ADVERTISEMENT

ಸಂವಹನ ತಜ್ಞ ಡಾ. ನ. ರತ್ನ ನೆನಪು: ವಾಕ್‌ – ಶ್ರವಣ ತಜ್ಞರ ರಂಗಪ್ರೀತಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 2:16 IST
Last Updated 12 ಡಿಸೆಂಬರ್ 2024, 2:16 IST
<div class="paragraphs"><p>ಡಾ. ನ. ರತ್ನ</p></div>

ಡಾ. ನ. ರತ್ನ

   

’ನಾನು ನ. ರತ್ನ’ ಎಂಬ ವಾಕ್‌ ಸರಣಿಯನ್ನು ಮೈಸೂರು ಆಕಾಶವಾಣಿ ಬಿತ್ತರಿಸಿತ್ತು. ಆ ದಿನದ ಪ್ರಸಾರದಲ್ಲಿ ನ. ರತ್ನ ತಮ್ಮ ಒಂದು ಅನುಭವವನ್ನು ಹೇಳುತ್ತಿದ್ದರು. ಒಂದು ಮಗು ಕೇಳಿತಂತೆ, ’ಸಾವು ಎಂದರೇನು?’. ಅದನ್ನು ವಿವರಿಸುವುದು ಯಾರಿಗೂ ಕಷ್ಟವೇ ಸರಿ. ಅದು ಅನುಭವ ವೇಧ್ಯವಲ್ಲವಲ್ಲ. ಅದನ್ನು ಸರಳೀಕರಿಸಿ ಮೇಷ್ಟ್ರು ರತ್ನ ಹೇಳಿದರಂತೆ, ‘ಅದು ನಾವು ನಿದ್ದೆ ಮಾಡುವ ರೀತಿ ಇರಬಹುದು. ಮಲಗಿದವರು ಬೆಳಿಗ್ಗೆ ಏಳುತ್ತೇವೆ, ಸಾವು ಬಂದರೆ ಏಳುವುದಿಲ್ಲ, ಹಾಗೆನ್ನಬಹುದು’. ಆ ಪ್ರಸಾರ ಕೇಳಿದವರು ಅಂದೇ ಇನ್ನೊಂದು ಸಮಾಚಾರ ಕೇಳಿದರು. ಅಂದು ರತ್ನ ಚಿರನಿದ್ರೆಗೆ ಇಳಿದರು ಎಂದು. ಅದು ಕಾಕತಾಳೀಯವೇ ಸರಿ. ಅಂದು ರತ್ನ ಬೆಳಿಗ್ಗೆ ಏಳಲಿಲ್ಲ.

ಮೇಷ್ಟ್ರು ಇದ್ದಿದ್ದರೆ ಈಗ್ಗೆ 90 ವರ್ಷಗಳನ್ನು ಕಳೆದಿರುತ್ತಿದ್ದರು. ಅವರು ಸಾಧಿಸಿದ ಸರಳ ಜೀವನ ಸಾಮಾನ್ಯದ್ದಲ್ಲ. ಒಂದು ಸಮಾರಂಭದಲ್ಲಿ ಹ.ಮಾ. ನಾಯಕ ಅವರು ಹೇಳುತ್ತಿದ್ದರು. (ರತ್ನ ಅಮೆರಿಕಾದಲ್ಲಿ ಓದಿಗಾಗಿ ಹೋಗಿ ಹಲವಾರು ವರ್ಷಗಳು ಕಳೆದುಬಂದವು. ಅಲ್ಲಿಯೂ ಈ ಹಳೆಯ ಸ್ನೇಹಿತರು ಸಿಕ್ಕಿದ್ದರು). ‘ರತ್ನ ಅಮೆರಿಕದಲ್ಲಿಯೂ ಏನೇನೂ ಬದಲಾಯಿಸದೇ, ಈಗತಾನೇ ಮಹಾರಾಜ ಕಾಲೇಜು ಹಾಸ್ಟೆಲ್ಲಿನಿಂದ ಬಂದ ಹಾಗೆ ಅನ್ನಿಸಿತು’ ಎಂದು ಎಲ್ಲಿಯೂ, ಎಲ್ಲರೊಡನೆಯೂ ಸುಲಭವಾಗಿ ಹೊಂದಿಕೊಳ್ಳುವುದು ಅವರಿಗೆ ಸುಲಭಸಾಧ್ಯವಾಗಿತ್ತು. ಸ್ನೇಹಭಾವ, ನೇರನುಡಿ, ನಿಜನುಡಿ ಇವು ನಾವೆಂದುಕೊಂಡಷ್ಟು ಸಾಮಾನ್ಯದ್ದಲ್ಲ.

