ADVERTISEMENT

ಕೊಂಕಣಿಯ ಅನನ್ಯ ಸಾಹಿತಿ ಮಹಾಬಳೇಶ್ವರ ಸೈಲ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 19:30 IST
Last Updated 27 ಡಿಸೆಂಬರ್ 2025, 19:30 IST
ಮಹಾಬಳೇಶ್ವರ ಸೈಲ
ಮಹಾಬಳೇಶ್ವರ ಸೈಲ   
ಮಹಾಕವಿ ಕುವೆಂಪು ಅವರ ಹುಟ್ಟೂರಾದ ಕುಪ‍್ಪಳಿಯಲ್ಲಿ ಸ್ಥಾಪಿತವಾಗಿರುವ ಕುವೆಂಪು ಪ್ರತಿಷ್ಠಾನವು ಕುವೆಂಪು ಹೆಸರಿನಲ್ಲಿ ಪ್ರತಿವರ್ಷ ಒಂದೊಂದು ಭಾಷೆಯ ಸಾಹಿತಿಗಳಿಗೆ ಪ್ರಶಸ್ತಿ ನೀಡುತ್ತ ಬಂದಿದೆ. 2025ನೇ ಸಾಲಿನ ಈ ಪ್ರಶಸ್ತಿಯು ಕೊಂಕಣಿ ಭಾಷೆಯ ಪ್ರಸಿದ್ಧ ಕಾದಂಬರಿಕಾರ ಮಹಾಬಳೇಶ್ವರ ಸೈಲ್‌ ಅವರಿಗೆ ಲಭಿಸಿದೆ. ಡಿ.29ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಮಹಾಬಳೇಶ್ವರ ಸೈಲ್ ಕಾರವಾರದ  ಮಾಜಾಳಿಯವರು. ಇವರ ತಂದೆ ಸೈನ್ಯದಲ್ಲಿದ್ದರು. ತಾಯಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಡುಬಡತನದಲ್ಲಿ ಬೆಳೆದ ಇವರು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಕ ಶಿಕ್ಷಣ ಮುಗಿಸಿದರು. ಊರಿನಲ್ಲಿಯೇ ಬೇಸಾಯ, ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕುಟುಂಬ ನಡೆಸಲು ಆದಾಯ ಸಾಕಾಗುತ್ತಿರಲಿಲ್ಲ. ಹೀಗಾಗಿ ಬದುಕಿನಲ್ಲಿ ಬೇರೆ ಏನಾದರೂ ಮಾಡಬೇಕೆಂಬ ಆಲೋಚನೆ ಸೈಲ್‌ ಅವರಿಗಿತ್ತು. 

ತಂದೆ ಯುದ್ಧ ಕೈದಿಯಾಗಿ ಮನೆಯವರ ಸಂಪರ್ಕದಲ್ಲಿ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಆತಂಕವಿತ್ತು. ಜತೆಗೆ ಸೈನ್ಯವೆಂದರೆ ಸೈಲ್‌ ಅವರ ತಾಯಿಗೆ ಒಂದು ರೀತಿ ಭಯವೂ ಇತ್ತು. ಬಹುಬೇಗ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಾಯಿಯನ್ನು ನೋಡಿಕೊಂಡು ಮನೆಯಲ್ಲಿದ್ದ ಸೈಲ್‌ ಅವರಿಗೆ ಕಾರವಾರದಲ್ಲಿ ಸೈನ್ಯಕ್ಕೆ ನೇಮಕಾತಿ ನಡೆಯುತ್ತಿರುವುದು ಗೆಳೆಯನಿಂದ ತಿಳಿಯುತ್ತದೆ. ಮನೆಯಲ್ಲಿ ಹೇಳದೆ ಆ ನೇಮಕಾತಿಗೆ ಹಾಜರಾಗುತ್ತಾರೆ. ಅಲ್ಲಿ ಆಯ್ಕೆಗೊಂಡು, ವಿಷಯವನ್ನು ತಾಯಿಗೂ ತಿಳಿಸದೆ ಸೈನ್ಯ ಸೇರಿಕೊಳ್ಳುತ್ತಾರೆ. ತಾಯಿಗೆ ಸುಳ್ಳು ಹೇಳಿ ಮನೆಯಿಂದ ಹೊರಬರುವ ಅವರು ಡಾರ್ಜಿಲಿಂಗ್‌ನಲ್ಲಿ ತರಬೇತಿ ಪಡೆದು ಪ್ಯಾಲೆಸ್ತೀನ್‌ನಲ್ಲಿ ನಿಯುಕ್ತಿಗೊಳ್ಳುತ್ತಾರೆ. ಅಲ್ಲಿಂದ ಬಂದ ಬಳಿಕ ರಾಜಸ್ಥಾನ ಮರುಭೂಮಿಯಲ್ಲಿ ಗಡಿ ಕಾಯುವ ಕೆಲಸಕ್ಕೆ ನಿಯುಕ್ತಿಗೊಳ್ಳುತ್ತಾರೆ.

