ADVERTISEMENT

‘ವರ್ತಮಾನದಲ್ಲಿ ಬದುಕುವವ ಯುವಕ’

‘ಶ್ವಾಸ ಗುರು’ ವಚನಾನಂದ ಸ್ವಾಮೀಜಿ

ಪ್ರಕಾಶ ಕುಗ್ವೆ
Published 9 ಫೆಬ್ರುವರಿ 2019, 7:44 IST
Last Updated 9 ಫೆಬ್ರುವರಿ 2019, 7:44 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ವಚನಾನಂದ ಸ್ವಾಮೀಜಿ ‘ಶ್ವಾಸಗುರು’ ಎಂದೇ ಹೆಸರುವಾಸಿ. ಯೋಗ, ಧ್ಯಾನ, ಆಧ್ಯಾತ್ಮಿಕ ಚಿಂತನೆಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದೆಂಬ ದೃಢ ಸಂಕಲ್ಪ ಅವರದ್ದು. ಸಾಮಾಜಿಕ, ಧಾರ್ಮಿಕ ಜವಾಬ್ದಾರಿಗಳ ಜೊತೆಯಲ್ಲೇ ಯೋಗವನ್ನೂ ಪ್ರಸಾರ ಮಾಡುತ್ತಿದ್ದಾರೆ. ಯುವಪೀಳಿಗೆಗೆ ಯೋಗ ಎಷ್ಟು ಅಗತ್ಯ ಎಂಬುದನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ...

* ಯುವಪೀಳಿಗೆಗೆ ಯೋಗಾಭ್ಯಾಸ ಏಕೆ ಬೇಕು?
ಯೋಗ, ಯುವಕರನ್ನು ಯುವಕರನ್ನಾಗಿಡುತ್ತದೆ. ಪ್ರತಿಯೊಬ್ಬರೂ ಯುವಕರಾಗಿರಬೇಕು, ಶಾರೀರಿಕವಾಗಿ ಗಟ್ಟಿಮುಟ್ಟಾಗಿರಬೇಕು, ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಅದಕ್ಕೆ ಪ್ರತಿನಿತ್ಯ ಯೋಗ ಮಾಡಬೇಕು. ಯುವಕ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಶಾರೀರಿಕ ಅಲ್ಲ; ಮಾನಸಿಕವಾಗಿಯೂ ಸದೃಢನಾಗಿರಬೇಕು. ಮುದುಕ ಎಂದರೆ ಸೋಲುವವನು, ನನ್ನಿಂದಾಗದು ಎಂದು ಒಪ್ಪಿಕೊಳ್ಳುವವನು ಎಂದರ್ಥ. ಮುದುಕ ಯಾವತ್ತೂ ಭೂತಕಾಲದಲ್ಲೇ ಬದುಕುತ್ತಾನೆ. ಬಾಲಕ ಎಂದಿಗೂ ಭವಿಷ್ಯದಲ್ಲಿ ಬದುಕುತ್ತಾನೆ. ಯುವಕ ಸದಾ ವರ್ತಮಾನದಲ್ಲಿ ಬದುಕುತ್ತಾನೆ.

* ನಾನು ಆರೋಗ್ಯವಾಗಿದ್ದೇನೆ, ನಾನೇಕೆ ಯೋಗಾಭ್ಯಾಸ ಮಾಡಬೇಕು ಎಂದು ಹಲವರು ಪ್ರಶ್ನಿಸುತ್ತಾರಲ್ಲ?
ಆರೋಗ್ಯ ಎನ್ನುವುದು ಕೇವಲ ಶಾರೀರಿಕವಾದುದಷ್ಟೆ ಅಲ್ಲ, ಮಾನಸಿಕವಾದುದೂ ಹೌದು. ಇವತ್ತು ಗಟ್ಟಿಮುಟ್ಟಾಗಿದ್ದೇನೆಂದರೆ ಅದರ ಅರ್ಥ ಇವತ್ತಿಗೆ ಮಾತ್ರ ಎಂದಲ್ಲ, ನಾಳಿಯೂ ಗಟ್ಟಿಮುಟ್ಟಾಗಿರಬೇಕು; ನಾಡಿದ್ದೂ ಗಟ್ಟಿಯಾಗಿರಬೇಕು. ವಿಶ್ವಸಂಸ್ಥೆ ಕೂಡ ಆರೋಗ್ಯವನ್ನು–ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಷ್ಟೇ ಅಲ್ಲ–ಸಂಪೂರ್ಣ ವ್ಯಕ್ತಿತ್ವ ವಿಕಸನ ಎಂದಿದೆ. ನನ್ನ ಆರೋಗ್ಯ, ಸಮಾಜದ ಆರೋಗ್ಯಕ್ಕೂ ಸಂಬಂಧಿಸಿದೆ. ನನ್ನ ಸ್ವಾಸ್ಥ್ಯ, ಸಮಾಜದ ಸ್ವಾಸ್ಥ್ಯಕ್ಕೂ ಸಂಬಂಧಿಸಿದೆ.