ADVERTISEMENT

ವೃತ್ತಿಯಿಂದ ರತ್ನ ಅವರು ವಾಕ್‌ ಶ್ರವಣ ತಜ್ಞ. ಅಷ್ಟೇ ಗಂಭೀರ ಹವ್ಯಾಸಿ ನಾಟಕರಂಗದಲ್ಲಿ. ಇವೆರೆಡೂ ರಂಗಗಳು ಮನಸ್ಸಿನ ಸಂವಹನವನ್ನು ತಳಕುಹಾಕಿಕೊಂಡಂತ ವಿಷಯಗಳು. ನಾಟಕರಂಗದಲ್ಲಿ ಎಲ್ಲರೂ ಮುಖ್ಯ, ಎಲ್ಲವೂ ಮುಖ್ಯ, ಎಲ್ಲವೂ ಸರಿಯಾಗಿರಲೇಬೇಕು ಆಗಲೇ ನಾಟಕ. ಮೇಷ್ಟ್ರು ಹೇಳಿದಂತೆ, ‘ಕೆಡಿಸಬಿಲಿಟಿ’ ಎಂಥ ಚಿಕ್ಕಪಾತ್ರಕ್ಕೂ ಇದ್ದೇ ಇದೆ. ಅಲ್ಲಿ ತಾರತಮ್ಯವಿಲ್ಲ, ಇರಬಾರದು. ಅವರು ಕ್ಲಾಸ್‌ರೂಮಿಗಿಂತ ನಾಟಕವನ್ನು ಹೆಚ್ಚು ಶಿಸ್ತಿನಿಂದ ನಿರ್ವಹಿಸಬೇಕೆಂದು ಬಯಸುತ್ತಿದ್ದರು. ನಾಟಕ ಸರಿಯಾಗಿ ಹೇಳಿದ ಸಮಯಕ್ಕೆ ಶುರುವಾಗಬೇಕು. ಅವರು ಪ್ರೇಕ್ಷಕರಾಗಿದ್ದರಂತೂ ಸಮಯಕ್ಕೆ ಮೊದಲೇ ಕುಳಿತಿರುತ್ತಿದ್ದರು. ಬರಿಯ ನಟರೇ ಅಲ್ಲದೆ, ರಂಗಸಜ್ಜಿಕೆ ಒದಗಿಸುವವರು, ಅಣಿಮಾಡುವವರು, ಮೇಕಪ್‌ ಮಾಡುವವರು ಸೇರಿದಂತೆ ಎಲ್ಲರನ್ನೂ ಅಷ್ಟೇ ಸಮನಾಗಿ ಪ್ರೀತಿಯಿಂದ ಗೌರವದಿಂದ ಕಾಣುತ್ತಿದ್ದರು. 

‘ಅಯಾನ್ ಶಾಂತಿ ಕುಟೀರ’ ನಾಟಕ ಕೃತಿ ಬಿಡುಗಡೆ ಸಂದರ್ಭದಲ್ಲಿ ರಾಮೇಶ್ವರಿ ವರ್ಮ ಅವರೊಂದಿಗೆ ಡಾ. ನ. ರತ್ನ

