ADVERTISEMENT

ಮಕ್ಕಳಿಗಿಲ್ಲಿದೆ ‘ಟರ್ನಿಂಗ್ ಪಾಯಿಂಟ್’

ಮಂಜುಶ್ರೀ ಎಂ.ಕಡಕೋಳ
Published 13 ನವೆಂಬರ್ 2018, 20:36 IST
Last Updated 13 ನವೆಂಬರ್ 2018, 20:36 IST
ಡಾ.ಸುಲತಾ ಶೆಣೈ
ಡಾ.ಸುಲತಾ ಶೆಣೈ   

ನಾಲ್ಕು ವರ್ಷದ ಆ ಪುಟ್ಟ ಪೋರನಿಗೆ ಮೊಬೈಲ್ ಮತ್ತು ಟಿ.ವಿ.ಯೇ ಜಗತ್ತು. ಓರಗೆಯ ಹುಡುಗರೊಂದಿಗೆ ಆಟವಾಡುವುದಿರಲಿ ಮಾತು ಕೂಡಾ ಇಲ್ಲ. ಅತ್ತ ಅಮ್ಮ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಇತ್ತ ಈ ಪೋರ ಮೊಬೈಲ್‌ನಲ್ಲಿಯೇ ಮುಳುಗಿರುತ್ತಿದ್ದ. ತನ್ನ ಮಗ ಎಲ್ಲರಂತೆ ಶಾಲೆಯಲ್ಲಿ ಓದಲೆಂದು ಆ ತಾಯಿ ಪ್ರಿನರ್ಸರಿಗೆ ಸೇರಿಸಿದಾಗ, ಶಿಕ್ಷಕರಿಂದ ದೂರಿನ ಸುರಿಮಳೆಯೇ ಎದುರಾಯಿತು. ತನ್ನ ಮಗ ಮೌನಿ ಎಂದು ಭಾವಿಸಿದ್ದ ಆ ತಾಯಿಗೆ ಆ ಮೌನ ಆಟಿಸಂನ ಲಕ್ಷಣವೆಂದು ಗೊತ್ತೇ ಆಗಿರಲಿಲ್ಲ. ಶಿಕ್ಷಕರ ಸಲಹೆಯ ಮೇರೆಗೆ ಬೆಂಗಳೂರಿನ ಜಯನಗರದ ಟರ್ನಿಂಗ್ ಪಾಯಿಂಟ್ ಕೇಂದ್ರಕ್ಕೆ ಹೋದಾಗಲೇ ಮಗುವಿಗಿರುವ ಆಟಿಸಂ ತಿಳಿದದ್ದು.

ಆರಂಭಿಕ ಹಂತದಲ್ಲಿದ್ದ ಆಟಿಸಂ ಕುರಿತು ಪೋಷಕರಿಗೆ ಟರ್ನಿಂಗ್ ಪಾಯಿಂಟ್‌ನ ಮಾನಸಿಕರೋಗ ತಜ್ಞೆ ಡಾ.ಸುಲತಾ ಶೆಣೈ ಮಾರ್ಗದರ್ಶನ ನೀಡಿದರು. ಮಗುವಿಗೆ ಹಲವು ಬಾರಿ ಥೆರಪಿ ನೀಡಿದ ಬಳಿಕ ಆರು ತಿಂಗಳೊಳಗೆ ಆಟಿಸಂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿತು.

15 ವರ್ಷದ ರಾಹುಲ್‌ (ಹೆಸರು ಬದಲಾಯಿಸಲಾಗಿದೆ) ಶಾಲೆಯಲ್ಲಿ ‘ಟ್ರಬಲ್ ಮೇಕರ್’ ಅಂತಲೇ ಕುಖ್ಯಾತಿ. ಶಾಲೆಯ ಸ್ನೇಹಿತರನ್ನು ಬಿಟ್ಟು ಹೊರಗಿನ ಸ್ನೇಹಿತರೇ ಆತನಿಗೆ ಅಚ್ಚುಮೆಚ್ಚು. ಅವರೊಂದಿಗೆ ದುಶ್ಚಟಗಳಿಗೆ ಬಲಿಯಾಗಿದ್ದ ರಾಹುಲ್, ಮನೆಯಲ್ಲಿ ಕದಿಯುವುದನ್ನು ರೂಢಿಸಿಕೊಂಡಿದ್ದ. ಅಪ್ಪ–ಅಮ್ಮನ ನಿತ್ಯದ ಜಗಳ, ನಿಧಾನ ಕಲಿಕೆಯ ದೋಷ, ಕೆಟ್ಟ ಜನರ ಸಹವಾಸ ಆತನಿಗೆ ‘ಬ್ಯಾಡ್ ಬಾಯ್’ ಇಮೇಜ್ ತಂದುಕೊಟ್ಟಿತ್ತು.

