ADVERTISEMENT

ಕುವೆಂಪು ಪದ ಸೃಷ್ಟಿ | ಸೊಗಂಬರಿ

ಜಿ.ಕೃಷ್ಣಪ್ಪ
Published 31 ಮೇ 2025, 23:30 IST
Last Updated 31 ಮೇ 2025, 23:30 IST
<div class="paragraphs"><p>ಕುವೆಂಪು</p></div>

ಕುವೆಂಪು

   

ಸೊಗಂಬರಿ

ಸೊಗಂಬರಿ (ಕ್ರಿ). ಸಂತೋಷದಿಂದ ಸಾಗು, ಮುನ್ನಡೆ.

ADVERTISEMENT

ರಾಮಚಂದ್ರನು ಕಾಡಿಗೆ ಸೀತೆಯನ್ನು ಕರೆದುಕೊಂಡು ಹೋಗಲು ಒಪ್ಪಿ, ಅನುವಾಗು ಎಂದು ಹೇಳುವನು. ಆಗ ಅವಳು ಸಂತೋಷದಿಂದ ಮುನ್ನಡೆಯುವುದನ್ನು ‘ಸೊಗಂಬರಿ’ ಪದದಿಂದ ಹೀಗೆ ಚಿತ್ರಿಸಿದ್ದಾರೆ:

‘ಆಕೆ

ಪೆರ್ಚುತೆ ಸೊಗಂಬರಿದು ತಮ್ಮಿರ್ವರನಿತುಮಂ

ಕರೆಕರೆದು ಪಸುಗೆ ತೊಡಗಿದಳಮಿತ ಸಂಭ್ರಮದಿ!”

ಧರ್ಮವರ್ಮ

ಧರ್ಮವರ್ಮ (ನಾ). ಧರ್ಮದ ಉಕ್ಕಿನ ಕವಚ

ಮಾರೀಚ ಮುನಿಯು ಲಂಕೇಶ್ವರ ರಾವಣನಿಗೆ ತನ್ನ ತಪದ ವ್ರತಕ್ಕೆ ಕಾರಣ ತಿಳಿಸುವ ಸಂದರ್ಭದಲ್ಲಿ ಕುವೆಂಪು ಅವರು ರಾಮನ ವ್ಯಕ್ತಿತ್ವವನ್ನು ‘ಧರ್ಮವರ್ಮ’ ಪದದಿಂದ ಹೀಗೆ ರೇಖಿಸಿದ್ದಾರೆ:

‘ಧರ್ಮವರ್ಮವೆ ರಕ್ಷೆಯಾದಾತನಂ

ಧರ್ಮದಿಂದಲೆ ಜಯಿಸವೇಳ್ಕುಮೆಂದಾನಿಂತು

ತಪಕೆ ನೋಂತೆಂ...’ 

ಚೆಲುವಿನಲಗು

ಅರ್ಜುನನನ್ನು ತನ್ನ ಹೆಣ್ತನದ ಸೌಂದರ್ಯದಿಂದ ಆಕರ್ಷಿಸಲು ಚಿತ್ರಾಂಗದೆಯು ಶೃಂಗಾರಗೊಳ್ಳುತ್ತಾಳೆ. ತನ್ನ ಅಂದ ಚಂದವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತ ‘ಶ್ರೀಮಂತ ಹೆಣ್ಣಿಗೆ ಇನಿಯನನ್ನು ಜಯಿಸಲು ಚೆಲುವೆಂಬ ಕತ್ತಿಯೊಂದಿರಲು ಬೇರೆ ಚೂಪಾದ ಬಾಣವೇಕೆ?’ ಎಂದುಕೊಳ್ಳುತಾಳೆ. ಕುವೆಂಪು ಅವರು ಆ ಸಂದರ್ಭಕ್ಕೆ ರೂಪಿಸಿ ಪ್ರಯೋಗಿಸಿರುವ ರೂಪಕ ಪದ ‘ಚೆಲುವಿನಲಗು’.

‘ಸಿರಿವೆಣ್ಣಿಗಿನಿಯನ ಜಯಿಸೆ

ಚೆಲುವಿನಲಗೊಂದಿರಲ್ ಬೇರೆ ಕೂರಂಬೇಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.