ನಾಟಕಕಾರರಾಗಿ ಮೇಷ್ಟ್ರು ಸಾಮಾನ್ಯ ನಾಟಕ ಬರೆದವರಲ್ಲ. ‘ಅಸಬಂದ್ಧ’ ಅನ್ನುವ ರೀತಿಯಲ್ಲೇ ಅನಿಸಿಕೆಯನ್ನು ಹೇಳುವ ಅಸಂಗತ ನಾಟಕಗಳು ಅವರವು, ವಿಶಿಷ್ಟವಾದವು. ಅವರ ನಾಟಕಗಳನ್ನು ಓದಿನೋಡಿದರೆ ಅನಿಸುತ್ತದೆ ‘ಹೌದಲ್ಲವೆ’. ಅದರಲ್ಲೂ ಮಧ್ಯಮ ವರ್ಗದವರ ನಡೆನುಡಿಯಲ್ಲಿ ಎಷ್ಟು ‘ನಾಟಕ’ ತುಂಬಿ ಅಸಂಬದ್ಧವಾಗಿರುತ್ತದೆ. ಮೇಷ್ಟ್ರು ಎಲ್ಲಾ ರೀತಿಯ ನಾಟಕಗಳಲ್ಲೂ ಒಳಗೊಂಡವರು. ‘ಮಾಧ್ಯಮ ವ್ಯಾಯೋಗ’ದಿಂದ ಹಿಡಿದು ತಮ್ಮ ಇತ್ತೀಚಿನ ಬರವಣಿಗೆಯ ಕೊನೆಯ ನಾಟಕ ‘ಅಯಾನ್ ಶಾಂತಿಕುಟೀರ’ದವರೆಗೂ ಅವರ ಪ್ರಭಾವ ಇದ್ದೇ ಇತ್ತು. ಅವರು ಲಲಿತಕಲೆಗಳ ಕಾಲೇಜಿನಲ್ಲಿ ಕೂಡಾ ಪ್ರಾಧ್ಯಾಪಕರಾಗಿದ್ದರು, ನಾಟಕ ವಿಭಾಗದಲ್ಲಿ. ಮೈಸೂರು ವಿಶ್ವವಿದ್ಯಾಲಯದ ‘ಗುಬ್ಬಿ ವೀರಣ್ಣ ಚೇರ್‌’ನ ಗೌರವವೂ ಅವರಿಗೆ ಸಂದಿತ್ತು. ಹಾಗೆಯೇ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಅವರ ಸಹಯೋಗದಿಂದಾಗಿ ಹಲವಾರು ವಿದ್ಯಾರ್ಥಿಗಳು ನಾಟಕದ ಸೆಳೆತಕ್ಕೊಳಗಾಗಿದ್ದಾರೆ. ಬರಿಯ ನಾಟಕದ ಪ್ರದರ್ಶನವೇ ಅಲ್ಲದೇ, ರತ್ನನರನ್ನೊಳಗೊಂಡ ನಾಟಕದ ತಾಲೀಮಿನ ಸಮಯವೇ ಸಮತೆಂತೋ ತಂಡದಲ್ಲಿ ರಸದೌತಣವೀಯುತ್ತಿತ್ತು. ವಿಶ್ವನಾಥ ಮಿರ್ಲೆ ಅವರ ಸಂಗೀತ ಕಿವಿ ತುಂಬುತ್ತಿತ್ತು.

