ADVERTISEMENT

ಮಲೆನಾಡಿನಲ್ಲಿ ಅಣಬೆಗಳ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 0:07 IST
Last Updated 22 ಜೂನ್ 2025, 0:07 IST
ಅಣಬೆ
ಅಣಬೆ   

ಮೊದಲ ಮಳೆ ಬಂತು ಎಂದರೆ ನಾನು ಮೊದಲು ಓಡುವುದು ಕಾಡಿನಕಡೆಗೆ. ನೆಲದಲ್ಲಿ ಮಳೆಯ ತಂಪು ಹನಿಗಳ ನಡುವೆ ಹದವಾದ ಮಣ್ಣಿನ ಗಂಧ ಮುಂಗಾರಿನ ಸ್ವಾಗತದ ಪರಿಮಳ ಬೀರುತ್ತದೆ. ಮುಗಿಲೆತ್ತರದ ಮರಗಳ ನಡುವೆ ಹಾಸಿದ ನೆರಳು, ಒಣಗಿದ ತರಗೆಲೆಗಳ ನಡುವೆ ಮರವನ್ನು ತಬ್ಬಿ ಬಳಕುವ ಬಳ್ಳಿಯ ಜೋಕಾಲಿ. ವಟಗುಟ್ಟುವ ಕಪ್ಪೆಗಳ ನಡುವೆ ಒಂದೇ ಸಮನೆ ಉಲಿಯುವ ಜೀರುಂಡೆ, ಹಕ್ಕಿಗಳ ಕಲರವವೆಂದರೆ ಋತುಮಾನದ ರಂಗಸ್ಥಳವೇ ಆಗಿಬಿಡುತ್ತದೆ. ಮುರಿದು ಬಿದ್ದ ಒಣಗಿದ ಮರದ ಮೈ ತುಂಬಾ ಮೊಳೆತ ಬಣ್ಣ ಬಣ್ಣದ ಅಣಬೆಗಳು, ಆಹಾ! ಒಂದಕ್ಕಿಂತ ಒಂದು ಭಿನ್ನ ಮತ್ತು ಆಕರ್ಷಕ.

ವರ್ಣಪಾರದರ್ಶಿಕೆಯ ಶೃಂಗಾರದ ಸೊಗಸು ಅನುಭವಿಸಲು ನೂರುಕಣ್ಣು ಸಾಲದು. ಹುಲ್ಲು ಹಾಸಿನ ನಡುವೆ ತಲೆ ಎತ್ತಿದ ಬಿಳಿ ಅಣಬೆ, ಮರದ ಬುಡದಲ್ಲಿ ಬ್ರೆಡ್ ಬೇಯಿಸಿಟ್ಟ ಹಾಗೆ ಕಾಣುವ ಅಣಬೆ, ಪಕ್ಕದಲ್ಲಿ ತಿರುಗಿ ನೋಡಿದರೆ ಎತ್ತರದ ಒಣಗಿದ ಹೊಳೆಗೇರು ಮರದ ಮೈ ತುಂಬಾ ಹಾಲಿನ ಬಣ್ಣದ ಸೇವಂತಿಗೆ ಹೂ ಕ್ರಮವಾಗಿ ಜೋಡಿಸಿಟ್ಟ ಹಾಗೆ ಪ್ರಕೃತಿಯೇ ಸುಂದರವಾಗಿ ಅಲಂಕರಿಸಿದೆ. ಮನುಷ್ಯರ ಮುಖ ಕಣ್ಣು ಕಿವಿ ಹೃದಯದಂತೆ ದೇಹದ ಭಾಗವಲ್ಲದೇ, ಪ್ರಾಣಿಗಳ ಆಕೃತಿಗಳ ಹಾಗೂ ಅಣಬೆಗಳು ಮೈದಳೆಯುತ್ತವೆ. ಮಣ್ಣಿನಲ್ಲಿ ಬಿದ್ದು ಹೊರಳಾಡಲು ಆಗದ ಕಪ್ಪು ಜಂಬೇಮರದ ತುಂಬಾ ಬಿಳಿಯ ಮುತ್ತಗಳು ಪೋಣಿಸಿದ ಹಾಗೆ ಅಣಬೆಗಳು ಹುಟ್ಟಿವೆ. ದೂರದಲ್ಲಿ ಭಾವನಾತ್ಮಕವಾಗಿ ಬದುಕಿನ ಭಾಷ್ಯ ಹೊರಟಂತೆ ಇರುವ ಮೂರು ತಲೆಮಾರಿನ ಹಾಗೆ ಕಾಣುವ ಬಿಳಿಕೊಡೆಗಳು ವಾರಗಟ್ಟಲೆಯಾದರೂ ಅರಳಿಕೊಂಡೇ ಇರುವವವು. ಕೆಲವು ಅಣಬೆಗಳು ದಪ್ಪವಾಗಿ ಇದ್ದರೆ, ಇನ್ನು ಕೆಲವು ಮೃದುವಾದ ಮುಟ್ಟಿದರೆ ಕೈಗಂಟುವ ಬಣ್ಣದ ನವಿಲುಗರಿಯಂತಿವೆ.

