
‘ಕೊಡಲ್ಲ ಅಂದ್ರೆ ಕೊಡಲ್ಲ’ ನಾಟಕವು ಜಗತ್ತಿನ ಪ್ರಖ್ಯಾತ ನಾಟಕಕಾರ ದಾರಿಯೋ ಫೋ ಬರೆದ ‘ಕಾಂಟ್ ಪೇ ವೋಂಟ್ ಪೇ’ ನಾಟಕದ ರೂಪಾಂತರ. ಪ್ರಭುತ್ವ ತಂದೊಡ್ಡುವ ಆರ್ಥಿಕ ಸಂಕಟಗಳು, ತೆರಿಗೆಯ ಭಾರಗಳು ಜನಸಾಮಾನ್ಯರನ್ನು ಹಿಂಡಿಹಿಪ್ಪೆ ಮಾಡಿರುವ ಕಥನವಿದು. ಭ್ರಷ್ಟ ವ್ಯವಸ್ಥೆಯಲ್ಲಿ ಮನುಷ್ಯರು ಮನುಷ್ಯರಲ್ಲ, ಅವರು ಕೇವಲ ತೆರಿಗೆದಾರರು. ಪ್ರಭುತ್ವದ ಬೇಟೆಯನ್ನು ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿರುವವರು. ಮೂಲ ಕಥಾ ಹಂದರವನ್ನು ಹಾಗೇ ಇಟ್ಟುಕೊಂಡು ಸಂದರ್ಭಕ್ಕೆ ತಕ್ಕ ಸಂಭಾಷಣೆಗಳನ್ನು ನಿರ್ದೇಶಕ, ನಟರು ತಾವೇ ಸಂಯೋಜಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಭಾಷೆಯನ್ನಾಡುವ ಕುಟುಂಬ, ಮಂಗಳೂರು ಕನ್ನಡವನ್ನಾಡುವ ಕುಟುಂಬ ನಾಟಕದ ಕೇಂದ್ರದಲ್ಲಿವೆ. ಆದರೆ ನಿಜಕ್ಕೂ ನಾಟಕದ ಕೇಂದ್ರದಲ್ಲಿರುವುದು ವ್ಯವಸ್ಥೆ ರೂಪಿಸಿದ ಕೃತಕ ಅಭಾವ, ಖಾಸಗಿ ಜೀವನಕ್ಕೂ ಪ್ರವೇಶಿಸಿದ ಪ್ರಭುತ್ವದ ಕಣ್ಗಾವಲು. ನಗು, ವಿಷಾದ, ಅಸಹಾಯಕತೆ, ರೊಚ್ಚು, ತಳಮಳ, ಪ್ರತಿಭಟನೆ ಏಕಕಾಲಕ್ಕೆ ಹಲವು ಬಣ್ಣಗಳಾಗಿ ರಂಗದ ಮೇಲೆ ಚೆಲ್ಲಿಕೊಂಡಿದ್ದವು. ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಈ ನಾಟಕ ವ್ಯವಸ್ಥೆಯ ಹುಣ್ಣುಗಳನ್ನು ಕಾಣಿಸಲು ಮರೆಯುವುದಿಲ್ಲ.
ಮನುಷ್ಯರನ್ನು ಹಣಿಯಲು ಬಯಸುವ ವ್ಯವಸ್ಥೆ, ವ್ಯವಸ್ಥೆಯನ್ನು ಹಣಿಯಲು ಹೊರಡುವ ಮನುಷ್ಯರು. ವ್ಯವಸ್ಥೆಯ ಕ್ರೂರ ತಂತ್ರಗಳು, ಸೆಡ್ಡುಹೊಡೆವ ಮನುಷ್ಯರ ಹುಂಬುತನಗಳು. ಇದು ಚರಿತ್ರೆ, ವರ್ತಮಾನ ಮತ್ತು ಭವಿಷ್ಯದಲ್ಲೂ ಮುಗಿಯದ ಆಟ. ಎಲ್ಲೆಲ್ಲೂ ಕಂಡುಬರುವ, ಕಾಣುತ್ತಿರುವ ಆಟ. ಪಡೆದೇ ಪಡೆಯುತ್ತೇವೆ ಅಂತ ವ್ಯವಸ್ಥೆ, ಕೊಡಲ್ಲ ಅಂದ್ರೆ ಕೊಡಲ್ಲ ಅಂತ ಮನುಷ್ಯರು. ಈ ಹಗ್ಗಜಗ್ಗಾಟವೇ ಇಲ್ಲಿನ ನಾಟಕ. ಇದು ಯಾರದೋ ಸೋಲು ಗೆಲುವಿನ ಪ್ರಶ್ನೆಯಲ್ಲ. ಬದುಕಿಗೆ ಒದಗಿರುವ ವಿಚಿತ್ರ ಸಂಕಟ. ಜಗ್ಗದ, ಬಗ್ಗದ ಸಮುದಾಯದ ಚಡಪಡಿಕೆ. ಬಿಡುಗಡೆಯ ಕನಸು. ಗೆದ್ದೇ ಗೆಲ್ಲುವೆವೆಂಬ ಕನಸು ಕೂಡ ಗೆಲುವಿನ ಒಂದು ಭಾಗ.
