
ಸಿದ್ದಾಪುರ ತಾಲ್ಲೂಕು ತ್ಯಾರ್ಸಿ ಗ್ರಾಮದಲ್ಲಿ ದಿನೇಶ ನಾಯ್ಕ ಸಣ್ಣದೊಂದು ಕಿರಾಣಿ ಅಂಗಡಿ ನಡೆಸುತ್ತಾರೆ. ಬೇಡ್ಕಣಿಯಲ್ಲಿ ಬಸ್ ಇಳಿದು ಅಲ್ಲಿಂದ ಮೂರು ಕಿಲೋಮೀಟರ್ ದೂರದ ಹಳ್ಳಿಗೆ ಸಾಗುವ ವೃದ್ಧರನ್ನು ತಮ್ಮ ಬೈಕ್‌ನಲ್ಲಿ ಬಿಟ್ಟು ಬರುತ್ತಾರೆ.
ಶಿರಸಿ ತಾಲ್ಲೂಕಿನ ಸಾಲ್ಕಣಿಯಿಂದ ಎಂಟು ಕಿಲೋಮೀಟರ್ ದೂರದ ಕೆಳಾಸೆ ಗ್ರಾಮಕ್ಕೆ ಬಸ್ ಸಂಚಾರವಿಲ್ಲ. ಆ ಗ್ರಾಮದ ಜನರ ಪಾಲಿಗೆ ಸಾಲ್ಕಣಿಯ ಕೇಶವ ಗೌಡ ಆಪತ್ಬಾಂಧವ. ವೃತ್ತಿಯಲ್ಲಿ ಟೇಲರ್ ಆಗಿರುವ ಅವರು ‘ಬೈಕ್ ಸೇವೆ’ ಮೂಲಕ ಕೆಳಾಸೆ, ಕುದ್ರಗೋಡ ಭಾಗದ ಜನರಿಗೆ ಚಿರಪರಿಚಿತರು.
ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರೆಗೆ ಬಸ್ ಬರುತ್ತದೆ. ಅಲ್ಲಿಂದ ಒಳಭಾಗದ ಕೆರೆಗದ್ದೆ, ಗೋಳಿಕಟ್ಟಾ, ಉಂಬಳಮನೆ, ಮಲ್ತಗಾರ, ಹೂಡ್ಲಮನೆ ಸೇರಿದಂತೆ ಹತ್ತಾರು ಗ್ರಾಮಗಳಿಗೆ ರಸ್ತೆ ಇದ್ದರೂ ಬಸ್ ಸಂಪರ್ಕವಿಲ್ಲ. ಈ ಊರಿನ ಜನರಿಗೆ ತಟ್ಟಿಕೈನಲ್ಲಿರುವ ಅಶೋಕ ಹೆಗಡೆ ಅವರ ಬಾಡಿಗೆ ಬೈಕ್ ಸೇವೆ ಅತ್ಯಗತ್ಯ.
ಯಲ್ಲಾಪುರ ತಾಲ್ಲೂಕಿನ ಕುಗ್ರಾಮಗಳಾದ ಶೇವ್ಕಾರ, ಕೈಗಡಿ, ವಜ್ರಳ್ಳಿ ಭಾಗದ ಒಳ ಹಳ್ಳಿಗಳು ಬಸ್ ಸಂಚಾರ ಕಂಡಿಲ್ಲ. ಇಲ್ಲಿನ ಜನರು ಪೇಟೆಗೆ ಸಾಗಲು ಸಮೀಪದ ಜಂಕ್ಷನ್‌ಗಳಲ್ಲಿ (ಹಳ್ಳಿಗಳಲ್ಲಿ ಒಂದೆರಡು ಅಂಗಡಿಗಳಿರುವ, ಬಸ್‌ಗಳ ಇಳಿದಾಣ ಪ್ರದೇಶ) ನಿಲ್ಲುವ ಬಾಡಿಗೆ ಬೈಕ್‌ಗಳನ್ನು ಅವಲಂಬಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ, ಅಪ್ಪಟ ಮಲೆನಾಡು ಭಾಗದ ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬಾಡಿಗೆ ಬೈಕ್ ಸೇವೆ ಇಂದಿಗೂ ನಡೆಯುತ್ತಿದೆ. ಇದು ಗ್ರಾಮಸ್ಥರೇ ರೂಪಿಸಿಕೊಂಡಿರುವ ಅಘೋಷಿತ ‘ಬೈಕ್ ಟ್ಯಾಕ್ಸಿ’ ವ್ಯವಸ್ಥೆ. ಬಸ್‌ಗಳು ಸಂಚರಿಸದ, ಸ್ವಂತ ವಾಹನಗಳನ್ನು ಹೊಂದಿರದ ಬಡ ಮತ್ತು ಬಡ ಮಧ್ಯಮ ವರ್ಗದ ಕುಟುಂಬಗಳು ಹೆಚ್ಚಿರುವ ಪ್ರದೇಶಗಳಲ್ಲಿ ಈ ಸೇವೆ ನಡೆಯುತ್ತಿದೆ. ಇಲ್ಲಿ ಬಾಡಿಗೆ ಬೈಕ್ ಚಲಾಯಿಸುವವರು ಆದಾಯಕ್ಕೋಸ್ಕರವೇ ಈ ಕೆಲಸ ಮಾಡುತ್ತಿಲ್ಲ. ಬದಲಾಗಿ ತಮ್ಮೂರಿನ ಜನರ ಸೇವೆ ಎಂದು ಪರಿಗಣಿಸುತ್ತ, ಜನರಿಗೆ ಅಗತ್ಯವಿರುವ ಸಮಯದಲ್ಲಿ ನೆರವಿಗೆ ಧಾವಿಸುತ್ತಿದ್ದಾರೆ.