ನಾಟಕದ ರಂಜನೀಯ ವಿಚಾರವನ್ನುಳಿದೂ ಅದರ ಸತ್ವದೆಡೆಗೆ ಅವರ ಗಮನವಿದ್ದೇ ಇದೆ. ಮಾನವೀಯತೆ ಅದರಲ್ಲಿ ಮುಖ್ಯವಾಗಿರಲೇಬೇಕು. ಹಾಗೇ ಅವರ ‘ಕದಡಿದ ನೀರು’ ಹಾಗೂ ‘ಬಂಡ್ವಾಳವಿಲ್ಲದ ಬಡಾಯಿ’, ಪ್ರದರ್ಶನಗಳು, ಬಡಾಯಿಯಲ್ಲಿನ ಬರೀಯ ವಿನೋದವನ್ನು ಅವರು ತಿರಸ್ಕರಿಸಿದರು. ಒಂದು ಮಗುವಿನ ನ್ಯೂನತೆಯನ್ನು ಕಂಡು ಅದನ್ನು ಅಪಹಾಸ್ಯಗಯ್ಯುವುದು ಅವರ ಧೋರಣೆಗೆ ಸಾಧ್ಯವಿರಲಿಲ್ಲ. ತನ್ನ ಮಗುವಿನ ತೊಂದರೆಯನ್ನು ತಾಳಿಕೊಳ್ಳಲು, ತಂದೆ ಹಾಸ್ಯದ ಮುಖವಾಡ ಧರಿಸಿದ್ದನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಾಗಿತ್ತು. ಈ ರೀತಿಯಲ್ಲಿ ರತ್ನ ಆ ನಾಟಕವನ್ನು ಪ್ರದರ್ಶಿಸಿದರು. ಬಂಡ್ವಾಳವಿಲ್ಲದ ಬಡಾಯಿ ನಾಟಕದ ಹೆಸರು ಇನ್ನೊಂದಿದೆ ‘ಹೀಗೂ ಉಂಟೆ!’. ಕೈಲಾಸಂ ಅವರು ಮೇಷ್ಟ್ರ ನೆಚ್ಚಿನ ಬರಹಗಾರ. ಅವರ ಇಂಗ್ಲೀಷ್ ಕಥೆಗಳನ್ನು ಇಷ್ಟಪಟ್ಟ ರತ್ನ ಅವನ್ನು ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ಅವು ಇಷ್ಟರಲ್ಲೇ ಬೆಳಕು ಕಾಣಬೇಕು.

ರತ್ನ ಅವರ ವ್ಯಕ್ತಿಕತ್ವ ಬಹಳ ಸ್ನೇಹಮಯವಾದದ್ದು. ಅವರ ಪರಿಚಯಕ್ಕೆ ಬಂದವರೆಲ್ಲ ಅವರ ಸ್ನೇಹಿತರಾಗಿಬಿಡುತ್ತಿದ್ದರೇ ಅನಿಸುತ್ತದೆ. ಈ ವಿಚಾರದಲ್ಲಿ ಅವರು ನಾಟಕವನ್ನು ಸಂಬಂಧಿಸಿದವರು ಅಥವಾ ವಾಕ್‌ಶ್ರವಣ ವಿಜ್ಞಾನದ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಎಂದೇನಲ್ಲ. ಯಾರೂ ಅವರ ಸ್ನೇಹ ಪ್ರಭಾವಕ್ಕೆ ಒಳಗಾಗಬಹುದು. ಅಂಗಡಿಯವರು, ರಿಪೇರಿ ಮಾಡುವವರು, ಎದುರು ಬದುರು ಸಿಕ್ಕಿದವರು ಇತ್ಯಾದಿ. ಅವರು ಚಿಕ್ಕಂದಿನಲ್ಲಿ ಕಂಡಿದ್ದ, ‘ಕುರುಡು, ಕಿವುಡ ಶಾಲೆಯ’ ಮಕ್ಕಳು ಮತ್ತು ಜನ ಅವರನ್ನು ದಶಕಗಳ ಕಾಲದ ನಂತರ ಹುಡುಕಿಕೊಂಡು ಬಂದಿದ್ದನ್ನು ಕಂಡಿದ್ದೇನೆ. ಆಗ್ಗೆ, ಅವರ ತಂದೆ ಡಾ. ನಟೇಶ್‌ ಅವರು ಆ ಶಾಲೆಯ ಸೂಪರಿಂಟೆಂಡೆಂಟ್ ಆಗಿದ್ದವರು. ನಂತರ ಆಕಾಶವಾಣಿಯ ನಿರ್ದೇಶಕರಾದರು.

