ವಿನಾಶದಂಚಿಗೆ ಜಾರಿರುವ ಸಹ್ಯಾದ್ರಿಯ ಹಲವು ಅಮೂಲ್ಯ ಸಸ್ಯಪ್ರಭೇದಗಳನ್ನು ಶಿರಸಿಯ ಬಿಎಲ್‌ಆರ್‌ಎಫ್‌ನ ಸಂಶೋಧನಾ ಕೇಂದ್ರವು ತನ್ನ ಹಸಿರುಮನೆಯಲ್ಲಿ ಬೆಳೆಸುತ್ತಿದೆ...
ಜಗದೀಶ್ಚಂದ್ರ ಬೋಸ್, ಬೀರ್ಬಲ್ ಸಹಾನಿ, ಪಂಚಮ್ ಮಹೇಶ್ವರಿ, ಮುಂತಾದ ಶ್ರೇಷ್ಠ ಭಾರತೀಯ ಸಸ್ಯಶಾಸ್ತ್ರಜ್ಞರ ಸಾಲಿಗೆ ಸೇರುವ ಪ್ರತಿಭೆ ಮತ್ತು ಕೊಡುಗೆ ಬಿಜಿಎಲ್ ಸ್ವಾಮಿ ಅವರದ್ದು. ಬೆಂಗಳೂರಿನಲ್ಲಿ ಓದಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದು, ಅಮೆರಿಕದ ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಅನುಭವ ಗಳಿಸಿ, ಮದ್ರಾಸಿನಲ್ಲಿ ದೀರ್ಘಕಾಲ ಅಧ್ಯಾಪಕರಾಗಿದ್ದ ಅವರ ವೃತ್ತಿಜೀವನ ತುಂಬ ಫಲಪ್ರದವಾದದ್ದು. ಆ ಸಾಧನೆಯ ವ್ಯಾಪ್ತಿಯೂ ಅಷ್ಟೇ ದೊಡ್ಡದು. ಜೀವನದುದ್ದಕ್ಕೂ ಅಧ್ಯಾಪನದ ಜೊತೆಗೆ ಸಂಶೋಧನೆಯಲ್ಲೂ ತೊಡಗಿಕೊಂಡು ಜಾಗತಿಕಮಟ್ಟದ ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಬಂಧ ಮಂಡಿಸಿದರು. ಮುನ್ನೂರಕ್ಕೂ ಹೆಚ್ಚಿನ ಅವರ ಸಂಶೋಧನಾ ಲೇಖನಗಳೇ ಇದಕ್ಕೆ ಸಾಕ್ಷಿ.
ಸರ್ಕಾಂಡ್ರ ಪ್ರಭೇದದ ಸಸ್ಯ
ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’, ‘ಪ್ರಾಧ್ಯಾಪಕನ ಪೀಠದಲ್ಲಿ’ ಸೇರಿದಂತೆ 29ಕ್ಕೂ ಮಿಕ್ಕಿ ಮೌಲಿಕ ಕೃತಿಗಳನ್ನು ರಚಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ‘ಹಸಿರುಹೊನ್ನು’ ಕೃತಿಯಂತೂ ಸಸ್ಯಶಾಸ್ತ್ರ ಆಸಕ್ತರ ಕೈಪಿಡಿ ಎಂಬ ಹೆಗ್ಗಳಿಕೆಯದು. ತಮ್ಮ ಪುಸ್ತಕ ಹಾಗೂ ಲೇಖನಗಳಿಗೆ ತಾವೇ ರೇಖಾಚಿತ್ರ ಹಾಗೂ ತೈಲವರ್ಣ ಚಿತ್ರ ಬಿಡಿಸುತ್ತಿದ್ದರು. ಕನ್ನಡ ಹಾಗೂ ಇಂಗ್ಲಿಷ್ ಹೊರತಾಗಿ ತಮಿಳು, ಮಲಯಾಳ, ಫ್ರೆಂಚ್, ಜರ್ಮನ್, ಸ್ಪಾನಿಶ್ ಭಾಷೆಗಳ ಪರಿಚಯವೂ ಅವರಿಗಿತ್ತು. ಹಸ್ತಪ್ರತಿ ಮತ್ತು ಶಾಸನಗಳನ್ನು ಅಭ್ಯಸಿಸಿ ಅವುಗಳಲ್ಲಿ ಅಡಗಿರುವ ಸಸ್ಯ ಸಂಬಂಧಿ ಮಾಹಿತಿ ಹೊರಗೆಡಹುತ್ತಿದ್ದರು. ವಯೊಲಿನ್ ನುಡಿಸುತ್ತಿದ್ದರು; ಶಾಸ್ತ್ರೀಯ ಸಂಗೀತದ ವಿಮರ್ಶಾ ಲೇಖನಗಳನ್ನೂ ಬರೆಯುತ್ತಿದ್ದರು.
