‘ಗರಿ ಗರಿ ತೊಡೆದೇವು ಪುಡಿ ಪುಡಿ ಮಾಡಿ ಮೇಲೊಂದಿಷ್ಟು ಹಾಲು ಅಥವಾ ತುಪ್ಪ ಸುರಿದುಕೊಂಡು ತಿನ್ನುವ ಗಮ್ಮತ್ತೇ ಬೇರೆ’ ಎಂದು ಬಾಯಲ್ಲಿ ನೀರೂರಿಸುತ್ತಾ ಬೈಕಿನ ವೇಗ ಹೆಚ್ಚಿಸಿ ತಲುಪಿದ್ದು ಸೊರಬ ತಾಲ್ಲೂಕಿನ ಕೆರೆಕೊಪ್ಪದ ನಾರಾಯಣಸ್ವಾಮಿಯವರ ಮನೆ. ಈ ಮನೆಯ ಹಿರಿಯ ಜೀವ ಸರೋಜಮ್ಮ ಮತ್ತು ಸೊಸೆ ಮಾಲತಿ ತೊಡೆದೇವು ತಯಾರಿಕೆಯಲ್ಲಿ ಸಿದ್ಧಹಸ್ತರು.
ಮಲೆನಾಡು ಹಾಗೂ ಉತ್ತರ ಕನ್ನಡ ಜಿಲ್ಲೆಯ ತೊಡೆದೇವು ಎಂಬ ವಿಶಿಷ್ಟ ಸಿಹಿ ತಿನಿಸಿನ ಖ್ಯಾತಿ ಜಗದಗಲಕ್ಕೂ ಪಸರಿಸಿದ್ದು, ಬೇಡಿಕೆಯೂ ಹೆಚ್ಚಿದೆ. ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಿದ್ಧವಾಗುವ ಈ ಸಿಹಿಗೆ ‘ಮಂಡಿಗೆ’ ಎಂಬ ಇನ್ನೊಂದು ಹೆಸರೂ ಇದಕ್ಕಿದೆ.
ಕಾರ್ತಿಕ ಮಾಸದ ತುಳಸಿ ವಿವಾಹ ಮುಗಿಯುತ್ತಿದ್ದಂತೆ ಮಲೆನಾಡು ಭಾಗದಲ್ಲಿ ಆಲೆಮನೆಯ ಘಮಲು ಮೂಗಿಗೆ ಅಡರುತ್ತಿತ್ತು. ತಂಪಾದ ಕಬ್ಬಿನ ಹಾಲು ಗಟಗಟನೆ ಕುಡಿಯುವ ಮಜಾ, ಬಾಳೆ ಎಲೆ ಮೇಲೆ ನೊರೆ ನೊರೆ ಬೆಲ್ಲ ತಿನ್ನುವುದು ಕೂಡ ಅದ್ಭುತ ಅನುಭವ-ಸುಂದರ ನೆನಪು. ಇಷ್ಟಕ್ಕೆ ಸೀಮಿತವಾಗಿರದ ಆಲೆಮನೆ, ಹಲವು ರುಚಿಕರ ತಿನಿಸುಗಳಿಗೂ ಸೀಸನ್ ಆಗಿದ್ದ ಕಾಲವದು. ಅಂತ ತಿನಿಸುಗಳಲ್ಲಿ ತೊಡೆದೇವು ಪ್ರಮುಖವಾದದ್ದು. ಈ ಭಾಗದಲ್ಲಿ ಬಹುತೇಕರು ಕಬ್ಬು ಬೆಳೆಯುತ್ತಿದ್ದರು. ಆಗ ಕಬ್ಬಿನ ಹಾಲು ಬಳಸಿ ಮಾಡುತ್ತಿದ್ದ ತಿನಿಸು, ಇಂದು ಎಲ್ಲಾ ಕಾಲದಲ್ಲೂ ಲಭ್ಯ. ಇದು ಬಹುಬೇಗ ಕೆಡುವುದು ಇಲ್ಲ. ಬೇಕಾಗುವ ಸಾಮಾಗ್ರಿಗಳು ಮನೆಯಲ್ಲಿಯೇ ಇರುವಂತದ್ದು. ಆರೋಗ್ಯಕ್ಕೂ ಅಪಾಯ ಉಂಟುಮಾಡುವುದಿಲ್ಲ. ಮಕ್ಕಳಿಂದ ವೃದ್ಧರವರೆಗೂ ಇಷ್ಟವಾಗುವ ತಿನಿಸು. ತೊಡೆದೇವು ತಯಾರಿಕೆ ಈಗ ಗೃಹೋದ್ಯಮದ ರೂಪ ಪಡೆದಿದೆ. ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ನೂರಾರು ಹಳ್ಳಿಗಳ ಮಹಿಳೆಯರು ತಮ್ಮದೇ ಸಣ್ಣ ತಂಡ ಮಾಡಿಕೊಂಡು ತೊಡೆದೇವು ತಯಾರಿಕೆಯಲ್ಲಿ ತೊಡಗಿದ್ದಾರೆ. ಒಟ್ಟು ಕುಟುಂಬದ ಮನೆಗಳಲ್ಲಿ ನೆಂಟರಿಷ್ಟರು ಬಂದಾಗ ಮಾಡುತ್ತಿದ್ದ ತೊಡೆದೇವು ಇಂದು ಉಪನಯನ, ಮದುವೆ, ಗೃಹಪ್ರವೇಶ ಮತ್ತಿತರ ಶುಭ ಸಮಾರಂಭಗಳಲ್ಲಿ ಊಟದ ಬಾಳೆಯನ್ನು ಅಲಂಕರಿಸುತ್ತಿದೆ. ಆಲಮನೆ ಸೀಸನ್ ಮುಗಿದ ಬಳಿಕ ಕಬ್ಬಿನ ಹಾಲಿನ ಬದಲಾಗಿ ಅದರಿಂದ ತಯಾರಾದ ಡಬ್ಬಿ ಬೆಲ್ಲವನ್ನು ಉಪಯೋಗಿಸಿ ತೊಡದೇವು ಮಾಡುತ್ತಾರೆ.
‘ತೊಡೆದೇವು ಅಷ್ಟು ಸುಲಭಕ್ಕೆ ದಕ್ಕುವ ತಿನಿಸಲ್ಲ. ಸಾಕಷ್ಟು ಶ್ರಮದಾಯಕ, ತಾಳ್ಮೆಯು ಅತ್ಯಗತ್ಯ. ತೊಡೆದೇವಿಗೆ ಶತಮಾನದ ಇತಿಹಾಸವೇ ಇದೆ. ನಾನು 20-25 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ 30-40 ತೊಡೆದೇವು ಮಾಡಿ ಮಾರಾಟ ಮಾಡಿದ್ದೆ. ಜೀವನೋಪಾಯಕ್ಕೆ ಮುಂದೆ ಇದು ಅನುಕೂಲವಾಗುತ್ತದೆ ಎಂದು ಊರಿನ ಕೆಲವು ಮಹಿಳೆಯರಿಗೆ ತರಬೇತಿ ಕೊಟ್ಟೆ. ಮುಂದೆ ಇದು ಗೃಹೋದ್ಯಮವಾಗಿ ಮಾರ್ಪಟ್ಟಿತು. ಇಂದು ನನ್ನ ಮಗ, ಸೊಸೆ ಈ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದಾರೆ’ ಹೆಮ್ಮೆಯಿಂದ ಹೇಳಿಕೊಂಡರು ಕೆರೆಕೊಪ್ಪದ ಸರೋಜಮ್ಮ. ಕೆರೆಕೊಪ್ಪದ ತೊಡೆದೇವು ಶಿವಮೊಗ್ಗ ಜಿಲ್ಲೆಯಲ್ಲಿ ಬಹು ಜನಪ್ರಿಯ.
