ಕುವೆಂಪು
ಶಿಲಾಮೌನಿ
ಶಿಲಾಮೌನಿ (ನಾ). ಕಲ್ಲಿನಂತೆ ಮಾತಾಡದೆ ಸುಮ್ಮನಿರುವವನು.
ರಾವಣನು ಸೀತೆಯನ್ನು ಹೊತ್ತುಕೊಂಡು ಹೋಗಿ ಗುಪ್ತ ಗೃಹದ ಮಧ್ಯೆ ಇಳಿಸುವನು. ಅಲ್ಲಿಗೆ ಹೋದ ಚಂದ್ರನಖಿ ಸಾಂತ್ವನದ ಮಾತಾಡುವಳು. ಆಗ ಸೀತೆ ಒಂದೆರಡು ಮಾತಾಡಿ, ಅನಂತರ ಮಾತನಾಡದೆ ಸುಮ್ಮನಿದ್ದ ಬಗೆಯನ್ನು ‘ಶಿಲಾಮೌನಿ’ ಪದದಿಂದ ಕುವೆಂಪು ಹೀಗೆ ರೇಖಿಸಿದ್ದಾರೆ:
‘ಮೇಲೊಂದುಮಂ
ನುಡಿದೋರದೆಯೆ ಸೀತೆಯಾದಳು ಶಿಲಾಮೌನಿ.’
ಮಿಳ್ತುನೆಳಲು
ಮಿಳ್ತು ನೆಳಲು (ನಾ). ಸಾವಿನ ನೆರಳು
ರಾವಣನು ಮೂರ್ಛೆಹೋದ ಸೀತೆಯನ್ನು ಹೊತ್ತುಕೊಂಡು ಬಂದು ಲಂಕೆಯ ತನ್ನ ಸಿರಿ ಅರಮನೆಯಲ್ಲಿ ಇಳಿದದ್ದನ್ನು ಕುವೆಂಪು ‘ಮಿಳ್ತುನೆಳಲಂತೆ’ ಎಂಬ ಉಪಮಾನದಲ್ಲಿ ಹೀಗೆ ಬಣ್ಣಿಸಿದ್ದಾರೆ:
‘ಮಿಳ್ತುನೆಳಲಂತೆವೋಲ್
ಇಳಿದನ್ ತ್ರಿಕೂಟ ಗಿರಿ ಶೃಂಗ ಶೃಂಗಾರದಾ
ಕನಕ ಲಂಕಾ ಲಕ್ಷ್ಮಿಯಂಕಮೆನಲೆಸೆದಿರ್ದ
ಸಿರಿಯರಮನೆಗೆ’
ನಲ್ವಾಸು
ನಲ್ವಾಸು (ನಾ). ಮೃದುವಾದ ಶಯ್ಯೆ; ಮೆತ್ತನೆಯ ಹಾಸುಗೆ
ರಾವಣನು ತಂಗಿ ಚಂದ್ರನಖಿಗೆ ಸೀತೆಯನ್ನು ಒಪ್ಪಿಸಿ ಹೋಗುವನು. ಆಗ ಅವಳು ದಶರಥನ ಸೊಸೆಯನ್ನು ಮಲಗಿಸಿದ ಹಾಸುಗೆಯನ್ನು ಕುವೆಂಪು ಅವರು ‘ನಲ್ವಾಸು’ ಪದದಿಂದ ಹೀಗೆ ಬಣ್ಣಿಸಿದ್ದಾರೆ:
‘ದಶರಥನ ಸೊಸೆಯನಿರಿಸಿದಳಂಚೆ ತಿಪ್ಪುಳಿಂ
ಸಮೆದ ನಲ್ವಾಸಿನೊಳ್’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.