ADVERTISEMENT

ಮಗಳಾದ ಮಗನ ಅಪ್ಪಿದ ಜನನಿ

ಗುರು ಪಿ.ಎಸ್‌
Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ತಾಯಿ ವನಜಾಕ್ಷಿ  ಜೊತೆ ನೀತು
ತಾಯಿ ವನಜಾಕ್ಷಿ  ಜೊತೆ ನೀತು   

ಅರ್ಪಿತ್‌ ಎಂಬ ಮಗ ಅರ್ಪಿತಾ ಆಗಿ ಎದುರು ಬಂದು ನಿಂತಾಗ, ತಂದೆ ಆ ಮಗಳಿಗೆ ಕಾಫಿ ಆರ್ಡರ್‌ ಮಾಡುತ್ತಾರೆ. ‘ಪುಟ್ಟ, ನೀನೇನೇ ಆದರೂ ನನಗಿನ್ನೂ ಮಗುವೇ’ ಎಂದು ಆತ್ಮೀಯವಾಗಿ ಅವಳ ಕೈಯನ್ನು ಸ್ಪರ್ಶಿಸುತ್ತಾರೆ. ಪಕ್ಕದಲ್ಲೇ ಇದ್ದ ತಾಯಿ ಕೂಡ ಹಿತವಾಗಿ ಮಗಳನ್ನು ಆಲಂಗಿಸುತ್ತಾರೆ. 

‘ಸ್ಟಾರ್‌ಬಕ್ಸ್‌’ನ ಈ ಜಾಹೀರಾತು ಕೆಲವು ತಿಂಗಳುಗಳ ಹಿಂದೆ ಗಮನ ಸೆಳೆದಿತ್ತು. ಜಾಹೀರಾತಿನಲ್ಲಿನ ಈ ಕ್ಷಣ ಯಾರದ್ದಾದರೂ ಜೀವನದಲ್ಲಿ ಘಟಿಸಲು ಸಾಧ್ಯವೇ ಎಂದುಕೊಳ್ಳುತ್ತಿರುವಾಗ ಕಣ್ಮುಂದೆ ಬಂದವರು ವನಜಾಕ್ಷಿ. 

ವನಜಾಕ್ಷಿ ಗದುಗಿನವರು. ಮೂವರು ಮಕ್ಕಳ ತಾಯಿ. ಸದ್ಯ, ಬೆಂಗಳೂರಿನಲ್ಲಿ ‘ಉತ್ತರ ಕರ್ನಾಟಕದ ಗಮಗಮ’ ಎಂಬ ಹೋಟೆಲ್‌ ನಡೆಸುತ್ತಿದ್ದಾರೆ. ಅವರ ಈ ಹೋಟೆಲ್‌ಗೆ ಬೆನ್ನೆಲುಬಾಗಿ ನಿಂತವರು ಅವರ ಮಗ, ಅಲ್ಲಲ್ಲ ಮಗಳು! 

ADVERTISEMENT

ವನಜಾಕ್ಷಿಯವರು ಗದುಗಿನಲ್ಲಿದ್ದಾಗ ಮಕ್ಕಳ ಸಹಕಾರದೊಂದಿಗೆ, ಹೂವು ಕಟ್ಟುವುದು, ಉಪ್ಪಿನಕಾಯಿ ಮಾರಾಟ ಮಾಡುವುದು, ಪೆಟಿಕೋಟ್‌ ಹೊಲಿಯುವುದು... ಹೀಗೆ ಸಣ್ಣಪುಟ್ಟ ಕೆಲಸ ಮಾಡುತ್ತಲೇ ಕುಟುಂಬವನ್ನು ನಿರ್ವಹಿಸಿದವರು. ಮಕ್ಕಳ ಶಾಲಾ–ಕಾಲೇಜಿನ ಶುಲ್ಕ ಕಟ್ಟುವುದಕ್ಕೂ ಇದೇ ದುಡಿಮೆಯನ್ನು ನೆಚ್ಚಿಕೊಂಡವರು. 

ನಂತರ, ಮನೆಯ ಮುಂದೆಯೇ ಸಣ್ಣದೊಂದು ಪ್ರಾವಿಜನ್‌ ಸ್ಟೋರ್‌ ಇಟ್ಟುಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ ವನಜಾಕ್ಷಿಯವರಿಗೆ ಎರಡನೇ ಮಗ ಮಂಜುನಾಥ್ ಎಂದರೆ ಅಚ್ಚುಮೆಚ್ಚು. 