ಸಸ್ಯಶಾಸ್ತ್ರದಲ್ಲಿ ಕೈಗೊಂಡ ಸಂಶೋಧನೆಯ ಹರವೂ ವಿಶಾಲವಾದದ್ದು. ವರ್ಗೀಕರಣ ಶಾಸ್ತ್ರ, ಅಂಗಾಂಗ ರಚನೆ, ಭ್ರೂಣ ಶಾಸ್ತ್ರ, ಸಸ್ಯ ಸಂಕುಲ ವಿಕಾಸ ಇತ್ಯಾದಿ. ಇವುಗಳಲ್ಲಿ ವರ್ಗೀಕರಣ ಶಾಸ್ತ್ರಕ್ಕೆ ನೀಡಿದ ಕೊಡುಗೆ ಮಹತ್ವದ್ದು. ಸಸ್ಯ ಪ್ರಭೇದವೊಂದನ್ನು ಗುರುತಿಸಿ, ಸೂಕ್ತ ಕುಟುಂಬಕ್ಕೆ ವರ್ಗೀಕರಿಸಿ, ಹೊಸ ಪ್ರಭೇದವಾದರೆ ಹೆಸರಿಸುವುದು-ಇವೆಲ್ಲ ಈ ಶಾಸ್ತ್ರದ ಭಾಗ. ಇದರಲ್ಲಿ ಕ್ಷಮತೆ ಸಾಧಿಸಬೇಕಾದರೆ ಸೈದ್ಧಾಂತಿಕ ಜ್ಞಾನ ಹಾಗೂ ಪ್ರಯೋಗಾಲಯ ಕೌಶಲ್ಯಗಳ ಜೊತೆಗೆ, ನಿಸರ್ಗದ ಹೊರಾಂಗಣದಲ್ಲಿ ಕ್ಷೇತ್ರಾಧ್ಯಯನ ನಡೆಸುವ ಕ್ಷಮತೆಯೂ ಬೇಕು. ಕಂಪ್ಯೂಟರ್, ಇಂಟರ್‌ನೆಟ್, ಜಿಪಿಎಸ್, ಡಿಜಿಟಲ್ ಕ್ಯಾಮೆರಾ, ಸ್ಮಾರ್ಟ್‌ಫೋನ್ ಇತ್ಯಾದಿ ಏನೂ ಇಲ್ಲದ ಆ ಕಾಲದಲ್ಲಿ, ವ್ಯಾಪಕ ಕ್ಷೇತ್ರಾಧ್ಯಯನ ನಡೆಸಿ ಪ್ರಯೋಗಾಧಾರಿತ ಸಂಶೋಧನಾ ಕೈಗೊಂಡ ಬಿಜಿಎಲ್ ಸಾಧನೆ ದೊಡ್ಡದು.
