯಾರಿಸಿದರೂ ಸಂಗ್ರಹವಾಗುವುದಿಲ್ಲ. ಹಪ್ಪಳ ಒಣಗುತ್ತಿದ್ದಂತೆ ಮಾರುಕಟ್ಟೆಗೆ ರವಾನಿಸಲಾಗುತ್ತದೆ. 

ಸಿದ್ಧವಾಗುತ್ತಿವೆ ಹಪ್ಪಳ

ಪ್ರೀತಿ, ಸಂಬಂಧಗಳ ಸೇತುವೆ

ಸಾಮಾನ್ಯವಾಗಿ ವ್ಯಾಪಾರ ವಹಿವಾಟುಗಳಲ್ಲಿ ಸ್ಪರ್ಧೆ, ಪೈಪೋಟಿ ಸಾಮಾನ್ಯ. ಆದರೆ ಇಲ್ಲಿ ಬಹುತೇಕ ಮನೆಗಳಲ್ಲಿ ಹಪ್ಪಳದ ವಹಿವಾಟು ನಡೆದರೂ ಸ್ಪರ್ಧೆಯಿಲ್ಲ. ಪರಸ್ಪರ ಸಹಕಾರವಿದೆ. ‘ಎಲ್ಲರೂ ಬದುಕಲಿ’ ಎನ್ನುವ ತತ್ವವಿದೆ. ದೊಡ್ಡ ಆರ್ಡರ್‌ಗಳು ಒಬ್ಬರಿಗೇ ಸಿಕ್ಕರೆ ಅವರು ನೆರೆಹೊರೆಯವರ ಮನೆಗಳ ಹಪ್ಪಳಗಳನ್ನೂ ಜೊತೆಯಲ್ಲಿ ಕೊಂಡೊಯ್ಯುತ್ತಾರೆ.

ಚಳಿಗಾಲ ಮತ್ತು ಬೇಸಿಗೆಯ ದಿನಗಳಲ್ಲಿ ಹಪ್ಪಳ ತಯಾರಿಕೆ ಜೋರಾಗಿರುತ್ತದೆ. ಮಳೆಗಾಲದಲ್ಲಿ ಹಪ್ಪಳವನ್ನು ಒಣಹಾಕಲು ಕಷ್ಟವಾಗುವುದರಿಂದ ಕಡಿಮೆ ಆಗುತ್ತದೆ. ಆ ದಿನಗಳಲ್ಲಿ ಮೋಡ ಮತ್ತು ಮಳೆಯನ್ನು ಆಧರಿಸಿ ಹಪ್ಪಳ ತಯಾರಿಕೆ ನಡೆಯುತ್ತದೆ.

ದೀರ್ಘವಾಗಿ ಮಳೆ ಸುರಿಯುವ ಮತ್ತು ಮೋಡ ಕಟ್ಟಿದ ದಿನಗಳಲ್ಲಿ ಕಲ್ಲೂಡಿಯ ಜನರಿಗೆ ಬಿಡುವು. ಬಿಸಿಲು ಯಾವಾಗ ಮೂಡುತ್ತದೆ ಎಂದು ಆಗಸದತ್ತ ನೋಡುತ್ತಲೇ ಇರುತ್ತಾರೆ. ಇಲ್ಲದಿದ್ದರೆ ವರ್ಷವಿಡೀ ಇಲ್ಲಿನ ಮನೆಗಳ ತಾರಸಿಯಲ್ಲಿ ಹಪ್ಪಳ ಒಣಗುತ್ತದೆ. ಬದುಕು ನಡೆಯುತ್ತದೆ. ಮಕ್ಕಳ ಓದು, ಮಗಳ ಮದುವೆ, ಮಗನ ಉನ್ನತ ಶಿಕ್ಷಣ, ಮನೆ ಕಟ್ಟುವುದು, ಸೈಟ್‌, ಒಡವೆ, ವಾಹನ ಖರೀದಿಸುವುದು... ಎಲ್ಲವೂ ಗರಿಗೆದರುತ್ತವೆ.

ಬೆಂಗಳೂರಿಗೆ ರೈಲಿನಲ್ಲಿ ಹೊರಟ ಕಲ್ಲೂಡಿ ಹಪ್ಪಳ

ವೃದ್ಧರಿಗೆ ಉದ್ಯೋಗ

ವೃದ್ಧರಿಗೆ ದುಡಿಮೆ ಕಷ್ಟ ಎನ್ನುವ ಮಾತು ಇಲ್ಲಿ ಅಪವಾದ. ಪ್ರತಿ ಮನೆ ಅಂಗಳ ಅಥವಾ ತಾರಸಿಯಲ್ಲಿ ನಡೆಯುವ ಹಪ್ಪಳದ ಕೆಲಸದಲ್ಲಿ ಕನಿಷ್ಠ ಒಬ್ಬರಾದರೂ ವೃದ್ಧರು ತೊಡಗಿಸಿಕೊಂಡಿರುತ್ತಾರೆ. ಕೆಲವು ಕಡೆ ಹಿರಿಯ ಜೀವಗಳೇ ಪೂರ್ಣವಾಗಿ ಹಪ್ಪಳ ಸಿದ್ಧಗೊಸುತ್ತವೆ. ವೃದ್ಧಾಪ್ಯದಲ್ಲಿಯೂ ಸ್ವಾವಲಂಬನೆ ಮತ್ತು ಜೀವನೋತ್ಸಾಹದಿಂದ ದುಡಿಮೆಯಲ್ಲಿ ತೊಡಗಿಸಿಕೊಂಡಿರುವುದನ್ನು ಇಲ್ಲಿ ನೋಡುವುದೇ ಚೆಂದ.