ಸದ್ಯ, ಬೆಂಗಳೂರಿನ ಎನ್‌.ಆರ್‌. ಕಾಲೊನಿಯಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದಾಗ, ವನಜಾಕ್ಷಿಯವರು ಮಾತನಾಡುತ್ತಾ ಸಾಗಿದರು. 

ಮಗಳು ನೀತು ಜೊತೆಗೆ ವನಜಾಕ್ಷಿ 

‘ನಮ್ಮ ಕುಟುಂಬದಲ್ಲೇ ಮಂಜುನಾಥ ತುಂಬಾ ಸ್ಟ್ಯಾಂಡರ್ಡ್‌. ಚಿಕ್ಕಂದಿನಿಂದ ಸಣ್ಣ–ಪುಟ್ಟ ಕೆಲಸ ಮಾಡುತ್ತಾ, ಅವನ ಶಿಕ್ಷಣದ ಖರ್ಚು–ವೆಚ್ಚ ಅವನೇ ನೋಡಿಕೊಳ್ಳುತ್ತಿದ್ದ. ಚಿತ್ರಕಲೆಯಲ್ಲಂತೂ ಅವನಿಗೆ ಎಲ್ಲಿಲ್ಲದ ಆಸಕ್ತಿ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದು ತರುತ್ತಿದ್ದ. ಆದರೆ, ಬೇರೆ ಹುಡುಗರಂತೆ ಹೆಚ್ಚು ಹೊರಗೆ ಹೋಗುತ್ತಿರಲಿಲ್ಲ. ಅವನ ಅಕ್ಕನ ಜೊತೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಮುಂದೆ, ಚಿತ್ರಕಲೆಯಲ್ಲೇ ಹೆಚ್ಚಿನ ಶಿಕ್ಷಣ ಪಡೆಯಬೇಕು ಎಂದು ಗದುಗಿನಿಂದ ಬೆಂಗಳೂರಿಗೆ ಬಂದ. ಓದು ಮುಂದುವರಿಸಬೇಕು ಎಂದರೆ ದುಡ್ಡು ಬೇಕಿತ್ತು. ಅದಕ್ಕಾಗಿ, ಬೆಂಗಳೂರಿನಲ್ಲೇ ಒಂದು ಟ್ಯಾಟೂ ಸೆಂಟರ್‌ ಓಪನ್ ಮಾಡಿದ. ಡ್ರಾಯಿಂಗ್‌ನಲ್ಲಿ ಎಕ್ಸ್‌ಪರ್ಟ್‌ ಆಗಿದ್ದರಿಂದ ಟ್ಯಾಟೂ ಸೆಂಟರ್‌ ಕೈ ಹಿಡಿಯಿತು. ಮಕ್ಕಳೊಂದಿಗೆ ನಾನೂ ಇಲ್ಲಿಗೇ ಬಂದುಬಿಟ್ಟೆ...’ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ಕ್ಷಣವನ್ನು ಸಡಗರದಿಂದಲೇ ಹೇಳಿದರು ವನಜಾಕ್ಷಿ. 

‘ಉತ್ತರ ಕರ್ನಾಟಕದ ಅಡುಗಿ ಎಲ್ಲ ಚಂದ ಮಾಡ್ತೀಯಲ್ಲ. ನಾವ್ಯಾಕ್ ಇಲ್ಲೇ ಒಂದು ಉತ್ತರ ಕರ್ನಾಟಕ ಊಟದ ಹೋಟೆಲ್‌ ಮಾಡಬಾರದು’ ಎಂದು ಮಂಜುನಾಥ್ ಹೇಳಿದ. ನನಗೂ ಸರಿ ಎನಿಸಿತು. ಮನೆಯಲ್ಲೇ ಮಾಡುತ್ತಿದ್ದ ಅಡುಗೆಗಳೇ ಮೆನು ಆಯ್ತು. ‘ಕತ್ರಿಗುಪ್ಪೆಯಲ್ಲಿ ಸಣ್ಣದೊಂದು ಹೋಟೆಲ್‌ ಮಾಡಿದೆವು. ಅದೂ ಚೆನ್ನಾಗಿ ನಡೆಯಿತು. ಈಗ ಎನ್‌.ಆರ್‌ ಕಾಲೊನಿಗೆ ಬಂದಿದ್ದು, ಗಮಗಮ ಇನ್ನೂ ಚೆನ್ನಾಗಿ ನಡೆಯುತ್ತಿದೆ’ ಎಂದು ಹೇಳುತ್ತಿದ್ದ ವನಜಾಕ್ಷಿ, 2018ರಲ್ಲಿ ತಮ್ಮ ಜೀವನದಲ್ಲಾದ ದೊಡ್ಡ ಬದಲಾವಣೆ ಬಗ್ಗೆ ಹೇಳುವಾಗ ಮಾತ್ರ ಕಣ್ಣಲ್ಲಿ ನೀರು ತುಂಬಿಕೊಂಡರು. 

