ADVERTISEMENT

Unique Festival: ಪುಂಡಿಕಟ್ಟು‌ ವಿಶಿಷ್ಟ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
ವಠಾರದ ಸದಸ್ಯರೊಂದಿಗೆ ಪುಂಡಿಕಟ್ಟು ಸುಡುತ್ತಾ ಸಂಭ್ರಮಾಚರಣೆ
ವಠಾರದ ಸದಸ್ಯರೊಂದಿಗೆ ಪುಂಡಿಕಟ್ಟು ಸುಡುತ್ತಾ ಸಂಭ್ರಮಾಚರಣೆ   

ಇಲ್ಲಿ ದೀಪಾವಳಿಯ ಪಾಡ್ಯದಂದು‌ ಸಾಯಂಕಾಲ ‘ಪುಂಡಿಕಟ್ಟು’ ಸುಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾ, ಮುಂಬರುವ ಚಳಿಗಾಲವನ್ನು ಸ್ವಾಗತಿಸುವ ಒಂದು ವಿಶಿಷ್ಟ ಸಂಪ್ರದಾಯವಿದೆ. ಈ ಆಚರಣೆ ಕಂಡುಬರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನಲ್ಲಿ. ಈ ಪ್ರದೇಶದಲ್ಲಿ ಬಿಟ್ಟರೆ ರಾಜ್ಯದ ಬೇರೆಲ್ಲೂ ಇದು ಕಾಣಸಿಗುವುದಿಲ್ಲ.

‘ಪುಂಡಿಕಟ್ಟು’ ಎಂದರೆ ಎಳೆ‌ ಸೆಣಬಿನ ಸಸ್ಯದಿಂದ ತಯಾರಾಗುವ ಒಂದು ತೆರನಾದ ಬಿದಿರು. ಇದು ನೋಡಲು ಥೇಟ್ ಬಿದಿರಿನ ಹಾಗೇ ಕಾಣುತ್ತದೆ. ಆದರೆ ಅದು ಬಿದಿರಲ್ಲ. ಸಿದ್ಧಾಪುರ ಭಾಗದ ಕೆಲ ರೈತರು ದೀಪಾವಳಿಗೂ ಕೆಲ ತಿಂಗಳ‌ ಮುನ್ನ ಸೆಣಬನ್ನು ತಮ್ಮ ಗದ್ದೆಯಲ್ಲಿ ಬೆಳೆಯುತ್ತಾರೆ. ಅದು ಎತ್ತರಕ್ಕೆ ಬೆಳೆದು ಕಟಾವಿಗೆ ಬರುವಾಗ ಅದನ್ನು ಕತ್ತರಿಸಿ ನೀರಿನಲ್ಲಿ ನೆನೆ ಹಾಕುತ್ತಾರೆ. ಹದಿನೈದು ಇಪ್ಪತ್ತು ದಿನ ಸರಿಯಾಗಿ ನೆನೆದ ಬಳಿಕ ಅದನ್ನು ಸುಡು ಬಿಸಿಲಿನಲ್ಲಿ ಚೆನ್ನಾಗಿ ಒಣಗಲು ಬಿಡುತ್ತಾರೆ. ಆಗ ಅದು ಅತ್ಯಂತ ಹಗುರವಾಗಿ, ಒಳಗಡೆ ಟೊಳ್ಳಾಗಿ ಒಣ ಹುಲ್ಲಿನಂತಾಗಿ ಪುಂಡಿಕಟ್ಟು ಸಿದ್ಧವಾಗುತ್ತದೆ. ನಂತರ ಎಂಟು–ಹತ್ತು ಎಳೆಗಳನ್ನು ಸೇರಿಸಿ ಒಂದು ಕಟ್ಟು ಮಾಡುತ್ತಾರೆ. ಅದನ್ನೇ ‘ಪುಂಡಿಕಟ್ಟು’ಎನ್ನುತ್ತಾರೆ.

