
ಮಾರಿಕಣಿವೆ ಗುಡ್ಡಗಳ ನಡುವೆ ಇರುವ ವಿವಿ ಸಾಗರ ಜಲಾಶಯ
ಚಿತ್ರಗಳು:ವಿ.ಚಂದ್ರಪ್ಪ
ಕರುನಾಡಿನ ಮೊತ್ತಮೊದಲ ಜಲಾಶಯವೆಂಬ ಹೆಗ್ಗಳಿಕೆ ಇದ್ದರೂ ‘ವಾಣಿವಿಲಾಸ ಸಾಗರ ಜಲಾಶಯ’ ಹಲವು ದಶಕಗಳವರೆಗೆ ‘ಕೆರೆ’ಯೆಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಕೆಲವರು ಕಣಿವೆ ಎಂದರೆ ಹಲವರು ಚೆಕ್ ಡ್ಯಾಂ, ಕಟ್ಟೆ ಎನ್ನುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ತಾಯಿ ವಾಣಿವಿಲಾಸ ಸನ್ನಿಧಾನ ಕೆಂಪನಂಜಮ್ಮಣ್ಣಿ ಅವರ ಪ್ರೀತಿಯ ಪ್ರತೀಕವಾಗಿ ಕಟ್ಟಿದ ಈ ಜಲಾಶಯ ಜಲಮೂಲವಿಲ್ಲದೇ ಜನಮಾನಸದಿಂದ ದೂರವೇ ಉಳಿದಿತ್ತು.
ಮುಳ್ಳಯ್ಯನಗಿರಿ ಶಿಖರದಲ್ಲಿ ಜನಿಸಿ ‘ಗೌರಿ’ ಹೆಸರಿನ ತೊರೆಯಾಗಿ ‘ವೇದ’ – ‘ಆವತಿ’ ಹಳ್ಳಗಳ ಜೊತೆಗೂಡಿ ‘ವೇದಾವತಿ’ ರೂಪ ಪಡೆದ ನದಿ ಹರಿವು ದೀರ್ಘಕಾಲದವರೆಗೆ ಗುಪ್ತಗಾಮಿನಿಯಾಗಿಯೇ ಇತ್ತು. ಮಳೆಗಾಲದಲ್ಲಿ ಮಾತ್ರ ಹರಿದು ಬೇಸಿಗೆಯಲ್ಲಿ ನಿರ್ಜೀವ ಸ್ಥಿತಿಗೆ ತಲುಪುತ್ತಿದ್ದ ವೇದಾವತಿ, ವಿವಿ ಸಾಗರ ಅಣೆಕಟ್ಟೆ ಮುಟ್ಟಲು ವಿಫಲಳಾಗುತ್ತಿದ್ದಳು. ಹೊಸದುರ್ಗ ಹಾಗೂ ಹಿರಿಯೂರು ನಡುವಿನ ಮಾರಿಕಣಿವೆ ಗುಡ್ಡಗಳ ನಡುವೆ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿವಿ ಸಾಗರ ಕೂಡ ಕೋಟೆನಾಡಿನಿಂದ ಹೊರಗೆ ಅಜ್ಞಾತವಾಗಿಯೇ ಇತ್ತು.
ಆದರೆ, 2022ರ ವೇಳೆಗೆ ಮಲೆನಾಡು ಭಾಗದಲ್ಲಿ ಸುರಿದ ಕುಂಭದ್ರೋಣದಿಂದಾಗಿ ವೇದಾವತಿ ತನ್ನ ಹರಿವಿನ ವಿಸ್ತಾರವನ್ನು ಅನಾವರಣಗೊಳಿಸಿದಳು. ದಾರಿಗುಂಟ ಅಯ್ಯನಕೆರೆ, ಮದಗದ ಕೆರೆ ಸೇರಿದಂತೆ ಹಲವು ದೊಡ್ಡ ಕೆರೆ, ಹಳ್ಳ, ಕೊಳ್ಳ ತುಂಬಿಸಿ ವಿವಿ ಸಾಗರದತ್ತ ನುಗ್ಗಿದಳು. ಇದರ ಪರಿಣಾಮವಾಗಿ ಜಲಾಶಯ ನಿರ್ಮಾಣವಾಗಿ ಬರೋಬ್ಬರಿ 89 ವರ್ಷಗಳ ನಂತರ ಎರಡನೇ ಬಾರಿಗೆ ತುಂಬಿ ತುಳುಕಿತು. ಆ ಮೂಲಕ ಈ ಶತಮಾನದ ಮಕ್ಕಳು ವಾಣಿ ವಿಲಾಸ ಸಾಗರ ಜಲಾಶಯದ ಜಲಲ ಜಲಧಾರೆಯನ್ನು ಕಣ್ತುಂಬಿಕೊಳ್ಳುವಂತಾಯಿತು. ಜೀವ ಇರುವುದರೊಳಗಾಗಿ ತುಂಬಿದ ಮಾರಿ ಕಣಿವೆ ಕಾಣುತ್ತೇವಾ ಎಂದು ಕಾಯುತ್ತಿದ್ದವರ ಕಣ್ಣಲ್ಲಿ ನೀರು ಜಿನುಗಿತು.
