ADVERTISEMENT

ವರ್ಚುವಲ್ ಸಂದರ್ಶನ: ಸಿದ್ಧತೆ ಹೇಗಿರಬೇಕು?

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 19:31 IST
Last Updated 12 ಅಕ್ಟೋಬರ್ 2020, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಖಾಮುಖಿ ಭೇಟಿ ಬದಲಿಗೆ ವರ್ಚ್ಯುವಲ್ (ವಿಡಿಯೊ) ಸಂದರ್ಶ ನಗಳು ಈಗ ಎಲ್ಲೆಡೆಯೂ ಹಿಂದಿಗಿಂತ ಹೆಚ್ಚು ಸಾಮಾನ್ಯವಾಗಿ ಬಿಟ್ಟಿವೆ. ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಕಂಪನಿಗಳಿಗೆ ಈ ಬಗೆಯ ವಿಡಿಯೊ ಸಂದರ್ಶನಗಳು ಹಲವಾರು ಬಗೆಯಲ್ಲಿ ಪ್ರಯೋಜನಕಾರಿಯಾಗಿವೆ.

ಅವುಗಳೆಂದರೆ..

l ಕಡಿಮೆ ವೆಚ್ಚ

ADVERTISEMENT

l ವಿಡಿಯೊ ಸಂದರ್ಶನ ಪರಿಕರಗಳನ್ನು ಸುಲಭವಾಗಿ ಅಳವಡಿಸುವುದು

l ಪ್ರತಿಭಾನ್ವೇಷಣೆಗೆ ಭೌಗೋಳಿಕ ಅಡಚಣೆಗಳ ನಿವಾರಣೆ

ಉದ್ಯೋಗ ನೀಡುವ ಕಂಪನಿಗೆ ಹಲವು ಅನುಕೂಲತೆಗಳನ್ನು ಕಲ್ಪಿಸುವ ವಿಡಿಯೊ ಸಂದರ್ಶನವು, ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳಿಗೂ ಹಲವಾರು ಬಗೆಯಲ್ಲಿ ಪ್ರಯೋಜನಕಾರಿ. ಅಭ್ಯರ್ಥಿಗಳು ಸಂದರ್ಶನ ನಡೆಯುವ ಸ್ಥಳಕ್ಕೆ ಪ್ರಯಾಣ ಬೆಳೆಸುವ ಅಗತ್ಯ ಇರುವುದಿಲ್ಲ. ತಮಗೆ ಹೆಚ್ಚು ಅನುಕೂಲಕರವಾದ ಪರಿಸರದಲ್ಲಿ ಅಂದರೆ ಮನೆಯಲ್ಲಿ ಇದ್ದುಕೊಂಡೇ ನಿರಾಳ ಮನಸ್ಸು ಮತ್ತು ಹುಮ್ಮಸ್ಸಿನಿಂದ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ವಿಡಿಯೊ ಸಂದರ್ಶನಗಳನ್ನು ಕೂಡ ಸಾಂಪ್ರದಾಯಿಕ ಮುಖಾಮುಖಿ ಭೇಟಿಯಾಗಿ ನಡೆಸುವ ಸಂದರ್ಶನದ ಮಾದರಿಯಲ್ಲಿಯೇ ನಡೆಸಲಾಗುವುದು. ಯಾವುದೇ ಸಂದರ್ಶನ ಇರಲಿ, ಅದು ಪರಿಣಾಮಕಾರಿ ಸ್ವರೂಪದಲ್ಲಿದ್ದು ಪೂರಕ ಸಂದರ್ಶನ ಅಥವಾ ನೇಮಕಾತಿಗೆ ಹಾದಿ ಮಾಡಿಕೊಡುವಂತಿರಬೇಕು. ವಿಡಿಯೊ ಸಂದರ್ಶನ ನಡೆಯುವ ಸಂದರ್ಭಗಳಲ್ಲಿ ಎದುರಾಗುವ ಕೆಲ ವಿಶಿಷ್ಟ ಬಗೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಗಮನ ನೀಡಬೇಕಾಗುತ್ತದೆ. ಅದಕ್ಕಾಗಿ ನೀವು ಕೆಲವು ಪೂರ್ವಭಾವಿ ಸಿದ್ಧತೆಗಳನ್ನೂ ಮಾಡಿಕೊಂಡು ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ. ವಿಡಿಯೊ ಸಂದರ್ಶನಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಲು ಈ ಸಲಹೆಗಳು ಉಪಯೋಗವಾಗಬಹುದು.

