ADVERTISEMENT

Superstar Rajinikanth | ರಂಜನೆಗೆ 50...ರಜನಿಗೆ 75

ಗಂಗಾಧರ ಮೊದಲಿಯಾರ್
Published 28 ಸೆಪ್ಟೆಂಬರ್ 2025, 0:09 IST
Last Updated 28 ಸೆಪ್ಟೆಂಬರ್ 2025, 0:09 IST
<div class="paragraphs"><p>ರಜನಿಕಾಂತ್‌</p></div>

ರಜನಿಕಾಂತ್‌

   

ರಜನಿಕಾಂತ್‌ ತಮ್ಮ ತರಹೇವಾರಿ ಸ್ಟೈಲ್‌ಗಳ ಮೂಲಕವೇ ಚಿತ್ರರಸಿಕರ ಮನಗೆದ್ದಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸೂಪರ್‌ಸ್ಟಾರ್‌ ಪಟ್ಟವನ್ನು ಗಳಿಸಿಕೊಂಡು ಅದನ್ನು ಬಹುಕಾಲದಿಂದ ಉಳಿಸಿಕೊಂಡಿದ್ದಾರೆ. ಈಗಲೂ ಭಾರತೀಯ ಚಿತ್ರೋದ್ಯಮದಲ್ಲಿ ಬಾಕ್ಸ್‌ಆಫೀಸ್‌ ಸುಲ್ತಾನನೇ ಸರಿ...

ಬೆಂಗಳೂರಿನ ‘ಹನುಮಂತ ನಗರ ಟು ಶಿವಾಜಿ ನಗರ’ ಸಿಟಿ ಬಸ್‌ನಲ್ಲಿ ಕಂಡಕ್ಟರ್‌ ಆಗಿದ್ದ ಶಿವಾಜಿರಾವ್‌ ಗಾಯಕವಾಡ್‌ ಎಂಬ ಸಿನಿಮಾ ಹುಚ್ಚು ಹಿಡಿದ ಯುವಕ ‘ರಜನಿಕಾಂತ್‌’ ಎಂಬ ಹೆಸರಿನಲ್ಲಿ ರೂಪಾಂತರವಾಗಿ ‘ಸೂಪರ್‌ ಸ್ಟಾರ್‌’ ಆಗಿ ಬೆಳೆದಿರುವುದು ರೋಚಕ ಇತಿಹಾಸ.

ADVERTISEMENT

ಎಂಜಿಆರ್‌ ನಂತರ ತಮಿಳು ಚಿತ್ರರಸಿಕರ ಮನಸ್ಸಿನಲ್ಲಿ ‘ತಲೈವಾ’ ಆಗಿ ಕುಳಿತಿರುವ ರಜನಿಕಾಂತ್‌ ಚಿತ್ರರಂಗ ಪ್ರವೇಶಿಸಿ ಐವತ್ತು ವರ್ಷ ಆಗಿದೆ. 75 ವರ್ಷ ವಯಸ್ಸಿನ ಈ ಸೂಪರ್‌ ಸ್ಟಾರ್‌ ನಾಯಕನಾಗಿಯೇ ಅಭಿನಯಿಸುತ್ತಾ ಬಾಕ್ಸ್‌ ಆಫೀಸನ್ನು ಚಿಂದಿ ಮಾಡುತ್ತಿರುವುದೂ ವಿಶೇಷವೇ. ರಜನಿಕಾಂತ್‌ ಸಿನಿಮಾ ಜಗತ್ತು ಪ್ರವೇಶದ ಐವತ್ತನೇ ವರ್ಷಾಚರಣೆಯನ್ನು
ತಮಿಳುನಾಡಿನಲ್ಲಿ ಅಭಿಮಾನಿಗಳು ನಾಡಹಬ್ಬದಂತೆ ಆಚರಿಸುತ್ತಿದ್ದಾರೆ.

