
ಈಗೆಲ್ಲ ಟಿ.ವಿ, ಫ್ರಿಜ್, ವಾಷಿಂಗ್ ಮಷಿನ್ ಇತ್ಯಾದಿ ಗೃಹೋಪಯೋಗಿ ಉಪಕರಣಗಳು ಸಾಮಾನ್ಯ ವರ್ಗದವರ ಮನೆಯಲ್ಲಿಯೂ ಕಾಣಸಿಗುತ್ತವೆ. ಆದರೆ, ತೊಂಬತ್ತರ ದಶಕದಲ್ಲಿ ಮಲೆನಾಡಿನಲ್ಲಿ ಟಿ.ವಿ, ಫ್ರಿಜ್ ಇದೆ ಎಂದರೆ, ಅವರ ಮನೆಯಲ್ಲಿ ಬಹಳ ಶ್ರೀಮಂತಿಕೆ ಇದೆ ಎಂಬ ಭಾವನೆ ಇತ್ತು. ಅದಕ್ಕೂ ಸ್ವಲ್ಪ ಹಿಂದಕ್ಕೆ ಹೋದರೆ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಆ ಕಾಲದಲ್ಲಿ ಹಳ್ಳಿಗಳಲ್ಲಿ ನೈಸರ್ಗಿಕ ಫ್ರಿಜ್ ಬಳಕೆಯಲ್ಲಿತ್ತು!
ನಮ್ಮ ಪೂರ್ವಜರು ತಮ್ಮದೇ ಆದ ಜ್ಞಾನವನ್ನು ಬಳಸಿಕೊಂಡು ಆಹಾರ ವಸ್ತುಗಳು ಕೆಡದಂತೆ ಇಡುತ್ತಿದ್ದರು. ಅದುವೇ ಬಾಳೆಗಿಡದಿಂದ ಸಿದ್ಧಗೊಂಡ ನೈಸರ್ಗಿಕ ಫ್ರಿಜ್.
ಅಂಗಳದಲ್ಲಿ ಅಥವಾ ತೋಟದಲ್ಲಿ ಗೊನೆ ತೆಗೆದ ದಪ್ಪ ಬಾಳೆದಿಂಡನ್ನು ಹಾಗೆಯೇ ಇಟ್ಟು, ಅದನ್ನು ಫ್ರಿಜ್‌ನಂತೆ ಬಳಸುತ್ತಿದ್ದರು. ಬಾಳೆದಿಂಡಿನ ಬುಡದಿಂದ ಸುಮಾರು ಎರಡೂವರೆ ಅಡಿಯ ಅಂತರದಲ್ಲಿ ಚೌಕಾಕಾರದಲ್ಲಿ ಆಳವಾಗಿ ಕತ್ತರಿಸಿ, ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ಇಡಲು ಜಾಗ ಮಾಡುತ್ತಿದ್ದರು. ಅದರಲ್ಲಿ ಬೇಗನೆ ಕೆಡುವ ವಸ್ತುಗಳನ್ನು ಇಡುತ್ತಿದ್ದರು. ಅದರಲ್ಲೂ ಮಾಂಸಾಹಾರಿಗಳು ಮೀನನ್ನು ತುಂಬಿಡುತ್ತಿದ್ದರು. ಅದಕ್ಕೆ ಬಾಗಿಲಿನಂತೆ ಮೇಲಿಂದ ತೆಗೆದ ಬಾಳೆಯ ತುಂಡನ್ನು ತೆಳ್ಳಗೆ ಲೇಪಿಸಿ ಭದ್ರಪಡಿಸುತ್ತಿದ್ದರು. ಈ ರೀತಿಯಲ್ಲಿ ಮೀನು, ಮಾಂಸಗಳನ್ನು ಒಂದೆರಡು ದಿನ ಕಾಪಾಡಿಕೊಳ್ಳುತ್ತಿದ್ದರು. ಮಾಂಸವಾದರೆ ಅದಕ್ಕೆ ತೆಂಗಿನೆಣ್ಣೆ ಹಾಗೂ ಅರಿಸಿನ ಬಳಿದು ತುಂಬಿಡುತ್ತಿದ್ದರು. ಇದರಿಂದ ಅದು ಬೇಗ ಕೆಡುತ್ತಿರಲಿಲ್ಲ ಎನ್ನುತ್ತಾರೆ ಅನುಭವಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.