ADVERTISEMENT

ಮೈಲಾರಪ್ಪನ ನೈವೇದ್ಯ; ಪ್ರಾಣಿಗಳಿಗೆ ಆಹಾರ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 19:30 IST
Last Updated 29 ಜುಲೈ 2019, 19:30 IST
ಉಳಿದ ಮೀಸಲುಬುತ್ತಿ ಒಣಗಿಸುತ್ತಿರುವುದು
ಉಳಿದ ಮೀಸಲುಬುತ್ತಿ ಒಣಗಿಸುತ್ತಿರುವುದು   

‘ನೈವೇದ್ಯ ಪಶು–ಪಕ್ಷಿಗಳ ಆಹಾರವಾದರೆ, ಅದು ದೇವರಿಗೆ ಸಮರ್ಪಣೆಯಾದಂತೆ’– ಹೀಗೊಂದು ನಂಬಿಕೆ ಇದೆ. ಆ ನಂಬಿಕೆ ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಶ್ರೀಕ್ಷೇತ್ರ ಮೈಲಾರದಲ್ಲಿ ಕಾರ್ಯರೂಪದಲ್ಲಿದೆ. ಇಲ್ಲಿ ‘ಮೈಲಾರಪ್ಪ’ನಿಗೆ ಭಕ್ತರು ಅರ್ಪಿಸುವ ಮೀಸಲು ಬುತ್ತಿ ಪ್ರಾಣಿ ಪಕ್ಷಿಗಳ ಹಸಿವು ನೀಗಿಸುತ್ತಿದೆ !

ಶ್ರೀಕ್ಷೇತ್ರದಲ್ಲಿ ಪ್ರತಿ ಭಾನುವಾರ ಹಾಗೂ ಪ್ರತಿ ಹುಣ್ಣಿಮೆಯಂದು ವಿಶೇಷ ಪೂಜೆ ನಡೆಯುತ್ತದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಈ ಕಾರ್ಯಕ್ರಮಗಳಿಗೆ ಬರುವ ಭಕ್ತರು ದೇವರಿಗೆ ರೊಟ್ಟಿ, ಕಾಳು ಪಲ್ಯ, ಬುತ್ತಿ ಅನ್ನ, ಬಾಳೆಹಣ್ಣಿನಂತಹ ಖಾದ್ಯಗಳನ್ನು ಮೀಸಲು ಬುತ್ತಿಯಾಗಿ ಸಮರ್ಪಿಸುತ್ತಾರೆ. ಇಲ್ಲಿ ನೈವೇದ್ಯವನ್ನು ಗರ್ಭಗುಡಿಗೆ ತೆಗೆದುಕೊಂಡು ಹೋಗಿ ಆಶೀರ್ವಾದ ಮಾಡಿಸಿಕೊಂಡು ತರುತ್ತಾರೆ. ನಂತರ ದೇಗುಲದ ಆವರಣದಲ್ಲಿ ಸಾಲಾಗಿ ಕುಳಿತಿರುವ ಗೊರವಪ್ಪಗಳ ದೋಣಿಗಳಿಗೆ (ಗೊರವಪ್ಪನನ್ನು ಮೈಲಾರಪ್ಪನ ಬಾಬುದಾರ ಎಂತಲೂ ಕರೆಯುತ್ತಾರೆ) ಸಮರ್ಪಿಸುತ್ತಾರೆ. 50 ಕ್ಕೂ ಹೆಚ್ಚು ಮೈಲಾರಪ್ಪನ ಬಾಬುದಾರರಿರುತ್ತಾರೆ. ಅವರು 100-150 ಸಾಲು ದೋಣಿಗಳನ್ನು ಇಟ್ಟುಕೊಂಡು ಭಕ್ತರಿಂದ ಮೀಸಲು ಬುತ್ತಿ ಸ್ವೀಕರಿಸುತ್ತಾರೆ. ಯಾರಾದರೂ ಅಪೇಕ್ಷೆ ಪಟ್ಟರೆ ಅದನ್ನು ಪ್ರಸಾದವೆಂದು ಕೊಡುತ್ತಾರೆ.