ರಾಜ್‌ಕುಮಾರ್‌, ಎಂಜಿಆರ್, ಶಿವಾಜಿ ಗಣೇಶನ್, ಎನ್‌.ಟಿ. ರಾಮರಾವ್‌ ಮೊದಲಾದವರ ಕಾಲ ಮುಗಿದ ಮೇಲೆ, ಸುದೀರ್ಘ ಸಮಯ ನಾಯಕನಾಗಿ ಅಭಿನಯಿಸುತ್ತಲೇ ಇರುವ ನಾಯಕನಟರಿನ್ನೆಲ್ಲಿ ಸಿಗುತ್ತಾರೆ ಎಂಬ ಮಾತಿತ್ತು. ನಟನೊಬ್ಬ ಒಂದಿಪ್ಪತ್ತು ವರ್ಷ  ನಾಯಕನಾಗಿಯೇ ಉಳಿಯುತ್ತಾನೆ ಎನ್ನುವ ಗ್ಯಾರಂಟಿ ಯಾರಿಗೂ ಇರುತ್ತಿರಲಿಲ್ಲ. ಈಗ ಜನಪ್ರಿಯ ನಾಯಕ ನಟರ ಸಿನಿಮಾ ನಿರ್ಮಾಣವಾಗುತ್ತಿರುವ ಮಂದಗತಿಯ ಪರಿಯನ್ನು ನೋಡಿದರೆ ಹತ್ತೇ ವರ್ಷಕ್ಕೆ ಅವರ
ಕಾಲ ಮುಗಿಯುತ್ತದೆ ಎನ್ನುವ ಅಭಿಪ್ರಾಯ ಮೂಡುತ್ತದೆ. ಇಂತಹ ಕಾಲದಲ್ಲಿ ರಜನಿಕಾಂತ್ ‘ಕಬಾಲಿ’, ‘ಜೈಲರ್’, ‘ದರ್ಬಾರ್’, ‘ವೇಟ್ಟೈಯಾನ್’, ‘ಕೂಲಿ’ ಮೊದಲಾದ ಚಿತ್ರಗಳ ನಾಯಕನಾಗಿ ಯಶಸ್ವಿಯಾಗುತ್ತಿದ್ದಾರೆ.

ವಿಜಯ್, ಸೂರ್ಯ, ಧನುಷ್, ಯಶ್, ಜೂನಿಯರ್‌ ಎನ್‌ಟಿಆರ್‌, ಅಲ್ಲು ಅರ್ಜುನ್‌ ಮೊದಲಾದ ನಾಯಕನಟರಿಗೆ ಯುವಪೀಳಿಗೆ ಮಾರು ಹೋಗಿದೆ. ಹೊಸದು ಬಂದು ಹಳತು ದೂರ ಸರಿದಿದೆ ಎಂದು ಹೇಳುವುದು ಲೋಕಾರೂಢಿ. ಆದರೆ ರಜನಿಕಾಂತ್‌ ಎನ್ನುವ ಸಮ್ಮೋಹಿನಿಗೆ ಕಾಲವೇ ಇಲ್ಲ. ಈಗಲೂ ಅವರು ಬಾಕ್ಸಾಫಿಸಿಗೆ ಸುಲ್ತಾನ. ಭಾರತೀಯ ಚಿತ್ರರಂಗದಲ್ಲಿ ಅವರದು ವಿಶಿಷ್ಟ ವ್ಯಕ್ತಿತ್ವ. ನಾಯಕನಾದವನು ಶ್ರೀರಾಮನಂತಿರಬೇಕು, ಆದರ್ಶ ಪುರುಷನ ತರಹ ಇರಬೇಕು, ಸುಂದರವಾಗಿರಬೇಕು, ಮೊದಲಾದ ಎಲ್ಲ ನಂಬಿಕೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಬೆಳೆದವರು.