ಈ ಸಂಗತಿಗಳತ್ತ ಗಮನ ನೀಡಿ: ಮೊಬೈಲ್ ಬದಲಿಗೆ ಲ್ಯಾಪ್‌ಟಾಪ್‌ನಲ್ಲಿ ಸಂದರ್ಶನ ಎದುರಿಸಿ. ಸಂದರ್ಶನ ಆರಂಭವಾಗುವುದಕ್ಕೂ ಮುನ್ನ ಇಂಟರ್‌ನೆಟ್ ಸಂಪರ್ಕ ಇರುವುದನ್ನು ಖಚಿತಪಡಿಸಿಕೊಳ್ಳಿ. ಸಂದರ್ಶನದ ನಿಗದಿತ ಸಮಯಕ್ಕೆ ಐದು ನಿಮಿಷ ಇರುವಾಗಲೇ ಲಾಗಿನ್ ಆಗಿ. ಮೈಕ್ರೊಫೋನ್ ಇರುವ ಹೆಡ್‌ಫೋನ್ ಬಳಸಿ.

ಬೆಳಕು, ಕ್ಯಾಮೆರಾ ಮತ್ತು ಹಿನ್ನೆಲೆಯ ಪರಿಸರ: ಸಂದರ್ಶನ ಎದುರಿಸಲು ಕುಳಿತುಕೊಂಡ ಕೋಣೆ
ಯಲ್ಲಿ ಸಾಕಷ್ಟು ಬೆಳಕು ಇರುವುದನ್ನು ಖಚಿತಪಡಿ ಸಿಕೊಳ್ಳಿ. ವೆಬ್ ಕ್ಯಾಮೆರಾ ನಿಮ್ಮ ಕಣ್ಣಿನ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಿ. ನೀವು ಕುಳಿತುಕೊಂಡ ಸ್ಥಳದ ಹಿಂಭಾಗದಲ್ಲಿನ ದೃಶ್ಯಗಳು ಸುಂದರವಾಗಿ, ಅಚ್ಚುಕಟ್ಟಾಗಿ ಕಾಣುವಂತೆ ಗಮನ ಹರಿಸಿ.

ಸೂಕ್ತ ದಿರಿಸು ಧರಿಸಿ: ನೀವು ತೊಡುವ ಬಟ್ಟೆಗಳನ್ನು ಆಯ್ಕೆ ಮಾಡುವಾಗ ನೀವು ಕ್ಯಾಮೆರಾ ಎದುರು ಕುಳಿತುಕೊಳ್ಳುತ್ತೀರಿ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ. ಹಿತಮಿತವಾಗಿ ಅಂದವಾಗಿ ಕಾಣಿಸಿಕೊಳ್ಳಲು ಗಮನ ನೀಡಿ. ಧರಿಸಬಹುದಾದ ಸಾಧನ ಮತ್ತು ಆಭರಣಗಳು ಕನಿಷ್ಠ ಮಟ್ಟದಲ್ಲಿ ಇರಲಿ.

ಒಳ್ಳೆಯ ಆರಂಭ ಇರಲಿ; ಆತ್ಮವಿಶ್ವಾಸ ತೋರಿಸಿ: ಸೂಕ್ತ ರೀತಿಯಲ್ಲಿ ಶುಭಾಶಯ ಕೋರಿ. ಸಂದರ್ಶಕರ ಮಾತುಗಳಿಗೆ ಗಮನ ನೀಡಿ. ಸಂದರ್ಶನದ ಉದ್ದಕ್ಕೂ ಉತ್ಸಾಹದಿಂದ ಇರಿ. ಮಧ್ಯೆ, ಮಧ್ಯೆ ಸೂಕ್ತ ಪ್ರಶ್ನೆಗಳನ್ನು ಕೇಳುವುದರ ಮೂಲಕ ಸಂವಹನ ಆಸಕ್ತಿದಾಯಕವಾಗಿ ಇರುವಂತೆ ನೋಡಿಕೊಳ್ಳಿ.