ಮೈಲಾರಪ್ಪನ ಬಾಬುದಾರರು ತಾವು ಬಳಸಿ, ಕೇಳಿದವರಿಗೆ ಕೊಟ್ಟು ಮಿಕ್ಕುವ ಬುತ್ತಿಯನ್ನು ತಮ್ಮ-ತಮ್ಮ ಮನೆ ಮಾಳಿಗೆ, ಅಂಗಳ, ಹಿತ್ತಲಿನಲ್ಲಿ ಬಿಸಿಲಿಗೆ ಒಣಗಲು ಹಾಕುತ್ತಾರೆ. ಆಹಾರ ಒಣಗಿದ ನಂತರ ಅದನ್ನು ಮಿತ ಪ್ರಮಾಣದಲ್ಲಿ ದನಗಳು, ಕುರಿಗಳಿಗೆ ನೀಡುತ್ತಾರೆ. ಉಣ್ಣುವ ಜಾನುವಾರುಗಳು ಸಂತುಷ್ಟವಾಗುತ್ತವೆ. ರೈತರ ಅನುಭವದ ಪ್ರಕಾರ, ಈ ರೀತಿಯಲ್ಲಿ ಸೇವಿಸುವ ಈ ಆಹಾರದಿಂದ ಆಕಳುಗಳಲ್ಲಿ ಹಾಲಿನ ಪ್ರಮಾಣವೂ ಹೆಚ್ಚಾಗಿದೆಯಂತೆ.

ADVERTISEMENT

ಒಮ್ಮೆ ಸಂಗ್ರಹಿಸಿದ ಮೀಸಲು ಬುತ್ತಿ ಸಂಪೂರ್ಣವಾಗಿ ಒಣಗಲು ಸುಮಾರು 8-10 ದಿನಗಳೇ ಬೇಕು. ಹೀಗೆ, ವಾರಗಟ್ಟಲೇ ಬಯಲಲ್ಲಿ ಆಹಾರ ಒಣಗಿಸುತ್ತಿರುವಾಗಲೇ ಕೋತಿಗಳ ದಂಡು, ಕಾಗೆ, ಗುಬ್ಬಿಯಂತಹ ಪಕ್ಷಿಗಳು, ಅಳಿಲುಗಳು, ನಾಯಿಗಳೂ ಆಹಾರ ತಿನ್ನಲು ಸಾಲಿಡುತ್ತವೆ. ಹೊಟ್ಟೆ ತುಂಬುವಷ್ಟು ತಿನ್ನುತ್ತವೆ. ಒಮ್ಮೊಮ್ಮೆ ಮಾಳಿಗೆ ಮೇಲೆ ಮಂಗಗಳ ದಂಡೇ ಮೇಳೈಸುತ್ತದೆ.