1965ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ತಮ್ಮ ಜತೆಗಿದ್ದ ಹದಿನೆಂಟು ಸಂಗಾತಿಗಳನ್ನು ಕಳೆದುಕೊಂಡ ಇವರು, ಸೈನ್ಯ ತಮಗೆ ಸೂಕ್ತ ಜಾಗವಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಅದೇ ವೇಳೆಗೆ ತಾಯಿ ಕೂಡ ತೀರಿಕೊಳ್ಳುತ್ತಾರೆ. ಇದಾಗಿ ವರ್ಷಗಳ ಬಳಿಕ ಇವರು ಸೇನೆಯನ್ನು ಬಿಟ್ಟು ಹುಟ್ಟೂರಿಗೆ ಮರಳುತ್ತಾರೆ. ಊರಿನಲ್ಲಿ ಕೃಷಿ ಮಾಡುತ್ತ, ಖುಷಿಗೆ ಸಾಹಿತ್ಯ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಅಲ್ಲಿಯೂ ಹೆಚ್ಚು ಕಾಲ ನಿಲ್ಲುವುದಿಲ್ಲ. 1967ರಲ್ಲಿ ಗೋವಾಕ್ಕೆ ಬರುವ ಇವರು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಪಡೆಯುತ್ತಾರೆ. ಅತ್ಯುತ್ತಮ ಸೇವೆಗಾಗಿ ಅಂದಿನ ಗೋವಾ ಮುಖ್ಯಮಂತ್ರಿ ದಯಾನಂದ ಬಾಂದೋಡ್ಕರ ಅವರಿಂದ ಐದು ಪದಕಗಳನ್ನು ಪಡೆಯುತ್ತಾರೆ. ಶಿಕ್ಷಣ ವಂಚಿತರಾದ ಇವರು ಬಾಹ್ಯವಾಗಿ ಎಸ್ಸೆಸ್ಸೆಲ್ಸಿ ಪಾಸು ಮಾಡುತ್ತಾರೆ. ಬಳಿಕ ಪೊಲೀಸ್‌ ಕೆಲಸ ತ್ಯಜಿಸಿ, ಅಂಚೆ ಇಲಾಖೆ ಸೇರುವ ಅವರು 31 ವರ್ಷ ಅಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಾರೆ. 

ADVERTISEMENT

ಪುಣೆಗೆ ಅಂಚೆ ಇಲಾಖೆ ತರಬೇತಿಗೆ ಹೋಗುವ ಇವರು ಅಲ್ಲಿನ ಗ್ರಂಥಾಲಯದಲ್ಲಿ ಮರಾಠಿ ಸಾಹಿತ್ಯ ಓದಲು ಪ್ರಾರಂಭಿಸುತ್ತಾರೆ. ಮೊದಲಿಗೆ ‘ಕೊಂಡಮಾರಾ’ ಎಂಬ ಮರಾಠಿ ಕಥೆಯನ್ನು ಬರೆಯುತ್ತಾರೆ. ಅದು ನವಯುಗ ಪತ್ರಿಕೆಯಲ್ಲಿ ಪ್ರಕಟಗೊಂಡು ಸಾರಸ್ವತ ಪ್ರಪಂಚಕ್ಕೆ ಪರಿಚಿತರಾಗುತ್ತಾರೆ. ನಂತರ ಇವರ ಕಥೆಗಳನ್ನು ಅಂದಿನ ಮರಾಠಿ ಪ್ರಸಿದ್ಧ ಪತ್ರಿಕೆಗಳಾದ ‘ಹಂಸ’, ‘ಸತ್ಯಕಥಾ’, ‘ಸ್ವರಾಜ್ಯ’ ಮುಂತಾದ ಪತ್ರಿಕೆಗಳು ಪ‍್ರಕಟಿಸುತ್ತವೆ. ಜತೆಗೆ ಸೈಲ್‌ ಅವರ ಹೆಸರೂ ಜನಪ್ರಿಯವಾಗುತ್ತದೆ.