ಮಲೆನಾಡಿನ ಬಹುತೇಕ ಹಳ್ಳಿಗಳು ವೃದ್ಧಾಶ್ರಮವಾಗಿ ಬದಲಾಗುತ್ತಿವೆ. ಒಂದು ಕಾಲದಲ್ಲಿ ತುಂಬಿತುಳುಕುತ್ತಿದ್ದ ಊರುಗಳಲ್ಲಿ ಈಗ ಒಂದಿಷ್ಟು ಮಂದಿ ವೃದ್ಧರು ಕಾಣಸಿಗುತ್ತಾರೆ. ಹಲವು ಮನೆಗಳಲ್ಲಿ ಒಬ್ಬರೋ, ಇಬ್ಬರೋ ಹಿರಿಯರಷ್ಟೆ ಕಾಲ ಕಳೆಯುತ್ತಿದ್ದಾರೆ. ಒಬ್ಬಂಟಿ ಮನೆಗಳೂ ಹೆಚ್ಚಿವೆ. ಮನೆ ಮಕ್ಕಳೆಲ್ಲ ಮಹಾನಗರಗಳಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಹಳ್ಳಿಗಳಲ್ಲಿರುವ ಹಿರಿಯರಿಗೆ ಪಡಿತರ, ಔಷಧ ತಂದುಕೊಡುವವರು ಇದೇ ಬಾಡಿಗೆ ಬೈಕ್‌ನವರು.
‘ಪ್ರತಿ ತಿಂಗಳ ಮೊದಲ ವಾರ ಮನೆಯಿಂದ ಆರು ಕಿಲೋಮೀಟರ್ ದೂರದ ಸೊಸೈಟಿಗೆ ಪಡಿತರ ಬರುತ್ತದೆ. ಹತ್ತಾರು ಕೆ.ಜಿ ಭಾರದ ಅಕ್ಕಿಚೀಲ, ಸೀಮೆಎಣ್ಣೆ ಕ್ಯಾನನ್ನು ಹೊತ್ತು ತರುವುದು ಕಷ್ಟ. ಇದಕ್ಕಾಗಿ ಆಟೊ ಬಾಡಿಗೆ ಪಡೆಯುವುದು ದುಬಾರಿ. ಅಂತಹ ಸಂದರ್ಭದಲ್ಲಿ ನೆರವಿಗೆ ಬರುವುದು ನಮ್ಮೂರಿನ ರಾಜು. ಅವರ ಬಳಿ ಬೈಕ್ ಇದೆ. ಪಡಿತರ ತರಲು ನನ್ನನ್ನು ಸೊಸೈಟಿಗೆ ಅವರೇ ಕರೆದೊಯ್ಯುತ್ತಾರೆ. ಹಲವು ವರ್ಷದಿಂದಲೂ ಅವರಿಂದಾಗಿಯೇ ಚಾಚೂತಪ್ಪದೆ ಸಮಯಕ್ಕೆ ಸರಿಯಾಗಿ ಪಡಿತರ ಮನೆ ಬಾಗಿಲಿಗೆ ತಲುಪಿಸಿದೆ’ ಎಂದು ಶಿರಸಿ ತಾಲ್ಲೂಕು ಮುಂಡಗಾರ ಗ್ರಾಮದ ಪರಮೇಶ್ವರ ನಾಯ್ಕ ಹೇಳುತ್ತಾರೆ.
‘ಯಂಗ್ಳೂರಿನ ಅಶೋಕ ಇದ್ದ ಹೇಳಾದ್ರೆ ಎಂತ ತೊಂದ್ರೆ ಇರ್ತಿಲ್ಲೆ. ಎಷ್ಟೊತ್ತಿಗೆ ಕರೆದ್ರೂ ಅಂವ ಬರ್ತ. ಪ್ಯಾಟಿಂದ ಔಷಧಿ, ತರಕಾರಿ ತಗಂಡ್ ಬಂದು ಕೊಡ್ತ. ಒಂದೊಂದ್ಸಲ ದುಡ್ಡೂ ತಗಂಡು ಹೋಗ್ತ್ನಿಲ್ಲೆ. ಯಾವಾಗಾತ ಆವಾಗ ಕೊಡಿ ಹೇಳಿ ಹೇಳ್ತ. ಅಂವ ಯಂಗಕ್ಕಿಗೆ ಮನೆ ಮನ ಮಗ ಇದ್ದಂಗೆಯಾ’ ಎಂದು ಹವ್ಯಕರ ಆಡುಭಾಷೆಯಲ್ಲಿ ಸಂಪಗಾರ ಗ್ರಾಮದ ಶ್ರೀಧರ ಹೆಗಡೆ ತಮ್ಮೂರಿನ ಬಾಡಿಗೆ ಬೈಕ್‍ದಾರ ಅಶೋಕ ಭಟ್ ಕುರಿತಾಗಿ ಮೆಚ್ಚುಗೆ ಮಾತುಗಳನ್ನು ಹೀಗೆ ಆಡುತ್ತಾರೆ.
