ಶಿಲ್ಪಾ ನಂಜಪ್ಪ ಅವರ ನೃತ್ಯದ ಭಂಗಿ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಭರತನಾಟ್ಯ ಕಲಾವಿದೆ ಶಿಲ್ಪಾ ನಂಜಪ್ಪ ಹೊಸತನದ ಹುಡುಕಾಟದಲ್ಲಿ ಸದಾ ನಿರತರು. ಪುರೋಹಿತ ಪರಂಪರೆಯ ಹಂಗಿಲ್ಲದ ಕೊಡವ ಆಚರಣೆಗಳ ಸಂಗ್ರಹ ಗ್ರಂಥ, ‘ಪಟ್ಟೋಲೆ ಪಳಮೆ’ ಯನ್ನು ಆಧರಿಸಿದ ಹಾಡುಗಳನ್ನು, ಕೊಡವ ಜನಪದ ಆಧರಿತ ಹಾಡುಗಳನ್ನು ಭರತನಾಟ್ಯದ ಹೆಜ್ಜೆಗಳಿಗೆ ಅಳವಡಿಸುವ ಪ್ರಯತ್ನವನ್ನು ಶಿಲ್ಪಾ ಇತ್ತೀಚೆಗಿನ ವರ್ಷಗಳಲ್ಲಿ ಮಾಡುತ್ತ ಬಂದವರು. ಅವರ ಪ್ರಯತ್ನಗಳ ಯಶಸ್ವಿ ತುಣುಕೊಂದು ಇತ್ತೀಚೆಗೆ ಮಂಗಳೂರಿನಲ್ಲಿ ಪ್ರದರ್ಶನಗೊಂಡಿತು.
ಸಾಮಾಜಿಕ ವ್ಯವಸ್ಥೆಯನ್ನು ರೂಪಿಸುವ ಪ್ರಭುತ್ವದ ಉಳಿವಿಗಾಗಿ ತ್ಯಾಗದ ಮೆಟ್ಟಿಲೇರಿದ ಮಾತೃಹೃದಯಗಳ ನಿರೂಪಣೆಯನ್ನೇ ಕೇಂದ್ರವಾಗಿಸಿದ ಕಾರ್ಯಕ್ರಮ ‘ಮಂಥನ’. ಇಲ್ಲಿ ಕೊಡಗಿನ ತಾಯಿ ಕಾವೇರಿಯ ನೋವನ್ನು ನೃತ್ಯದ ಹೆಜ್ಜೆಗಳಲ್ಲಿ ವಿಭಿನ್ನವಾಗಿ ಅನಾವರಣಗೊಳಿಸಿದ ಶಿಲ್ಪಾ, ಕೊಡವ ಸಂಸ್ಕೃತಿಯ ಛಾಪೊತ್ತುವಲ್ಲಿ ಯಶಸ್ವಿಯಾದರು 1917ರಲ್ಲಿ ಚಿನ್ನಪ್ಪ ಅಜ್ಜ ರಚಿಸಿದ ಕವಿತೆ ‘ಶ್ರೀ ಮೂಲ ಕನ್ನಿಯೇ ಪೊಮ್ಮಾಲೆ ಕೊಡುಮಾಲೆ ಪೊಮ್ಮಾಲೆಂದ್ ನೀ ಚೂಡಿಯೊಳು ಕಾವೇರಿಯಮ್ಮೆ.. ’ ಹಾಡು ಕೊಡವರ ನಾಡಗೀತೆಯಂತೆ ಸ್ವೀಕೃತವಾಗಿದೆ. ಈ ಹಾಡಿನಲ್ಲಿ ಕಾವೇರಿಯಮ್ಮನೇ ಎಲ್ಲರನ್ನೂ ಕಾಯುವ ದೇವತೆ. ‘ಈ ನಾಡು ಎಷ್ಟು ಸುಂದರವಾಗಿದೆ ಎಂದರೆ ತಾಯಿ, ನಿನ್ನ ಅಲಂಕಾರಕ್ಕೆ ಚಿನ್ನದಾಭರಣಗಳ ಅಗತ್ಯವೇ ಇಲ್ಲ. ಪ್ರಕೃತಿಯ ಹಸಿರು ಮಾಲೆ ನಿನ್ನ ಕೊರಳ ಅಲಂಕರಿಸುವುದು, ನೀನೇ ಶಕ್ತಿಯಾಗಿ ಪಾರ್ವತಿಯಾಗಿ ಲೋಪಾಮುದ್ರೆಯಾಗಿ ಕೊಡವರನ್ನು ಕಾಪಾಡಲು ಕಾವೇರಿಯಾಗಿ ಇಳಿದು ಬಂದಿರುವೆ’ ಎನ್ನುತ್ತ ಮೊದಲ ಭಾಗದಲ್ಲಿ ಕಾವೇರಿಯ ಸ್ತುತಿಯಿದೆ.
