ಹಳ್ಳಿಕಾರ್ ಹೋರಿ
ಅಂದು ಮನೆ ಮತ್ತು ಕೊಟ್ಟಿಗೆ ಸಿಂಗಾರಗೊಳ್ಳುತ್ತದೆ. ಕೇಕ್ ಸಿದ್ಧವಾಗಿರುತ್ತದೆ. ಸಂಭ್ರಮ ಮನೆ ಮಾಡಿರುತ್ತದೆ. ಇದು ಮನೆಯವರ ಜನ್ಮದಿನಕ್ಕಾಗಿ ಅಲ್ಲ, ಆ ಮನೆಯಲ್ಲಿರುವ ‘ಗಜ’ ಎಂಬ ಹಳ್ಳಿಕಾರ್ ಹೋರಿ ಸಲುವಾಗಿ! ರಾಮನಗರದ ಅರ್ಚಕರ ಹಳ್ಳಿಯಲ್ಲಿರುವ ವಿಜಯಕುಮಾರ್ ಅವರ ಮನೆಯಲ್ಲಿರುವ ಕಪ್ಪು ಮತ್ತು ಬೂದು ಬಣ್ಣದ ‘ಗಜ’ನ ಜನ್ಮದಿನವನ್ನು ಹತ್ತು ವರ್ಷಗಳಿಂದ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಪ್ರಾಚೀನ ಕಾಲದ ಹಳ್ಳಿಕಾರ್ ತಳಿ, ಜಾನುವಾರು ಹೈಬ್ರೀಡ್ ಸಂತಾನ ಶುರುವಾದ ಬಳಿಕ ಮೂಲೆಗುಂಪಾಗಿತ್ತು. ಆದರೆ, ಕಾಲ ಬದಲಾದಂತೆ ಜನರ ಮನಃಸ್ಥಿತಿ ಕೂಡ ಬದಲಾಗಿ, ಈಗ ಹಳ್ಳಿಕಾರ್ ತಳಿಗೆ ಮತ್ತೆ ಬಲು ಬೇಡಿಕೆ ಕುದುರಿದೆ. ಬಿತ್ತನೆ ಹೋರಿಗೆ ಭಾರಿ ಬೇಡಿಕೆ ಬಂದಿದೆ. ವಿಜಯಕುಮಾರ್ ಅವರ ‘ಗಜ’ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಸಾವಿರಕ್ಕೂ ಹೆಚ್ಚು ಹಸುಗಳು ಗರ್ಭಧರಿಸಲು ಕಾರಣವಾಗಿದೆ. ಇವರ ಮನೆಯಲ್ಲಿರುವ ಹಳ್ಳಿಕಾರ್ ಹಸುಗಳಿಗೆ ಜನಿಸಿದ 50ಕ್ಕೂ ಹೆಚ್ಚು ಕರುಗಳು ಕಳೆದ ವರ್ಷ ಮಾರಾಟವಾಗಿವೆ. ಹಳ್ಳಿಕಾರ್ ತಳಿಯ ಕರುಗಳಿಗಾಗಿ ದೂರದೂರಿನಿಂದ ರೈತರು ಬಂದು ಮುಂಗಡ ಕಾಯ್ದಿರಿಸುತ್ತಾರೆ.