ಅಣಬೆ

ಮರಿ ಅಣಬೆಯೊಂದು ಕಾಲಿಡುವ ಜಾಗದಲ್ಲಿ ಗೊತ್ತಿಲ್ಲದೇ ಮುದ್ದೆಯಾದಾಗ ಕಾಲಿಗಂಟಿದ ಕೇಸರಿ ಬಣ್ಣ ತೊಳೆದುಕೊಳ್ಳಲು ಬಹಳ ಕಾಲವೇ ಬೇಕಾಯಿತು. ನಿಸರ್ಗ ಎಲ್ಲಾ ಆಕೃತಿಗಳನ್ನು ವಿವಿಧ ವಿನ್ಯಾಸದಲ್ಲಿ ಕಡೆದು ನಿಲ್ಲಿಸುವ ಈ ಅಣಬೆಗಳ ವಿಶ್ವರೂಪ ಮಳೆಗಾಲದಲ್ಲಿ ಒಂದು ತಿಂಗಳು ಕಣ್ಣಿಗೆ ಹಬ್ಬ ನೀಡುವುದರಲ್ಲಿ ಸಂದೇಹವಿಲ್ಲ. ವನವಾಸಿಗಳು ಕಾಡಿನ ಅಣಬೆಗಳಲ್ಲಿ ಕೆಲವು ಅಣಬೆಗಳನ್ನು ಆಹಾರವಾಗಿ ಬಳಸುತ್ತಾರೆ. ಇನ್ನು ಕೆಲವು ವಿಷದ ಅಣಬೆಗಳೂ ಇವೆ ಎಂದು ಗುರುತಿಸಿ ದೂರ ಇಡುತ್ತಾರೆ. ಈ ಅಣಬೆಗಳಲ್ಲಿ ಕೆಲವು ಗಂಟೆಗಳ ಆಯುಷ್ಯ ಹೊಂದಿದ್ದರೆ, ಇನ್ನು ಕೆಲವು ವಾರಗಟ್ಟಲೆ ಅರಳಿಕೊಂಡು ಗಮನಸೆಳೆಯುತ್ತವೆ. ಮರಕ್ಕೆ ಮೊಳೆತ ಅಣಬೆಗಳಂತೂ ತಿಂಗಳು ಹಾಗೇ ಉಳಿದ ಜೋರು ಮಳೆ ಬಂದಮೇಲೆ ಕರಗಿ ಹೋಗುತ್ತವೆ. ಈ ಅಣಬೆಗಳು ಅರಳಿದಾಗ ವಿವಿಧ ಕೀಟಗಳು ಆಹಾರಕ್ಕೆ ಅಣಬೆಗಳನ್ನು ಆಶ್ರಯಿಸುತ್ತವೆ. ಇನ್ನು ಕೆಲವು ಇರುವೆಗಳು ಈ ಅಣಬೆಗಳನ್ನು ತಿನ್ನುತ್ತವೆ. ಈ ಅಣಬೆಗಳ ಮಾಯಾಲೋಕದಲ್ಲಿ ಕರಗಿ ಹೋದರೆ ಬರುವಾಗ ಬೆತ್ತದ ಮುಳ್ಳು ತಾಗಿ ರಕ್ತ ಸೋರಿ, ಇಂಬಳಗಳ ಕಾಟದಲ್ಲಿ ಮನೆಯ ದಾರಿಯೇ ತಪ್ಪಿ ಹೋಗುತ್ತದೆ. ಆದರೂ ಬಣ್ಣ ಬಣ್ಣದ ಅಣಬೆಗಳು ಅರಳಿ ನಿಂತ ಖುಷಿಗೆ ಮನಸ್ಸು ಕುಣಿದಾಡುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.