ಎರಡನೇ ಭಾಗದಲ್ಲಿ ಕಾವೇರಿಯಮ್ಮನನ್ನು ಮರೆಯುವ ಜನರ ಮೂರ್ಖತನದ ವಿಡಂಬನೆಯಿದೆ. ‘ಅಂದು ನಿನ್ನನ್ನು ಅಗಸ್ತ್ಯ ಮುನಿಯು ಕಮಂಡಲುವಿನಲ್ಲಿ ಬಂಧಿಸಲು ಯತ್ನಿಸಿದರೆ ನೀನು ಅಲ್ಲಿಂದ ಚಿಮ್ಮಿ ಬಂಗಾಳ ಕೊಲ್ಲಿಯನ್ನು ಸೇರುವ ನದಿಯಾಗಿ ಹರಿದೆ’ ಎನ್ನುತ್ತ, ಆಕೆಯ ಪರವಾಗಿ ನಿಲ್ಲುವುದು ಕೊಡವರ ಧರ್ಮವಲ್ಲದೆ ಮತ್ತೇನು..ಕೊಡವ ನಾಡು ಕಾವೇರಿಯಮ್ಮನಿಗೆ ಸೇರಿದ್ದು ಎಂಬುದನ್ನು ಆಗಾಗ ಮರೆಯುವ ಜನರು ಹುಸಿ ಅಹಂನಿಂದ ಬೀಗುವರು. ಆದರೆ ಇಂತಹ ‘ಅಹಂ’ನ ಕೊರಳಹಾರವನ್ನು ಆಕೆಯು ಖಂಡಿತಾ ಒಲ್ಲಳೆಂದು ನದಿಯ ಸ್ವಾಭಿಮಾನವನ್ನು ಹೇಳುವ ಹಾಡಿಗೆ ನರ್ತಿಸಿ ಸಭಿಕರ ಶ್ಲಾಘನೆಯ ಚಪ್ಪಾಳೆ ಗಿಟ್ಟಿಸಿದರು. ರಾಗಮಾಲಿಕೆ ಮತ್ತು ತಾಳಮಾಲಿಕೆಯಲ್ಲಿ ಈ ನೃತ್ಯ ಮೂಡಿಬಂತು.
ಕೊಡವ ಜನಪದವನ್ನು ಭರತನಾಟ್ಯಕ್ಕೆ ಅಳವಡಿಸುವ ಪ್ರಯತ್ನ ಮಾಡಿದವರಲ್ಲಿ ಶಿಲ್ಪಾ ನಂಜಪ್ಪ ಪ್ರಮುಖರು. ನಡಿಕೇರಿಯಂಡ ಚಿಣ್ಣಪ್ಪ ಅವರು 1924ರಲ್ಲಿ ಪ್ರಕಟಿಸಿದ ‘ಪಟ್ಟೋಲೆ ಪಳಮೆ’ ಕೊಡವರ ಅಸ್ಮಿತೆಯನ್ನು ಸಾರುವ ಗ್ರಂಥ. ಈ ಕೃತಿಯನ್ನು ಶಾಸ್ತ್ರೀಯ ನೃತ್ಯ ಪ್ರಕಾರಕ್ಕೆ ಅಳವಡಿಸುವ ಸಂದರ್ಭದಲ್ಲಿ ಅವರ ಕಲಾಪ್ರೌಢಿಮೆಯು ಪ್ರಬುದ್ಧವಾಗಿದೆ.