ದೋಸೆಯಂಥದ್ದೇ ತಿನಿಸು
ತೊಡೆದೇವು ಮಾಡಲು ದಪ್ಪಕ್ಕಿ (ಪದ್ಮರೇಖ,ಮುಳ್ಳರೆ ಅಕ್ಕಿ) ಒಳ್ಳೆಯದು. ಒಂದು ಕೆಜಿ ಅಕ್ಕಿಯನ್ನು 5-6 ಗಂಟೆ ಕಾಲ ನೀರಿನಲ್ಲಿ ನೆನೆಸಿಡಬೇಕು. 45 ನಿಮಿಷಗಳ ಕಾಲ ಬೀಸಿ ಹುಡಿ ಅಕ್ಕಿ ಹಿಟ್ಟನ್ನು ಸೇರಿಸಿ ಸ್ವಲ್ಪ ಹೊತ್ತು ಹಾಗೆಯೇ ಇಡಬೇಕು. ನಂತರ 3.5 ಕೆಜಿ ಬೆಲ್ಲ (ಡಬ್ಬಿ ಬೆಲ್ಲ) ಸೇರಿಸಿ ಚಿಟಿಕೆ ಉಪ್ಪು, ಅರಿಶಿಣ ಸೇರಿಸಬೇಕು. ಏಲಕ್ಕಿ ಬಾದಾಮಿ ಇವುಗಳನ್ನೂ ಸೇರಿಸಬಹುದು. ಪುನಃ 15 ನಿಮಿಷ ರುಬ್ಬಬೇಕು. ದೋಸೆ ಹಿಟ್ಟಿಗೂ ಸ್ವಲ್ಪ ತೆಳುವಾದ ಹದದಲ್ಲಿ ಹಿಟ್ಟು ರೆಡಿಯಾದಾಗ-ನುಣ್ಣಗೆ ಅರೆದ ಅಕ್ಕಿ ಹಿಟ್ಟಿನಲ್ಲಿ ಕೈ ಬೆರಳು ಅದ್ದಿದರೆ ಬೆರಳಿಗೆ ತೆಳುವಾಗಿ ಹಿಡಿಯುವಂತಿರಬೇಕು. ತೊಡೆದೇವು ಮಾಡಲೆಂದೆ ಇರುವ ಗಡಿಗೆಯನ್ನು ಒಲೆಯ ಮೇಲಿಟ್ಟು ಶೇಂಗಾ ಎಣ್ಣೆ ಸವರಬೇಕು. ಗಡಿಗೆಯು ಬಿಸಿಯಾದಾಗ ತೆಳುವಾದ ಬಟ್ಟೆ (ಮಲ್ ಪಂಚೆ)ಯನ್ನು ಬಿದಿರಿನ ಕೋಲಿಗೆ ಸ್ವಲ್ಪ ಸುತ್ತಿ ಈ ಬಟ್ಟೆಯನ್ನು ಹಿಟ್ಟಿಗೆ ಅದ್ದಿ ಬಿದಿರಿನ ಕಡ್ಡಿ ಹಿಡಿದು ಗಡಿಗೆಯ ಮೇಲೆ ಪ್ಲಸ್ ಆಕಾರಕ್ಕೆ ಎಳೆಯಬೇಕು. 40-50 ಸೆಕೆಂಡಿನಲ್ಲಿ ಅದು ಕಂದು ಬಣ್ಣಕ್ಕೆ ಬರುತ್ತದೆ. ಹಾಳೆಕಡ್ಡಿ (ಅಡಿಕೆ ಮರದ ಹಾಳೆಯ ಒಂದು ಭಾಗ) ಬಳಸಿ ಅದನ್ನು ಗಡಿಗೆಯಿಂದ ಬಿಡಿಸಿ ತ್ರಿಕೋನಾಕಾರಕ್ಕೆ ಅಥವಾ ಚೌಕಾಕಾರಕ್ಕೆ ಮಡಿಸಿಡಬೇಕು. ಸ್ವಲ್ಪ ಗಾಳಿ ತಾಗುತ್ತಲೇ ಗರಿ ಗರಿ ತೊಡೆದೇವು ಸಿದ್ದ. 1 ಕೆಜಿ ಅಕ್ಕಿಗೆ 15 ತೊಡೆದೇವು ಆಗಬಹುದು.