ಅಂದಹಾಗೆ, ಬಾಡಿಗೆ ಬೈಕ್‌ನವರು ತಮ್ಮ ಸೇವೆಗೆ ಇಂತಿಷ್ಟೇ ಹಣ ನಿಗದಿಪಡಿಸುತ್ತಿಲ್ಲ. ಸೇವೆ ಒದಗಿಸಿದ ತಕ್ಷಣವೇ ಹಣವನ್ನೂ ಪಡೆಯುತ್ತಿಲ್ಲ ಎಂಬುದನ್ನು ಆಯಾ ಗ್ರಾಮಗಳಲ್ಲಿ ಬಾಡಿಗೆ ಬೈಕ್ ಸೇವೆ ಪಡೆದವರು ಆಡುವ ಮಾತುಗಳು ಸಾರುತ್ತಿವೆ.
‘ತಿಂಗಳ ಹಿಂದೆ ಸಂಜೆಯ ವೇಳೆಗೆ ಏಕಾಏಕಿ ಜ್ವರ ಕಾಣಿಸಿಕೊಂಡಿತು. ಮನೆಯಿಂದ ದೂರದ ದವಾಖಾನೆಗೆ ತೆರಳಲು ಬಾಡಿಗೆ ಬೈಕ್ ಓಡಿಸುವ ರಘುಪತಿ ನೆರವಿಗೆ ಬಂದರು. ಡಾಕ್ಟರ್ ಕೊಟ್ಟ ಔಷಧಿ ಪಡೆದು ಮನೆಗೆ ಮರಳಿದ ಬಳಿಕ ರಘುಪತಿಗೆ ನೀಡಲು ಹಣ ಕಡಿಮೆ ಇತ್ತು. ಹುಷಾರಾದ ಮೇಲೆ ಕೊಡಿ ಎಂದು ಹೋದ ಆತ ಇಂದಿಗೂ ಹಣ ಕೇಳಿಲ್ಲ’ ಎಂದು ವಜ್ರಳ್ಳಿಯ ಶಂಕರ ಗಾಂವ್ಕರ ಹೇಳುತ್ತಾರೆ.
ಬೈಕ್ ಓಡಿಸಿದ್ದಕ್ಕೆ ಪೆಟ್ರೋಲ್ ಖರ್ಚು ಕೊಟ್ಟರೂ ಸಾಕು ಎಂದು ಕೆಲ ಬೈಕ್‍ನವರು ಹೇಳಿದರೆ, ಮತ್ತೆ ಕೆಲವರು ಕಿಲೋಮೀಟರ್‌ಗೆ ಇಂತಿಷ್ಟು ಎಂದು ನಿಗದಿಪಡಿಸಿಕೊಂಡಿರುತ್ತಾರೆ. ಆಯಾ ಗ್ರಾಮದ ಜಂಕ್ಷನ್‌ನಲ್ಲಿ ಬಾಡಿಗೆ ಬೈಕ್‌ನವರು ಯಾರು ಎಂಬುದು ಸ್ಥಳಿಯರಿಗೆ ಮಾತ್ರವೇ ಗೊತ್ತಿರುತ್ತದೆ. ಕೆಲವೊಮ್ಮೆ ಬಾಡಿಗೆ ಬೈಕ್ ಓಡಿಸುವವರು ಸಿಗದಿದ್ದರೆ ತುರ್ತು ಸಂದರ್ಭದಲ್ಲಿ ಅಲ್ಲಿನ ಅಂಗಡಿ ಮಾಲೀಕರು ಅಂಗಡಿ ಮುಚ್ಚಿ ತುರ್ತು ಇದ್ದವರನ್ನು ಊರಿಗೆ ಬಿಟ್ಟು ಬರುತ್ತಿದ್ದಾರೆ. ಹೀಗೆ, ಬಸ್ ಓಡಾಡದ ಮಲೆನಾಡಿನ ರಸ್ತೆಯಲ್ಲಿ ಬಾಡಿಗೆ ಬೈಕ್‌ಗಳು ಸಂಚರಿಸುತ್ತವೆ.
ಸರ್ಕಾರದ ಬಸ್‌ಗಳು ತಲುಪದ ಕಡೆ, ಮಲೆನಾಡಿನ ಮಾನವೀಯತೆ ಬೈಕ್‌ಗಳಲ್ಲಿ ತಲುಪುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.