ಪ್ರಭುತ್ವ ಸೃಷ್ಟಿ ಮಾಡಿರುವ ಈ ಸಂಕಟ ಹೀನಾಯವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ನಾಟಕದ ಉದ್ದೇಶ ಇದಿಷ್ಟೇ ಅಲ್ಲ. ಈ ಸಂಕಟ ಶಾಶ್ವತವೆಂದು ನಂಬುವ ಮನಸ್ಥಿತಿ ಇನ್ನೂ ಹೀನಾಯವಾದದ್ದು. ನಾಟಕದ ನಗುವಿನ ಸ್ಫೋಟವಿರುವುದು ಇಂಥ ಮನಸ್ಥಿತಿಯ ಮೇಲೆ. ಅರ್ಥವಿಲ್ಲದ ನೂರಾರು ಯೋಜನೆಗಳು, ಯೋಜನೆಗಳಿಗಿಂತ ಹೆಚ್ಚು ತೆರಿಗೆಗಳು. ಅದಕ್ಕೇನೆ ‘ಕೊಡಲ್ಲ ಅಂದ್ರೆ ಕೊಡಲ್ಲ’ ಅಂತ ರೊಚ್ಚಿಗೆದ್ದಿದ್ದಾರೆ. ಪ್ರಜಾಪ್ರಭುತ್ವದ ಸೌಂದರ್ಯವೇ ಈ ಜನಸಾಮಾನ್ಯರ ರೊಚ್ಚು. ಈ ರೊಚ್ಚು ಪ್ರಭುತ್ವದ ಬುಡಕ್ಕೆ ನೀರನ್ನೂ, ಬೆಂಕಿಯನ್ನೂ ಇಡಬಲ್ಲಷ್ಟು ತೀವ್ರವಾಗಿತ್ತು.
ಸೂಪರ್ ಮಾರ್ಕೆಟ್‌ನಿಂದ ಕದ್ದು ತಂದ ದಿನಸಿಗಳನ್ನು ತಮ್ಮ ಗಂಡಂದಿರಿಗೆ ಕಾಣಿಸದಂತೆ ಹೊಟ್ಟೆಯಲ್ಲಿಟ್ಟುಕೊಂಡು ಬಸಿರೆಂದು ನಟಿಸುವ ಹೆಂಗಸರು, ಒಳಗಿರುವ ಪುಟ್ಟನಿಗೆ ಏನೂ ಆಗಬಾರದೆಂದು ಒದ್ದಾಡುವ ಗಂಡಸರು, ಕದ್ದ ಮಾಲಿನ ತಪಾಸಣೆಗೆ ಬರುವ ಪೊಲೀಸ್, ಇನ್‌ಸ್ಪೆಕ್ಟರ್ ಎಲ್ಲರೂ ಒಬ್ಬರಿಗೊಬ್ಬರು ಬೆನ್ನು ಹತ್ತಿದವರು. ದಿಕ್ಕು ತಪ್ಪಿದ ಈ ಓಟದಲ್ಲಿ ಒಬ್ಬರ ಬದುಕನ್ನು ಮತ್ತೊಬ್ಬರು ಅಡ್ಡಡ್ಡ ಹಾಯುತ್ತಿದ್ದಾರೆ. ಇವರನ್ನು ಓಡಿಸುತ್ತಲೇ ಇರುವ ವ್ಯವಸ್ಥೆ ಇನ್ನಷ್ಟು ಹೊಸ ತಂತ್ರಗಳನ್ನು ಹೆಣೆಯುತ್ತಿದೆ.