ಬಳಿಕ ಇವರು ‘ನಕೊ ಜಾಳೂ ಮಾಝ ಘರಟಂ’, ‘ಚರಿತ್ರ ಹೀನ’, ‘ಶರಣಾಗತಿ’, ‘ಯಾತನಾಚಕ್ರ’ ನಾಟಕಗಳನ್ನು ಬರೆಯುತ್ತಾರೆ. ಇವು ನೂರಾರು ಪ್ರದರ್ಶನಗಳನ್ನು ಕಂಡವು. ಪೋಸ್ಟ್‌ ಮಾಸ್ಟರ್‌ ಆಗಿ ಗೋವಾದ ಮಾಜೋರ್ಡಾ ಗ್ರಾಮಕ್ಕೆ ಬಂದ ಇವರು ಕೊಂಕಣಿಯ ಪ್ರಸಿದ್ಧ ಲೇಖಕರಾದ ದಾಮೋದರ ಮಾವ್‌ಜೊ ಅವರ ಸಂಪರ್ಕಕ್ಕೆ ಬಂದರು. ಕೊಂಕಣಿಯಲ್ಲಿ ‘ಪಲ್ತಡಚೆ ತಾರೂ’ ಎಂಬ ಮೊದಲ ಕಥಾ ಸಂಕಲನವನ್ನು 1980ರಲ್ಲಿ ಪ್ರಕಟಿಸಿದರು. 1991ರಲ್ಲಿ ‘ತರಂಗಾಂ’ ಎಂಬ ಎರಡನೇ ಕಥಾ ಸಂಕಲನವನ್ನು ಪ್ರಕಟಿಸಿದರು. ಇದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. 

ಮುಂದೆ ಇವರು ‘ಕಾಳಗಂಗಾ’ ಎಂಬ ಕಾದಂಬರಿ ಬರೆದರು. ಹದಿನಾರನೇ ಶತಮಾನದಲ್ಲಿ ಗೋವಾದಲ್ಲಿ ನಡೆದ ಧರ್ಮಾಂತರದ ಕುರಿತು ‘ಯುಗಸಂಹಾರ’ ಎಂಬ ಕಾದಂಬರಿ ಬರೆದರು. ಅವರೇ ಅದನ್ನು ‘ತಾಂಡವ’ ಎಂಬ ಹೆಸರಿನಲ್ಲಿ ಮರಾಠಿಗೆ ಅನುವಾದಿಸಿದರು. ಇದನ್ನು ಕುವೆಂಪು ಭಾಷಾ ಭಾರತಿಯವರು ‘ಚಂಡಮಾರುತ’ ಎಂಬ ಹೆಸರಿನಲ್ಲಿ ಕನ್ನಡದಲ್ಲಿಯೂ ಪ್ರಕಟಿಸಿದ್ದಾರೆ. 

ಪಲ್ತಡಚೆ ತಾರೂ, ಬಯೋನೆಟ್‌ ಫೈಟಿಂಗ್‌, ನಿಮಣೊ ಅಶ್ವತ್ಥಾಮಾ, ದೋನ ಮುಳಾಚೆಂ, ಝಾಡ ಅವರ ಇತರ ಕಥಾ ಸಂಕಲನಗಳು. ಅದೃಷ್ಟ, ಯುಗ ಸಂವಾರ, ಖೋಲ ಖೋಲ ಮುಳಾಂ, ಹಾವಠಣ, ವಿಖಾರ ವಿಳಖೊ, ಮಾತಿ ಆನಿ ಮಳಬ, ಅಗ್ರದೂತ, ಸಿಂಸ್ರಭೋಗ ಮೊದಲಾದ ಕಾದಂಬರಿಗಳನ್ನು ಕೊಂಕಣಿ ಭಾಷೆಯಲ್ಲಿ ಬರೆದಿದ್ದಾರೆ. ಅವರ ಹಾವಠಣ ಕಾದಂಬರಿಗೆ ಸರಸ್ವತಿ ಸಮ್ಮಾನ ಪುರಸ್ಕಾರ ಲಭಿಸಿದೆ. ಇದನ್ನು ‘ಆವಿಣೆ’ ಎಂಬ ಹೆಸರಿನಲ್ಲಿ ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದವರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದಾರೆ. 