ದೇಶದಲ್ಲಿ ಸುಮಾರು 39 ಗೋವಿನ ತಳಿಗಳಿವೆ. ಅದರಲ್ಲಿ ಕರ್ನಾಟಕದ ಹಳ್ಳಿಕಾರ್ ಅಥವಾ ಹಳ್ಳಿಕಾರ, ಅಮೃತ ಮಹಲ್, ಮಲೆನಾಡು ಗಿಡ್ಡ ಪ್ರಮುಖವಾಗಿವೆ. ಈ ಪೈಕಿ ಹಳ್ಳಿಕಾರ್ ತಳಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ದನಗಳ ಜಾತ್ರೆ, ದೇವರ ಜಾತ್ರೆ, ಹೋರಿ ಬೆದರಿಸುವ ಸ್ಪರ್ಧೆ, ಚಕ್ಕಡಿ ಓಟದ ಸ್ಪರ್ಧೆಗಳಲ್ಲೂ ಹಳ್ಳಿಕಾರ್ ತಳಿಯ ಹವಾ ಬಲು ಜೋರು. ಹೈನುಗಾರಿಕೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ರೈತನ ಅತ್ಯಾಪ್ತ ಸಂಗಾತಿಯಾಗಿರುವ ಹಳ್ಳಿಕಾರ್ ಸಾಕಣೆ ಇದೀಗ ಟ್ರೆಂಡ್ ಆಗಿದೆ. ಕರುಗಳಿಂದ ಹಿಡಿದು ಎತ್ತುಗಳವರೆಗೆ ಲಕ್ಷ ಲಕ್ಷ ಲೆಕ್ಕದಲ್ಲಿ ಮಾರಾಟವಾಗುತ್ತಿವೆ. ಕೃಷಿಗಷ್ಟೇ ಅಲ್ಲದೇ ಪ್ರತಿಷ್ಠೆ, ತಳಿ ಸಂವರ್ಧನೆಗಾಗಿ ಸಾಕುವವರು ಹೆಚ್ಚಾಗಿದ್ದಾರೆ.
ಹಳ್ಳಿಕಾರ್ ಸಮುದಾಯ ಗೊತ್ತೆ?
ಹಳ್ಳಿಕಾರ್ ಎಂಬ ಹೆಸರು ಕೇಳಿದಾಕ್ಷಣ, ಅದೊಂದು ದೇಸಿ ಜಾನುವಾರು ತಳಿ ಎಂಬುದಷ್ಟೇ ಮನಸ್ಸಿನಲ್ಲಿ ಮೂಡುತ್ತದೆ. ಆದರೆ, ಹಳ್ಳಿಕಾರ್ ಕೇವಲ ತಳಿ ಹೆಸರಷ್ಟೇ ಅಲ್ಲ, ಅದೊಂದು ಸಮುದಾಯ ಕೂಡ. ಹಳ್ಳಿಕಾರ ಎಂಬುದು ಕ್ರಮೇಣ ಹಳ್ಳಿಕಾರ್ ಆಗಿ ಬದಲಾಗಿದ್ದು, ಈ ಸಮುದಾಯವೇ ಈ ತಳಿಯ ಪ್ರವರ್ತಕರು. ಮೂಲತಃ ಯದುಕುಲಕ್ಕೆ ಸೇರಿದ ಈ ಸಮುದಾಯ ಹಿಂದಿನಿಂದಲೂ ಈ ತಳಿಯನ್ನು ಪೋಷಿಸಿಕೊಂಡು ಬಂದಿದೆ. ಉತ್ತರ ಭಾರತ ಮೂಲದ ಅವರು ನಾನಾ ಕಾರಣಗಳಿಂದಾಗಿ ದಕ್ಷಿಣ ಭಾರತಕ್ಕೆ ವಲಸೆ ಬಂದರು. ವಿಜಯನಗರ ಅರಸರು, ಹೊಯ್ಸಳರು, ಮೈಸೂರು ಒಡೆಯರ ಕಾಲದಲ್ಲಿ ಆಶ್ರಯ ಪಡೆದಿದ್ದ ಅವರು, ತಮ್ಮ ಗೋತಳಿ ಮೂಲಕ ಪಶುಪಾಲನೆ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಂಡರು. ಸೇನೆಯಲ್ಲೂ ಕೆಲಸ ಮಾಡುತ್ತಾ, ಯುದ್ಧದ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಸಾಗಣೆ ಸೇರಿದಂತೆ ಇತರ ಸೇನಾ ಉದ್ದೇಶಕ್ಕೆ ಬಳಸುತ್ತಿದ್ದ ತಮ್ಮ ಜಾನುವಾರುಗಳ ಸಂಪೂರ್ಣ ಉಸ್ತುವಾರಿ ಹೊತ್ತಿದ್ದರು.
