
ಭವ್ಯಾ ನರಸಿಂಹಮೂರ್ತಿ.
‘ನೀವು ಸಿಟಿಯಲ್ಲಿ ಸ್ಥಿತಿವಂತರ ಮನೆಯಲ್ಲಿ ಬೆಳೆದವರು, ರಾಜಕೀಯದಲ್ಲಿಯೂ ಇರುವವರು. ನೀವು ಟ್ರೇನಿಂಗ್ ಪೂರ್ತಿ ಮಾಡೋದು ಡೌಟು ಮೇಡಂ’ ಎಂದವರೇ ಬಹಳ. ಆದರೆ, ತರಬೇತಿ ಮುಗಿದ ನಂತರ, ‘ರಿಯಲಿ ಪ್ರೌಡ್ ಆಫ್ ಯೂ ಭವ್ಯಾ’ ಎಂದು ನಮ್ಮ ಟ್ರೇನಿಂಗ್ ಆಫೀಸರ್‍ರೇ ಬೆನ್ನು ತಟ್ಟಿದಾಗ ನನಗಾದ ಖುಷಿ ಅಷ್ಟಿಷ್ಟಲ್ಲ’– ಕಣ್ಣರಳಿಸಿ ಹೇಳುತ್ತಾ ಹೋದರು ಭವ್ಯಾ ನರಸಿಂಹಮೂರ್ತಿ.
ಬೆಂಗಳೂರಿನ ಭವ್ಯಾ ಈಗ ನಮ್ಮ ಟೆರಿಟೋರಿಯಲ್ ಆರ್ಮಿಯಲ್ಲಿ ಲೆಫ್ಟಿನೆಂಟ್. ಭಾರತೀಯ ಸೇನೆಯ ಭಾಗವಾಗಿರುವ ಈ ಸ್ವಯಂಸೇವಾ ರಕ್ಷಣಾ ಪಡೆಯಲ್ಲಿ 3 ತಿಂಗಳ ಕಠಿಣ ತರಬೇತಿ ಮುಗಿಸಿ ಬಂದಿದ್ದಾರೆ. 2021ರಲ್ಲಿ ಟೆರಿಟೋರಿಯಲ್ ಆರ್ಮಿ ಬಗ್ಗೆ ತಿಳಿದುಕೊಂಡ ಕ್ಷಣದಿಂದಲೇ ಭವ್ಯಾ ತಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಂಡರು. ಪ್ರತಿವರ್ಷ ಇಡೀ ದೇಶಕ್ಕೆ ಮಹಿಳೆಯರಿಗೆ ಒಂದೇ ಹುದ್ದೆ ಇದೆಯಾದರೂ, 2022ರಲ್ಲಿ ಅದನ್ನು ತಾವೇ ಪಡೆಯುವಲ್ಲಿ ಯಶಸ್ಸು ಕಂಡಿದ್ದಾರೆ. ಕಾಶ್ಮೀರದ ಬಾರಾಮುಲ್ಲಾದಲ್ಲಿನ ‘173 ಎಂಜಿನಿಯರ್ ಟಿಎ ಯುನಿಟ್’ಗೆ 2024ರ ಜುಲೈನಲ್ಲಿ ನಿಯೋಜನೆಗೊಂಡಿದ್ದಾರೆ.
‘ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಹಾಗೂ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ (ಐಎಂಎ) ಮಹಿಳೆಯರಿಗೆ ತರಬೇತಿ ಪಡೆಯಲು ಅವಕಾಶವಿರಲಿಲ್ಲ. ಆದರೆ, ಇಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ, ಐಎಂಎಯಲ್ಲಿ ತರಬೇತಿಗೆ ಹಾಜರಾದ ಮೊದಲ ಮಹಿಳೆ ನಾನು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಭವ್ಯಾ.
‘ಪರೀಕ್ಷೆ 3 ಹಂತದಲ್ಲಿ ನಡೆಯಿತು. ಮೊದಲು ಬೆಂಗಳೂರಿನಲ್ಲಿ ಲಿಖಿತ ಪರೀಕ್ಷೆ, ನಂತರ ಪುಣೆಯಲ್ಲಿ ಪೂರ್ವಭಾವಿ ಸಂದರ್ಶನ ಮತ್ತು ಭೂಪಾಲದಲ್ಲಿ ಎಸ್‌ಎಸ್‌ಬಿ ಪರೀಕ್ಷೆ ಇತ್ತು’ ಎಂದು ಭವ್ಯಾ ಮಾಹಿತಿ ನೀಡಿದರು.
ವೈಯಕ್ತಿಕ ವಿವರ, ಪ್ರಚಲಿತ ವಿದ್ಯಮಾನ, ಮನೋವಿಜ್ಞಾನ, ಗಣಿತ ಹಾಗೂ ಸೇನೆಯ ಕುರಿತ ಕಠಿಣ ಪ್ರಶ್ನೆಗಳಿರುವ ಸಂದರ್ಶನವನ್ನು ಎದುರಿಸಿ, ಐದು ದಿನಗಳ ದೈಹಿಕ ಹಾಗೂ ಮನೋಸಾಮರ್ಥ್ಯದ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿ ಟೆರಿಟೋರಿಯಲ್ ಆರ್ಮಿ ಸೇರಿದ್ದಾರೆ.