ಬಿಜಿಎಲ್ ಸ್ವಾಮಿ
ಬಿಜಿಎಲ್ ನಂತರ ಬಂದ ಫಾದರ್ ಜೆ. ಸಲ್ಡಾನ, ಸಿ.ಆರ್.ನಾಗೇಂದ್ರ, ಯೋಗನರಸಿಂಹ, ಬಿ.ಎ. ರಾಜಿ, ಉಡುಪಿಯ ಕೆ.ಗೋಪಾಲಕೃಷ್ಣ ಭಟ್, ಹಲವಾರು ಪ್ರಸಿದ್ಧ ವರ್ಗೀಕರಣ ಶಾಸ್ತ್ರಜ್ಞರಿಗೆ ಪ್ರೇರಣೆಯಾದರು. ಶ್ರದ್ಧೆಯಿಂದ ಸಸ್ಯಶಾಸ್ತ್ರದ ಅಧ್ಯಾಪನ-ಸಂಶೋಧನೆ ನಡೆಸುತ್ತಲೇ ಹೊಸ ಪ್ರಭೇದಗಳನ್ನು ಗುರುತಿಸುತ್ತ, ಜಿಲ್ಲೆ-ಪ್ರದೇಶಗಳ ಸಸ್ಯಯಾದಿ (ಫ್ಲೋರಾ) ರಚಿಸಿ, ವರ್ಗೀಕರಣ ಶಾಸ್ತ್ರವನ್ನು ಜಾಗತಿಕ ಗುಣಮಟ್ಟದೊಂದಿಗೆ ಪೋಷಿಸಿಕೊಂಡು ಬಂದ ಸಸ್ಯಶಾಸ್ತ್ರಜ್ಞರು ಅವರೆಲ್ಲ. ಮೂಲ ವಿಜ್ಞಾನದಲ್ಲಿ ವಿದ್ಯಾರ್ಥಿಗಳ ಆಸಕ್ತಿ ತೀವ್ರವಾಗಿ ಕುಂದುತ್ತಿದೆ ಎನ್ನಲಾಗುವ ಈ ದಿನಗಳಲ್ಲಿ, ಸಸ್ಯ ವರ್ಗೀಕರಣ ಶಾಸ್ತ್ರವೇ ನೇಪಥ್ಯಕ್ಕೆ ಸರಿಯುತ್ತಿರುವಂತೆ ತೋರುತ್ತಿದೆ. ಹವಾಮಾನ ಬದಲಾವಣೆ ಪರಿಣಾಮದಿಂದ ಜೀವ ವೈವಿಧ್ಯದ ನಾಶ ಹೆಚ್ಚುತ್ತಿರುವಾಗ, ಅವನ್ನು ಸಂರಕ್ಷಿಸಲು ಕೈಗೊಳ್ಳಬೇಕಾಗಿರುವ ಬಹುಮುಖಿ ಪ್ರಯತ್ನಗಳಲ್ಲಿ ಈ ಜ್ಞಾನ ಶಿಸ್ತನ್ನು ಉಳಿಸಿಕೊಳ್ಳುವುದೂ ಅಗತ್ಯ.
ಬಿಜಿಎಲ್ ಕನ್ನಡ ಕೃತಿಗಳೆಂದರೆ ಸಸ್ಯ ಸಂಕುಲಗಳ ವೈವಿಧ್ಯಮಯ ಪ್ರಪಂಚದ ಅನಾವರಣವೇ ಸರಿ. ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’ ಪುಸ್ತಕ ಇದಕ್ಕೆ ಒಳ್ಳೆಯ ಉದಾಹರಣೆ. ಬಟಾಟೆ, ಟೊಮೊಟೊಗಳಂಥ ಸಾಮಾನ್ಯ ಗಿಡಗಳೂ ಈ ಮೊದಲು ಖಂಡಾಂತರ ಪ್ರಯಾಣಿಸಿ, ಈ ನೆಲದ ಹೊಲದಲ್ಲರಳಿ, ನಮ್ಮ ಅಡುಗೆ ಮನೆ ಸೇರಿದ ಅದ್ಭುತ ಕಥನವನ್ನು ತೆರೆದಿಡುತ್ತದೆ. ಸಸ್ಯಶಾಸ್ತ್ರೀಯ ವಿವರಗಳೊಂದಿಗೆ ಇತಿಹಾಸ, ಭೂಗೋಳಶಾಸ್ತ್ರ, ಮಾನವಶಾಸ್ತ್ರ, ಪರಿಸರಶಾಸ್ತ್ರವೂ ಅಲ್ಲಿದೆ. ‘ಹಸಿರು ಹೊನ್ನು’ ಕೃತಿ ಪಶ್ಚಿಮಘಟ್ಟಗಳ ಕಣಿವೆಗಳಲ್ಲಿ ಗಿಡಹುಡುಕಿ ಕ್ಷೇತ್ರಾಧ್ಯಯನಕ್ಕೆ ಸಾಗುವ ರೋಮಾಂಚನ, ಅಪರೂಪದ ಸಸ್ಯಗಳ ಗುಣರೂಪ ವರ್ಣನೆ, ಪುರಾಣ, ಇತಿಹಾಸ ಹಾಗೂ ಜೀವವಿಕಾಸದಲ್ಲಿ ಅವುಗಳಿಗಿರುವ ಸ್ಥಾನವನ್ನು ತೋರುತ್ತವೆ. ಎಳವೆಯಲ್ಲೇ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ರಚಿಸಬಹುದಾದ ಉತ್ಕೃಷ್ಟ ಪುಸ್ತಕಗಳಿಗೆ ಮಾದರಿ ಇವು.
