
ಸಮಾಜದಲ್ಲಿನ ಮೌಢ್ಯ, ಅಸಮಾನತೆ ತೊಡೆದು ಹಾಕಿ ಸಮಸಮಾಜದ ನಿರ್ಮಾಣಕ್ಕಾಗಿ ಹದಿನಾರನೇ ಶತಮಾನದಲ್ಲಿ ಶ್ರಮಿಸಿದ ಮಧ್ಯ ಕರ್ನಾಟಕದ ಕೂಲಹಳ್ಳಿ, ಹರಪನಹಳ್ಳಿ, ಅರಸೀಕೆರೆ, ನಾಯಕನಹಟ್ಟಿ ಮತ್ತು ಕೊಟ್ಟೂರಿನಲ್ಲಿ ನೆಲೆಸಿದ್ದ ಐವರು ಶರಣರಲ್ಲಿ ಕೊಟ್ಟೂರಿನ ಕೊಟ್ಟೂರೇಶ್ವರ ಪ್ರಮುಖರು. ನಾಲ್ಕು ಪುರಾತನ ದೇವಾಲಯಗಳಲ್ಲಿ ನೆಲೆಸಿರುವ ಕೊಟ್ಟೂರೇಶ್ವರನಿಗೆ ಹೀರೆಮಠ, ಗಚ್ಚಿನಮಠ, ತೊಟ್ಟಿಲ ಮಠ ಮತ್ತು ಮೂರು ಕಲ್ಮಠಗಳಲ್ಲಿ ನಿತ್ಯವೂ ಪೂಜೆ. ಗಚ್ಚಿನ ಮಠದ ದೇವಾಲಯದಲ್ಲಿ ಕೊಟ್ಟೂರೇಶ್ವರ ಸ್ವಾಮಿಯ ಜೀವಂತ ಸಮಾಧಿ ಇದೆ. ಒಂದೊಂದು ದೇವಾಲಯದ ಶಿಲ್ಪ ಸೌಂದರ್ಯವೂ ಕಣ್ಮನ ಸೆಳೆಯುತ್ತದೆ.
ವಿಜಯನಗರ ಜಿಲ್ಲೆಯ ಕೊಟ್ಟೂರಿನ ಶ್ರೀ ಕೊಟ್ಟೂರು ಬಸವೇಶ್ವರ ರಥೋತ್ಸವ, ಕರ್ನಾಟಕದ ಪ್ರಮುಖ ರಥೋತ್ಸವಗಳ ಲ್ಲೊಂದು. ಎಲ್ಲ ಸಮುದಾಯಗಳ ಆರಾಧ್ಯ ದೈವ ಎನಿಸಿರುವ ಕೊಟ್ಟೂರು ಬಸವೇಶ್ವರನಿಗೆ ರಾಜ್ಯ ಮಾತ್ರವಲ್ಲದೆ, ದೇಶ–ವಿದೇಶಗಳಲ್ಲೂ ಭಕ್ತರಿದ್ದಾರೆ. ಪಾದಯಾತ್ರೆ ಮೂಲಕವೇ ಸಾಗಿಬಂದು ರಥೋತ್ಸವದಲ್ಲಿ ಪಾಲ್ಗೊಳ್ಳುವುದು ಇಲ್ಲಿನ ಭಕ್ತರ ವಿಶೇಷ.
ಮೂಲಾ ನಕ್ಷತ್ರದಲ್ಲಿ ರಥೋತ್ಸವ
ಇದೇ ಫೆಬ್ರುವರಿ 12ರಂದು ರಥೋತ್ಸವ ನಡೆಯಲಿದೆ. ಹಬ್ಬ, ರಥೋತ್ಸವ, ಶುಭ ಸಮಾರಂಭಗಳು ಶುಭ ಗಳಿಗೆಯಲ್ಲಿ ನಡೆಯುವುದು ವಿಶೇಷ. ಆದರೆ, ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಅಶುಭ ನಕ್ಷತ್ರ ಎಂದೇ ಪರಿಗಣಿಸಲಾಗುವ ಮೂಲಾ ನಕ್ಷತ್ರ ಕೂಡಿದ ಸಮಯದಲ್ಲಿ ಜರುಗುತ್ತದೆ. ಸಮಾಜದಲ್ಲಿ ಮೌಢ್ಯವನ್ನು ತೊಡೆದು ಹಾಕಲು ಕೊಟ್ಟೂರೇಶ್ವರರು ಕಂಡುಕೊಂಡ ಮಾರ್ಗವಿದು.