ಅಮೆರಿಕದಲ್ಲಿ ರತ್ನರ ಪರಿಚಯಕ್ಕೆ ಬಂದ ಜನ, ಹಲವು ದಶಕಗಳ ನಂತರವೂ ಅವರನ್ನು ನೆನೆಸುತ್ತಿದ್ದರು. ಅಂಥವರು ನನಗೆ ಸಿಕ್ಕಿದ್ದರು. ಯಾವುದೋ ಕ್ಯೂನಲ್ಲಿ ನಲ್ಲಿ ನಿಂತಿದ್ದವರು (ಫೈತ್‌ ಅವರ ಹೆಸರು) ರತ್ನರನ್ನು ಹಾಗೆಯೇ ಮಾತಾಡಿಸಿದ್ದಾರೆ. ಸರಿ ಪರಿಚಯದ ನಂತರ, ‘ಬನ್ನಿ ಯಾವಾಗಲಾದರೂ ನಮ್ಮ ಕಡೆ’ ಅಂದರೆ ‘ಆಯಿತು ನಡೆಯಿರಿ, ಈಗಲೇ ಯಾಕಾಗಬಾರದು’ ಎಂದು ಶುರುವಾದ ಆ ಒಡನಾಟ ಬಹುಕಾಲ ಹಿಡಿದಿತ್ತು. ಹಾಗೆ ನೋಡಿದರೆ ಆಗ ಬಿಳಿಯರು ನಮ್ಮನ್ನು ಸರಿಯಾಗಿ ಮಾತಾಡಿಸುತ್ತಲೂ ಇರಲಿಲ್ಲ. ಬಣ್ಣವೂ ಒಂದು ಕಾರಣ, ರತ್ನರಂತೂ ಕಸ್ತೂರಿಯೇ ಸರಿ!

ಮೇಷ್ಟ್ರಿಗೆ ಕ್ಲಾಸ್‌ರೂಮಿಗಿಂತ ನಾಟಕ ವಿಷಯದಲ್ಲಿ ಹೆಚ್ಚು ಗಂಭೀರತೆ ಇತ್ತು ಎನ್ನುವುದು ಸತ್ಯ. ಅವರು ಬಹಳಾ ಒಳ್ಳೆಯ ಮಾತುಗಾರ. ಹೀಗಾಗಿ ಅವರ ಅಧ್ಯಾಪನ ಬರೀಯ ತರಗತಿಗೆ ನಿಲ್ಲದೆ ಎಲ್ಲೆಡೆಯೂ ಹರಿಯುತ್ತಿತ್ತು. ಕೆಲಸ ಮುಗಿದ ನಂತರವೂ ಮಾತುಗಳಲ್ಲೇ ಸ್ಕೂಟರ್ ಸ್ಟ್ಯಾಂಡಿನ ಹತ್ತಿರವೇ ಶಿಷ್ಯರು ಪ್ರಶ್ನಿಸುತ್ತಾ, ಆಲಿಸುತ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದರು. ಹಾಸ್ಟೆಲ್ ಹತ್ತಿರವೇ ಇತ್ತು. ಹೀಗಾಗಿ ಎಷ್ಟೋ ಸಲ ಕಾಫಿಯೂ ದೊರಕಿ ಹುರುಪು ಸಿಗುತ್ತಿತ್ತು. ತರಗತಿಯೂ ಹಾಗೆಯೇ ಕೆಲವು ಸಲ ವಿಶೇಷವಾಗಿ ಇಡೀ ದಿನ ಕ್ಲಾಸ್ ತೆಗೆದುಕೊಂಡದ್ದೂ ಇದೆ.