‘ಸೇನಾ ಶಿಬಿರದ ತರಬೇತಿಯಲ್ಲಿ ಕಾಡಿನಲ್ಲೆಲ್ಲ ಕರೆದುಕೊಂಡು ಹೋಗುತ್ತಿದ್ದರು. ಶತ್ರುಗಳ ದಾಳಿಯಿಂದ ರಕ್ಷಿಸಿಕೊಳ್ಳುವ ದಿಸೆಯಲ್ಲಿ ಟ್ರೆಂಚ್ ಕೊರೆದು ಅದರಲ್ಲಿ ಕುಳಿತುಕೊಳ್ಳಬೇಕಿತ್ತು. ಮನೆಯಲ್ಲಿ ಹಲ್ಲಿ, ಜಿರಲೆ ಕಂಡರೆ ಹೊರ ಓಡಿಬರುತ್ತಿದ್ದ ನಾನು, ಅಲ್ಲಿ ಹುಳ–ಹುಪ್ಪಡಿಗಳೆಲ್ಲ ಮೈಮೇಲೆ ಓಡಾಡಿದರೂ ಸಹಿಸಿಕೊಳ್ಳಬೇಕಿತ್ತು. ಈ ತರಬೇತಿಯು ನನ್ನ ಜೀವನದ ಅವಿಸ್ಮರಣೀಯ ಅವಧಿ’ ಎಂಬುದು ಅವರ ಖುಷಿಯ ಮಾತು.
‘ಕ್ಯಾಂಪ್‌ನಲ್ಲಿದ್ದ ಐದು ದಿನ ಕಠಿಣ ತರಬೇತಿ ಇರುತ್ತದೆ. 5 ಕೆ.ಜಿ ಬ್ಯಾಗ್ ಮತ್ತು ಒಂದು ರೈಫಲ್ ಯಾವಾಗಲೂ ಹೊತ್ತಿರಬೇಕಿತ್ತು. ಶಿಬಿರದ ಕೊನೆಯ ದಿನ 20 ಕೆ.ಜಿ ಭಾರ ಹೊತ್ತು, ಜೊತೆಗೆ ರೈಫಲ್ ಹಿಡಿದು 20 ಕಿ.ಮೀ. ಓಡಿದೆ. ತರಬೇತಿಯ ಕಷ್ಟವನ್ನು ಸಹಿಸಲಾಗದೆ ಇಬ್ಬರು ಹುಡುಗರು ವಾಪಸ್ ಹೋದರು. ನಾನಂತೂ ಹಿಂದಿರುಗುವ ಬಗ್ಗೆ ಯೋಚಿಸಲೂ ಇಲ್ಲ. ಇದೊಂದು ಸುವರ್ಣಾವಕಾಶ, ಅಲ್ಲದೆ ನಾನು ಹಿಂದಿರುಗಿದರೆ, ಸೇನೆ ಅಥವಾ ಟೆರಿಟೋರಿಯಲ್ ಆರ್ಮಿ ಸೇರಬಯಸುವ ಯುವತಿಯರೂ ಎದೆಗುಂದುವಂತೆ ಆಗಬಾರದು ಎಂಬ ಉದ್ದೇಶದಿಂದ ತರಬೇತಿ ಪೂರ್ಣಗೊಳಿಸಿಯೇ ಬಂದೆ’ ಎಂದರು ಭವ್ಯಾ.
‘ನನ್ನ ವೃತ್ತಿಯಲ್ಲಿ ಇದ್ದುಕೊಂಡೇ, ವರ್ಷದಲ್ಲಿ ಎರಡು ತಿಂಗಳು ಸೇನೆಯಲ್ಲಿ ಸೇವೆ ಸಲ್ಲಿಸುವ ಅದೃಷ್ಟ ನನ್ನದಾಗಿದೆ. ವೈಯಕ್ತಿಕವಾಗಿಯೂ ಈ ತರಬೇತಿ ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮತ್ತು ಕಷ್ಟವನ್ನು ಸಹಿಸುವ ಶಕ್ತಿ ನೀಡಿದೆಯಲ್ಲದೆ, ಶಿಸ್ತು ಮೂಡಿಸಿದೆ. ಮುಂದೆ ರಾಜಕೀಯದಲ್ಲಿ ನಾನು ಹೆಚ್ಚು ತೊಡಗಿಸಿಕೊಂಡರೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತೇನೆ’ ಎನ್ನುವ ಭವ್ಯಾ, ನಿವೃತ್ತಿ ವೇಳೆಗೆ, ಲೆಫ್ಟಿನೆಂಟ್ ಕರ್ನಲ್ ಆಗಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.