‘ನಾವು ಒಣಗಿಸಿಡುವ ಆಹಾರಕ್ಕಾಗಿ ನಮ್ಮೂರು, ಪಕ್ಕದೂರಿ ನಿಂದಲೂ ಪ್ರಾಣಿ– ಪಕ್ಷಿಗಳು ಬರುತ್ತವೆ. ಈಗಂತೂ ಬರಗಾಲ. ಎಲ್ಲೂ ಮೇವಿಲ್ಲ. ಮೈಲಾರಲಿಂಗ ದೇವರಿಗೆ ನೀಡುವ ಮೀಸಲು ಬುತ್ತಿ ಪ್ರಾಣಿಗಳಿಗೆ ಮರುಭೂಮಿಯಲ್ಲಿ ಒಯಸಿಸ್‌ ಸಿಕ್ಕಂತಾಗಿದೆ’ ಎನ್ನುತ್ತಾರೆ ಹರಕೆ ಗೊರವಪ್ಪರಲ್ಲೊಬ್ಬರಾದ ನಿಂಗಪ್ಪ ಮಾದರ್. ‘ಸುತ್ತಮುತ್ತಲಿನ ಊರುಗಳಿಗೆ ಹೋಲಿಸಿದರೆ ನಮ್ಮೂರಲ್ಲಿ ವಾನರ ಸೈನ್ಯ ಹೆಚ್ಚಿದೆ. ತರಹೇವಾರಿ ಪಕ್ಷಿಗಳೂ ಇವೆ. ಮೈಲಾರದಲ್ಲಿ ಮನುಷ್ಯರಿರುವಷ್ಟೇ ಪ್ರಾಣಿ-ಪಕ್ಷಿಗಳಿವೆ. ಇದಕ್ಕೆ ಮೈಲಾರಲಿಂಗನಿಗೆ ಬರುವ ಮೀಸಲು ಬುತ್ತಿಯೇ ಕಾರಣ’ ಎನ್ನುತ್ತಾರೆ ಅವರು.

ಸಾಮಾನ್ಯವಾಗಿ ಭಕ್ತರು ದೇವಾಲಯಗಳಲ್ಲಿ ನೈವೇದ್ಯ ಸಮರ್ಪಿಸಿದ ಮೇಲೆ, ಆಹಾರ, ಮಣ್ಣು ಪಾಲಾಗುತ್ತದೆ. ಇಲ್ಲವೇ, ತ್ಯಾಜ್ಯವನ್ನು ಸೃಷ್ಟಿಸಿ, ಗುಡಿಯ ಆವರಣವನ್ನು ಕೊಳಕಾಗಿಸುತ್ತದೆ. ಆದರೆ, ಮೈಲಾರದಲ್ಲಿ ಕೈಗೊಂಡಿರುವ ಈ ಕಾರ್ಯದಿಂದ ಆಹಾರ ಮಣ್ಣುಪಾಲಾಗುತ್ತಿಲ್ಲ. ತಕ್ಕಮಟ್ಟಿಗೆ ದೇವಾಲಯದ ಅಂಗಳ ಕೊಳಕಾಗುವುದೂ ತಪ್ಪಿದೆ.

ಅಂದಹಾಗೆ ಮೈಲಾರಪ್ಪನ ಕ್ಷೇತ್ರದಲ್ಲಿ ನಡೆಯುವ ‘ಪಶು–ಪ್ರಾಣಿಗಳ ದಾಸೋಹ’ ನೋಡುವ ಆಸಕ್ತಿ ಇದ್ದರೆ, ಯಾವುದಾದರೂ ಒಂದು ಭಾನುವಾರ ಅಥವಾ ಹುಣ್ಣಿಮೆ ಸಮಯದಲ್ಲಿ ಕ್ಷೇತ್ರಕ್ಕೆ ಭೇಟಿ ನೀಡಿ. ಮೈಲಾರಪ್ಪನ ಜಾತ್ರೆಗೆ ಬಂದರೂ ಈ ದೃಶ್ಯಗಳು ಕಾಣಸಿಗುತ್ತವೆ.

‘ಮಿತ ಬಳಕೆ ಉತ್ತಮ’