ಒಳ್ಳೆಯ ಮಾತುಗಾರಿಕೆಯ ಜತೆ, ಅದರಲ್ಲಿ ಗಂಭೀರತೆಯೂ ತುಂಬಿರುತ್ತಿತ್ತು. ನನ್ನ ದಶಕಗಳ ಒಡನಾಟದಲ್ಲಿ ಅದರಲ್ಲಿ ಯಾವ ಬಗ್ಗೆಯೂ ಕಹಿನುಡಿಗಳು ಕೇಳಿಬರಲೇ ಇಲ್ಲ. ಅವರ ಜಾಯಮಾನದಲ್ಲಿ ಸಿಟ್ಟು ಅನ್ನುವುದೇ ಇರಲಿಲ್ಲ. ಇವರಿಗೆ ಮೋಸ ಮಾಡಿದ್ದಾರೆ ಎಂದು ನಮಗೆ ಅನ್ನಿಸಿದರೂ ಹಾಗೆ ಮಾಡಿದವರು ಇವರ ಜೊತೆ ಎಂದಿನಂತೆಯೇ ಸಹಜವಾಗಿ ವರ್ತಿಸಬಹುದಿತ್ತು. ಬುದ್ಧ ತನಗೆ ಕಿಡಿನುಡಿದವರಿಗೆ ಹೇಳಿದ್ದನಂತೆ, ‘ಮಾತು ನಿಮ್ಮ ಕೊಡುಗೆ, ನಾನು ಅದನ್ನು ಸ್ವೀಕರಿಸದೆಯೂ ಇರಬಹುದು, ನಿಮ್ಮ ಕಿಡಿನುಡಿಯನ್ನು ನಾನು ಸ್ವೀಕರಿಸಿಲ್ಲ’ವೆಂದು ಹಾಗೆ ಇರುವುದು ಸಾಧ್ಯ ಎಂದು ನೋಡಿದ್ದೇನೆ! ಯಾರ ಮಾತಿನಲ್ಲೂ ನಿಜವಾದ ಕಾಳಜಿ ಇದೆ ಅನ್ನಿಸಿದರೆ ಅವರ ಜತೆ ಸಮಾಲೋಚನೆ ಸಾಧ್ಯ.

ರತ್ನ ವಾಕ್‌ ಶ್ರವಣ ದೋಷ ತಪಾಸಣೆಗೆ – ಚಿಕಿತ್ಸೆಗಾಗಿ ನೂರಾರು ಶಿಬಿರಗಳನ್ನು ಆಯೋಜಿಸಿ, ಪೂರ್ತಿ ಸಮಯ ಅದರಲ್ಲಿ ತಲ್ಲೀನರಾಗಿ, ಸಲಹೆಗಾರರಾಗಿ ಕಳೆಯುತ್ತಿದ್ದರು. ಕಿವಿಯ – ಮಾತಿನ ತೊಂದರೆಯುಳ್ಳ ಮಕ್ಕಳ ತಂದೆತಾಯಿಯರ ಜತೆ, ತೊಂದರೆಯನ್ನು ನಿಭಾಯಿಸುವುದರ ಬಗ್ಗೆ, ಮನದಟ್ಟು ಮಾಡುವಲ್ಲಿ ಬಹಳಾ ಮುತುವರ್ಜಿ ವಹಿಸುತ್ತಿದ್ದರು. ಇದು ದಶಕಗಳ ಕಾಲ ನಡೆಯಿತು. ಈ ಕೆಲಸದಲ್ಲಿ ತನಗೆ ಬಹಳ ಸಾರ್ಥಕತೆ ದೊರಕಿದೆ ಎಂದಿದ್ದರು. ರತ್ನ ತಜ್ಞರಾಗಿದ್ದುದಷ್ಟೇ ಅಲ್ಲದೆ ಅವರಲ್ಲಿದ್ದ ಸ್ನೇಹಭಾವ ಈ ಕಾರ್ಯದಲ್ಲಿ ವಿಶೇಷವಾಗಿ ಕೆಲಸ ಮಾಡಿತು ಎಂದೆನಿಸುತ್ತದೆ.