ಮೊದಲ ಸಿನಿಮಾ ‘ಅಪೂರ್ವ ರಾಗಂಗಳ್’

ಕೆ.ಬಾಲಚಂದರ್‌ ನಿರ್ದೇಶನದ ‘ಅಪೂರ್ವ ರಾಗಂಗಳ್’ (1975) ರಜನಿಕಾಂತ್‌ ಅಭಿನಯದ ಮೊದಲ ಚಿತ್ರ. ಈ ಚಿತ್ರದಲ್ಲಿ ಪತ್ನಿ ಪೀಡಕ ಗಂಡನ ಪಾತ್ರದಲ್ಲಿ ಗಮನ ಸೆಳೆದರು. ನಾಯಕನಟನಾಗಿ ಬೆಳೆಯುವ ಕನಸು ಕಾಣುವ ಯುವಕರು ಹೀಗೆ ನೆಗೆಟಿವ್‌ ‍ಪಾತ್ರಗಳ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡುವುದಕ್ಕೆ ಒಪ್ಪುವುದಿಲ್ಲ. ಆದರೆ ರಜನಿಕಾಂತ್‌ ಕಂಡಕ್ಟರ್‌ ಕೆಲಸಕ್ಕೆ ನಮಸ್ಕಾರ ಹಾಕಿ, ಬೆಂಗಳೂರಿನ ಗಾಂಧಿನಗರದಲ್ಲಿ ಪಾತ್ರಕ್ಕಾಗಿ ಅಲೆಯುತ್ತಿದ್ದರು. ಇವರ ಅವತಾರ ಕಂಡು ಯಾವೊಬ್ಬ ನಿರ್ದೇಶಕ, ನಿರ್ಮಾಪಕನೂ ಬಾಗಿಲ ಬಳಿಯೂ ಬಿಟ್ಟುಕೊಳ್ಳಲಿಲ್ಲ. ಅಂತಹ ಸಮಯದಲ್ಲಿ ಕೆ.ಬಾಲಚಂದರ್‌ ಕರೆದು ‘ರಜನಿಕಾಂತ್‌’ ಎಂದು ನಾಮಕರಣ ಮಾಡಿ, ‘ಅಪೂರ್ವ ರಾಗಂಗಳ್’ ಸಿನಿಮಾದಲ್ಲಿ ಅವಕಾಶ ನೀಡಿದರು. 1975ರಲ್ಲೇ ಪುಟ್ಟಣ್ಣ ಕಣಗಾಲ್‌ ಅವರು ಮೂರು ಕಥೆಗಳ ‘ಕಥಾ ಸಂಗಮ’ ಚಿತ್ರವನ್ನು ನಿರ್ದೇಶಿಸಿದ್ದರು. ಅದರಲ್ಲಿ ‘ಮುನಿತಾಯಿ’ ಚಿತ್ರದಲ್ಲಿ ಪೊರ್ಕಿ ಯುವಕನ ಪಾತ್ರಕ್ಕೆ ರಜನಿಕಾಂತ್‌ರನ್ನು ಆಯ್ಕೆ ಮಾಡಿದ್ದರು. ಈ ಚಿತ್ರ ಹಾಗೂ ಅದರಲ್ಲಿ ರಜನಿಕಾಂತ್‌ ಪಾತ್ರ ಮೆಚ್ಚುಗೆಗೆ ಪಾತ್ರವಾದರೂ ‘ಮುನಿತಾಯಿ’ 1976 ರಲ್ಲಿ ಬಿಡುಗಡೆಯಾಯಿತು. ಅದಕ್ಕಿಂತ ಮುಂಚೆ ಅವರು ‘ಒಂದು ಪ್ರೇಮದ ಕಥೆ’ ಚಿತ್ರದಲ್ಲೂ ಅಭಿನಯಿಸಿದ್ದರು. ಬಾಲಚಂದರ್‌ ಅವರ ‘ಅಪೂರ್ವ ರಾಗಂಗಳ್’ ಮೊದಲು ಬಿಡುಗಡೆಯಾದ ಚಿತ್ರವಾದ್ದರಿಂದ ರಜನಿಕಾಂತ್‌ ಪ್ರಥಮ ಚಿತ್ರ ತಮಿಳಿನದ್ದಾಯಿತು. 

