ADVERTISEMENT

ನಾನ್‌ವೆಜ್‌ ಫೆಸ್ಟಿವಲ್

ಅಜಮೀರ ನಂದಾಪುರ
Published 8 ಡಿಸೆಂಬರ್ 2018, 19:31 IST
Last Updated 8 ಡಿಸೆಂಬರ್ 2018, 19:31 IST
ಚಿತ್ರ: ಭಾವು ಪತ್ತಾರ್
ಚಿತ್ರ: ಭಾವು ಪತ್ತಾರ್   

ತಿಮ್ಮನ ಕಾಲೊನಿಯಲ್ಲಿ ಹಬ್ಬಗಳು ಬಂದಾಗ ಪಕ್ಕದ ಓಣಿಯ ಯಾರೂ ಕುರಿ ಕೋಳಿ ತಿನ್ನುವಂತಿರಲಿಲ್ಲ. ತಿಮ್ಮನ ಅಂಗಳದಲ್ಲಿ ಯಾವ ಕೋಳಿಯೂ ಕಾಳು ಕುಕ್ಕುತ್ತಿರಲಿಲ್ಲ, ಮಾಂಸ ಮದ್ಯದ ಅಂಗಡಿಗಳು ಬಂದಾಗಿರುತ್ತಿದ್ದವು. ತಿಮ್ಮಂದೇ ಒಂದು ದೊಡ್ಡ ಕಾಲೊನಿ; ಅದು ತಿಮ್ಮನ ಕುಲದವರಿಗೆ ಮಾತ್ರ ಮೀಸಲು. ತನ್ನ ಕುಲ ಕಂಟಕರನ್ನೆಲ್ಲ ಒಂದೆಡೆ ಸೇರಿಸಿ ತರ್ಲೆ ತಿಮ್ಮನ ಕಾಲೊನಿ ಎಂದು ಮಾಡಿಕೊಳ್ಳಲಾಗಿತ್ತು. ಅದರ ಪಕ್ಕದಲ್ಲಿ ಅದಕ್ಕೆ ತಾಗಿರುವಂತೆ ಈರನ ಕಾಲೊನಿಯಿತ್ತು.

ಈರನ ಕುಲದವರಾರೂ ತಿಮ್ಮನ ಕಾಲೊನಿಗೆ ಕಾಲಿಡುವಂತಿರಲಿಲ್ಲ, ಅವನ ಗೋಡೆಗೂ ತಾಗಿ ನಿಲ್ಲುವಂತಿರಲಿಲ್ಲ, ತಿಮ್ಮನವು ಒಂದಿಷ್ಟು ಬಾಡಿಗೆ ಮನೆಗಳಿದ್ದವು. ಅವೆಲ್ಲ ಸ್ವಂತ ಕುಲದವರಿಗೆ ಮೀಸಲು. ಕುಲದವರಲ್ಲದವರು ಕೇಳಿದರೆ ಇಲ್ಲವೆನ್ನದೆ, ಹೆಚ್ಚು ಬಾಡಿಗೆ ಹೇಳಿ ವಾಪಸ್ ಕಳಿಸುತ್ತಿದ್ದ ತಿಮ್ಮ. ಸ್ವಂತ ಕುಲದವರಿಗೆ ಬಾಡಿಗೆ ಕಡಿಮೆಯೇನೂ ಇರಲಿಲ್ಲ. ಇವನ ಬಾಡಿಗೆ ದರಕ್ಕೆ ಹೆದರಿ ಕೆಲವು ಕುಲದವರು ‘ಇವನೂ ಬ್ಯಾಡಾ, ಇವ್ನ ಕುಲವೂ ಬ್ಯಾಡಾ’ ಎಂದು ಈರನ ಗಲ್ಲಿಯಲ್ಲಿ ಕಡಿಮೆ ಬಾಡಿಗೆಗೆ ತಣ್ಣಗೆ ಇದ್ದರು. ‘ಅಳ್ಳು ತುಳಿದ್ರೆ ಮುಳ್ಳು ತುಳಿದಂತೆ ಹೌಹಾರುವ’ ಸೂಕ್ಷ್ಮ ಮಕ್ಕಳು ತಿಮ್ಮನ ಕಾಲೊನಿಯಲ್ಲಿದ್ದವು. ಈರನ ಕಾಲೊನಿಯಲ್ಲಿ ರಫ್ ಆಂಡ್ ಟಫ್ ಮಕ್ಳು ರಜ್ಜು ರಾಡಿಯಲ್ಲಿ ಮಿಂದೇಳುತ್ತಿದ್ದವು.