‘ಹಿಂದೆ ತೊಡದೇವಿಗೆ ಒರಳುಕಲ್ಲಿನ ಮುಂದೆ ನುಣ್ಣೆಗೆ ರುಬ್ಬಬೇಕಿತ್ತು. ಬೆಂಕಿ ಮುಂದೆ ಬೆವರಿಳಿಸಬೇಕಿತ್ತು. ಕಟ್ಟಿಗೆ ಒಲೆಯಿಂದ ಆಗಾಗ ಹೊಮ್ಮುವ ಹೊಗೆ ಕುಡಿಯಬೇಕಿತ್ತು. ಇಷ್ಟೆಲ್ಲಾ ಶ್ರಮಪಟ್ಟರೇ ಮಾತ್ರ ರುಚಿಕರ ಗರಿಗರಿ ತೊಡೆದೇವು ಸವಿಯಲು ಸಿಗುತ್ತಿತ್ತು. ತುಪ್ಪದ ಜತೆ ತಿಂದರೆ ಅದ್ಭುತ ಸವಿರುಚಿ. ಹೆಚ್ಚು ತಿಂದರೆ ಉಷ್ಣ. ಕಟ್ಟಿಗೆ ಒಲೆಯಲ್ಲಿ ಮಾಡಿದ ತೊಡೆದೇವು ಬಹಳ ರುಚಿ’ ಎನ್ನುತ್ತಾರೆ 85 ವರ್ಷದ ಕಾನಲೆ ಭವಾನಮ್ಮ.
ಸಿದ್ದಾಪುರ ತಾಲೂಕಿನ ಮಾದ್ನಕಳ್ ಊರಿನ ಕುಸುಮ ಕೃಷ್ಣ ಹೆಗಡೆ ಹಾಗೂ ಲಕ್ಷ್ಮಿ ಹೆಗಡೆ ತಯಾರಿಸುವ ತೊಡೆದೇವು ಭಾರಿ ಬೇಡಿಕೆ ಹೊಂದಿದ್ದು ‘ಮಾದಿನಕಳ್ ತೊಡೆದೇವು’ ಎಂತಲೇ ಬ್ರ್ಯಾಂಡ್ ಆಗಿದೆ. ಪ್ರತಿ ವಾರ ಮೂರರಿಂದ ನಾಲ್ಕು ಸಾವಿರ ತೊಡೆದೇವನ್ನು ಶಿರಸಿ, ಮೈಸೂರು, ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತಿದ್ದಾರೆ.
ಮಾದ್ನಕಳ್ ಬ್ರ್ಯಾಂಡ್
‘ಕಳೆದ 20 ವರ್ಷಗಳಿಂದ ಈ ಉದ್ಯೋಗದಲ್ಲಿ ತೊಡಗಿಕೊಂಡಿದ್ದೇವೆ.ದಿನವೊಂದಕ್ಕೆ ಸರಾಸರಿ 400ರಿಂದ 500 ತೊಡೆದೇವು ಮಾಡಬಹುದು. ಮಳೆಗಾಲದಲ್ಲಿ ಆರ್ಡರ್ ಕಡಿಮೆ. ತೇವಾಂಶ ಇರುವ ಕಾರಣ ಹೆಚ್ಚು ದಿನ ಇಡಲಾಗದು. ಇದರ ವಿಲೇವಾರಿ ಕಷ್ಟ. ಗಾಜಿನಷ್ಟೆ ಸೂಕ್ಷ್ಮ. ಕೋರಿಯರ್ ಮೂಲಕ ಕಳುಹಿಸಿದರೆ ಪುಡಿಯಾಗುವ ಅಪಾಯವಿದೆ. ಅಮೆರಿಕ, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯಾ ಹೀಗೆ ಬೇರೆ ಬೇರೆ ರಾಷ್ಟ್ರಗಳಿಂದ ಬಂದ ಈ ಭಾಗದ ಜನರು ವಾಪಾಸಾಗುವಾಗ ನಮ್ಮ ತೊಡೆದೇವು ತೆಗೆದುಕೊಂಡು ಹೋಗುತ್ತಾರೆ’ ಎನ್ನುತ್ತಾರೆ ಕುಸುಮ ಮತ್ತು ಲಕ್ಷ್ಮಿ
ಈ ಹೆಸರು ಹೇಗೆ ಬಂತು?