‘ಕೊಡವ ಸಂಪ್ರದಾಯ ಮತ್ತು ಪರಂಪರೆಯನ್ನು ನೃತ್ಯದ ಮೂಲಕ ಲೋಕಕ್ಕೆ ಪರಿಚಯಿಸುವ ಪ್ರಯತ್ನ ನನ್ನದು. 2019–21 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಸಿಸಿಆರ್‌ಟಿ ಫೆಲೋಶಿಪ್ ಪಡೆದು ಈ ‘ಕೊಡವ ಜನಪದ ಕಥೆಗಳು ಮತ್ತು ಭರತನಾಟ್ಯ’ ವಿಷಯದ ಬಗ್ಗೆ ಅಧ್ಯಯನ ನಡೆಸಿರುವೆ. ಅಧ್ಯಯನ ನನ್ನ ಇಷ್ಟದ ವಿಷಯ’ ಎನ್ನುವ ಅವರ ನೃತ್ಯ ಲಾಲಿತ್ಯಪೂರ್ಣವಾದುದು.
ಮೂರನೆಯ ನೃತ್ಯದಲ್ಲಿ ಅವರು ಲಂಪಟ ಪ್ರೇಮಿಯನ್ನು ಟೀಕಿಸುವ ‘ಯೇ ತುಂಬಿ’ ಎಂಬ ಕೃತಿಗೆ ಮುಗ್ಧನಾಯಿಕೆಯಾಗಿ ನರ್ತಿಸಿದರು. ಕೊನೆಯ ಕೃತಿ ತಿಲ್ಲಾನ ಅವರದ್ದೇ ರಚನೆ. ಕೊಡಗಿನ ಹುತ್ತರಿ ಸಂಭ್ರಮವನ್ನು ಬಿಂಬಿಸುವ ರೀತಿಗೌಳಾ ತಿಲ್ಲಾನದಲ್ಲಿ ‘ಪೊಲಿ..ಪೊಲಿ ಪೊಲಿ... ದೇವಾ..’ ಎಂದು ಧ್ವನಿಗೂಡಿಸುತ್ತ ಶಿಲ್ಪಾ ನೃತ್ಯ ಪ್ರಸ್ತುತಿಯನ್ನು ಸಂಭ್ರಮದಿಂದ ಸಮಾರೋಪಗೊಳಿಸಿದರು. ಇಗ್ಗುತಪ್ಪ ದೇವರು ಕೊಡವರಿಗೆ ಭತ್ತದ ಕೃಷಿಯನ್ನು ಹೇಳಿಕೊಟ್ಟವರು. ಹಿರಿಯರ ಹಾಡು ಉಮ್ಮತ್ತಾಟ್ ಮತ್ತು ಕೋಲಾಟದ ಅಂಶಗಳನ್ನು ಪರಿಗಣನೆ, ಜನಪದ ಮತ್ತು ಶಾಸ್ತ್ರೀಯತೆಯ ಸಮ್ಮಿಲನವು ಇಲ್ಲಿ ಸ್ಪಷ್ಟವಾಗಿ ಗೋಚರಿಸುವಂತಿತ್ತು. ನೃತ್ಯದಲ್ಲಿ ಸಾಮಾನ್ಯವಾಗಿ ಕಾಣುವ ಧನುರ್‌ಬಾಣಗಳ ಮುದ್ರೆಗೆ ಬದಲಾಗಿ ಬಂದೂಕು ಹೊಡೆದ ಮುದ್ರೆ ಗಮನ ಸೆಳೆಯಿತು.