ಮಾದಿಗರ ಹರಳಯ್ಯ ಸಮುದಾಯದ ಮಹಿಳೆಯರು ಆರತಿ ಬೆಳಗಿದ ಮೇಲೆಯೇ ರಥ ಹೊರಡುವುದು ಸಂಪ್ರದಾಯ. ರಥೋತ್ಸವಕ್ಕೂ ಒಂದು ದಿನ ಮೊದಲೇ ದಶದಿಕ್ಕುಗಳಿಂದ ಸಾಗಿಬರುವ ಪಾದಯಾತ್ರಿಗಳು ಕೊಟ್ಟೂರಿನಲ್ಲಿ ಕೂಡುತ್ತಾರೆ. ಅಬಾಲ ವೃದ್ಧರಾದಿಯಾಗಿ ಜಾತಿಬೇಧಗಳ ಹಂಗಿಲ್ಲದೆ ಎಲ್ಲ ವರ್ಗಗಳ ಲಕ್ಷಾಂತರ ಭಕ್ತರು ಸಂಜೆ ತೇರು ಎಳೆಯುತ್ತಾರೆ.
ಗದಗ, ಮುಂಡರಗಿ, ಹೊಸಪೇಟೆ, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಚಿತ್ರದುರ್ಗ, ಬಳ್ಳಾರಿ, ಮೊಳಕಾಲ್ಮುರು ಸೇರಿದಂತೆ ಮಧ್ಯ ಕರ್ನಾಟಕದ ಹಲವು ಸ್ಥಳಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ಅವರು ತಮ್ಮ ನಡಿಗೆಗೆ ಅನುಕೂಲಾಗುವಂತೆ ನಾಲ್ಕೈದು ದಿನಗಳ ಮೊದಲೇ ಊರು ಬಿಡುತ್ತಾರೆ. ಬೆಳಗಿನ ಇಳಿ ಬಿಸಿಲು ಮತ್ತು ಸಂಜೆಯ ತಂಪು ಸಮಯದಲ್ಲಿ ನಡೆದು, ಮಾರ್ಗ ಮಧ್ಯದ ಹಳ್ಳಿಗಳಲ್ಲಿ ತಂಗುತ್ತಾರೆ. ರಸ್ತೆಗಳ ಇಕ್ಕೆಲಗಳಲ್ಲಿ ಪಾದಯಾತ್ರಿಗಳ ಸೇವೆಗೆ ಆಯಾ ಗ್ರಾಮಸ್ಥರು ಸಿದ್ಧರಾಗಿ ನಿಂತಿರುತ್ತಾರೆ. ಇವರೆಲ್ಲರಿಗೂ ಊರವರು ಸ್ವಯಂಪ್ರೇರಣೆಯಿಂದ ಉಚಿತವಾಗಿ ಊಟ, ತಿಂಡಿ, ಎಳನೀರು, ಕಲ್ಲಂಗಡಿ, ಶರಬತ್ತು, ಮಜ್ಜಿಗೆ ಸೇರಿದಂತೆ ತರೇವಾರಿ ತಿಂಡಿ, ತಿನಿಸುಗಳ, ಪಾನೀಯಗಳ ಮುಖಾಂತರ ಅವರ ಚೈತನ್ಯಕ್ಕೆ ಪುಷ್ಟಿ ತುಂಬುತ್ತಾರೆ. ಸುಸ್ತಾದವರಿಗೆ ಮತ್ತು ಆರೋಗ್ಯದಲ್ಲಿ ಏರುಪೇರಾದವರಿಗೆ ವೈದ್ಯರು ಟೆಂಟ್‌ಗಳಲ್ಲಿ, ಆಂಬುಲೆನ್ಸ್‌ಗಳಲ್ಲಿ ಕಾದು ನಿಂತು ಉಪಚರಿಸುತ್ತಾರೆ. ಇದಕ್ಕಾಗಿ ತಾತ್ಕಾಲಿಕ ಔಷಧಿ ಅಂಗಡಿಗಳೂ ಇರುತ್ತವೆ. ಅಲ್ಲಲ್ಲಿ ಕಾಲುಗಳಿಗೆ ಮಸಾಜ್ ಮಾಡುವವರೂ ಸಿಗುತ್ತಾರೆ.
ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಕೊಟ್ಟೂರಿನ ಸ್ಥಳೀಯರ ಸೇವೆ ಲಭ್ಯವಿರುತ್ತದೆ. ಪರಿಚಯವಿರಲಿ, ಇಲ್ಲದಿರಲಿ, ಯಾರ ಮನೆಗೆ ಹೋದರೂ ಬಂಧುಗಳಂತೆ ಸತ್ಕರಿಸುತ್ತಾರೆ. ಸ್ನೇಹಿತರಂತೆ ಆದರಿಸುತ್ತಾರೆ. ಮನೆಗೆ ಬಂದವರನ್ನು ಯಾವ ಜಾತಿ ಎಂದು ಯಾರೂ ಕೇಳುವುದಿಲ್ಲ. ಜಾತ್ರೆಗೆ ಬಂದವರೆಲ್ಲರೂ ನಮ್ಮವರೇ ಎಂದು ಉಪಚರಿಸುವ ಮೂಲಕ ಅವರಲ್ಲಿ ಕೊಟ್ಟೂರೇಶ್ವರ ಸ್ವಾಮಿಯನ್ನೇ ಕಾಣುವ ಮನೋಧರ್ಮ ಅವರ ಭಕ್ತಿಯ ಪರಾಕಾಷ್ಠೆಗೆ ದ್ಯೋತಕ.
ಕೊಟ್ಟೂರೇಶ್ವರ ಸ್ವಾಮಿಯ ಮಹಿಮೆ ಮೆಚ್ಚಿ ಅಕ್ಬರ್ ಬಾದ ಷಾ ದಾನವಾಗಿ ನೀಡಿದ್ದ ಮಣಿಮಂಚ ಇಂದಿಗೂ ಗಚ್ಚಿನ ಮಠದಲ್ಲಿದೆ. ಪೀರಲ ಹಬ್ಬದ ಕೊನೆ ದಿನ ಪೀರಲು ದೇವರ ಮೇಳಗಳು ಕೊಟ್ಟೂರೇಶ್ವರ ದೇವಾಲಯಕ್ಕೆ ಆಗಮಿಸುತ್ತವೆ. ಅರ್ಚಕರು ಪೂಜೆ ಸಲ್ಲಿಸಿದ ನಂತರ ಮುಂದೆ ಸಾಗುತ್ತವೆ. ಕೊಟ್ಟೂರೇಶನ ಅನ್ಯ ಧರ್ಮೀಯ ಭಕ್ತರಲ್ಲಿ ಅನೇಕ ಮುಸ್ಲಿಮರೂ ಇದ್ದಾರೆ.
ಸಾಹಿತ್ಯದಲ್ಲಿ ಕೊಟ್ಟೂರೇಶ್ವರ
ಮಲ್ಲಣಾರ್ಯರರ ವೀರಶೈವಾಮೃತ ಮಹಾಪುರಾಣ, ಚನ್ನಬಸವ ಪುರಾಣ, ಚಿಕ್ಕನಂಜೇಶನ ಗುರುರಾಜ ಚರಿತ್ರೆ, ಬಸವಲಿಂಗಪ್ಪನ ಶ್ರೀ ಗುರು ಕೊಟ್ಟೂರು ಬಸವೇಶ್ವರ ಚರಿತ್ರೆ, ನೂರೆಂಟು ವಿರಕ್ತರ ಕಾವ್ಯ, ಸಜ್ಜೆಯ ಸಿದ್ಧಲಿಂಗೇಶ್ವರರ ಮಳೆರಾಜ ಚರಿತ್ರೆ, ಚನ್ನಬಸವ ದೇವರ ಎಮ್ಮೆ ಬಸವನ ಕಾಲ, ವಿರೂಪಾಕ್ಷ ಪಂಡಿತರ ಚನ್ನಬಸವ ಪುರಾಣ, ಯೋಗ ರತ್ನಾಕರರ ಷಟ್‌ಸ್ಥಲ ತಿಲಕ, ವೈ.ನಾಗೇಶ ಶಾಸ್ತ್ರಿಯವರ ಬಾಲಬಸವರು ಹಾಡುಗಳಲ್ಲಿ ಗೋಣಿ ಬಸವೇಶ್ವರ ಕಾವ್ಯ, ಮಲ್ಲಿಕಾರ್ಜುನ ಪಂಡಿತಾರಾಧ್ಯರ ಸಂಸ್ಕೃತ ಕೃತಿ ಗುರುರಾಜ ಚರಿತ್ರೆ. ಈ ಎಲ್ಲಾ ಕಾವ್ಯ ಮತ್ತು ಪುರಾಣಗಳಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ವರ್ಣನೆ, ಚರಿತ್ರೆ, ತತ್ವ ಸಿದ್ಧಾಂತದ ಉಲ್ಲೇಖವಿದೆ.