ಇದಲ್ಲದೆ ಅವರ ಅದೃಷ್ಟ ಕಾದಂಬರಿ ಆಧಾರಿತ ‘ಪಲ್ತಡಚೆ ಮನಿಸ್’ ಚಲನಚಿತ್ರಕ್ಕೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಇವರ ಕೆಲವು ಕಾದಂಬರಿಗಳು ಕನ್ನಡ, ಇಂಗ್ಲಿಷ್‌ ಹೊರತಾಗಿ ತಮಿಳು, ಮರಾಠಿ, ಮಲಯಾಳ ಭಾಷೆಗಳಿಗೆ ಅನುವಾದಗೊಂಡಿವೆ. ಇಷ್ಟು ದೊಡ್ಡ ಲೇಖಕರು ನಮ್ಮ ಕನ್ನಡನಾಡಿನವರು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ.  

‘ಮನುಷ್ಯನೇ ನನ್ನ ಸಾಹಿತ್ಯದ ಕೇಂದ್ರಬಿಂದು. ನಾನು ನನ್ನ ಸಾಹಿತ್ಯದಲ್ಲಿ ಪ್ರಕೃತಿ, ಪ್ರೇಮ ಮತ್ತು ಮಿಲಿಟರಿ ಅನುಭವಗಳನ್ನು ಸೇರಿಸಿದ್ದೇನೆ. ಗಂಡು–ಹೆಣ್ಣಿನ ಪ್ರೀತಿ–ಪ್ರಣಯ ಕೇವಲ ಕಾಮತೃಪ್ತಿಯ ದಿಶೆಯಲ್ಲಿ ಸಾಗುತ್ತಿದ್ದುದರಿಂದ ನನ್ನನ್ನು ಆಕರ್ಷಿಸಲಿಲ್ಲ’ ಎನ್ನುತ್ತಾರೆ ಸೈಲ್‌.

ಅವರ ‘ಅರಣ್ಯಕಾಂಡ’, ‘ಅದೃಷ್ಟ’, ‘ಕಾಳಿಗಂಗಾ’ ಕಾದಂಬರಿಗಳನ್ನು ಗೀತಾ ಶೆಣೈ ಕನ್ನಡಕ್ಕೆ ಅನುವಾದಿಸಿದ್ದಾರೆ. ಮಹಾಬಳೇಶ್ವರರ ಸಾಹಿತ್ಯ ಅವರ ಅನುಭವಗಳ ಮೇಲೆ ನಿರ್ಮಿತವಾದ ಗಟ್ಟಿಯಾದ ಮನೆ. ಅವರು ಕಾಡಿನಲ್ಲಿ ಕಳೆದ ದಿನಗಳು, ಬೇಸಾಯದಲ್ಲಿ ಪಟ್ಟ ಕಷ್ಟಗಳು, ಸೈನ್ಯದಲ್ಲಿನ ನೆನಪು, ಅಂಚೆ ಇಲಾಖೆಯಲ್ಲಿನ ಅನುಭವಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅವರ ಕೃತಿಗಳಲ್ಲಿ ಕಾಣಿಸುತ್ತವೆ. ಇಂದು ದೇವನಾಗರಿಯಲ್ಲಿ ಬರೆಯುವ ಕೊಂಕಣಿ ಲೇಖಕರಲ್ಲಿ ಮಹಾಬಳೇಶ್ವರರ ಸ್ಥಾನ ಅತ್ಯುನ್ನತ ಮಟ್ಟದ್ದು. ಇವರಿಗೆ ಸ್ಥಳೀಯ ಸಂಘ, ಸಂಸ್ಥೆಗಳಿಂದ ಹಿಡಿದು ಗೋವಾ ಕೊಂಕಣಿ ಅಕಾಡೆಮಿಯಿಂದ, ಗೋವಾ ಸಂಸ್ಕೃತಿ ನಿರ್ದೇಶನಾಲಯದಿಂದ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.