ವಿಜಯನಗರ ಸಾಮ್ರಾಜ್ಯದ ಪತನದ ನಂತರ 1572–1600ರ ಅವಧಿಯಲ್ಲಿ ಮೈಸೂರು ಒಡೆಯರು ಹಳ್ಳಿಕಾರ್ ಜಾನುವಾರುಗಳನ್ನು ತಮ್ಮ ಸಂಸ್ಥಾನಕ್ಕೆ ತಂದರು. ಶ್ರೀರಂಗಪಟ್ಟಣದಲ್ಲಿ ‘ಕರುಹಟ್ಟಿ’ ಎಂಬ ಹೆಸರಿನಲ್ಲಿ ಈ ತಳಿಗಳ ಪಾಲನೆ, ಪೋಷಣೆ ಹಾಗೂ ಸಂವರ್ಧನೆ ಕೈಗೊಂಡರು. ಅದಕ್ಕಾಗಿ ಕಾವಲು ಪ್ರದೇಶಗಳನ್ನು ಗುರುತಿಸಿ, ಜಾನುವಾರುಗಳ ಸಂಪೂರ್ಣ ಹೊಣೆಯನ್ನು ತಳಿಯ ಪ್ರವರ್ತಕರಾದ ಹಳ್ಳಿಕಾರರಿಗೆ ವಹಿಸಿದ್ದರು. ಅವರ ವಾಸಕ್ಕೆ ಜಹಗೀರು ಕೊಟ್ಟಿದ್ದರು. 1617–1704ರ ಅವಧಿಯಲ್ಲಿ ಕರುಹಟ್ಟಿಗೆ ಮತ್ತಷ್ಟು ರಾಸುಗಳನ್ನು ಸೇರಿಸಿ, ವಿವಿಧೆಡೆ ಕಾವಲುಗಳನ್ನು ನೀಡಿದರು. ಚಿಕ್ಕದೇವರಾಜ ಒಡೆಯರ್, ಹಳ್ಳಿಕಾರ್ ಜಾನುವಾರು ಗುಂಪಿಗೆ ‘ಬೆಣ್ಣೆ ಚಾವಡಿ’ ಎಂದು ನಾಮಕರಣ ಮಾಡಿದ್ದರು. ಅರಮನೆಯವರು ಸೇವಿಸುತ್ತಿದ್ದ ಹಾಲು, ಬೆಣ್ಣೆ, ತುಪ್ಪ ಎಲ್ಲವೂ ಹಳ್ಳಿಕಾರ್ ತಳಿಯದ್ದೇ ಆಗಿತ್ತು. ಮುಂದೆ ಮೈಸೂರು ಆಳಿದ ಹೈದರಾಲಿ ಈ ತಳಿ ಸಂವರ್ಧನೆಯನ್ನು ಪ್ರೋತ್ಸಾಹಿಸಿದರು. ನಂತರ ಟಿಪ್ಪು ಸುಲ್ತಾನ್ ಮತ್ತು ಮೈಸೂರು ಒಡೆಯರ್ ಅವಧಿಯಲ್ಲಿ ಹಳ್ಳಿಕಾರ್‌ನ ಪ್ರಭೇದದಿಂದ ಸಂವರ್ಧನೆಗೊಂಡ ತಳಿಗೆ ‘ಅಮೃತ ಮಹಲ್’ ಎಂಬ ಹೆಸರು ಬಂತು. ಟಿಪ್ಪು ಮತ್ತು ಒಡೆಯರ್ ಈ ತಳಿಯ ಅಭಿವೃದ್ಧಿಗೆ ಶ್ರಮಿಸಿದ್ದರು. ಹಾಗಾಗಿ, ‘ಅಮೃತ ಮಹಲ್’ ಮೂಲ ಹಳ್ಳಿಕಾರ್ ಎಂದೇ ಗುರುತಿಸಲಾಗುತ್ತದೆ ಎಂದು ಹಳ್ಳಿಕಾರ್ ತಳಿ ಕುರಿತು ಸಂಶೋಧನೆ ನಡೆಸುತ್ತಿರುವ ಸತ್ಯಮೂರ್ತಿ ಪಿ. ಹೇಳುತ್ತಾರೆ.