ಇಸವಿ 1965ರಲ್ಲಿ ಮೈಸೂರು ಮಹಾರಾಜರ, ಮೈಸೂರು ವಿಶ್ವವಿದ್ಯಾಲಯದ ಜತೆಗೂಡಿ ಭಾರತ ಸರ್ಕಾರ ಈಗಿನ ಅಖಿಲ ಭಾರತ ವಾಕ್‌ಶ್ರವಣ ಸಂಸ್ಥೆಯನ್ನು ಹುಟ್ಟುಹಾಕಿತು. ಅದನ್ನು ಬೆಳೆಸಿ ದಶಕಗಳ ಕಾಲ ನಿಭಾಯಿಸಿ ಒಳ್ಳೆಯ ಕಾರ್ಯದ ಹೆಸರು ಮಾಡಿದ್ದು ಡಾ. ನ.ರತ್ನ ಅವರ ಸಾಧನೆ. ತಾವು ಐದು ಪದವಿಗಳನ್ನು ಹಲವು ಯೂನಿವರ್ಸಿಟಿಗಳಿಂದ ‍ಪಡೆದಿದ್ದು, ನಮ್ಮ ದೇಶದಲ್ಲಿ ವಾಕ್‌ಶ್ರವಣ ದೋಷದ ವೈಜ್ಞಾನಿಕ ಕಲೆಗೆ ಬನಾದಿ ಹಾಕಿದ್ದು, ಅವರ ದೂರಾಲೋಚನೆಯ ಫಲ. ಹೀಗಾಗಿ ಅವರನ್ನು ಭಾರತದ ವಾಕ್‌ ದೋಷ ಶ್ರವಣ ಶಾಸ್ತ್ರದ ಪಿತಾಮಹ ಎಂದು ತಿಳಿದಿದ್ದೇವೆ. ಅವರ ವಿದ್ಯಾರ್ಥಿಗಳಾಗಿದ್ದವರು, ಸಹೋದ್ಯೋಗಿಗಳಾಗಿದ್ದವರು ಅದೃಷ್ಟವಂತರು. ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಬಗ್ಗೆ ಇದ್ದ ಅವರ ಕಾಳಜಿ ಅನನ್ಯ. ಎಷ್ಟೋ ವಿದ್ಯಾರ್ಥಿಗಳ ಫೀಸನ್ನು ಅವರೇ ಭರಿಸಿದ್ದರು. ಸಂಸ್ಥೆಯ ಆಶಯಕ್ಕೆ ಪೂರಕವಾಗಿದ್ದ ಕಾಳಜಿ ಅಲ್ಲಿಯ ಕಿವಿಯ ಮಾತಿನ ತೊಂದರೆಗೊಳಗಾಗಿದ್ದ ಮಕ್ಕಳ ಬಗ್ಗೆ ಎಷ್ಟೋ ಕಾಲ ರಜಾದಿನಗಳಲ್ಲಿ ಜನ ಕಾಯುತ್ತಾರೆಂದು ಪಾಳಿಯ ಮೇಲೆ ಕೆಲಸ ಮಾಡಿಸಿದ್ದು ಆ ಮನಸ್ಸಿನ ದ್ಯೋತಕ. ದಿನಗಟ್ಟಲೆ ಪರೀಕ್ಷೆಗಳ ನಂತರ ಸಮಾಲೋಚನೆಯ ಕೊನೆಗೆ ಸುಮಾರು ಜನ, ‘ಇದು ಸರ್ಕಾರಿ ಸಂಸ್ಥೆಯೇ?’ ಎಂದು ಆಶ್ಚರ್ಯದಿಂದ ಕೇಳಿದ್ದು ನಮಗೆ ಸಂತೋಷ ತರುತ್ತಿತ್ತು.

ಪ್ರತಿಷ್ಠಿತ ಸಂಸ್ಥೆಗಳ ಮುಖ್ಯಸ್ಥರಾಗುವುದು, ಆ ವ್ಯಕ್ತಿಗಳನ್ನು ಬೆಳಕಿಗೆ ತರುತ್ತದೆ. ಅದು ಸಾಮಾನ್ಯ. ಒಂದು ಸಂಸ್ಥೆಯನ್ನು ಪ್ರತಿಷ್ಠಿತವಾಗಿ ಬೆಳೆಸುವುದು ಆ ಸಂಸ್ಥೆಯ ಅದೃಷ್ಟ. ಕಿವಿ ಕೇಳಿಸುವ – ಮಾತಿನ ತೊಂದರೆಗಳು ಕಾಯಿಲೆಗಳಲ್ಲ. ಅವನ್ನು ಬಹಳಾ ಕಾಲ ನಿಭಾಯಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ಬರೀಯ ಆರೋಗ್ಯದ ದೃಷ್ಟಿಯಿಂದ ನೋಡದೇ, ಸಮಾಜದ ಅಭಿವೃದ್ಧಿಯ ಕಡೆ ಗಮನ ಹರಿಸಬೇಕೆಂದು ಭಾರತ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಇನ್ನೊಂದು ಕೇಂದ್ರೀಯ ಸಂಸ್ಥೆಯನ್ನು ಹುಟ್ಟುಹಾಕಿತು. ಸಹಜವಾಗಿಯೇ ಡಾ. ರತ್ನ ಅವರಿಂದ ಆಯೋಜನೆಗೆ ತಳಹದಿಯನ್ನು ಕೋರಿತು. ಈಗಿನ ಮುಂಬೈಯ ‘ಆಲಿಯವರ್ ಜಂಗ್‌ ವಾಕ್ ಶ್ರವಣ ಸಂಸ್ಥೆ’ಯನ್ನು ಶುರುಮಾಡಿ ಹಲವು ವರ್ಷ ನಿರ್ದೇಶಿಸಿ ರತ್ನ ಮತ್ತೆ ಮೈಸೂರಿಗೆ ಬಂದರು. 