ಮಳೆಯ ಜೊತೆಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿದ ಕಾರಣ ಜಲಾಶಯ ತುಂಬಿ ಕೋಡಿ ಬೀಳಲು ಕಾರಣವಾಯಿತು. ಇನ್ನಿತರ ಜಲಾಶಯಗಳಂತೆ ವಿವಿ ಸಾಗರ ಜಲಾಶಯಕ್ಕೆ ಗೇಟ್‌ಗಳಿಲ್ಲ, ಭರ್ತಿಯಾದಾಗ ಗೇಟ್ ತೆರೆದು ನದಿಗೆ ನೀರು ಹರಿಸುವ ವ್ಯವಸ್ಥೆ ಇಲ್ಲ. ಜಲಾಶಯದ ಪಶ್ಚಿಮ ಭಾಗದಲ್ಲಿರುವ ಕೋಡಿಯಲ್ಲಿ ನೀರು ಹೊರಗೆ ಹರಿಯುವ ವಿಶಿಷ್ಟ ರೂಪ ಈ ಜಲಾಶಯದ್ದು. ಈ ಕಾರಣದಿಂದಲೂ ಜನಮಾನಸದಲ್ಲಿ ಕೆರೆ ಎಂಬ ಭಾವನೆ ಮನೆ ಮಾಡಿತ್ತು.
1907ರಲ್ಲಿ ನಿರ್ಮಾಣಗೊಂಡ ನಂತರ 1933ರ ಸೆ.2ರಂದು ಮೊತ್ತಮೊದಲ ಬಾರಿಗೆ ಜಲಾಶಯ ಕೋಡಿ ಬಿದ್ದಿತ್ತು. ಆ ನಂತರ ಹೊಸ ತಲೆಮಾರಿನ ಜನರು ಜಲಾಶಯ ಕೋಡಿ ನೀರನ್ನೇ ಕಂಡಿರಲಿಲ್ಲ. ಮತ್ತೆ 2022ರ ಸೆ.2ರಂದೇ (ಕಾಕತಾಳೀಯ) ಎರಡನೇ ಬಾರಿಗೆ ಜಲಾಶಯದ ಕೋಡಿಯಲ್ಲಿ ನೀರು ಹರಿಯಿತು. ಅದು ಸಣ್ಣ ಪ್ರಮಾಣದ ಕೋಡಿಯಾಗಿರಲಿಲ್ಲ, ಭಾರಿ ಮಳೆಯಿಂದಾಗಿ ಇನ್ನೊಂದು ವಿವಿ ಸಾಗರ ತುಂಬುವಷ್ಟು ನೀರು ಹೊರಗೆ ಹರಿದು ಹೋಯಿತು. ಅದರಿಂದಾಗಿ ಹೊಸದುರ್ಗ ತಾಲ್ಲೂಕು ವ್ಯಾಪ್ತಿಯ ಹಿನ್ನೀರು ಪ್ರದೇಶದ ಮನೆ, ತೋಟಗಳು ಮುಳುಗಿದ್ದವು.
ಕೋಡಿಯಿಂದ ನೀರು ಹೊರಕ್ಕೆ ಹರಿದು ಹೋಗುವ ರುದ್ರರಮಣೀಯ ದೃಶ್ಯ ಕಂಡ ಜನರು ಚಕಿತಗೊಂಡರು.ಗುಡ್ಡಗಳ ನಡುವೆ ಹರಿಯುವ ನೀರಿನ ದೃಶ್ಯ ರೂಪಕ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡಿತು. ರಾಜ್ಯ, ಹೊರರಾಜ್ಯಗಳಿಂದಲೂ ಬಂದ ಜನರು ಆ ನೀರಿನ ವೈಭವವನ್ನು ಕಣ್ತುಂಬಿಕೊಂಡರು. ಎತ್ತರದಿಂದ ಭಾರತದ ಭೂಪಟದಂತೆ ಕಾಣುವ ಇಡೀ ಜಲಾಶಯ ನೋಡುಗರ ಮನಸೂರೆಗೊಂಡಿತು. ಜಾಲತಾಣಗಳ ಪರಿಣಾಮದಿಂದಾಗಿ 2022ರಿಂದೀಚೆಗೆ ಜಲಾಶಯದ ಸೌಂದರ್ಯ ರಾಷ್ಟ್ರಮಟ್ಟಕ್ಕೆ ಹರಿಯಿತು.