1976 ರಲ್ಲಿ ಕೆ.ಬಾಲಚಂದರ್‌ ‘ಅಂತುಲೇನಿ ಕಥಾ’ ಚಿತ್ರವನ್ನು ನಿರ್ಮಿಸಿ ಅದರಲ್ಲೂ ರಜನಿಗೆ ಅವಕಾಶ ನೀಡಿದರು. ಅದೇ ವರ್ಷ ‘ಮೂನ್ರು ಮುಡಿಚ್ಚು’ ಚಿತ್ರ ಉತ್ತಮ ಅವಕಾಶ ಕಲ್ಪಿಸಿತು. ಬಾಲಚಂದರ್‌ ಅವರಿಗೆ ನಾಯಕನಟರನ್ನು ರೂಪಿಸುವ ಕಲೆ ಗೊತ್ತಿತ್ತು. ರಜನಿ ಹಾಗೂ ಕಮಲ್‌ ಇಬ್ಬರನ್ನೂ ಏಕಕಾಲದಲ್ಲಿ ನಾಯಕನಟರನ್ನಾಗಿ ಬೆಳೆಸಿದರು. ‘ಮೂನ್ರು ಮುಡಿಚ್ಚು’ ಚಿತ್ರದಲ್ಲಿ ರಜನಿ ಅವರ ಸ್ಟೈಲ್, ಮ್ಯಾನರಿಸಂ, ಸಿಗರೇಟು ಹೊಗೆ ಬಿಡುವ ಶೈಲಿ, ಕನ್ನಡಕವನ್ನು ಮುಖಕ್ಕೆ ಎಳೆದುಕೊಳ್ಳುವ ಶೈಲಿ ಇವೆಲ್ಲಾ ತಮಿಳು ಸಿನಿಮಾ ಪ್ರೇಮಿಗಳನ್ನು ಸೆಳೆದವು. ‘ಅವರ್‌ಗಳ್‌’, ‘ಪದಿನಾರು ವಯದಿನಿಲೆ’, ‘ಆಡು ಪುಲಿಆಟ್ಟಂ’ ಮೊದಲಾದವು ಸಿನಿಮಾಗಳು ಭಾರೀ ಯಶಸ್ಸು ಗಳಿಸಿದವು. ಆರಂಭದ 15 ಸಿನಿಮಾಗಳಲ್ಲೂ ವಿಲನ್‌ ಆಗಿದ್ದ ರಜನಿಕಾಂತ್‌, ನಾಯಕನಾಗುವ ಅದೃಷ್ಟಕ್ಕಾಗಿ ಕಾದರು. 1978 ರಲ್ಲಿ ಆ ದಿನ ಬಂದೇ ಬಿಟ್ಟಿತು. ‘ಭೈರವಿ’ ಚಿತ್ರದಲ್ಲಿ ನಾಯಕನಾಗಿ ಬಡ್ತಿ ಪಡೆದ ಅವರು ಯಶಸ್ವಿಯಾದರು. ‘ಮುಳ್ಳುಂ ಮಲರುಂ’, ‘ಅವಳ್‌ಅಪ್ಪಡಿದಾನ್‌’ ಚಿತ್ರಗಳೂ ಯಶಸ್ಸಿನ ಹಾದಿ ಹಿಡಿದವು. 1977 ರಲ್ಲಿ ಕನ್ನಡದ ‘ಸಹೋದರರ ಸವಾಲ್’ ಚಿತ್ರದಲ್ಲಿ ರಜನಿ ಎರಡನೇ ನಾಯಕನಟ.