ಪ್ರೇಕ್ಷಕರನ್ನೂ ನಾಟಕ ತನ್ನ ಪ್ರಯೋಗದ ಭಾಗವಾಗಿಸಿಕೊಂಡಿದೆ. ನಾಟಕದ ಪಾತ್ರಗಳು ಮಾತ್ರವಲ್ಲ, ಪ್ರೇಕ್ಷಕರೂ ಕೂಡ ವ್ಯವಸ್ಥೆಯ ಉರಿಗೆ ಒಳಗಾದವರೆ. ಪ್ರೇಕ್ಷಕರೊಂದಿಗೆ ಮಾತನಾಡುತ್ತ, ಕದ್ದ ಮಾಲನ್ನು ಪ್ರೇಕ್ಷಕರ ಕೈಯಿಂದ ದಾಟಿಸುತ್ತ, ರಂಗದ ಮೇಲೂ, ಕೆಳಗೂ ಲವಲವಿಕೆಯ ವಾತಾವರಣ ಉಂಟುಮಾಡಲಾಗಿತ್ತು. ಬಹುತೇಕ ಪಾತ್ರಗಳ ಪ್ರವೇಶ ರಂಗದ ಬದಿಗಳಿಂದ ಅಲ್ಲ, ಪ್ರೇಕ್ಷಕರ ನಡುವಿನಿಂದಲೇ ಜರುಗಿತ್ತು. ಇದು ಹಳೆಯ ತಂತ್ರವಾದರೂ ನಾಟಕದ ವಸ್ತುವಿಗೆ, ನಾಟಕೀಯತೆಗೆ ಹೊಂದುವಂತೆ ಸಹಜ ಕಲಾತ್ಮಕತೆಯಿಂದ ರೂಪಿಸಲಾಗಿತ್ತು. ಕೆಲವು ಕಡೆ ಮಾತಿನ ವಾಚಾಳಿತನಕ್ಕೆ, ಅಶ್ಲೀಲ ಓಟಕ್ಕೆ ಕೊಂಚ ತಡೆ ಒಡ್ಡಬಹುದಿತ್ತು. ರಂಗದ ಮೇಲೆ ಸಲ್ಮಾ ದಂಡಿನ್, ಚರಿತಾ ಶಾರದಾ, ದಿನೇಶ್ ನಾಯ್ಕ್, ಚರಿತ್ ಸುವರ್ಣ ಮತ್ತು ಮಂಜುನಾಥ ಮಂಡಲಗೇರಿ ಪಾತ್ರಗಳಿಗೆ ಜೀವತುಂಬಿ ಅಭಿನಯಿಸಿದರು. ಸರಳ ರಂಗಸಜ್ಜಿಕೆ ಮತ್ತು ವಸ್ತ್ರವಿನ್ಯಾಸದಿಂದ ಗಮನಸೆಳೆದವರು ಎಚ್.ಕೆ.ಶ್ವೇತಾರಾಣಿ. ಬೆಳಕಿನ ವಿನ್ಯಾಸ, ನಿರ್ವಹಣೆ ಮಂಜುನಾಥ ಹಿರೇಮಠ ಮತ್ತು ಆಸಿಫ್ ಹೂವಿನ ಹಡಗಲಿ, ಪರಿಕರಗಳ ಸಂಯೋಜನೆ ವಿನೀತ್ ಕುಮಾರ್ ಚಿಕ್ಕಮಗಳೂರು ಅವರದು. ಯಾವುದೂ ಪ್ರಯೋಗಕ್ಕೆ ಭಾರವಾಗದಂತೆ ಸಂಯೋಜಿಸಲಾಗಿತ್ತು.
ಕನ್ನಡ ರಂಗಭೂಮಿಯಲ್ಲಿ ಹೊಸ ರಂಗಶೈಲಿ ಹುಟ್ಟುಹಾಕುತ್ತಿರುವ ಶಕೀಲ್ ಅಹ್ಮದ್‌ರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಅಚ್ಚರಿ ಪಡುವಷ್ಟು ವಿನೂತನವಾಗಿತ್ತು. ಇದು ಇತ್ತೀಚಿನ ದಿನಗಳಲ್ಲಿ ಕನ್ನಡ ರಂಗಭೂಮಿಯ ಅತ್ಯುತ್ತಮ ಪ್ರಯೋಗಕ್ಕೆ ಸಾಕ್ಷಿಯಾಗಿತ್ತು. ಅನುಷ್ ಶೆಟ್ಟಿಯ ಸಂಗೀತ ಸಂಯೋಜನೆ ನಾಟಕದ ತೀವ್ರತೆ, ತಳಮಳವನ್ನು ಯಶಸ್ವಿಯಾಗಿ ದಾಟಿಸಿತ್ತು. ಸಂಗೀತವು ನಾಟಕದ ಅಲಂಕಾರವಾಗಿ ಅಲ್ಲ, ಅದರ ಭಾಗವಾಗಿಯೇ ಬಂದಿತ್ತು. ರ‍್ಯಾಪ್ ಮಾದರಿಯ ಹಾಡುಗಾರಿಕೆ, ಸ್ವರವಿನ್ಯಾಸ ನಾಟಕದ ಭಾವಜಗತ್ತನ್ನು ವೈವಿಧ್ಯಪೂರ್ಣವಾಗಿ ರೂಪಿಸಿತ್ತು. ಅದು ನಾಟಕದ ಧ್ವನಿಯನ್ನು ಇನ್ನೂ ಗಾಢವಾಗಿಸಿತು. ‘ನಿರ್ದಿಂಗತ’ದ ಈ ಪ್ರಸ್ತುತಿ ಪ್ರೇಕ್ಷಕರ ಅಭಿರುಚಿಯನ್ನು ಪಲ್ಲಟಿಸುವಷ್ಟು ದಕ್ಷವಾಗಿದೆ. ಇಂಥ ರಂಗಪ್ರಯೋಗಗಳು ಖಂಡಿತಾ ಪ್ರೇಕ್ಷಕರ ರಂಗಪರಿಕಲ್ಪನೆಯನ್ನು ವಿಸ್ತರಿಸುತ್ತವೆ.
ಕಲಬುರಗಿಯ ರಂಗಾಯಣದಲ್ಲಿ ಪ್ರದರ್ಶನಗೊಂಡ ಈ ನಾಟಕವನ್ನು ಸಮುದಾಯ ಕಲಬುರಗಿ ಆಯೋಜಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.