ಮಿಲ್ಲು, ಕಾರ್ಖಾನೆಗಳ ಸೌಂಡು ಕೇಳಿದರೆ ಕಿವಿಯಿಂದ ರಕ್ತ ಸೋರುವ ತರ್ಲೆ ಸುಬ್ಬಿಯಂತಹ ಸೂಕ್ಷ್ಮ ಯುವತಿಯರು ತಿಮ್ಮನ ಕಾಲೊನಿಯಲ್ಲಿ ವಾಸವಾಗಿದ್ದರು. ಮಿಲ್ಲುಗಳಲ್ಲಿ ಹಗಲಿರುಳೂ ದುಡಿಯುವ, ಬೆವರು ಹರಿಸುವ ಜನ ಈರನ ಕಾಲೊನಿಯಲ್ಲಿದ್ದರು. ತಿಮ್ಮ ಸ್ವಂತ ಕುಲದವರನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳುತ್ತಿದ್ದ. ಬಟ್ಟೆ ಅಂಗಡಿ, ಎಣ್ಣೆ ಮಿಲ್ಲು ಪ್ರಾರಂಭಿಸಿ ಕುಲದವರನ್ನು ಸೆಳೆದಿದ್ದ. ಇವರಲ್ಲಿ ಯಾರಿಗೂ ಎಣ್ಣೆ ಫ್ರೀ ಹಾಕ್ತಿರಲಿಲ್ಲ, ಕಡಿಮೆಗೂ ಕೊಡುತ್ತಿರಲಿಲ್ಲ. ವ್ಯವಹಾರದಲ್ಲಿ ಜಾತಿ ಬೇಡ ಅಂತಿದ್ದ!

ADVERTISEMENT

ರಿಯಲ್ ಎಸ್ಟೇಟ್ ಮಾಲೀಕನಾಗಿ ಪ್ಲಾಟು, ಸೈಟುಗಳಲ್ಲಿ ತಾರತಮ್ಯವೆಸಗಿದ್ದ. ಈರನ ಕುಲದವರಾರಿಗೂ ಮನೆ ಬಾಡಿಗೆ ಕೊಡದಂತೆ ನೋಡಿಕೊಂಡಿದ್ದ, ತಾನು ಪಂಚಾಯ್ತಿ ಪ್ರೆಸಿಡೆಂಟ್ ಆಗಿದ್ದಾಗ ಕುಲದವರಿಗಾಗಿ ಒಂದಿಷ್ಟು ಜಾಗ ಸುಡುಗಾಡಿಗೆ ಮೀಸಲಿಟ್ಟಿದ್ದ. ಅಲ್ಲಿ ಈರನ ಕುಲದವರ‍್ಯಾರೂ ಹೆಣ ಹೂಳುವಂತಿರಲಿಲ್ಲ. ಪಕ್ಕದಲ್ಲಿದ್ದ ಮಾಂಸದ ಅಂಗಡಿಗೆ ಬೀಗ ಹಾಕುವಂತೆ ಬೆದರಿಕೆ ಹಾಕಿದ್ದ.

ತಿಮ್ಮನ ಉಪಟಳದಿಂದ ಬೇಸತ್ತು ಈರನ ಕುಲದವರೆಲ್ಲ ಒಂದೆಡೆ ಸೇರಿ ಮೀಟಿಂಗ್ ಮಾಡಿದರು. ‘ಮೊದ್ಲೆಲ್ಲ ನಮ್ಮೊಂದಿಗಿದ್ದು, ನಾವು ತಿನ್ನುವುದನ್ನೇ ತಿಂದು ಬೆಳೆದಿದ್ದ... ಈಗೆಷ್ಟು ಪವಿತ್ರನಾಗಿದ್ದಾನಲ್ಲ’ ಎಂದು ಅಚ್ಚರಿಪಟ್ಟರು. ‘ತಿಮ್ಮ ಈರ ಇಬ್ರೂ ಸೇರಿ ಕೋಳಿ ಫಾರಂ ನಡೆಸ್ತಿದ್ರು, ಲಾಭದ ವಿಷಯದಲ್ಲಿ ಜಗಳಾಡಿ ಇಬ್ಭಾಗವಾಗಿದ್ರು. ಆಗೆಲ್ಲ ನಮ್ಮದು ಕುಲವೆರಡಾದ್ರೂ ದಂಧೆ ಒಂದೇ ಎಂದು ಖುಷಿಪಡ್ತಿದ್ದ ತಿಮ್ಮ ಇಂದು ಕೋಳಿ ಅಷ್ಟೆ ಅಲ್ಲ, ಅದರ ಮೊಟ್ಟೆಯನ್ನೂ ಮುಟ್ಟಲ್ಲ ಅಂತಾನೆ’ ಎಂದು ಮಾತನಾಡಿಕೊಂಡರು.

