ಕುವೆಂಪು
ಚಾಚರೆ
ಚಾಚರೆ (ನಾ). ಮುಂದಕ್ಕೆ ಚಾಚಿಕೊಂಡಿರುವ ಬಂಡೆ, -ಕಲ್ಲು.
(ಚಾಚು + ಅರೆ)
ಕುವೆಂಪು ಅವರು ಮಹೇಂದ್ರಾಚಲ ಪರ್ವತವನ್ನು ದಕ್ಷಿಣಾಂಬುಧಿಗೆ ಬೇಹುಗಡಿಯಂತೆ ಮುಗಿಲು ಮುಟ್ಟಿತ್ತು ಎಂದು ಚಿತ್ರಿಸಿದ್ದಾರೆ. ಅದು ಸಂಪಾತಿಯು ವಾನರರಿಗೆ ಸೀತೆಯನ್ನು ಕದ್ದೊಯ್ದ ರಾವಣನಿರುವುದು ಲಂಕೆಯಲ್ಲಿ ಎಂದು ತಿಳಿಸುವ ತಾಣವಾಗಿದೆ. ಹಾಗಾಗಿ ಕವಿ ಅದನ್ನು ರಾವಣನ ಆಯಸ್ಸಿನ ಲಿಖಿತಕ್ಕೆ ವಿಧಿಯ ತೋರುಬೆರಳಿನಂತಿತ್ತು ಎಂದು ಧ್ವನಿಪೂರ್ಣವಾಗಿ ಬಣ್ಣಿಸಿದ್ದಾರೆ.
ಆ ಮುದಿಹದ್ದು ಸಂಪಾತಿ ಸದಾ ಕುಳಿತಿರುತ್ತಿದ್ದ ಮಹೇಂದ್ರಾಚಲ ಮುಂದಕ್ಕೆ ಚಾಚಿಕೊಂಡಿರುವ ಬಂಡೆಯನ್ನು ಕವಿ ‘ಚಾಚರೆ’ ಎಂಬ ಪದ ನಿರ್ಮಿಸಿ ಚಿತ್ರಿಸಿದ್ದಾರೆ.
ಬಾನ್ ಬಟ್ಟೆಯಲೆವ
ಬರ್ದಿಲರಾ ಚಾಚರೆಯೊಳೇಗಳುಂ ಕುಳಿತಿರ್ದ
ಶಿಖರಗಾತ್ರದ ಪರ್ದ್ದು ಮುದಿಯನಂ ಕಂಡದಕೆ
‘ಶಕುನಿಶಿಲೆ’ ಹೆಸರಿಟ್ಟರನ್ವರ್ಥಮಂ. (2.10 : 38-41)
ಅಳಲಿನಗ್ಗಿ
ಅಳಲ್ (ಲು) (ನಾ). ದುಃಖ; ಶೋಕ; ಪ್ರಲಾಪ
(ಕ್ರಿ). ದುಃಖಿಸು; ಶೋಕಿಸು; ವ್ಯಥೆಪಡು
ಅಗ್ಗಿ (ಅಗಿನಿ) (ನಾ). ಅಗ್ನಿ; ಬೆಂಕಿ; ಉರಿ; ಕಿಚ್ಚು
ಕುವೆಂಪು ಅವರು ‘ಕುಮುದಿನಿ’ ಕಥನ ಕವನದಲ್ಲಿ ವಿರಹಿಣಿಯ ತಾಪವನ್ನು ವರ್ಣಿಸಲು ‘ಅಳಲಿನಗ್ಗಿ’ ಪದ ರೂಪಿಸಿ ಪ್ರಯೋಗಿಸಿದ್ದಾರೆ. ಆ ನಳಿನಾಕ್ಷಿ ಕುಮುದಿನಿಯು ನೋಡುವವರ ಕಣ್ಣುಗಳಿಗೆ ದುಃಖದ ಬೆಂಕಿಯಲ್ಲಿ ಉರುಳಿ ಬೆಂದಿರುವ ತಾವರೆಯಂತಿದ್ದಳು ಎಂದು ಅವಳ ವಿರಹಾವಸ್ತೆಯನ್ನು ಚಿತ್ರಿಸಿದ್ದಾರೆ. ನಕಾರದ ಒಳಪ್ರಾಸದಲ್ಲಿ ಅವಳ ನಗ್ಗಿ ಹೋದ ಮನಸ್ಥಿತಿಯನ್ನು ಹೀಗೆ ವ್ಯಕ್ತಪಡಿಸಿದ್ದಾರೆ:
‘ಅಳಲಿನಗ್ಗಿಯಲುರುಳಿ ಬೆಂದಿಹ
ನಳಿನದಂದದೊಳಿದ್ದಳಾ ನಳಿ-
ನಾಕ್ಷಿ ಕಂಗಳಿಗೆ!’
(ಕುಮುದಿನಿ - ಕಥನ ಕವನಗಳು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.