ರತ್ನರ ಕಾಲೇಜಿನ ಸಹಪಾಟಿಗಳೆಲ್ಲಾ ಮತ್ತೆ ಗುಂಪುಗೂಡಿ, ‘ಸಮತೆಂತೋ’ ಹವ್ಯಾಸಿ ತಂಡ ಮಾಡಿ ನಾಟಕದಲ್ಲಿ ಹೊಸತನ್ನು ತಂದಿದ್ದು ಈಗ್ಗೆ ಇತಿಹಾಸ. ಈಗ ಮೈಸೂರಲ್ಲಿ ಬಹಳಾ ಹವ್ಯಾಸಿ ತಂಡಗಳಿದ್ದು, ನಾಟಕರಂಗಕ್ಕೆ ಸಂಭ್ರಮ ತಂದಿದೆ. ರತ್ನ ಇವುಗಳಿಗೆಲ್ಲಾ ಒಂದಲ್ಲಾ ಒಂದು ರೀತಿ ಸಂಬಂಧಿಸಿದ್ದಾರೆ. ಈ ಹಿಂದೆ ರತ್ನ, ವಿಶ್ವನಾಥ ಮಿರ್ಲೆ, ಸಿಂಧುವಳ್ಳಿ ಅನಂತಮೂರ್ತಿ, ಬಾಲಗೋಪಾಲ ವರ್ಮ, ರಾಮೇಶ್ವರಿ ವರ್ಮ, ಇವರನ್ನೊಳಗೊಂಡ ಗುಂಪು ನಾಟಕರಂಗಕ್ಕೆ ಸಡಗರ ತಂದಿದ್ದರು. 70ರ ದಶಕದಲ್ಲಿ ರತ್ನರ ಕಾಲೇಜಿನ ತಂಡ ಮತ್ತೆ ಮತ್ತೆ ಉಲ್ಲಾಳ ಪಾರಿತೋಷಕವನ್ನು ಗೆದ್ದಿತ್ತು. ಮೈಸೂರಿನ ರಂಗಭೂಮಿ ರತ್ನರ ಒಡನಾಟವನ್ನು ಮರೆಯುವಂತಿಲ್ಲ. ಅವರ ಸ್ನೇಹಿತರು ಸೇರಿ ಅವರ ಹೆಸರಿನಲ್ಲಿ ‘ರಂಗರತ್ನ’ ಪ್ರಶಸ್ತಿ ಸ್ಥಾಪಿಸಿದ್ದಾರೆ. ಇತ್ತ ವಾಕ್‌ ಶ್ರವಣ ತಜ್ಞರ ಗುಂಪೂ ಅವರ ಹೆಸರಿನಲ್ಲಿ ಒಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಪ್ರಶಸ್ತಿಗಳನ್ನುಳಿದು, ರತ್ನ ಮರೆಯಾದರೂ ಅವರ ಕೊಡುಗೆಯನ್ನು ಮೈಸೂರಿನ ರಂಗತಂಡಗಳು, ದೇಶದ ವಾಕ್‌ ಶ್ರವಣ ತಜ್ಞರ ಗುಂಪು ಇನ್ನೂ ಹಲವು ತಲೆಮಾರುಗಳ ಕಾಲ ಮರೆಯಲಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.