ಕೋಳಿ ದಂಧೆಯಿಂದಲೇ ತಿಮ್ಮ ದೊಡ್ಡವನಾಗಿ ಬೆಳೆದಿದ್ದ. ಊರು ಗೂಳಿಯಂತೆ ತಿರುಗುತ್ತಿದ್ದ ತಿಮ್ಮನನ್ನು ಕರೆದು ತಂದು ಕೋಳಿ ಐಡಿಯಾ ಕೊಟ್ಟು ಲೈಫು ಸೆಟ್ಲು ಮಾಡಿದ್ದು ಈರ. ಈಗ ತಿಮ್ಮ ಈರನನ್ನು ಕಡೆಗಣಿಸಿ ಕುಲದ ಲೀಡ್ರಾಗಿ ಬೆಳೆದಿದ್ದ.

ಸಣ್ಣವರಿಂದಲೇ ಬೆಳೆದು ದೊಡ್ಡವನಾಗಿ, ‘ನೀವು ಸಣ್ಣವರು ನಾವು ದೊಡ್ಡವರು. ನಮ್ದು ಪ್ಯೂರ್ ವೆಜಿಟೇರಿಯನ್ ಕಾಲೊನಿ’ ಎಂದು ಮೀಸೆ ತಿರುವ್ಯಾಡಿದ್ದ. ಈರನ ಕಾಲೊನಿಯ ಯಾವ ಪ್ರಾಣಿಯೂ ತಿಮ್ಮನ ಕಾಲೊನಿಗೆ ಕಾಲಿಡುವಂತಿರಲಿಲ್ಲ. ಮಾರೆಮ್ಮನಿಗೆ ಬಿಟ್ಟ ಮರಿಕೋಣವೊಂದು ದೊಡ್ಡ ದೇವರ ಮುಂದೆ ಮಲಗಿತ್ತು. ಇನ್ನೊಂದು ಸಲ ಕೋಣ ಬರದಂತೆ ಕಾಲೊನಿಗೆ ತಂತಿ ಬಿಗಿದು, ಮಲಿನವಾಯಿತೆಂದು ಪೈಪು ಹಿಡಿದು ಅಂಗಳವನ್ನೆಲ್ಲ ಕ್ಲೀನ್ ಮಾಡಲಾಗಿತ್ತು. ಈರನ ಕುಲದವರಷ್ಟೇ ಅಲ್ಲ, ಅವರ ಸಾಕು ಪ್ರಾಣಿಗಳು ಕೂಡ ಇವರ ಗಡಿ ದಾಟುವಂತಿರಲಿಲ್ಲ.

ತಿಮ್ಮನ ಮನೆಯ ಒಂದು ನಾಯಿ ಮಾತ್ರ ತುಂಬಾ ಚುರುಕಾಗಿತ್ತು. ಗುಂಡುಗುಂಡಾಗಿ ಬೆಳೆದಿತ್ತು. ಆದರೆ ಅದಕ್ಕೊಂದು ಕೆಟ್ಟ ಚಾಳಿ. ತಿಮ್ಮನಿಗೆ ಗೊತ್ತಿಲ್ಲದಂತೆ ಈರನ ಮನೆಯ ಬಿರಿಯಾನಿಗೆ ಮಾರು ಹೋಗಿತ್ತು ಅದು. ಅವನ ಮನೆಗೆ ಹೋಗುವುದು, ಮೂಳೆ ಚೀಪುವುದು, ತಿಮ್ಮನ ಬೆಡ್ ರೂಂನಲ್ಲಿ ಮಲಗುವುದು. ನಿತ್ಯ ಒಂದಿಲ್ಲೊಂದು ಕಡೆ ಹೋಗಿ ಬೀಫ್ ತಿನ್ನುವುದು, ತಿಮ್ಮನ ಮನೆ ಸೇರುವದು ಅದಕ್ಕೆ ರೂಢಿಯಾಗಿತ್ತು.