ಇದನ್ನು ದೀಪಾವಳಿಯಂದು ರೈತರು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಊರಿನವರೆಲ್ಲಾ ತಮಗೆ ಬೇಕಾದಷ್ಟು ಕೊಂಡುಕೊಂಡು ಪಾಡ್ಯದ ಸಂಜೆ ಅದಕ್ಕೆ ಬೆಂಕಿ ಹಚ್ಚಿ ‘ದೀಪ್ ದೀಪ್ ದೀಪಾವಳಿಯೋ, ಎಲ್ಲರ ಮನೆ ಹೋಳಿಗ್ಯೋ’ ಹಾಗೂ ‘ಅಳಿಯನಿಗೆ ದೀಪಾವಳಿ, ಮಾವನಿಗೆ ದೀವಾಳಿ’ ಎಂದು ಕೂಗುತ್ತಾ ಕೆಲವರು ತಮ್ಮ‌ ವಠಾರದ ಸದಸ್ಯರೊಂದಿಗೆ ‘ಪುಂಡಿಕಟ್ಟು’ ಸುಡುತ್ತಾ ಸಂಭ್ರಮಿಸಿದರೆ, ಇನ್ನೂ ಕೆಲವರು ಪಟ್ಟಣದ ಬೀದಿಗಳಲ್ಲಿ ‘ಪುಂಡಿಕಟ್ಟು’ ಸುಡುತ್ತಾ ಸಾಲಾಗಿ ಮೆರವಣಿಗೆ ಹೊರಟು ಸಂಭ್ರಮಿಸುತ್ತಾರೆ.

ADVERTISEMENT

‘ದೀಪಾವಳಿ ಸಮಯಕ್ಕೆ ಸರಿಯಾಗಿ ಚಳಿಗಾಲ ಪ್ರಾರಂಭವಾಗುವುದರಿಂದ ರಾತ್ರಿ ಹೊತ್ತಿನಲ್ಲಿ ಬೆಚ್ಚನೆಯ ಶಾಖವು ಮೈ‌ಮನಸ್ಸಿಗೆ ಮುದ ನೀಡುತ್ತದೆ. ಹಾಗೂ ಚಳಿಗಾಲಕ್ಕೆ ಸ್ವಾಗತವನ್ನು ಕೋರುವ ನಿಟ್ಟಿನಲ್ಲಿ ಪುಂಡಿಕಟ್ಟನ್ನು ಗ್ರಾಮೀಣ ಭಾಗದಲ್ಲಿ ಎಲ್ಲರೂ ಒಟ್ಟಾಗಿ ಸುಡುವುದರ ಮೂಲಕ ಹಿರಿಯರು ಹಬ್ಬವನ್ನು ಆನಂದಿಸುತ್ತಿದ್ದರು. ಅದನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದು ಸ್ಥಳೀಯರಾದ ನರಸಿಂಹಮೂರ್ತಿ ಕಾಮತ್ ಹೇಳುತ್ತಾರೆ.

ಪುಂಡಿಕಟ್ಟು

ಏನೇ ಆಗಲಿ, ಇಂತಹ ಒಂದು ವಿಶಿಷ್ಟ ಆಚರಣೆ ಕರ್ನಾಟಕದ ಸಿದ್ಧಾಪುರದಲ್ಲಿ ಮಾತ್ರ ತಲೆತಲಾಂತರ
ದಿಂದಲೂ ನಡೆದುಕೊಂಡು ಬರುತ್ತಿರುವುದು ವಿಶೇಷ. ನಿಮಗೇನಾದರೂ ಈ ವಿಶೇಷ ಸಂಪ್ರದಾಯವನ್ನು ಕಣ್ತುಂಬಿಕೊಳ್ಳುವ ಆಸೆ ಇದ್ದರೆ ದೀಪಾವಳಿ ಪಾಡ್ಯದಂದು ಸಿದ್ಧಾಪುರಕ್ಕೆ ಭೇಟಿ ನೀಡಿ, ಸಂಭ್ರಮಿಸಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.