ನವಿರಾದ ರೇಷ್ಮೆಗೂಡುಗಳಿಂದ ಮನಮೋಹಕ ಗೊಂಬೆಗಳನ್ನು ಬೆಂಗಳೂರಿನ ಉಮಾ ವೆಂಕಟರಾಮ್ ನಲವತ್ತೈದು ವರ್ಷಗಳಿಂದ ಮಾಡುತ್ತಿದ್ದಾರೆ. ಇವರ ಕೈಯಲ್ಲಿ ರೇಷ್ಮೆಗೂಡುಗಳು ಜೀವಪಡೆಯುತ್ತವೆ. ಪುರಾಣ ಕಥೆಗಳು ಆಧಾರವಾಗಿರುವ ರಾಮನ ಪಟ್ಟಾಭಿಷೇಕ, ರಾಮನ ಘಟಾನಾವಳಿಗಳು, ಮಹಾಭಾರತ, ಕೃಷ್ಣಲೀಲೆ ಹಾಗೂ ಇನ್ನಿತರ ಕಲಾಕೃತಿಗಳು ಇವರ ಕೈಯಲ್ಲಿ ಅರಳಿವೆ.
ಕೇವಲ ಈ ಕಥೆಗಳಿಗಷ್ಟೇ ಸೀಮಿತರಾಗದೆ ವಿಶ್ವಕಪ್ ಕ್ರಿಕೆಟ್ ಆಟಗಾರರನ್ನು ಸಿದ್ಧಪಡಿಸಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ಆಟಗಾರರು ಪಂದ್ಯ ಆಡುತ್ತಿರುವ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ಇಷ್ಟಲ್ಲದೆ ಯಕ್ಷಗಾನ, ಗಾಂಧೀಜಿ, ಬುದ್ಧ, ಸರ್ವಜ್ಞ, ಸಂತಾಕ್ಲಾಸ್, ಕುರಾನ್ ಓದುತ್ತಿರುವುದು, ಆದಿಶೇಷನ ಮೇಲೆ ಮಲಗಿರುವ ರಂಗನಾಥ, ಕೃಷ್ಣನ ರಂಗಿನಾಟ, ವರಹಾದೇವಿ, ಹಳ್ಳಿ ಸೊಗಡು, ಮದುಮಕ್ಕಳು ಹೀಗೆ ಸಾಕಷ್ಟು ಆಕಾರದ ಕಲಾಕೃತಿಗಳನ್ನು ರೂಪಿಸಿದ್ದಾರೆ.
ಮನೆ ಗೋಡೆಗಳ ಅಲಂಕಾರದ ತೂಗು ಉಯ್ಯಾಲೆ ರೀತಿ ಇವುಗಳನ್ನು ಬಳಸಬಹುದು. ಆಕೃತಿಗೆ ತಕ್ಕಂತೆ ರೇಷ್ಮೆಗೂಡುಗಳನ್ನು ಕತ್ತರಿಸಿ ಜೋಡಿಸಿ ಅವುಗಳಿಗೆ ಬಣ್ಣಗಳ ಲೇಪನ ಮಾಡುತ್ತಾರೆ. ಬಳಿಕ ಮಣಿಸರಗಳು, ವಸ್ತ್ರವಿನ್ಯಾಸದಿಂದ ಅಲಂಕರಿಸುತ್ತಾರೆ.
ಅಜ್ಜಿಯ ಪ್ರೇರಣೆಯಿಂದ ಸ್ವತಃ ಈ ಕಲೆ ಕಲಿತು, ಮನೆಯಲ್ಲಿ ಬಿಡುವಿನ ವೇಳೆ ವಿವಿಧ ಬಗೆಯ ಗೊಂಬೆಗಳನ್ನು ಮಾಡುತ್ತಿದ್ದಾರೆ. 1979ರಿಂದ ರೇಷ್ಮೆಗೂಡುಗಳನ್ನು ನಮ್ಮದೇ ರಾಜ್ಯದ ರಾಮನಗರ ಹಾಗೂ ರಾಜಸ್ಥಾನದಿಂದ ತಂದು ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ಇದರ ಜೊತೆಗೆ ಕೊಬ್ಬರಿ, ಮೇಣ, ಅಡಿಕೆ, ಸೋಪ್, ಬೆಲ್ಲದ ಅಚ್ಚು, ತೆಂಗಿನ ವಸ್ತುಗಳಿಂದಲೂ ಗೊಂಬೆಗಳನ್ನು ಮಾಡುತ್ತಾರೆ. ಮದುವೆ ಸಮಾರಂಭ, ಉಡುಗೊರೆಗಳಿಗೆ ನಾನಾ ವಿಧದ ಕಲಾಕೃತಿಗಳನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಒಂದು ಕಲಾಕೃತಿ ತಯಾರಿಸಲು ಸುಮಾರು ಇಪ್ಪತ್ತು ದಿನಗಳು ಬೇಕು ಎನ್ನುತ್ತಾರೆ ಉಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.