ವಿದುಷಿ ರಾಧಿಕಾ ಶೆಟ್ಟಿ ನಿರ್ದೇಶನದ ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ ‘ಮಂಥನ’ ಕಾರ್ಯಕ್ರಮದ ಎರಡನೇ ಭಾಗದಲ್ಲಿ ಎರಡು ಮಹಾಕಾವ್ಯಗಳಲ್ಲಿ ಪ್ರಭುತ್ವಕ್ಕಾಗಿ ತ್ಯಾಗ ಮಾಡಿದ ನಾಲ್ವರು ಮಹಿಳೆಯರ ಅಂತರಂಗದ ಧ್ವನಿಯು ಪ್ರಕಟವಾಗಿದೆ. ರಾಕ್ಷಸಿಯೆಂದೇ ನಮಗೆಲ್ಲ ಪರಿಚಿತಳಾದ ಹಿಡಿಂಬೆಯು ಪ್ರೇಮಿಯಾಗಿ, ಅಮ್ಮನಾಗಿ, ಮಗನನ್ನು ಕಳುಹಿಸಿಕೊಡುವ ತ್ಯಾಗಮಯಿ ಅಮ್ಮನನ್ನಾಗಿ ಪರಿಚಯಿಸಿದ್ದು ವಿದುಷಿ ಮಂಜುಳಾ ಸುಬ್ರಹ್ಮಣ್ಯ. ಕಾಡಿನಾದ್ಯಂತ ಸಂತೋಷದಿಂದ ಓಡಾಡುತ್ತ ಸಂಬಂಧಗಳ ಹಂಗಿಲ್ಲದ ಮುಕ್ತ ಜೀವನ ಅವಳದಾಗಿತ್ತು. ಭೀಮನ ಪ್ರೇಮ ಪಾಶದಲ್ಲಿ ಸಿಲುಕಿ ಮಗ ಘಟೋತ್ಕಜನನ್ನು ಹೆಡೆಯುವಷ್ಟರಲ್ಲಿ ಆಕೆಗೆ ಪತಿಯ ಸಾಂಗತ್ಯವಿರಲಿಲ್ಲ. ನೃತ್ಯಜತಿಯಲ್ಲಿ ಘಟೋತ್ಕಜನ ಹುಟ್ಟನ್ನು ಅಭಿವ್ಯಕ್ತಿಗೊಳಿಸುತ್ತಾ ಆತನ ಬಾಲ್ಯ ಬೆಳವಣಿಗೆಯಲ್ಲಿ ಮುಳುಗಿ ಹೋಗಿದ್ದ ಹಿಡಿಂಬೆ ಪ್ರಕಟಗೊಂಡಳು. ಮಾತೃತ್ವವು ಕೊಡುವ ಅನುಭೂತಿಯನ್ನು ವಿಸ್ಮಯದಿಂದ ಅನುಭವಿಸುತ್ತ ಇನ್ನು ಮಗನೊಡನೆಯೇ ನನ್ನ ಬದುಕು ಎಂದು ಭಾವಿಸುವಷ್ಟರಲ್ಲಿ ಭೀಮನು ಬಂದು ಮಗನನ್ನು ಕರೆದೊಯ್ಯುತ್ತಾನಲ್ಲಾ... ಈ ಕ್ಷಣವನ್ನು ಕಲಾವಿದೆ ಸುಂದರವಾಗಿ ಪ್ರಸ್ತುತಪಡಿಸಿದರು. ರಾಕ್ಷಸಿ ಪಾತ್ರವೊಂದರ ಪ್ರಸ್ತುತಿಗೆ ಪ್ರೇಕ್ಷಕರು ಕಣ್ಣಲ್ಲಿ ನೀರು ತುಂಬುವಂತಹ ಕ್ಷಣಗಳನ್ನು ಕಟ್ಟಿಕೊಟ್ಟರು. ಭೀಮನೊಡನೆ ಪ್ರೇಮಾಂಕುರಗೊಳ್ಳುವ ಸಂದರ್ಭದ ಅಭಿವ್ಯಕ್ತಿಗೆ ಅವರು ಮಿಶ್ರ ಜಾತಿಯ ಅಲರಿಪುವನ್ನೇ ಬಳಸಿಕೊಂಡರು. ಪುಟ್ಟ ಪ್ರಸ್ತುತಿಯ ಅವಧಿಯಲ್ಲಿಯೇ ಸಭಿಕರೆದೆಯಲ್ಲಿ ದುಃಖವನ್ನು ಉಕ್ಕಿಸುವಷ್ಟು ಭಾವಾಭಿವ್ಯಕ್ತಿ ಸಶಕ್ತವಾಗಿತ್ತು.