ಬಿಎಲ್‌ಆರ್‌ಎಫ್ ಸಂಶೋಧನಾ ಕೇಂದ್ರದಲ್ಲಿ ಅಮೂಲ್ಯ ಸಸ್ಯಪ್ರಭೇದಗಳ ಸಂರಕ್ಷಣೆ
ಅವರ ಸಂಶೋಧನಾ ಪ್ರಬಂಧಗಳಲ್ಲಂತೂ ದಕ್ಷಿಣ ಭಾರತದ ಹಾಗೂ ಪಶ್ಚಿಮಘಟ್ಟಗಳ ಅಮೂಲ್ಯ ಸಸ್ಯ ಪ್ರಭೇದಗಳ ಜ್ಞಾನಗಂಗೆಯೇ ಹರಿದಿದೆ. ಕರ್ನಾಟಕ ಹಾಗೂ ಕೇರಳದ ಸಹ್ಯಾದ್ರಿಯ ಮಳೆಕಾಡಿನ ಅರಣ್ಯ ಪರಿಸರದಲ್ಲಿ ಮಾತ್ರ ದೊರಕುವ ಅಪರೂಪದ ಆರ್ಕಿಡ್ ಪ್ರಭೇದಗಳು, ವಿಶಿಷ್ಟ ಹುಲ್ಲಿನ ವರ್ಗ, ವಿರಳವಾದ ಬಳ್ಳಿ, ಗಿಡ ಮರದ ಪ್ರಭೇದಗಳು, ಹೂಬಿಡದ ಸೈಕಾಸ್ ಅಂಥ ಪ್ರಭೇದಗಳು-ಎಷ್ಟೆಲ್ಲ ಬಗೆ ಅದರಲ್ಲಿ! ಈ ತೆರನ ವಿಸ್ತ್ರತ ಅಧ್ಯಯನದ ಆಧಾರದಲ್ಲಿ ಅವರು ಬರೆದ ‘Flower to Fruit – Embryology of Flowering Plants’ ಎಂಬ ಕೃತಿಯಂತೂ ಉತ್ಕೃಷ್ಟ ಪಠ್ಯಪುಸ್ತಕ.
ಇನ್ನು, ಅವರೇ ಹುಡುಕಿ ಹೆಸರಿಸಿದ ಎರಡು ಹೊಸ ಸಸ್ಯ ಪ್ರಭೇದಗಳ ವಿವರಣೆಯಂತೂ ಆಸಕ್ತಿದಾಯಕ. ಒಂದು, ‘Sarcandra irvingbaileyi’ ಎಂಬ ನೀರು-ಆಹಾರ ಸಾಗಿಸಲು ಕೊಳವೆ ಅಂಗಾಂಶಗಳೇ ಇಲ್ಲದ ವಿಶಿಷ್ಟ ಸಸ್ಯ. ಹಾರ್ವಡ್ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಸಂಶೋಧಕ-ಮಾರ್ಗದರ್ಶಕರಾಗಿದ್ದ ಪ್ರಸಿದ್ಧ ಸಸ್ಯಶಾಸ್ತ್ರಜ್ಞ ಐರ್ವಿಂಗ್ ವಿಡ್ಮೆರ್ ಬೇಲೈ ಅವರ ಸ್ಮರಣೆಗಾಗಿ ಹೆಸರಿಸಿದ ಗಿಡವದು. ಇನ್ನೊಂದು ‘Ascarina maheshwari’. ತಾವೇ ಹುಡುಕಿದ ಈ ಪ್ರಭೇದಕ್ಕೆ ಪ್ರಸಿದ್ಧ ಸಸ್ಯಶಾಸ್ರಜ್ಞ ಪಿ.ಮಹೇಶ್ವರಿಯವರ ಹೆಸರನ್ನಿರಿಸಿದ್ದಾರೆ.