‘ರಾಜ್ಯದಲ್ಲಿ ಮುಖ್ಯವಾಗಿ ತುಮಕೂರು, ಹಾಸನ, ಮಂಡ್ಯ, ಚಿಕ್ಕಮಗಳೂರು, ರಾಮನಗರ, ಮೈಸೂರು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೇ ಹೆಚ್ಚಾಗಿರುವ ಸಣ್ಣ ಸಮುದಾಯ ಹಳ್ಳಿಕಾರ್. ಸುಮಾರು 50 ಸಾವಿರದಷ್ಟಿರುವ ನಮ್ಮವರು ಇಂದಿಗೂ ಹಳ್ಳಿಕಾರ್ ಗೋತಳಿಯನ್ನೇ ಪೋಷಿಸಿಕೊಂಡು ಬರುತ್ತಾ, ಕೃಷಿ ಮತ್ತು ಹೈನುಗಾರಿಕೆಯನ್ನು ಬದುಕಾಗಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹಳ್ಳಿಕಾರ್ ಜನಪ್ರಿಯತೆ ಹೆಚ್ಚಿದಾಗ, ತಳಿಯ ಮೂಲ ಪ್ರವರ್ತಕರಾದ ಸಮುದಾಯದ ಕೊಡುಗೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಇದೀಗ ನಮ್ಮ ಸಮುದಾಯದ ಸಂಘಟನೆಯೂ ಶುರುವಾಗಿದ್ದು, ಗೋತಳಿಯ ಅರಿವು ಮೂಡಿಸುವ ಜೊತೆಗೆ ಸಮುದಾಯದ ಅಭಿವೃದ್ಧಿಗೂ ಸಂಘಸಂಸ್ಥೆ ಮತ್ತು ಸಂಘಟನೆಗಳನ್ನು ಕಟ್ಟಿಕೊಂಡು ಶ್ರಮಿಸಲಾಗುತ್ತಿದೆ. ಮೀಸಲಾತಿಯಲ್ಲಿ ಪ್ರವರ್ಗ ‘3ಎ’ಯಲ್ಲಿರುವ ಸಮುದಾಯವನ್ನು ಪ್ರವರ್ಗ –1ಕ್ಕೆ ಸೇರಿಸುವ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ’ ಎನ್ನುತ್ತಾರೆ ಸಮುದಾಯದ ಮುಖಂಡ ಬೆಂಗಳೂರಿನ ಹಳ್ಳಿಕಾರ್ ಹರೀಶ್.