‘ಅವತ್ತೊಂದು ದಿನ ರಾತ್ರಿ ದೊಡ್ಡ ಮಗಳು ಶೀಲಾ ವಿಡಿಯೊ ಕಾಲ್‌ ಮಾಡಿದಳು. ‘ಅಮ್ಮಾ, ಮಂಜು ಕಾಂಪಿಟೇಷನ್‌ನಲ್ಲಿ ವಿನ್‌ ಆಗ್ಯಾನ. ಇಲ್ನೋಡು ಹೆಂಗ್ ಕಾಣಸ್ತಾನ’ ಅಂತಾ ತೋರಿಸಿದಳು. ಹೆಣ್ಣುಮಕ್ಕಳ ಡ್ರೆಸ್‌ ಹಾಕ್ಕೊಂಡಿದ್ದ ಮಗ. ಫ್ಯಾನ್ಸಿ ಡ್ರೆಸ್‌ ಕಾಂಪಿಟೇಷನ್‌ ಇರಬೇಕು ಅಂದ್ಕೊಂಡು, ‘ಛಲೋ ಐತಿ ಬಿಡು’ ಎಂದು ಹೇಳಿ ಮಲಗಿದೆ. ಮನೆಗೆ ಬಂದಾಗಲೂ ಅದೇ ಡ್ರೆಸ್‌ನಲ್ಲಿದ್ದ ಮಂಜುನಾಥ. ‘ಸೇಮ್‌ ಹುಡುಗಿ ಕಂಡಂಗ ಕಾಣ್ತಿ ನೋಡು’ ಎಂದೆ. ‘ಇನ್ಮ್ಯಾಗ ನಾ ಹಿಂಗ ಇರ್ತೀನಿ, ಇದೇ ನನ್ನ ಜೀವನಾ’ ಅಂದುಕೊಂಡು ಒಳಗೆ ಓಡಿದ. 

ಮರುದಿನ ಶೀಲಾ ಮತ್ತು ಮಂಜುನಾಥ್ ಸೇರಿ, ‘ನಾನು ಅವನಲ್ಲ, ಅವಳು’ ಸಿನಿಮಾ ತೋರಿಸಿದರು. ‘ಇದೇನ್‌ ಹಿಂಗೈತಿ ಈ ಫಿಲಮ್ಮು.. ಇದನ್ನೆಲ್ಲ ನಂಗ್ಯಾಕ ತೋರಸಾಕಹತ್ತೀರಿ’ ಎಂದೆ. ಶೀಲಾ ಅಳುತ್ತಾ ಹೇಳಿದಳು, ‘ಮಂಜೂನು ಹಿಂಗ ಹೆಣ್ಣಾಗಿ ಬದಲಾಗ್ಯಾನ, ಇನ್ಮೇಲೆ ನೀನು ಅವನಿಗೆ ನೀತು ಅಂತಾನ ಕರೀಬೇಕು ಅಂದಳು. ನನಗೆ ನಿಂತ ನೆಲ ಒಮ್ಮೆಗೇ ಕುಸದಂಗಾತು’ ಕಣ್ಣೀರು ಒರೆಸಿಕೊಂಡರು ವನಜಾಕ್ಷಿ. 

‘ನೋಡ್‌ ಅವ್ವಾಜಿ, ಮಗಾ ಆಗಿ ನನ್ನ ಜವಾಬ್ದಾರಿ ಎಲ್ಲ ಮುಗಿಸೇನಿ. ಹೋಟೆಲ್ಲು, ಟ್ಯಾಟೂ ಸೆಂಟರ್ ಛಲೋ ನಡೀತೈತಿ, ಹೆಣ್ಣಾಗಬೇಕು ಅನ್ನೋದು ಮೊದಲಿನಿಂದಲೂ ನನಗಿದ್ದ ಬಯಕಿ. ಹೊಸಾ ಜೀವನ ರೂಪಿಸಿಕೊಳ್ಳಾಕ ನನಗ ಅವಕಾಶ ಕೊಡು. ನಾನು ಏನಾರ ಸಾಧಿಸ್ತೀನಿ. ನಿನಗ ಕೆಟ್ಟ ಹೆಸರು ತರೂ ಕೆಲಸಾ ಅಂತೂ ಮಾಡಂಗಿಲ್ಲ’ ಎಂದು ಮಂಜುನಾಥ್ ಹೇಳಿದ. ನನ್ನ ಗಂಡ ಮತ್ತು ದೊಡ್ಡ ಮಗ ಒಪ್ಪಲಿಲ್ಲ. 