ಬೆಂಗಳೂರಿನ ಊರ್ವಶಿ ಚಿತ್ರಮಂದಿರದ ಎದುರು ರಜನಿಕಾಂತ್‌ ಕಟೌಟ್‌ ಹಾಕಿ ಅಭಿಮಾನಿಗಳ ಸಂಭ್ರಮ

ಏರಿತ್ತು ರಜನಿ ಅಮಲು

ರಜನಿಯ ಸ್ಟೈಲ್‌ ಅಮಲು ಈ ವೇಳೆಗೆ ತಮಿಳು ಚಿತ್ರರಸಿಕರಿಗೆ  ಏರಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡು ನಿರ್ದೇಶಕ ಎಸ್.ಪಿ.ಮುತ್ತುರಾಮನ್‌, ರಜನಿಗೆ ಮತ್ತೊಂದು ಇಮೇಜು ಸೃಷ್ಟಿಸಲು ಯತ್ನಿಸಿ ಅದರಲ್ಲಿ ಯಶಸ್ವಿಯೂ ಆದರು. ಅವರು ತಯಾರಿಸಿದ ‘ಭುವನಾ ಒರು ಕೇಳ್ವಿಕುರಿ’ ಚಿತ್ರದಲ್ಲಿ ರಜನಿ ಒರಟು ಸ್ವಭಾವದ ಆದರೆ ಒಳ್ಳೆಯ ಮನಸ್ಸುಳ್ಳ ನಾಯಕ. ಒಂದು ರೀತಿಯಲ್ಲಿ ವಿಲನ್. ಚಿತ್ರ ಸೂಪರ್‌ ಹಿಟ್‌ ಆದದ್ದೇ ತಡ ರಜನಿ ಖ್ಯಾತಿ ಮುಗಿಲಿಗೇರಿತು. ಅಲ್ಲಿಂದ ಮುಂದೆ ಅವರ ಸ್ವರೂಪವೇ ಬದಲಾಯಿತು. ‘ಕಾಳಿ’, ‘ಶಂಕರ್‌ ಸಲೀಂ’, ‘ಸೈಮನ್‌’ ಚಿತ್ರಗಳು ಸಾಲುಗಟ್ಟಿದವು. ‘ಬಿಲ್ಲಾ’ ಚಿತ್ರದಿಂದ ರಜನಿಯ ಸಿನಿ ಜೀವನದ ಮತ್ತೊಂದು ಮಜಲು ಆರಂಭವಾಯಿತು. ‘ಪೋಕರಿ ರಾಜ’, ‘ತನಿಕಾಟ್ಟು ರಾಜ’, ‘ನೆಟ್ರಿ ಕಣ್’, ‘ಮೂಂಡ್ರು ಮುಗಂ’, ‘ಆರುಲಿರುಂದು ಅರವದುವರೈ’ ಚಿತ್ರಗಳು ಅವರಿಗೆ ಹೊಸ ಜೀವನವನ್ನೇ ಕಟ್ಟಿಕೊಟ್ಟವು. ಮುಂದೆ ರಜನಿ ಹತ್ತಿದ್ದು ಸೂಪರ್‌ ಸ್ಟಾರ್‌ ಅಟ್ಟಣಿಗೆಯನ್ನೇ. ‘ಬಾಷಾ’ ಚಿತ್ರವನ್ನು ಅಭಿಮಾನಿಗಳು ಎಷ್ಟು ಬಾರಿ ಬಿಡುಗಡೆಯಾದರೂ ವೀಕ್ಷಿಸುತ್ತಾರೆ. ಉತ್ತರ ಭಾರತದಲ್ಲಿ ಹಿಂದಿ ಸಿನಿಮಾ ನಾಯಕನಟರನ್ನಷ್ಟೇ ಹೀರೊಗಳು ಎಂದು ಒಪ್ಪುತ್ತಿದ್ದರು. ಅಂತಹ ನಿಯಮವನ್ನು ಮುರಿದವರು ರಜನಿಕಾಂತ್. ‘ಬಾಷಾ’ ಹಿಂದಿಗೂ ಡಬ್‌ ಆಗಿ ಅಲ್ಲಿನ ಜನ ರಜನಿಕಾಂತ್‌ ಅಭಿಮಾನಿಗಳಾಗಿದ್ದರು. ‘ಮುತ್ತು’ (1995) ಸಿನಿಮಾ ಜಪಾನಿನಲ್ಲಿ ಅತ್ಯಂತ ಜನಪ್ರಿಯ ರಂಜನೀಯ ಚಿತ್ರವೆನಿಸಿ, 25 ವಾರ ಪ್ರದರ್ಶನಗೊಂಡಿತು. ‘ಪಡೆಯಪ್ಪ’ ಸಾರ್ವಕಾಲಿಕ ದಾಖಲೆಯ ಚಿತ್ರ.