ರಾಜ್ಯದಲ್ಲಿ ಹಳ್ಳಿಕಾರ್‌ಗಳೇ ಹೆಚ್ಚು
ರಾಜ್ಯದಲ್ಲಿರುವ ಆರು ತಳಿ ಜಾನುವಾರುಗಳಲ್ಲಿ ಹಳ್ಳಿಕಾರ್ ತಳಿಯೇ ಅತ್ಯಂತ ಹಳೆಯದು. ಸಮೀಕ್ಷೆ ಪ್ರಕಾರ, ರಾಜ್ಯದಲ್ಲಿ ಅಂದಾಜು 83 ಲಕ್ಷ ಜಾನುವಾರುಗಳಿದ್ದು, ಅದರಲ್ಲಿ 20 ಲಕ್ಷ ಹಳ್ಳಿಕಾರ್ ತಳಿಯೇ ಇದೆ. ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕಿನ ಕುಣಿಕೇನಹಳ್ಳಿಯಲ್ಲಿ ಹಳ್ಳಿಕಾರ್ ತಳಿ ಸಂವರ್ಧನಾ ಕೇಂದ್ರವಿದ್ದು, ಪ್ರತಿ ವರ್ಷ ಇಲ್ಲಿ ಜಾನುವಾರುಗಳನ್ನು ಹರಾಜು ಮಾಡಲಾಗುತ್ತದೆ. ನೆಲಮಂಗಲ, ಗುಬ್ಬಿ, ಕುಣಿಗಲ್ ತಾಲ್ಲೂಕಿನಲ್ಲೂ ತಳಿ ಸಂವರ್ಧನೆ ನಡೆಯುತ್ತಿದೆ ಎಂದು ಹಳ್ಳಿಕಾರ್ ತಳಿ ಕುರಿತು ಸಂಶೋಧನೆ ನಡೆಸಿರುವ ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಜಿ.ಎಸ್. ಹೇಳುತ್ತಾರೆ.
ಹಳ್ಳಿಕಾರ್ ತಳಿಯಲ್ಲಿ ಹಸು ಮತ್ತು ಎತ್ತು ಎರಡನ್ನೂ ಉಳುಮೆಗೆ ಮತ್ತು ಚಕ್ಕಡಿ ಎಳೆಯಲು ಬಳಸುತ್ತಾರೆ. ಬಲಿಷ್ಠ ಸ್ನಾಯು, ಉದ್ದ ಕಿವಿ, ಮೇಲಿನಿಂದ ಸ್ವಲ್ಪ ಹಿಂದಕ್ಕೆ ಚಾಚಿಕೊಂಡಿರುವ ಚೂಪಾದ ಕೋಡು, ಕಿರಿದಾದ ತಲೆಯ ವಿಶಿಷ್ಟ ನೋಟ ಹೊಂದಿರುವ ಹಳ್ಳಿಕಾರ್ ಕನಿಷ್ಠ 4 ರಿಂದ 5 ಅಡಿಯಷ್ಟು ಎತ್ತರ ಇರುತ್ತವೆ. ತಿಳಿ ಬೂದು, ಗಾಢ ಬೂದು ಹಾಗೂ ಕಪ್ಪು ಬಣ್ಣದ ಈ ತಳಿಗಳು 4–5 ಕ್ವಿಂಟಲ್ ತೂಕವಿದ್ದು, ಹೆಚ್ಚಿನ ಭಾರ ಎಳೆಯುವ ಸಾಮರ್ಥ್ಯ ಹೊಂದಿವೆ. ಇವುಗಳ ಜೀವಿತಾವಧಿ ಗರಿಷ್ಠ 20 ವರ್ಷವಾಗಿದ್ದು, ದಿನಕ್ಕೆ 5 ರಿಂದ 7 ಲೀಟರ್ ಹಾಲು ಕೊಡುತ್ತವೆ. ಹೆಚ್ಚಿನ ಕೊಬ್ಬಿನಾಂಶವಿರುವ ಹಾಲಿನ ತುಪ್ಪಕ್ಕೂ ಹೆಚ್ಚು ಬೇಡಿಕೆ ಇದೆ. ಇವುಗಳ ನಿರ್ವಹಣೆಯೂ ಸುಲಭ. ಹಳ್ಳಿಯಲ್ಲಿ ಸಿಗುವ ಹುಲ್ಲು, ಗಂಜಿ ಸೇರಿದಂತೆ ಇತರ ಮೇವು ಕೊಟ್ಟರೆ ಸಾಕು. ಹೊರಗಡೆ ಅಥವಾ ಮನೆಯಲ್ಲೇ ಕಟ್ಟಿ ಮೇಯಿಸಬಹುದು. ಅಂಗಡಿಯಿಂದ ಆಹಾರ ತಂದು ಕೊಡಬೇಕಿಲ್ಲ. ಕೆಲ ವರ್ಷಗಳ ಹಿಂದೆ ಅಳಿವಿನಂಚಿಗೆ ಸರಿದಿವೆ ಎಂದೇ ಹೇಳಲಾಗುತ್ತಿದ್ದ ತಳಿಯನ್ನು ಇತ್ತೀಚಿನ ವರ್ಷಗಳಲ್ಲಿ ಸಾಕುವವರ ಸಂಖ್ಯೆಯೂ ಹೆಚ್ಚಾಗಿ, ಬೇಡಿಕೆ ವೃದ್ಧಿಯಾಗಿದೆ.