ಜನಪದ ಕಾವ್ಯದಲ್ಲಿಯೂ ಕೊಟ್ಟೂರೇಶ್ವರ ಸ್ವಾಮಿಯ ಮಹಿಮೆ, ಪವಾಡಗಳ ಉಲ್ಲೇಖವಿದೆ. ಜನರಲ್ಲಿ ಜಾಗೃತಿ ಮೂಡಿಸುವ ಜನಪದ ಹಾಡುಗಳು ಕೊಟ್ಟೂರು ಹಾಗೂ ಸುತ್ತಮುತ್ತಲ ಹಳ್ಳಿಗರ ಬಾಯಿಯಲ್ಲಿ ನಿತ್ಯ ಸುಪ್ರಭಾತದಂತೆ ನಲಿದಾಡುತ್ತವೆ. ಕೋಲಾಟದ ವೇಳೆ ಪುರುಷರು, ಮದುವೆ ಶುಭ ಕಾರ್ಯ ಮತ್ತು ಹೊಲ ಗದ್ದೆಗಳಲ್ಲಿ ಮಹಿಳೆಯರು ಸುಶ್ರಾವ್ಯವಾಗಿ ಹಾಡುವುದನ್ನು ಕೇಳುವುದೇ ಬಲು ಸೊಗಸು. ರಾತ್ರಿ ಹಗಲೂ ಹಾಡುವವರೂ ಅಲ್ಲಲ್ಲಿ ಇದ್ದಾರೆ.⇒v
ರಥದ ಮೇಲೆ ರಾಷ್ಟ್ರಧ್ವಜ!
ಅದು ಸ್ವಾತಂತ್ರ್ಯ ಹೋರಾಟದ ದಿನಗಳು. ಆಗೆಲ್ಲ ಹೋರಾಟಗಾರರು ಕೊಟ್ಟೂರೇಶ್ವರ ಸ್ವಾಮಿ ರಥವನ್ನು ಇನ್ನೇನು ಎಳೆಯುತ್ತಾರೆ ಎನ್ನುವಾಗ ಬ್ರಿಟಿಷ್ ಪೊಲೀಸರ ಕಣ್ತಪ್ಪಿಸಿ ರಥವೇರಿ ಕಳಸಕ್ಕೆ ರಾಷ್ಟ್ರಧ್ವಜ ಕಟ್ಟಿ ಮಹಾತ್ಮ ಗಾಂಧಿ ಮತ್ತು ಸುಭಾಷ್‌ಚಂದ್ರ ಬೋಸ್ ಅವರಿಗೆ ಜೈ ಎಂದು ಘೋಷಣೆ ಕೂಗುತ್ತಿದ್ದರು! ಈ ಘೋಷಣೆಗೆ ನೆರೆದ ಸಹಸ್ರಾರು ಭಕ್ತರ ಸಮೂಹ ಮುಗಿಲು ಮುಟ್ಟುವಂತೆ ದನಿಗೂಡಿಸುತ್ತಿತ್ತು. ರಥ ಸಾಗುವ ಮಾರ್ಗದುದ್ದಕ್ಕೂ ಈ ಘೋಷಣೆಗಳು ಮೊಳುಗುತ್ತಲೇ ಇರುತ್ತಿದ್ದವು. ರಥ ಸ್ವಸ್ಥಾನಕ್ಕೆ ಬಂದು ನಿಂತಾಗ ಧ್ವಜ ಕಟ್ಟಿದ ಸ್ವಾತಂತ್ರ್ಯ ಸೇನಾನಿಗಳು ಬ್ರಿಟಿಷರ ಕಣ್ತಪ್ಪಿಸಿ ರಥದಿಂದ ಇಳಿದು ಭಕ್ತರ ನಡುವೆ ಕಣ್ಮರೆಯಾಗುತ್ತಿದ್ದರು. ನಂತರ ಬ್ರಿಟಿಷ್ ಪೊಲೀಸರು ರಥವೇರಿ ರಾಷ್ಟಧ್ವಜ ಕೆಳಗಿಳಿಸುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರು ಭಕ್ತರಲ್ಲಿ ಸ್ವಾತಂತ್ರ್ಯ ಪ್ರೇಮ ಮತ್ತು ಹೋರಾಟದ ಕಿಚ್ಚನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಕಂಡುಕೊಡು ಚಾಕಚಕ್ಯತೆಯ ಮಾರ್ಗವಿದು. ಈ ವಿಷಯ ಮಹಾತ್ಮ ಗಾಂಧಿಯವರಿಗೂ ತಲುಪಿತು. ಅವರು ತಮ್ಮ ಸಂಪಾದಕತ್ವದ ಹರಿಜನ ಪತ್ರಿಕೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ ಬುದ್ಧಿವಂತಿಕೆ ಮೆಚ್ಚಿ ಲೇಖನ ಪ್ರಕಟಿಸಿದ್ದರು. ಇದು ಇಲ್ಲಿನ ಸ್ವಾತಂತ್ರ್ಯ ಹೋರಾಟದ ಪುಟಗಳಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.