ದಾಖಲೆಗಳ ವೀರ

50 ವರ್ಷಗಳ ಸಿನಿಮಾ ನಡಿಗೆಯಲ್ಲಿ ರಜನಿಕಾಂತ್‌ ಹಲವಾರು ಮೈಲುಗಲ್ಲುಗಳನ್ನು ನೆಟ್ಟಿದ್ದಾರೆ. 2010 ರಲ್ಲಿ ‘ಎಂದಿರನ್’ ₹600 ಕೋಟಿ ವೆಚ್ಚದಲ್ಲಿ ತಯಾರಾದ ಬಿಗ್‌ ಬಜೆಟ್‌ ಚಿತ್ರವೆನಿಸಿತು. ‘ಎಂದಿರನ್‌’ ಹಾಗೂ ‘2.0’ (ರೋಬೋ) ಚಿತ್ರಗಳ ಬಿಡುಗಡೆಯ ನಂತರ ರಜನಿ ಅವರಷ್ಟು ಟ್ರೋಲ್‌ ಆದ ಮತ್ತೊಬ್ಬ ನಟ ವಿಶ್ವದಲ್ಲೇ ಬೇರೊಬ್ಬ ಇರಲಾರನೆನಿಸುತ್ತದೆ. ಸರ್ದಾರ್ಜಿ ಜೋಕುಗಳನ್ನು ಹಿಂದಿಕ್ಕಿ ರಜನಿಕಾಂತ್‌ ಜೋಕುಗಳು ಪುಂಖಾನುಪುಂಖವಾಗಿ ಪ್ರಸಾರಗೊಂಡವು. ‘ಶಿವಾಜಿ’ ಚಿತ್ರಕ್ಕಾಗಿ 2007 ರಲ್ಲೇ ಅವರು ಪಡೆದ ಸಂಭಾವನೆ ₹26 ಕೋಟಿಗಳಂತೆ. (ಅದು ಚಿತ್ರದಿಂದ ಚಿತ್ರಕ್ಕೆ, ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಈಗ 200 ಕೋಟಿ ಮುಟ್ಟಿದೆ ಎಂಬುದು ಖಚಿತವಲ್ಲದ ಮಾಹಿತಿ.) ಆ ಕಾಲದಲ್ಲಿ ಅದು ಅತಿ ಹೆಚ್ಚು. ಜಾಕಿ ಚಾನ್‌ ನಂತರ ಇಷ್ಟೊಂದು ಮೊತ್ತದ ಸಂಭಾವನೆ ಪಡೆದ ಎರಡನೇ ನಾಯಕ ನಟ ಎಂಬ ದಾಖಲೆ ಇವರದು. 2005 ರಲ್ಲಿ ‘ಚಂದ್ರಮುಖಿ’ 126 ವಾರ ಸತತವಾಗಿ ಪ್ರದರ್ಶನಗೊಂಡು ಅತಿ ಹೆಚ್ಚು ವಾರ ಪ್ರದರ್ಶನಗೊಂಡ ತಮಿಳು ಸಿನಿಮಾ ಎಂಬ ದಾಖಲೆ ಬರೆಯಿತು. ಅದುವರೆಗೆ ಅಂದಿನ ಕಾಲದ ಸೂಪರ್‌ ಸ್ಟಾರ್‌ ಎಂ.ಕೆ.ತ್ಯಾಗರಾಜ ಭಾಗವತರ್‌ ಅವರ ಅಭಿನಯದ ‘ಹರಿದಾಸ’ಕ್ಕೆ ಈ ದಾಖಲೆ ಇತ್ತು. 73 ನೇ ವಯಸ್ಸಿನಲ್ಲಿ ಅವರು ನಾಯಕನಾಗಿ ಅಭಿನಯಿಸಿದ ‘ಜೈಲರ್’ ಚಿತ್ರ ₹600 ಕೋಟಿ ಗಳಿಸಿತು. 2023 ರಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಅತ್ಯಂತ ಹೆಚ್ಚು ಲಾಭಗಳಿಸಿದ ಚಿತ್ರವೆನಿಸಿದೆ.