ಇಂತಹುದೇ ಮತ್ತೊಂದು ಕಥೆ ಚಿತ್ರಾಂಗದೆಯದ್ದು. ಆಕೆಯು ರಾಜ್ಯದ ವಾರಸುದಾರೆಯಾಗಿ ಬೆಳೆಯುವಾಗ, ಪ್ರೀತಿ ಪ್ರೇಮದ ಹಂಗು ಬೇಡವೆಂದೇ ನಿರ್ಧರಿಸಿದ್ದಳು. ಆದರೆ ಪ್ರಕೃತಿಯ ಲೀಲೆಯೆಂಬಂತೆ ಅರ್ಜುನನ ಪ್ರೇಮ ಪಾಶದಲ್ಲಿ ಸಿಲುಕಿ ಬಬ್ರುವಾಹನನನ್ನು ಪಡೆಯುತ್ತಾಳೆ. ಹೀಗೆಯೇ ಚೆನ್ನೈಯ ಇಂದುವೇಣು ಕೇಕೈಯಿಯಾಗಿ ರಾಮನ ಪಟ್ಟಾಭಿಷೇಕ ಸಂದರ್ಭವನ್ನು ಪ್ರಸ್ತುತಪಡಿಸಿದರು. ತನ್ನ ಕೈಯ್ಯಾರೆ ಎತ್ತಿ ಆಡಿಸಿದ ರಾಮನು, ಪ್ರಭುವಾಗಿ ಮೇಲೇರುತ್ತ ತನ್ನಿಂದ ದೂರಾದನೇ ಎಂಬ ಕೈಕೇಯಿಯ ಆತಂಕವು ಪ್ರಕಟಗೊಂಡ ಪ್ರಸ್ತುತಿ ಅಭಿನಯ ಪ್ರಧಾನವಾಗಿತ್ತು. ತುಳಸೀದಾಸ ರಾಮಾಯಣದ ತುಣುಕನ್ನು ಇಂದು ಆಯ್ಕೆ ಮಾಡಿಕೊಂಡರೆ, ಕಲಾವಿದೆ ವಿದುಷಿ ರಾಧಿಕಾ ಶೆಟ್ಟಿ, ಮಂಥರೆಯ ಪಾತ್ರದಲ್ಲಿ ವೇದಿಕೆಯೇರಿದರು. ಶ್ರೀ ರಾಮಾಯಣ ದರ್ಶನಂ ಕೃತಿಯ ಗೀತೆಗೆ ನರ್ತಿಸಿದರು. ಮಂಥರೆಯ ಪಾಲಿಗೆ ಎತ್ತಿ ಆಡಿಸಿದ ಕೂಸು ಕೈಕೇಯಿಯೂ ಹೌದು, ರಾಮನೂ ಹೌದು ಎಂಬುದು ಗಮನಾರ್ಹ.
ಶಿಲ್ಪಾ ನಂಜಪ್ಪ ಅವರ ನೃತ್ಯದ ಭಂಗಿ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.