‘ಮನೆಯಲ್ಲಿ ಕುಳಿತು ಕಾಲಹರಣ ಮಾಡುವುದಕ್ಕಿಂತ ಇಲ್ಲಿ ಹಪ್ಪಳ ಒತ್ತುವ ಕೆಲಸ ಮಾಡುತ್ತೇನೆ’ ಎನ್ನುವ ಹಿರಿಯರ ಸಂಖ್ಯೆ ಇಲ್ಲಿ ಬಹಳಷ್ಟಿದೆ. 

ಹಪ್ಪಳ ಒತ್ತುವ ಕೆಲಸ ಬಹಳಷ್ಟು ಹಿರಿಯರಿಗೆ, ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡಿದೆ. ಒಂದು ಸೀರೆ (ಒಂದು ಸೀರೆ ಹಾಸಿ ಅದರ ತುಂಬಾ ಹಪ್ಪಳ ಒತ್ತುವುದು) ಹಪ್ಪಳ ಒತ್ತಿದರೆ ₹30 ಕೂಲಿ ಸಿಗುತ್ತದೆ. ಬೆಳಿಗ್ಗೆ 6ರಿಂದ 10ರವರೆಗೆ ₹400ರಿಂದ ₹500 ಗಳಿಸಬಹುದು.

ದೊಡ್ಡೋರ್‌ ಜೊತೆ ಸೇರಿ ನಾವೂ ಹಪ್ಳ ಮಾಡ್ತೀವಿ....  

ಹಪ್ಪಳ ತಯಾರಿಯಲ್ಲಿ ನಿರತ ಜನರು 

ವೃದ್ಧರಿಗೆ ಉದ್ಯೋಗ

ವೃದ್ಧರಿಗೆ ದುಡಿಮೆ ಕಷ್ಟ ಎನ್ನುವ ಮಾತು ಇಲ್ಲಿ ಅಪವಾದ. ಪ್ರತಿ ಮನೆ ಅಂಗಳ ಅಥವಾ ತಾರಸಿಯಲ್ಲಿ ನಡೆಯುವ ಹಪ್ಪಳದ ಕೆಲಸದಲ್ಲಿ ಕನಿಷ್ಠ ಒಬ್ಬರಾದರೂ ವೃದ್ಧರು ತೊಡಗಿಸಿಕೊಂಡಿರುತ್ತಾರೆ. ಕೆಲವು ಕಡೆ ಹಿರಿಯ ಜೀವಗಳೇ ಪೂರ್ಣವಾಗಿ ಹಪ್ಪಳ ಸಿದ್ಧಗೊಸುತ್ತವೆ. ವೃದ್ಧಾಪ್ಯದಲ್ಲಿಯೂ ಸ್ವಾವಲಂಬನೆ ಮತ್ತು ಜೀವನೋತ್ಸಾಹದಿಂದ ದುಡಿಮೆಯಲ್ಲಿ ತೊಡಗಿಸಿಕೊಂಡಿರುವುದನ್ನು ಇಲ್ಲಿ ನೋಡುವುದೇ ಚೆಂದ. ‘ಮನೆಯಲ್ಲಿ ಕುಳಿತು ಕಾಲಹರಣ ಮಾಡುವುದಕ್ಕಿಂತ ಇಲ್ಲಿ ಹಪ್ಪಳ ಒತ್ತುವ ಕೆಲಸ ಮಾಡುತ್ತೇನೆ’ ಎನ್ನುವ ಹಿರಿಯರ ಸಂಖ್ಯೆ ಇಲ್ಲಿ ಬಹಳಷ್ಟಿದೆ. 

ಹಪ್ಪಳ ಒತ್ತುವ ಕೆಲಸ ಬಹಳಷ್ಟು ಹಿರಿಯರಿಗೆ ಹೆಣ್ಣು ಮಕ್ಕಳಿಗೆ ಉದ್ಯೋಗ ನೀಡಿದೆ. ಒಂದು ಸೀರೆ (ಒಂದು ಸೀರೆ ಹಾಸಿ ಅದರ ತುಂಬಾ ಹಪ್ಪಳ ಒತ್ತುವುದು) ಹಪ್ಪಳ ಒತ್ತಿದರೆ ₹30 ಕೂಲಿ ಸಿಗುತ್ತದೆ. ಬೆಳಿಗ್ಗೆ 6ರಿಂದ 10ರವರೆಗೆ ₹400ರಿಂದ ₹500 ಗಳಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.