ಆನಂತರದ ವರ್ಷಗಳಲ್ಲಿ ಅವರ ಮಾರ್ಗದರ್ಶನ ಅಥವಾ ಪ್ರೇರಣೆ ಪಡೆದ ಸಂಶೋಧಕರು ತಾವು ಹುಡುಕಿದ ಹೊಸ ಪ್ರಭೇದಗಳಿಗೆ ಅವರ ಹೆಸರನ್ನಿರಿಸಿ ಗುರು ಕಾಣಿಕೆ ನೀಡಿದ್ದಾರೆ. ಒಬ್ಬ ಅಧ್ಯಾಪಕ ಹಾಗೂ ವಿಜ್ಞಾನಿಗೆ ಇದಕ್ಕಿಂತ ದೊಡ್ಡ ಗೌರವ ಉಂಟೇ? ಇಂದು ಎಂಟಕ್ಕೂ ಹೆಚ್ಚಿನ ಬಿಜಿಎಲ್ ಹೆಸರಿನ ಸಸ್ಯ ಪ್ರಭೇದಗಳಿವೆ. ‘Ascarina swamiyana’ ಎಂಬ ಸಣ್ಣ ಗಿಡ, ಮಂಡ್ಯ-ಹಾಸನ ಸೀಮೆಯ ಹುಲ್ಲುಗಾವಲಿನಲ್ಲಿ ಕಾಣುವ ಅಪರೂಪದ ‘Cycas swamyi’, ಹುಲ್ಲಿನ ವರ್ಗಕ್ಕೆ ಸೇರುವ ‘Bulbostylis swamyi, Eleocharis swamyi’ ಇತ್ಯಾದಿಗಳೆಲ್ಲ ಇದರಲ್ಲಿ ಸೇರಿವೆ. ಸಸ್ಯಶಾಸ್ತ್ರದಲ್ಲಿ ನಮ್ಮ ನಾಡಿನ ಹೆಸರನ್ನು ಜಾಗತಿಕಮಟ್ಟದಲ್ಲಿ ಚಿರಸ್ಥಾಯಿಯಾಗಿಸಿದ ಸಂಗತಿಗಳಿವು.
ಅಂಗಾಂಶಕೃಷಿ ಪ್ರಯೋಗಾಲಯದ ನೋಟ
ಈ ಸಸ್ಯವೈವಿಧ್ಯವೆಲ್ಲ ಸಂರಕ್ಷಿಸಲೇಬೇಕಾದ್ದು. ಈ ನಿಟ್ಟಿನಲ್ಲಿ ಶಿರಸಿಯ ಯುವ ಸಂಶೋಧಕ ವಿನಯ ಕುಮಾರ್ ಭಂಡಿ ಹಾಗೂ ಸಂಗಡಿಗರು ಕೈಗೊಂಡಿರುವ ಪ್ರಯತ್ನ ಉಲ್ಲೇಖನೀಯ. ಬಿಜಿಎಲ್ ಅಧ್ಯಯನದ ಕಕ್ಷೆಗೆ ದಕ್ಕಿದ ಹಾಗೂ ವಿನಾಶದಂಚಿಗೆ ಜಾರಿರುವ ಸಹ್ಯಾದ್ರಿಯ ಹಲವು ಅಮೂಲ್ಯ ಸಸ್ಯಪ್ರಭೇದಗಳನ್ನು ತಮ್ಮ ಬಿಎಲ್‌ಆರ್‌ಎಫ್ ಈ ಸಂಶೋಧನಾ ಕೇಂದ್ರದ ಹಸಿರುಮನೆಯಲ್ಲಿ ಬೆಳೆಸುತ್ತಿದ್ದಾರೆ. ಅಗತ್ಯವಿದ್ದಲ್ಲಿ ಅಂಗಾಂಶ ಕೃಷಿ ತಂತ್ರಜ್ಞಾನದ ಮೂಲಕ ಅವನ್ನು ಪುನರುತ್ಪಾದಿಸಿ, ಕಾಡಿನಲ್ಲಿ ಮತ್ತೆ ನೆಲೆಯೂರಿಸುವ ಕಾರ್ಯಯೋಜನೆಯನ್ನೂ ರೂಪಿಸುತ್ತಿದ್ದಾರೆ. ಯುವ ತಲೆಮಾರಿನ ಈ ಜೀವವೈವಿಧ್ಯ ಸಂರಕ್ಷಣಾ ಕಾರ್ಯ ಅನುಪಮವಾದದ್ದು. ಅದು ಬಿಜಿಎಲ್ ಅವರಿಗೆ ನೀಡಬಹುದಾದ ಶ್ರೇಷ್ಠ ಗೌರವವೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.