ಇದೇ ರೀತಿ ರಜನಿಕಾಂತ್‌ ಎಂಬ ಸ್ಟೈಲ್‌ ಕಿಂಗ್‌ ನಟನ ಮೋಡಿ ಮುಂದುವರಿದಿದೆ! 

ರಾಜಕೀಯ ಕನಸು ಭಗ್ನ

ರಜನಿಕಾಂತ್‌ ಮರಾಠಿಗರಾದರೂ, ಬೆಂಗಳೂರಿನಲ್ಲಿದ್ದ ಕಾರಣ ಕನ್ನಡಿಗ ಎಂದೇ ಪರಿಗಣಿಸುತ್ತೇವೆ. ತಮಿಳು ಸಿನಿಮಾರಂಗದ ಜಾಯಮಾನವೆಂದರೆ ಅವರು ಕಲೆಯನ್ನು ಗೌರವಿಸುತ್ತಾರೆ. ರಜನಿಕಾಂತ್‌ ಅವರನ್ನು ಸೂಪರ್‌ ಸ್ಟಾರ್‌ ಮಾಡಿದ್ದಾರೆ. ಕೇರಳದ ಎಂಜಿಆರ್‌ ಅವರನ್ನು ಇಂದಿಗೂ ಪೂಜಿಸುತ್ತಾರೆ. ಜಯಲಲಿತಾ ಅವರನ್ನು ಬೆಂಬಲಿಸಿ ಮುಖ್ಯಮಂತ್ರಿ ಮಾಡಿದ್ದರು. ಹೀಗೆ ಕಲೆಗೇ ಅಲ್ಲಿ ಗೌರವ. ಆದರೆ ಕಾವೇರಿ ಪ್ರಶ್ನೆ ಬಂದಾಗಲೆಲ್ಲಾ ರಜನಿಕಾಂತ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಚಿತ್ರರಂಗದ ಅವರ ವಿರೋಧಿಗಳೇ ಯತ್ನಿಸುತ್ತಾರೆ. ಹಲವಾರು ಬಾರಿ ರಜನಿ ಇಂತಹ ಮುಜುಗರವನ್ನು ಅನುಭವಿಸಿದ್ದಾರೆ. ಅವರು ‘ರಾಜಕೀಯ ಪ್ರವೇಶಿಸುತ್ತಾರೆಯೇ’ ಎನ್ನುವುದು ದೀರ್ಘಕಾಲದಿಂದ ಎಲ್ಲರೂ ಕೇಳುತ್ತಿದ್ದ ಪ್ರಶ್ನೆ. ಈ ಪ್ರಯತ್ನ ದುರಂತ ಅಂತ್ಯ ಕಂಡಿತು. ಬಹುಶಃ ರಜನಿಕಾಂತ್‌ ಸೋಲು ಕಂಡದ್ದು ಇದೊಂದರಲ್ಲೇ ಅನಿಸುತ್ತದೆ.