ತಿಮ್ಮ ವಾಕಿಂಗ್‌ಗೆ ಹೋಗುವಾಗ ನಾಯಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದ. ವಾಕಿಂಗ್‌ ವೇಳೆ ಎದುರಾದವರೆಲ್ಲ ನಾಯಿ ದಷ್ಟಪುಷ್ಟವಾಗಿರುವುದನ್ನು ನೋಡಿ ಕಣ್ಣರಳಿಸುತ್ತಿದ್ದರು. ತನ್ನಂತೆ ನಾಯಿಗೂ ತರಬೇತಿ ನೀಡಿದ್ದೇನೆ, ನನ್ನಂತೆ ನನ್ನ ನಾಯಿಯೂ ಪ್ಯೂರ್ ವೆಜ್ ಎಂದು ತಿಮ್ಮ ಬೀಗುತ್ತಿದ್ದ. ನಾಯಿ ಮಾತ್ರ ನಾಯಿ ಚಾಳಿ ಬಿಟ್ಟಿರಲಿಲ್ಲ. ಅದು ತಿಮ್ಮನಿಗೂ ತಿಳಿದಿರಲಿಲ್ಲ.

ನಾಯಿ ಬಂದಾಗ ಈರ ತುಂಬಾ ಕಾಳಜಿ ಮಾಡುತ್ತಿದ್ದ. ದೊಡ್ಡವರ ನಾಯಿ ಮನೆಗೆ ಬಂದಿದೆ ಅಂದರೆ ಸುಮ್ನೆನಾ? ಈರನ ಕುಲದವರೆಲ್ಲ ಒಂದೆಡೆ ಸೇರಿ ನಾಯಿಯನ್ನು ಗೌರವದಿಂದ ಉಪಚರಿಸುತ್ತಿದ್ದರು. ಮಾಂಸ ಮತ್ತು ಮೂಳೆ ಬೇರೆ ಬೇರೆ ಮಾಡಿ ಚೀಪಲು ರುಚಿ ಬರುವಂತೆ ರೆಡಿ ಇಡುತ್ತಿದ್ದರು. ತಿಮ್ಮನ ಮನೆಯ ಹೋಳಿಗೆ ತಿಂದು ತಿಂದು ಬ್ಯಾಸರಾಗಿ ಅದರ ಸೇಡನ್ನು ನಾಯಿ ಮುಳಿಗೆ ಮೇಲೆ ತೋರ್ಸಿ ಕಟ್ ಕಟ್ ಅನ್ನಿಸುತ್ತಿತ್ತು. ಈರನನ್ನು ಮನದಲ್ಲಿ ಸ್ಮರಿಸುತ್ತ ‘ತಿಮ್ಮನ ಬದಲು ನನ್ನ ಯಜಮಾನ ಈರನೇ ಆಗಿದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು. ಅದು ಹಂಗಾಗಲ್ಲ ನಾನು ಮರಿ ಇದ್ದಾಗಿಂದಲೂ ಪ್ರೀತಿ ತೋರಿಸ್ಯಾನ. ಅದಕ್ಕೋಸ್ಕರ ತಿಮ್ಮನ ಎಲ್ಲ ಮಾತನ್ನೂ ಕೇಳ್ತೀನಿ. ತಿನ್ನುವ ವಿಷಯ ಒಂದು ಬಿಟ್ಟು. ಆತನಿಗೆ ಅಂಗರಕ್ಷಕನಾಗಿರ್ತಿನಿ’ ಎಂದು ನಾಯಿ ಮನದಲ್ಲಿ ತಿಮ್ಮನ ಕುರಿತು ಧ್ಯಾನ ಮಾಡಿತು.

ವಾರಕ್ಕೆರಡು ಮೂರು ಬಾರಿ ಕರೆದು ಬಿರಿಯಾನಿ ತಿನ್ನಿಸಿ, ಮೈ ನೇವರಿಸಿ ಔದಾರ್ಯ ತೋರಿಸಿದ ಈರನನ್ನೂ ಮರೆಯುವಂತೆ ಇಲ್ಲ. ಆತನ ಮನಸ್ಸು ಹೋಳಿಗೆಗಿಂತ ಮೃದು ಎಂದು ನಾಯಿ ಎಲುಬು ಕಡಿಯುತ್ತ ಮನದಲ್ಲೇ ಈರನ ಗುಣಗಾನ ಮಾಡಿತ್ತು.