ಹಳ್ಳಿಕಾರ್ ಎತ್ತುಗಳು ಓಟ ಮತ್ತು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಜನಪ್ರಿಯವಾಗಿವೆ. ಕರ್ನಾಟಕ, ತಮಿಳುನಾಡಿನಲ್ಲಿ ಸಂಕ್ರಾಂತಿ ಸೇರಿದಂತೆ ಕೆಲ ಹಬ್ಬದ ಸಂದರ್ಭದಲ್ಲಿ ಹೋರಿ ಬೆದರಿಸುವ, ಕೊಬ್ಬರಿ ಹರಿಯುವ ಹಾಗೂ ಚಕ್ಕಡಿ ಓಟದ ಸ್ಪರ್ಧೆ (ಖಾಲಿ ಗಾಢಾ) ಆಯೋಜಿಸಲಾಗುತ್ತದೆ. ಇಲ್ಲಿ ಹೆಚ್ಚಾಗಿ ಬಳಕೆಯಾಗುವುದು ಹಳ್ಳಿಕಾರ್ ತಳಿ ಎತ್ತುಗಳು ಎಂಬುದು ವಿಶೇಷ. ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯಲ್ಲಿ ಎತ್ತುಗಳ ಕೋಡುಗಳಿಗೆ ಕೋಡುಬಳೆ ಮತ್ತು ಕೊಬ್ಬರಿ ಕಟ್ಟಿ ಓಡಿಸುವ ಸಂಪ್ರದಾಯವಿದ್ದು, ಇದನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ತಮಿಳುನಾಡಿನಲ್ಲಿ ಜನಪ್ರಿಯವಾಗಿರುವ ಜಲ್ಲಿಕಟ್ಟು ಸ್ಪರ್ಧೆಗೂ ಮಧುರೈನಲ್ಲಿ ಹಳ್ಳಿಕಾರ್ ಮೂಲದ ಕಂಗಾಯಂ (ಅಮೃತ ಮಹಲ್) ಹೋರಿಗಳನ್ನೇ ಪಳಗಿಸಿ ಬಳಸುತ್ತಾರೆ. ತೆಲಂಗಾಣದ ರಾಯಲ ಸೀಮಾ ಪ್ರದೇಶದಲ್ಲಿ ಹಳ್ಳಿಕಾರ್‌ಗಳನ್ನು ‘ಸೀಮಾ’ ಹಸುಗಳು ಎಂದು ಕರೆಯಲಾಗುತ್ತದೆ. ಅವನತಿ ಅಂಚಿನಲ್ಲಿದೆ ಎಂದು ಹೇಳಲಾಗುತ್ತಿದ್ದ ದೇಸಿ ಗೋತಳಿಯೊಂದು ಬದಲಾದ ಕಾಲಘಟ್ಟದಲ್ಲಿ ಮತ್ತೆ ರೈತರ ಕೊಟ್ಟಿಗೆಯನ್ನು ತುಂಬಿಕೊಳ್ಳುತ್ತಿರುವುದು ಒಳ್ಳೆಯ ಲಕ್ಷಣ.