ಒಣಗಿಸಿದ ಇಂಥ ಆಹಾರದಲ್ಲಿ ಪ್ರೋಟಿನ್‌ ಇರುತ್ತದೆ. ಇದನ್ನು ಮಿತವಾಗಿ ಜಾನುವಾರುಗಳಿಗೆ ಕೊಡುವುದರಿಂದ ತೊಂದರೆಯಿಲ್ಲ. ಆದರೆ ಅತಿಯಾಗಿ ಸೇವಿಸಿದರೆ ರಾಸುಗಳ ಆರೋಗ್ಯಕ್ಕೆ ಮಾರಕವಾಗುತ್ತದೆ. ಬುತ್ತಿಯಲ್ಲಿ ಅನ್ನ ಹೆಚ್ಚಾಗಿದ್ದರೆ ಅದರಿಂದ ದೇಹಕ್ಕೆ ಹೆಚ್ಚು ಕಾರ್ಬೊಹೈಡ್ರೇಟ್ ಸೇರುತ್ತದೆ. ಇದರಿಂದ ದನಕರುಗಳ ಹೊಟ್ಟೆಯಲ್ಲಿ ಗಾಳಿ ತುಂಬುತ್ತೆ. ಹೊಟ್ಟೆ ಉಬ್ಬುತ್ತೆ. ನೋವು ಕಾಣಿಸಿಕೊಳ್ಳುತ್ತೆ. ಸಗಣಿ ಹಾಕುವುದು ಕಡಿಮೆ ಮಾಡುತ್ತವೆ. ಒಮ್ಮೊಮ್ಮೆ ಅವು ಸಾಯುವ ಸಾಧ್ಯತೆ ಇರುತ್ತದೆ. ಈ ದೃಷ್ಟಿಯಿಂದ ರೈತರು ಎಚ್ಚರ ವಹಿಸುವುದು ಒಳಿತು. ಆಹಾರ ಒಣಗಿಸುವಾಗಲೇ ಕೋತಿ, ಪಕ್ಷಿಗಳು ತಿನ್ನುತ್ತವೆ ಎನ್ನುತ್ತೀರಿ. ಅವು, ತಮಗೆಷ್ಟು ಬೇಕೋ ಅಷ್ಟನ್ನೇ ಸೇವಿಸುತ್ತವೆ. ತಿಂದರೆ ಸಮಸ್ಯೆ ಇಲ್ಲ.

-ಮಹಾಂತೇಶ ಶೆಟಕಾರ್
ಪಶು ವೈದ್ಯಾಧಿಕಾರಿಗಳು, ಬಂಡ್ರಿ, ಬಳ್ಳಾರಿ ಜಿಲ್ಲೆ

ಚಿತ್ರಗಳು: ಲೇಖಕರವು

‘ಭಕ್ತರು ಮೀಸಲು ಬುತ್ತಿಯನ್ನು ಗರ್ಭಗುಡಿಗೆ ತಂದು ಪೂಜೆ ಮಾಡಿಸಿಕೊಂಡು, ಗೊರವಪ್ಪನವರ ದೋಣಿಗೆ ತುಂಬಿಸುತ್ತಾರೆ. ಇದು ಸಾಕ್ಷಾತ್ ಮೈಲಾರಲಿಂಗನಿಗೆ ಮೀಸಲು ಬುತ್ತಿ ಅರ್ಪಿಸಿದಂತೆ ಎನ್ನುವ ನಂಬಿಕೆ ಅವರದ್ದು. ನಂತರ ಬುತ್ತಿಯಲ್ಲಿ ಸ್ವಲ್ಪ ಉಳಿಸಿಕೊಂಡು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ‘ಪ್ರಸಾದ ಅಕ್ಷಯವಾಗಿರಲಿ’ ಎನ್ನುವುದು ಮತ್ತೊಂದು ನಂಬಿಕೆ. ಕೆಲವರು ಇಲ್ಲೇ ಅಡುಗೆ ಮಾಡಿ ದೇವರಿಗೆ ಅರ್ಪಿಸುತ್ತಾರೆ. ತಾವು ಉಂಡು, ಬಂದ ಭಕ್ತರಿಗೆ ಬಡಿಸಿ, ದೋಣಿಗೆ ತುಂಬಿಸುತ್ತಾರೆ. ಇದೊಂದು ಜನಪದ ಸಂಪ್ರದಾಯ’

- ಪ್ರಮೋದ್‌ ಭಟ್ಟರು
ಮೈಲಾರಲಿಂಗನ ಅರ್ಚಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.