ನೀತು 

‘ಹುಟ್ಟಿದಾಗಿಂದ ಭಾಳ ಶಿಸ್ತಿಂದ ಬೆಳೆದಾಂವ ಮಂಜುನಾಥ. ಮೆಜಾರಿಟಿಗೆ ಬ್ಯಾರೆ ಬಂದಾನ. ನಾ ಒಪ್ಪಲಿಲ್ಲ ಅಂದ್ರ ಮನಿ ಬಿಟ್ಟು ಹೊಕ್ಕಾನ’ ಅಂದುಕೊಂಡೆ. ಮನೆ ಬಿಟ್ಟು ಹೋಗಿ ಬೀದಿಯಲ್ಲಿ ಭಿಕ್ಷೆ ಬೇಡುವ, ವೇಶ್ಯಾವಾಟಿಕೆ ನಡೆಸಬಹುದೆಂಬ ದೃಶ್ಯ ಕಣ್ಮುಂದೆ ಬಂತು. ‘ಇಲ್ಲ, ನಾನು ಹೆತ್ತ ಕೂಸು ಅದು. ನಾನ ಸಪೋರ್ಟ್‌ ಮಾಡ್ಲಿಲ್ಲ ಅಂದ್ರ ಮತ್ತ್ಯಾರು ಅವನ ಬೆಂಬಲಕ್ಕ ನಿಲ್ತಾರ ಎಂದುಕೊಂಡು ಒಪ್ಪಿದೆ. ಅವನನ್ನ ನೀತು ಅಂತಲೇ ಕರೆಯಲಾರಂಭಿಸಿದೆ’ ಎಂದು ವನಜಾಕ್ಷಿ ಮಾತು ಮುಂದುವರಿಸಿದರು.

‘ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನಲ್ಲಿ ನೀತು ರೀಲ್ಸ್‌ ನೋಡಿದ ನೆಂಟರು, ಊರಿನವರು ನನಗೆ ಫೋನ್ ಮಾಡಿ ಬೈಯತೊಡಗಿದರು. ‘ನಿನಗೇನ್‌ ಬುದ್ಧಿಗಿದ್ದಿ ಐತಿಲ್ಲೋ, ಮಗನಿಗೆ ಮದ್ವಿ ಮಾಡು ಅಂದ್ರ, ಸೀರಿ ಉಡಿಸಿ ಕುಂಡ್ರಿಸಿದಿಯಲ್ಲ. ಊರಾಗೆಲ್ಲ ಮಾನ–ಮರ್ಯಾದಿ ಇಲ್ಲದಂಗಾಗೈತಿ. ಬೆಂಗಳೂರಿಗೆ ಹೋಗಿ ಏನೋ ಮಾಡ್ತೀರಿ ಅಂದ್ರ ಇಂಥವೇ ಹಿರೀತನ ಮಾಡ್ತೀರೇನು’’ ಎಂದು ನೆಂಟರು ರಾತ್ರಿಯೆಲ್ಲ ಫೋನ್ ಮಾಡಿ ಬೈಯುತ್ತಿದ್ದರು. ನಾನು ಈ ಕಿವಿಯಲ್ಲಿ ಕೇಳಿ, ಆ ಕಿವಿಯಲ್ಲಿ ಬಿಟ್ಟುಬಿಟ್ಟೆ. ನೀತುಗೆ ಸಪೋರ್ಟ್‌ ಮಾಡಿದೆ. ಮಗ ಆಗಿ ಎಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದನೋ, ಮಗಳಾಗಿಯೂ ಇನ್ನೂ ಹೆಚ್ಚು ಜವಾಬ್ದಾರಿಯಿಂದ ಮನೆ, ಹೋಟೆಲ್‌ ನಡೆಸುತ್ತಿದ್ದಾಳೆ. ನನಗಷ್ಟು ಸಾಕು’ ಎಂದು ಕಣ್ಣೀರು ಒರೆಸಿಕೊಂಡರು. 