ಸಿನಿಮಾದಲ್ಲಿ ಸ್ಟೈಲ್‌ ಕಿಂಗ್‌ ಆಗಿದ್ದರೂ ರಾಜಕೀಯ ವಿಷಯಗಳಲ್ಲಿ ಅವರಿಗೆ ಪ್ರಬುದ್ಧತೆ ಇರಲಿಲ್ಲ. ಆದರೂ ಒಂದು ಕೈ ನೋಡೇ ಬಿಡೋಣ ಎನ್ನುವ ಹಂತಕ್ಕೆ ಬಂದು ಪಕ್ಷ ಸ್ಥಾಪಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದರು. ರಜನಿಕಾಂತ್‌ ಬಿಜೆಪಿ ಪರ ಒಲವುಳ್ಳವರು ಎಂಬ ಅಭಿಪ್ರಾಯ ತಮಿಳುನಾಡಿನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಕೆಲ ವರ್ಷಗಳ ಹಿಂದೆ ಚೆನ್ನೈನಲ್ಲಿ ಅವರ ಮನೆಗೆ ಭೇಟಿ ಕೊಟ್ಟದ್ದೂ ಇದೇ ಕಾರಣದಿಂದ ಎನ್ನಲಾಗಿದೆ. ರಾಜಕೀಯ ಪಕ್ಷವನ್ನು ಸ್ಥಾಪಿಸಿದ ನಂತರ ಒತ್ತಡಕ್ಕೆ ಒಳಗಾಗಿ ‘ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ’ ಎಂದು ಘೋಷಿಸಿದರು. ಇದರಿಂದ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಯಿತು. ಪಕ್ಷ ರಚನೆ ಘೋಷಣೆಯ ನಂತರ ಅಲ್ಲಲ್ಲಿ ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುವ ಬದಲು ರೇಗುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ರಾಜಕೀಯವಾಗಿ ಪಕ್ಷ ಸಂಘಟನೆ ಮಾಡಲು ತಮಿಳುನಾಡಿನ ಕ್ಷೇತ್ರಗಳ ಅಧ್ಯಯನದ ಕೊರತೆಯೂ ಅವರಲ್ಲಿತ್ತು. ಅಲ್ಲದೆ ಪಾದರಸದಂತೆ ಓಡಾಡುವ ವಯಸ್ಸೂ ಇರಲಿಲ್ಲ. ಆಸೆಯಿದ್ದರೂ ರಾಜಕೀಯಕ್ಕೆ ತಡವಾಗಿ ಪ್ರವೇಶ ಮಾಡಿದ್ದರು. ಆರೋಗ್ಯವೂ ಆಗಾಗ ಕೈಕೊಡುತ್ತಿತ್ತು. ಹೀಗಾಗಿ ಅವರು ತಾವೇ ರಚಿಸಿದ್ದ  ಪಕ್ಷವನ್ನು ವಿಸರ್ಜಿಸಿದರು. ಅವರ ರಾಜಕೀಯ ಪ್ರವೇಶದ ಕನಸು ಭಗ್ನವಾಯಿತು.

ರಾಜಕೀಯಕ್ಕೆ ನಮಸ್ಕಾರ ಹಾಕಿದ ನಂತರ ಸಿನಿಮಾದಲ್ಲಿ ಮುಂದುವರೆಯುವ ನಿರ್ಧಾರದಂತೆ ಪ್ರತಿವರ್ಷ ಅವರ ಒಂದೊಂದು ಚಿತ್ರ ಬಿಡುಗಡೆಯಾಗುತ್ತಿದೆ. ವಯಸ್ಸಾದರೂ ಯುವಕನಂತೆ ಕಾಣುವ ಚಮತ್ಕಾರ ಮಾಡುವ ತಂತ್ರಜ್ಞಾನ ಅವರ ನೆರವಿಗಿದೆ. ‘ಕೂಲಿ’ ಚಿತ್ರದಲ್ಲಿ ರಜನಿಕಾಂತ್‌ ದನಿಯನ್ನೂ, ಕೆಲ ದೃಶ್ಯಗಳನ್ನೂ ಎಐ ತಂತ್ರಜ್ಞಾನದ ಮೂಲಕ ಸೃಷ್ಟಿಸಲಾಗಿದೆ ಎನ್ನುವುದನ್ನು ಗಮನಿಸಿ. ರಜನಿಕಾಂತ್‌ ಅವರಿಗೆ ನೂರು ವರ್ಷವಾದರೂ ಹೀಗೇ ಇರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ!

ಬೆಂಗಳೂರಿನಲ್ಲಿದೆ ಹತ್ತಾರು ರಜನಿಕಾಂತ್‌ ಫ್ಯಾನ್ಸ್‌ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.