ADVERTISEMENT

* ಏಕಕಾಲದಲ್ಲಿ ಹಲವು ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ನಮಗೆಲ್ಲ. ಇದನ್ನು ನಿಭಾಯಿಸುವುದು ಹೇಗೆ?
ನಮ್ಮ ಮನಸ್ಸಿನ ಸ್ಥಿತಿಯೇ ಹಾಗಿದೆ. ಮನಸ್ಸಿನ ಹಿಂದೆ ಓಡುವ ಮನುಷ್ಯ ಒಂದೇ ಸಮಯದಲ್ಲಿ ಹತ್ತು ಕೆಲಸಗಳನ್ನು ಮಾಡಲು ಮುಂದಾಗುತ್ತಾನೆ. ಆದರೆ, ಅದರಲ್ಲಿ ಅಯಶಸ್ಸನ್ನು ಕಾಣುತ್ತಾನೆ. ಒಂದನ್ನು ಅರಿಯದೆ ಮತ್ತೇನನ್ನು ಅರಿತರೂ ಫಲ ಇಲ್ಲ ಎಂಬ ಮಾತಿದೆ. ಯಾವುದಕ್ಕೆ ಹೆಚ್ಚು ‍ಪ್ರಾಮುಖ್ಯ ನೀಡಬೇಕು ಎಂಬುದನ್ನು ನಾವೇ ಅರಿತುಕೊಳ್ಳಬೇಕು.

ಜೀವನದಲ್ಲಿ ಯಶಸ್ಸು ಕಾಣಲು ನಾಲ್ಕು ವಿಷಯಗಳನ್ನು ಅನುಸರಿಸಬೇಕು. ವೈಯಕ್ತಿಕ ಜೀವನಕ್ಕೆ ನಾನೆಷ್ಟು ಸಮಯ ಕೊಡುತ್ತೇನೆ? ನನ್ನ ಕುಟುಂಬಜೀವನ ಹೇಗಿದೆ? ಸಂಬಂಧಿಕರ ಜೊತೆ ನನ್ನ ಸಂಬಂಧ ಹೇಗಿದೆ? ಒಟ್ಟಾರೆ ಸಮಾಜದ ಜತೆ ನಾನು ಹೇಗೆ ನಡೆದುಕೊಳ್ಳುತ್ತೇನೆ? ವೈಯಕ್ತಿಕವಾಗಿ ಯಶಸ್ವಿ ಆದಾಗ ಖಂಡಿತವಾಗಿ ಕುಟುಂಬಜೀವನದಲ್ಲೂ ಯಶಸ್ಸನ್ನು ಕಾಣಲು ಸಾಧ್ಯ. ಯೋಗ ಇದನ್ನು ಹೇಳಿಕೊಡುತ್ತದೆ. ಜೀವನಕಲೆ ಎಂದರೆ ಇದೇ.

ಏಕಕಾಲಕ್ಕೆ ಹಲವು ಕೆಲಸ ಮಾಡುವುದರಿಂದ ಹಣ ಮಾಡಬಹುದು. ಆದರೆ ಎಷ್ಟು ವರ್ಷ ಈ ರೀತಿ ಮಾಡಬಹುದು? ಕ್ರಮೇಣ ಆರೋಗ್ಯ ಕಳೆದುಕೊಳ್ಳಬೇಕಾಗುತ್ತದೆ; ಮಾನಸಿಕ ಸಮತೋಲನವೂ ಇಲ್ಲವಾಗುತ್ತದೆ. ನಾವು ಅತಿ ಹೆಚ್ಚು ಖರ್ಚುನ್ನು ಆಹಾರಕ್ಕಾಗಿಯೇ ಮಾಡಬೇಕು. ಆದರೆ, ಬಟ್ಟೆಗೆ ಮಹತ್ವ ಕೊಡುತ್ತಿದ್ದೇವೆ. ಔಟ್‌ಲುಕ್‌ಗೆ ಹೆಚ್ಚು ಆದ್ಯತೆ ನೀಡುತ್ತೇವೆ. ನಮ್ಮ ದೇಹದ ಒಳಗಿನ ಅಂಕುಡೊಂಕನ್ನು ಸರಿಪಡಿಸುವುದು ನಾವು ಸೇವಿಸುವ ಆಹಾರ ಎಂಬ ಅರಿವು ನಮಗಿಲ್ಲ.

*ನಮ್ಮ ದಿನಚರಿ ಹೇಗಿದ್ದರೆ ಚೆಂದ?
ಪ್ರತಿಯೊಬ್ಬರೂ ತಮ್ಮ ಕೆಲಸಕ್ಕೆ ತಕ್ಕಂತೆ ದಿನಚರಿಯನ್ನು ರೂಢಿಸಿಕೊಳ್ಳಬೇಕು. ದಿನಚರಿ ಎನ್ನುವುದು ತೀರಾ ವೈಯಕ್ತಿಕವಾದದ್ದು. ಒಳ್ಳೆಯ ನಿದ್ದೆ ಮಾಡಬೇಕು, ಸಕಾಲಕ್ಕೆ ಆಹಾರಸೇವನೆ, ಯೋಗ, ಧ್ಯಾನ ಮಾಡಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.