‘ಸದಾ ಮಳೆ ಕೊರತೆ ಎದುರಿಸುತ್ತಿದ್ದ ಮಧ್ಯ ಕರ್ನಾಟಕ ಭಾಗಕ್ಕೆ ನೀರೊದಗಿಸುವುದು ನಾಲ್ವಡಿಯವರ ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಮನೆಯ ಒಡವೆಗಳನ್ನು ಒತ್ತೆ ಇಟ್ಟಿದ್ದರು. 1901ರಲ್ಲಿ ನಾಲ್ವಡಿಯವರು ಮಾರಿಕಣಿವೆ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ್ದರು. ಆದರೆ ಸರ್ಕಾರಗಳ ಉದಾಸೀನ ನೀತಿಯಿಂದ 8–9 ದಶಕಗಳ ಕಾಲ ಜಲಾಶಯ ತುಂಬಲೇ ಇಲ್ಲ. ಚಿಕ್ಕಮಗಳೂರು ಕಾಫಿ ತೋಟ, ಕಡೂರು, ಬೀರೂರು ಭಾಗದ ಕೆರೆಗಳಿಗೇ ವೇದಾವತಿ ನೀರು ಸಾಲುತ್ತಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ವರುಣನ ಕೃಪೆ, ಭದ್ರಾ ಮೇಲ್ದಂಡೆ ಯೋಜನೆಯಿಂದಾಗಿ ಜಲಾಶಯ ತುಂಬುತ್ತಿದೆ’ ಎಂದು ರೈತ ಮುಖಂಡ ಈಚಘಟ್ಟ ಸಿದ್ದವೀರಪ್ಪ ಹೇಳಿದರು.
2008ರಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ರೈತರು 543 ದಿನ ನಿರಂತರ ಹೋರಾಟ ನಡೆಸಿದ್ದರು. 2017ರ ಬರದಿಂದಾಗಿ ಅಚ್ಚುಕಟ್ಟು ಪ್ರದೇಶದ 10 ಲಕ್ಷಕ್ಕೂ ಹೆಚ್ಚು ಅಡಿಕೆ, ತೆಂಗಿನ ಮರಗಳು ನಾಶವಾದವು. 135 ಅಡಿ ಸಾಮರ್ಥ್ಯದ ಜಲಾಶಯದ ನೀರು ಡೆಡ್ ಸ್ಟೋರೇಜ್‌ಗಿಂತ (60 ಅಡಿ) ಕೆಳಗಿಳಿದಿತ್ತು. ಆ ನಂತರ ಭದ್ರಾ ನೀರಿನ ಹೋರಾಟ ತೀವ್ರಗೊಂಡಿತು.
2019ರಲ್ಲಿ ಪಂಪಿಂಗ್ ಮೂಲಕ ವಾಣಿವಿಲಾಸಕ್ಕೆ ಭದ್ರಾ ನೀರು ಹರಿಸಲಾಯಿತು. ವರುಣನೂ ಕೃಪೆ ತೋರಿದ ಕಾರಣ ನೀರಿನ ಮಟ್ಟ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗಿತು. 2019ರಲ್ಲಿ 60 ರಿಂದ 102.15 ಅಡಿಗೇರಿತು. 2020ರಲ್ಲಿ 106 ಅಡಿಗೆ, 2021ರಲ್ಲಿ 125.15 ಅಡಿಗೆ ತಲುಪಿತ್ತು. 2022ರಲ್ಲಿ ಜಲಾಶಯ ತುಂಬಿ ಕೋಡಿ ಹರಿಯಿತು. ನಂತರ 2024, ಜ.12ರಂದು ಮೂರನೇ ಬಾರಿ ಕೋಡಿಯಲ್ಲಿ ನೀರು ಹರಿಯಿತು. ಮತ್ತೆ ಇದೀಗ ಸುರಿದ ಭಾರಿ ಮಳೆಯಿಂದಾಗಿ ಜಲಾಶಯ ಅ.19ರಂದು ನಾಲ್ಕನೇ ಬಾರಿಗೆ ಕೋಡಿ ಬಿದ್ದಿದೆ. ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ರಾಜ್ಯ, ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ವಾಣಿವಿಲಾಸ ಸಾಗರಕ್ಕೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಜಲಾಶಯ ಕೆರೆ, ಕಟ್ಟೆ, ಕಣಿವೆ ಎಂಬ ಹಣೆಪಟ್ಟಿ ಕಳಚಿಕೊಂಡಿದೆ.