ಅಂಚೆ ಚೀಟಿ ಗೌರವ
ಅಂಚೆ ಇಲಾಖೆಯು 2000ನೇ ಇಸವಿಯಲ್ಲಿ ಹಳ್ಳಿಕಾರ್ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಆ ಮೂಲಕ, ದೇಶದ ಜಾನುವಾರುಗಳಲ್ಲಿ ಪ್ರಾಚೀನ ತಳಿಯಾಗಿರುವ ಹಳ್ಳಿಕಾರ್ ಮಹತ್ವವನ್ನು ಸಾರಿದೆ. ಹಳ್ಳಿಕಾರ್ ತಳಿ ಹಿಂದಿನಿಂದಲೂ ರೈತನ ಕೃಷಿ ಸಂಗಾತಿ. ಈ ತಳಿಗಳ ಬೆಲೆ ಅವುಗಳ ವಯಸ್ಸು, ಮೈಮಾಟ, ಬಣ್ಣಕ್ಕೆ ಅನುಗುಣವಾಗಿರುತ್ತದೆ. ಜೋಡೆತ್ತಿಗೆ ಕನಿಷ್ಠ ₹2 ಲಕ್ಷದಿಂದ ₹15 ಲಕ್ಷದವರೆಗೆ ಮಾರಾಟವಾಗುತ್ತವೆ. ಕರುಗಳಿಗೆ ಕನಿಷ್ಠ ₹25 ಸಾವಿರ ಬೆಲೆ ಇದೆ.
ಆರು ಉಪ ಪ್ರಭೇದಗಳು
ಕಾಲ ಕ್ರಮೇಣ ಹಳ್ಳಿಕಾರ್‌ನಲ್ಲೂ ಉಪ ಪ್ರಭೇದಗಳು ಸೃಷ್ಟಿಯಾಗಿವೆ. ಕಪ್ಪು ಬಣ್ಣದ ತಳಿಯನ್ನು ಚಿಂತಾಮಣಿ ಪ್ರಭೇದ, ಕಂದು ಇದ್ದರೆ ಅಮರಾವತಿ ಪ್ರಭೇದ, ತುಮಕೂರು ಜಿಲ್ಲೆಯ ಹಾಗಲವಾಡಿಯಲ್ಲಿ ಸಾಕುವ ದನಗಳನ್ನು ಹಾಗಲವಾಡಿ ಪ್ರಭೇದ, ಸಕ್ಕರೆ ಪಟ್ಟಣ ಭಾಗದಲ್ಲಿರುವ ಬೆಟ್ಟದಪುರ ಪ್ರಭೇದ (ಸ್ವಲ್ಪ ಗಿಡ್ಡ ಇರುತ್ತವೆ), ಹಳೆ ರೂಪಾಯಿ ಬಣ್ಣದ ಪ್ರಭೇದ, ಸೂಜಿಮಲ್ಲಿಗೆ ಪ್ರಭೇದ ಹಾಗೂ ಗುಜಮಾವು ಪ್ರಮುಖ ಪ್ರಭೇಧಗಳಾಗಿವೆ. ಮಂಡ್ಯ ಜಿಲ್ಲೆಯ ನಾಗಮಂಗಲ ಭಾಗದಲ್ಲಿ ಸ್ವಲ್ಪ ದಪ್ಪಗೆ ಅಮೃತ ಮಹಲ್ ತಳಿಯಂತಿದ್ದ ಈ ಪ್ರಭೇದ ಈಗ ಅವನತಿಗೆ ತಲುಪಿದೆ. ಹಳ್ಳಿಕಾರ್ ತಳಿ ತನ್ನ ಜೀವಿತಾವಧಿಯಲ್ಲಿ 10 ರಿಂದ 12 ಕರುಗಳನ್ನು ಹಾಕಬಲ್ಲದು. ಕರು 10 ತಿಂಗಳ ಅವಧಿಯಲ್ಲಿಯೇ ದಷ್ಟಪುಷ್ಟವಾಗಿ ಬೆಳೆಯುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.