ಈ ನಾಯಿ ಬಿರಿಯಾನಿ ತಿನ್ನುವುದನ್ನು ಕಲಿತಿದ್ದು ಈರನ ಮನೆಯಲ್ಲಲ್ಲ. ತಿಮ್ಮ ತೀರ್ಥಯಾತ್ರೆಗೆ ಹೋದಾಗ ತಿಮ್ಮನ ಹೆಂಡತಿ ತರ್ಲೆ ಸುಬ್ಬಿ ಕಾಲೊನಿಯ ಮೂಗಿಗೆ ತಿಳಿಯದಂತೆ ನಾನ್ವೆಜ್ ವ್ರತ ಮಾಡುತ್ತಿದ್ದಳು. ಚೀಪಿ ಬಿಟ್ಟ ಎಲುಬಿನ ಟೇಸ್ಟನ್ನು ನಾಯಿ ಕದ್ದು ನೋಡಿತ್ತು!

ತಿಮ್ಮ ಮನೆಯಲ್ಲಿ ಶುದ್ಧ ಸಸ್ಯಾಹಾರಿಯಾಗಿ, ತೀರ್ಥಯಾತ್ರೆಗೆ ಹೋದಾಗ ನಾನ್ವೆಜ್ ಹಬ್ಬದಲ್ಲಿ ಡರ್‌ ಎಂದು ತೇಗಿ ಊರಿಗೆ ಬರುತ್ತಿದ್ದ.

ಕಾಲೊನಿಯ ಜನರಿಗೆ ಪ್ರಸಾದ ಹಂಚುತ್ತಿದ್ದ. ಯಜಮಾನನ ಚಾಳಿ ನಾಯಿಗೂ ತಿಳಿದು ಈರನ ಕಾಲೊನಿಗೆ ವಾರಕ್ಕೆರಡು ಬಾರಿ ತೀರ್ಥಯಾತ್ರೆಗೆ ಹೋಗುತ್ತಿತ್ತು. ತಿಮ್ಮ ಮತ್ತು ಈರನ ಕಾಲೊನಿಯ ನಡುವೆ ಪುಣ್ಯಕೋಟಿ ಹಸುವೊಂದು ನಿತ್ಯ ಓಡಾಡುತ್ತಿತ್ತು. ಪ್ರತಿ ಮನೆಯ ಮೊದಲ ರೊಟ್ಟಿ ಹಸುವಿಗೆ ಮೀಸಲಿಡುತ್ತಿದ್ದರು. ಹಣ್ಣು ಹಂಪಲು ತಿನ್ನಿಸಿ ಮುದ್ದಿಸುತ್ತಿದ್ದರು. ಒಂದು ದಿನ ಹಸುವಿಗೆ ಕಾಯಿಲೆ ಬಂದು ನೆಲ ಹಿಡಿಯಿತು. ಮಾರನೆಯ ದಿನ ಹಸು ಕಾಣಿಸುತ್ತಿಲ್ಲ ಎಂದು ಎರಡೂ ಕುಲದವರು ಗಾಬರಿಯಾಗಿ ಹುಡುಕಿದರು. ಕಾಲೊನಿಯ ಹೆಂಗಸರೆಲ್ಲ ಗೋಳಾಡಿ ಅತ್ತರು. ಹಸು ಬೇಗ ಸಿಗಲಿ ಎಂದು ವ್ರತ ಮಾಡಿದರು.

ಆಕಳು ಊರಾಚೆ ಕಸಾಯಿಖಾನೆಯಲ್ಲಿರುವುದು ಪತ್ತೆಯಾಯಿತು. ಈರ ಹೆಂಡತಿಯ ತಾಳಿ ಮಾರಿ ಹಸು ಬಿಡಿಸಿಕೊಂಡ. ಕಾಲೊನಿಯ ಜನ ಖುಷಿಯಿಂದ ಕುಣಿದಾಡಿದರು. ಈಗೀಗ ಕಾಲೊನಿಯ ಎಲ್ಲರ ಬಾಯಲ್ಲೂ ಒಂದು ಸುದ್ದಿ ಹರಿದಾಡುತ್ತಿದೆ. ಹಸುವನ್ನು ಕಸಾಯಿಖಾನೆಗೆ ಮಾರಿದವ ಬೇರಾರೂ ಅಲ್ಲ; ತರ್ಲೆ ತಿಮ್ಮನ ಕೆಲಸವೇ ಅದು ಅಂತ. ಹಾದಿಬೀದಿಯಲ್ಲಿ ಜನ ಚರ್ಚೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.