ಜಲಾಶಯದ ಬಳಿ ಮೂಲ ಸೌಲಭ್ಯದ ಕೊರತೆಯಿಂದಾಗಿ ಪ್ರವಾಸಿಗರು ತೊಂದರೆ ಅನುಭವಿಸುತ್ತಾರೆ. ಹೋಟೆಲ್, ವಸತಿ ಗೃಹಗಳಿಲ್ಲ. ಜಲಾಶಯದ ಹಿಂದೆ ನಿರ್ಮಿಸಿರುವ ಉದ್ಯಾನ ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದೆ. ಪಾರ್ಕಿಂಗ್ ಸೌಲಭ್ಯವೂ ಇಲ್ಲ. 2022ಕ್ಕೂ ಮೊದಲು ಜಲಾಶಯದ ತಟದಲ್ಲಿರುವ ಕಣಿವೆ ಮಾರಮ್ಮ ಗುಡಿಯ ಭಕ್ತರಷ್ಟೇ ಅಲ್ಲಿಗೆ ಬರುತ್ತಿದ್ದರು. ಹಲವು ದಶಕಗಳ ಕಾಲ ಜಲಾಶಯಕ್ಕೆ ಭದ್ರತೆಯೇ ಇರಲಿಲ್ಲ. ಜಲಾಶಯ ಎರಡನೇ ಬಾರಿ ಭರ್ತಿಯಾದ ನಂತರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಭದ್ರತೆಗಾಗಿ ಇಬ್ಬರು ಗೃಹ ರಕ್ಷಕ ದಳದ ಸಿಬ್ಬಂದಿಯನ್ನಷ್ಟೇ ಹಾಕಿದ್ದಾರೆ. ಅದೂ ಸಂಜೆ ಐದು ಗಂಟೆವರೆಗೆ ಮಾತ್ರ. ಇತರ ಜಲಾಶಯಗಳಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಬೇಕು ಎಂಬ ಒತ್ತಾಯವಿದೆ.
ವಾಣಿ ವಿಲಾಸ ಸಾಗರ ಭರ್ತಿಯಾಗಿರುವುದಕ್ಕೆ ಹಿರಿಯೂರು ತಾಲ್ಲೂಕು ಭಾಗದಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಹೊಸದುರ್ಗ ತಾಲ್ಲೂಕು ಹಿನ್ನೀರು ಪ್ರದೇಶದಲ್ಲಿ ಸಾವಿರಾರು ಎಕರೆ ತೋಟ ನೀರಿನಲ್ಲಿ ಮುಳುಗಿವೆ. ವಿವಿಧೆಡೆ ರಸ್ತೆ, ಸೇತುವೆಗಳ ಸಂಪರ್ಕ ಬಂದ್ ಆಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಕಣ್ಣೀರಿಡುತ್ತಿದ್ದಾರೆ. ನದಿಯೊಡಲು ಖಾಲಿಯಾದಾಗ ರೈತರು ಅಲ್ಲಿ ತೋಟ ಮಾಡಿ ಮನೆ ಕಟ್ಟಿಕೊಂಡಿದ್ದರು.
‘ಜಲಾಶಯ ನಿರ್ಮಾಣ ಕಾಲದಲ್ಲೇ ಹಲವು ಹಳ್ಳಿ, ಕೃಷಿ ಭೂಮಿ ಮುಳುಗಿವೆ. ಸಂತ್ರಸ್ತರಿಗೆ ಆಗಲೇ ಪರಿಹಾರ ನೀಡಲಾಗಿದೆ’ ಎಂದು ಅಧಿಕಾರಿಗಳು ಹೇಳುತ್ತಾರೆ. 130 ಅಡಿ ನೀರು ಬಂದೊಡನೆ ಹೊರಗೆ ನೀರು ಹರಿಸಲು ₹124 ಕೋಟಿ ವೆಚ್ಚದಲ್ಲಿ ಜಲಾಶಯಕ್ಕೆ ಕ್ರಸ್ಟ್ ಗೇಟ್ ಅಳವಡಿಸುವ ಯೋಜನೆ ಸಿದ್ಧಗೊಂಡಿದ್ದು ಅನುಷ್ಠಾನ ಹಂತದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.