
ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ಕೊಲ್ಲೂರಿಗೆ ಸಾಗುವ ದಾರಿಯಲ್ಲಿ ಸಿಗುವ ಊರು ಕಾರ್ಗಡಿ. ಇಲ್ಲಿನ ದಟ್ಟ ಅರಣ್ಯದಲ್ಲಿಯೇ ಗೋಮುಖ ಎಂಬ ಬೃಹತ್ ಬಸವಮೂರ್ತಿ ಇದೆ. ಗಿಡ ಮರಗಳ ನೆರಳು, ಎತ್ತ ನೋಡಿದರು ಭಯ ಹುಟ್ಟಿಸುವ ಬೃಹತ್ ಗಾತ್ರದ ಮರಗಳಿಂದ ಕೂಡಿದ ದಾರಿಯದು. ದಾರಿ ಉದ್ದಕ್ಕೂ ನರಪಿಳ್ಳೆ ಕೂಡ ಸಿಗುವುದಿಲ್ಲ. ಇಂಥ ದಾರಿಯಲ್ಲಿ ಸಾಗಿದರೆ ಗೋಮುಖವಿರುವ ಜಾಗ ಸಿಗುತ್ತದೆ.
ಸುಂದರವಾದ ಮೂರ್ತಿ ನೆಲ ಮಟ್ಟದಿಂದ ಸುಮಾರು 50 ಅಡಿ ಎತ್ತರವಿದ್ದು, ತಲೆಯಿಂದ ಬಾಲದವರೆಗೆ ಸುಮಾರು 30 ಅಡಿಗಳಷ್ಟು ಉದ್ದವಿದೆ. ಸೌಮ್ಯ ಮುಖಭಾವ, ಎತ್ತರಕ್ಕೆ ತಕ್ಕ ಅದರ ಭುಜ ಹಾಗೂ ದೇಹದ ಆಕೃತಿ, ಅಗಲವಾದ ಕಿವಿಗಳು, ನೋಡುಗರ ಕಣ್ಮನ ಸೆಳೆಯುವ ಕಣ್ಣುಗಳು, ಕಾಲುಗಳು ಮಡಚಿ ಕುಳಿತಿರುವ ಭಂಗಿಯಲ್ಲಿದೆ ಈ ಬಸವ ಮೂರ್ತಿ. ಇದರ ಹೊಟ್ಟೆಯ ಒಳಭಾಗ ಪ್ರವೇಶಿಸಲು ಎರಡು ಬದಿಯಲು ಮೆಟ್ಟಲುಗಳನ್ನು ನಿರ್ಮಿಸಿದ್ದಾರೆ. ಒಳಭಾಗದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಕಟ್ಟಿರುವ ಎತ್ತರವಾದ ಕಟ್ಟೆ ಕಂಡು ಬರುತ್ತದೆ. ಆದರೆ ಅರಣ್ಯ ಇಲಾಖೆಗೆ ಸೇರಿರುವ ಜಾಗವಾದ ಕಾರಣ ದೇವರ ವಿಗ್ರಹ ಪ್ರತಿಷ್ಠಾಪನೆಗೊಳ್ಳದೆ ಬಸವಮೂರ್ತಿ ಮಾತ್ರ ನಿರ್ಮಾಣಗೊಂಡಿದೆ.
ಈ ಮೂರ್ತಿಯನ್ನು ರಾಮಚಂದ್ರಾಪುರ ಮಠದವರು ನಿರ್ಮಿಸಿದ್ದು ಎನ್ನುವುದು ಸ್ಥಳೀಯರನ್ನು ವಿಚಾರಿಸಿದಾಗ ತಿಳಿದುಬಂತು. ಅದರ ಸಮೀಪದಲ್ಲಿಯೇ ಒಂದು ಕೆರೆ ಕೂಡ ಇದೆ. ರಾಮಚಂದ್ರಾಪುರ ಮಠಕ್ಕೆ ಹೊಂದಿಕೊಂಡಂತೆ ಇರುವ ಈ ಜಾಗ ಸದ್ಯಕ್ಕೆ ಪಾಳು ಬಿದ್ದಿದೆ. ‘ಶಿವಲಿಂಗ ಸ್ಥಾಪಿಸಿ ಇದನ್ನು ಯಾತ್ರಾಸ್ಥಳವಾಗಿಸುವ ಯೋಜನೆಯಿತ್ತು. ಮೊದಲು ಇಲ್ಲಿಯೇ ಸಮೀಪದಲ್ಲಿ ಮಠದ ಗುರುಕುಲವಿತ್ತು. ಅದನ್ನು ಗೋಕರ್ಣಕ್ಕೆ ವರ್ಗಾಯಿಸಲಾಯಿತು. ಅನುಮತಿ ಸಮಸ್ಯೆಯಿಂದಾಗಿ ಗೋಮುಖ ಪಾಳು ಬಿದ್ದಿದೆ’ ಎನ್ನುತ್ತಾರೆ ಮಠದ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.