‘ತೊಡೆಯುವುದು ಎಂದರೆ ಬಳಿಯುವುದು ಗೋಡೆಗೆ ಬಣ್ಣ ಬಳಿದಂತೆ. ಸರ್ವ ಸಿದ್ಧವಾದ ಹಿಟ್ಟನ್ನು ಗಡಿಗೆ ಮೇಲೆ ಬಳಿಯುವ ಕಾರಣ ತೊಡೆದೇವು ಅಂತಾಗಿರಬಹುದು. ತೆಳ್ಳೇವು... ಸುಟ್ಟೇವು.... ಹೀಗೆ ತೊಡೆದೇವು ಬಂದಿರಬಹುದು. ಅಂದು ಡಾ. ಶಿವರಾಮ ಕಾರಂತರು ಇದನ್ನು ಕಂಬನಿ ಕಜ್ಜಾಯ ಎಂದು ಕರೆದರಂತೆ. ಕಂಬನಿಯ ಅಂದರೆ ಕಣ್ಣುಗಳಲ್ಲಿ ನೀರು ಕಜ್ಜಾಯ ಎಂದರೆ ಸಿಹಿ. ಇದನ್ನು ತಯಾರಿಸುವಾಗ ಕಟ್ಟಿಗೆ ಒಲೆಯ ಮುಂದೆ ಹೊಗೆಯಲ್ಲಿ ಕುಳಿತು ತಯಾರಿಸಬೇಕಾದಾಗ ಕಣ್ಣುಗಳಲ್ಲಿ ನೀರು ಬರುವುದು ನಿಶ್ಚಿತ’ ಎನ್ನುತ್ತಾರೆ ಸಾಗರದ ಮಾಲತಿ.
ಹೆಣ್ಣುಮಕ್ಕಳ ಉದ್ಯಮ ‘
ಸಾಗರ ತಾಲ್ಲೂಕಿನ ಕೆರೆಕೊಪ್ಪ ಶಿರಸಿಯ ಪಡಿಗೇರೆ ಮೊದಲಾದ ಊರುಗಳಲ್ಲಿ ಪ್ರತಿ ಮನೆಯಲ್ಲೂ ತೊಡೆದೇವು ಮಾಡಿ ಬೃಹತ್ ಕಾರ್ಯಕ್ರಮಗಳಿಗೆ ಪೂರೈಸುತ್ತಾರೆ. ಯಲ್ಲಾಪುರದ ತುಡುಗುಣಿ ಪಾರ್ವತಿ-ಪರಮೇಶ್ವರ ಹೆಗಡೆ ಯಕ್ಷಗಾನದ ಮೇಳಗಳಿಗೆ ತೊಡೆದೇವು ಒದಗಿಸುತ್ತಾರೆ. ಹಲವು ಊರುಗಳಲ್ಲಿ ನಾಲ್ಕಾರು ಹೆಣ್ಣುಮಕ್ಕಳು ಒಟ್ಟುಗೂಡಿ ಇದನ್ನು ಸ್ವ ಉದ್ಯೋಗದಂತೆ ಮಾಡಿಕೊಂಡಿದ್ದಾರೆ. ಶಿರಸಿ ತಾಲ್ಲೂಕು ಒಂದರಲ್ಲಿಯೇ ಈ ಉದ್ಯಮ ಲಕ್ಷಾಂತರ ರೂಪಾಯಿ ಆದಾಯದ ಮೂಲವಾಗಿದೆ. ಒಂದು ತೊಡೆದೇವಿಗೆ ₹14 ರಿಂದ 17ರ ತನಕ ಇದೆ. ಬೆಂಗಳೂರಿನ ಕೆಲ ಹೊಟೇಲ್ ಮಳಿಗೆಗಳಿಗೂ ಇಲ್ಲಿಂದ ತೊಡೆದೇವು ಪೂರೈಕೆಯಾಗುತ್ತದೆ’ ಎನ್ನುತ್ತಾರೆ ಶಿರಸಿಯ ಕದಂಬ ಸೌಹಾರ್ದ ಸಹಕಾರ ಸಂಸ್ಥೆಯ ಅಧಿಕಾರಿ ಶ್ವೇತಾ ಹೆಗಡೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.