ADVERTISEMENT

ಆದರೆ, ಅದೇ ರಾಹುಲ್ ವರ್ಷದೊಳಗೆ ಪೋಷಕರಷ್ಟೇ ಅಲ್ಲ ಶಿಕ್ಷಕರೂ ಆಶ್ಚರ್ಯಪಡುವಷ್ಟು ಬದಲಾಗಿದ್ದ. ವರ್ತನೆ ಮತ್ತು ಕಲಿಕಾ ದೋಷಗಳಿಂದ ಮುಕ್ತನಾಗಿದ್ದ ಆತ ದುಶ್ಚಟಗಳಿಗೆ ಗುಡ್‌ಬೈ ಹೇಳಿದ್ದ. ವರ್ಷದ ಹಿಂದೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅದೇ ರಾಹುಲ್, ಎಂಜಿನಿಯರಿಂಗ್ ಸೀಟು ಪಡೆದ ಖುಷಿಯಲ್ಲಿ ಡಾ.ಸುಲತಾ ಮೇಡಂ ಎದುರು ಸ್ವೀಟ್ ಬಾಕ್ಸ್ ಹಿಡಿದು ನಿಂತಿದ್ದ. ರಾಹುಲ್‌ನೊಂದಿಗೆ ಅವನ ಪೋಷಕರೂ ಬದಲಾವಣೆಗೆ ತೆರೆದುಕೊಂಡರು. ಇವರ ಖುಷಿಗೆ ಕಾರಣವಾಗಿದ್ದು ‘ಟರ್ನಿಂಗ್ ಪಾಯಿಂಟ್’.

ಮಾನಸಿಕ ಸಮಸ್ಯೆ, ಕಲಿಕಾ ದೋಷ, ವಾಕ್ ದೋಷವಿರುವ ಮಕ್ಕಳ ಬಾಳಿಗೆ ತಿರುವು ನೀಡುವ ಕೈಮರದಂತಿದೆ ಬೆಂಗಳೂರಿನ ಜಯನಗರದಲ್ಲಿರುವ ‘ಟರ್ನಿಂಗ್ ಪಾಯಿಂಟ್’ ಮಾನಸಿಕ ಮೌಲ್ಯಮಾಪನ, ಥೆರಪಿ ಮತ್ತು ಸಮಾಲೋಚನ ಕೇಂದ್ರ. ಇಪ್ಪತ್ತು ವರ್ಷಗಳಿಂದ ಸಕ್ರಿಯವಾಗಿರುವ ಈ ಕೇಂದ್ರದ ಮೂಲಕ ಸಾವಿರಾರು ಮಕ್ಕಳು ಮತ್ತು ಪೋಷಕರ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಮಕ್ಕಳಷ್ಟೇ ಅಲ್ಲ ಕಾಲೇಜು ವಿದ್ಯಾರ್ಥಿಗಳು, ವಯಸ್ಕರು, ವೈವಾಹಿಕ ಸಮಸ್ಯೆಗಳಿಂದ ಬಳಲುವವರು ಈ ಕೇಂದ್ರದ ಸಂಪರ್ಕದಿಂದಾಗಿ ಆರೋಗ್ಯಕರ ಬದುಕು ಕಟ್ಟಿಕೊಂಡಿದ್ದಾರೆ.

‘ಈ ಹಿಂದೆ ಮಾನಸಿಕರೋಗ ತಜ್ಞರ ಬಳಿಗೆ ಹೋಗುವುದು ಸಾಮಾಜಿಕ ಅಸ್ಪೃಶ್ಯತೆ ಎಂಬಂತಿತ್ತು. ಆದರೆ, ಈಗಿನ ಪೋಷಕರು ತಮ್ಮ ಮಕ್ಕಳ ಮಾನಸಿಕ ಮತ್ತು ಕಲಿಕಾ ದೋಷಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಮಾನಸಿಕರೋಗ ತಜ್ಞರ ಬಳಿ ಸ್ವಯಂಪ್ರೇರಣೆಯಿಂದ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದಾರೆ. ಈ ಮೂಲಕ ಮಕ್ಕಳಲ್ಲಿನ ದೋಷಗಳನ್ನು ನಿವಾರಿಸಿ, ಭವಿಷ್ಯದ ಸತ್ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಾಗುತ್ತಿದೆ’ಎನ್ನುತ್ತಾರೆ ಡಾ.ಸುಲತಾ ಶೆಣೈ.

**

ವಿಳಾಸ: ಟರ್ನಿಂಗ್ ಪಾಯಿಂಟ್, ಮಾನಸಿಕ ಮೌಲ್ಯಮಾಪನ, ಥೆರಪಿ ಮತ್ತು ಸಮಾಲೋಚನ ಕೇಂದ್ರ, ನಂ.1546, ಮೊದಲನೇ ಮಹಡಿ, 22ನೇ ಮೇನ್, 39ನೇ ಕ್ರಾಸ್, ಜಯನಗರ 4ನೇ ‘ಟಿ ’ಬ್ಲಾಕ್, ಬೆಂಗಳೂರು–560041. ದೂರವಾಣಿ: 080–26636214, ಮೊಬೈಲ್: 98453 57582. ವೆಬ್‌ಸೈಟ್: www.turningpointcentre.com

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.