ಅಮ್ಮನ ಮಾತುಗಳನ್ನ ಧನ್ಯತಾಭಾವದಲ್ಲೇ ಕೇಳುತ್ತಿದ್ದ ನೀತು, ‘ಶಾಲೆಯಲ್ಲಿ ಇದ್ದ ದಿನಗಳಿಂದಲೂ ನನ್ನಲ್ಲೇ ಒಂದು ತೊಳಲಾಟವಿತ್ತು. ಗಂಡಾಗಿದ್ದರೂ ನನ್ನಲ್ಲಿ ಪೂರ್ತಿ ಹೆಣ್ಣಿನ ಭಾವನೆಗಳೇ ಇದ್ದವು. ನನ್ನ ಜವಾಬ್ದಾರಿಗಳು ಮುಗಿದ ಮೇಲೆ ಹೆಣ್ಣಾಗಿ ಬದಲಾಗಲು ನಿರ್ಧರಿಸಿದೆ. ಮೊದಲಿನಿಂದಲೂ ಸಂಬಂಧಿಸಿದ ವೈದ್ಯರಲ್ಲಿ ಈ ಬಗ್ಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೆ. ಮೊದಲು ಅಕ್ಕನಿಗೆ ಹೇಳಿದ್ದೆ. ಮೊದಲು ಅವಳಿಗೆ ಆಘಾತ ಆಗಿದ್ದರೂ, ನಂತರ ಒಪ್ಪಿದ್ದಳು. ಆಪರೇಷನ್‌ ಮಾಡಿಸಿಕೊಂಡ ನಂತರವೂ ಮನೆಯಲ್ಲಿ ಹೇಳಿರಲಿಲ್ಲ. 2018ರಲ್ಲಿ ಟ್ರಾನ್ಸ್‌ಕ್ವೀನ್‌ ಆಗಿ ಗೆದ್ದ ನಂತರವೇ ಅಮ್ಮನಿಗೆ ವಿಷಯ ತಿಳಿಸಿದ್ದು. ಮೊದಲು ಅಪ್ಪ, ಅಣ್ಣ ತುಂಬಾ ವಿರೋಧಿಸಿದರು. ಈಗ ನನ್ನ ಸಾಧನೆಯ ಬಗ್ಗೆ ಖುಷಿ ವ್ಯಕ್ತಪಡಿಸುತ್ತಾರೆ’ ಎಂದು ಕಣ್ಣರಳಿಸಿದರು. 

ಲಿಂಗತ್ವ ಅಲ್ಪಸಂಖ್ಯಾತ ಮಾಡೆಲ್‌ ಆಗಿ ನೀತು ಗಮನ ಸೆಳೆದಿದ್ದಾರೆ. ಹಲವು ಫ್ಯಾಷನ್‌ ಷೋಗಳಲ್ಲಿ ಭಾಗವಹಿಸಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾರವಾದ ‘ಸೂಪರ್‌ ಕ್ವೀನ್‌’ನಲ್ಲಿ ಹೆಣ್ಣಾಗಿಯೇ ಭಾಗವಹಿಸಿದ್ದಾರೆ. ಹಲವು ಧಾರಾವಾಹಿ–ಸಿನಿಮಾಗಳಲ್ಲಿ ನಟಿಸುವಂತೆಯೂ ಅವರಿಗೆ ಬೇಡಿಕೆ ಬರುತ್ತಿದೆ. ಇತ್ತ, ‘ಗಮ ಗಮ’ ಹೋಟೆಲ್‌ನಲ್ಲಿ 17 ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದಾರೆ. 

‘ರಿಲೇಟಿವ್ಸ್ ಈಗಲೂ ಫೋನ್‌ ಮಾಡ್ತಾರ. ಮೊದ್ಲು ಉಗೀತಿದ್ದವ್ರು ಈಗ ಹೊಗಳ್ತಾರ. ಮದ್ವಿಗೆ, ಫಂಕ್ಷನ್‌ಗಳಿಗೆಲ್ಲ ನೀತುನ ಕರ್ಕೊಂಡ್ ಬಾ ಅಂತಾ ಪೀಡಸ್ತಾರ. ನೀತು ನಮ್ಮೂರಿನ ಹೆಮ್ಮೆ ಅಂತಾರ..’ ಎಂದು ಖುಷಿಯಿಂದ ಹೇಳುವ ವನಜಾಕ್ಷಿ, ಇಂತಹ ಕಷ್ಟದ ಮತ್ತು ಇಕ್ಕಟ್ಟಿನ ಸಂದರ್ಭಗಳಲ್ಲಿ ತಂದೆ–ತಾಯಿಗಳು ಮಕ್ಕಳ ಬೆಂಬಲಕ್ಕೆ ನಿಂತರೆ ಯಾವ ಮಕ್ಕಳೂ ಕೆಟ್ಟ ದಾರಿ ತುಳಿಯೋಕೆ ಸಾಧ್ಯವೇ ಇಲ್ಲ’ ಎಂದು ಗಟ್ಟಿಧ್ವನಿಯಲ್ಲಿ ಹೇಳುತ್ತಾರೆ. 

ವನಜಾಕ್ಷಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.