ನಿಮ್ಮ ವರ್ತನೆ ಮತ್ತು ಹಾವಭಾವದ ಬಗ್ಗೆ ಎಚ್ಚರಿಕೆ ಇರಲಿ: ಕುರ್ಚಿಯಲ್ಲಿ ನೇರವಾಗಿ ಕುಳಿತುಕೊಳ್ಳಿ. ವೆಬ್ ಕ್ಯಾಮೆರಾದತ್ತಲೇ ದೃಷ್ಟಿ ಕೇಂದ್ರೀಕರಿಸಿ. ಮಾತಿನ ಮಧ್ಯೆ ಸೂಕ್ತ ರೀತಿಯಲ್ಲಿ ಹಸ್ತಗಳ ಚಲನವಲನ ಇರಲಿ. ಸಂದರ್ಶಕರ ಮಾತಿಗೆ ತಲೆಯಾಡಿಸುವುದು ನೀವು ಆತ್ಮವಿಶ್ವಾಸದಿಂದ ಇರುವುದನ್ನು ಸೂಚಿಸುತ್ತದೆ. ಸಂದರ್ಶ ನದ ಉದ್ದಕ್ಕೂ ಯಾವುದೇ ಕಾರಣಕ್ಕೂ ಚಡಪಡಿಸಬೇಡಿ.

ಕ್ಯಾಮೆರಾ ಜತೆ ಕಣ್ಣಿನ ಸಂಪರ್ಕ: ವಿಡಿಯೊ ಸಂವಾದ ನಡೆಯುವಾಗ ಕ್ಯಾಮೆರಾ ಜತೆಗಿನ ಕಣ್ಣಿನ ನೇರ ಸಂಪರ್ಕವು ಕಡಿತವಾಗದಂತೆ ನೋಡಿಕೊಳ್ಳಿ. ಇದಕ್ಕಾಗಿ ಸಂದರ್ಶನಕ್ಕೆ ಮುಂಚಿತವಾಗಿಯೇ ತಾಲೀಮು ನಡೆಸಿ.

ಆಲೋಚನೆಗಳ ಅಭಿವ್ಯಕ್ತಿ ಮತ್ತು ಮಾತಿನ ಮೇಲೆ ಹಿಡಿತ ಇರಲಿ: ಸರಳ ರೀತಿಯಲ್ಲಿ ಮತ್ತು ಖಚಿತವಾಗಿ ನಿಮ್ಮ ಅಭಿಪ್ರಾಯ ಹಾಗೂ ಆಲೋಚನೆಗಳನ್ನು ಮಂಡಿಸಿ. ನಿಧಾನವಾಗಿ ಮಾತನಾಡಿ. ಚಿಕ್ಕ, ಚಿಕ್ಕ ವಾಕ್ಯಗಳನ್ನು ಬಳಸಿ. ಮಾತಿನ ಮಧ್ಯೆ ಸಣ್ಣ ವಿರಾಮವಿರಲಿ. ಸಂದರ್ಶನಕ್ಕೆ ಮುಂಚೆಯೇ ಇದನ್ನು ಪ್ರಜ್ಞಾಪೂರ್ವಕವಾಗಿ ಪ್ರಾಯೋಗಿಕವಾಗಿ ರೂಢಿ ಮಾಡಿಕೊಳ್ಳಿ.

ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳಿ: ಸಾಕಷ್ಟು ಪ್ರಯತ್ನ ಮತ್ತು ಪೂರ್ವಭಾವಿ ಸಿದ್ಧತೆಗಳ ಹೊರತಾಗಿಯೂ ಸಂದರ್ಶನ ನಡೆಯುವ ಹೊತ್ತಿನಲ್ಲಿ ತಾಂತ್ರಿಕ ದೋಷಗಳು ಹಠಾತ್ತಾಗಿ ಎದುರಾಗಬಹುದು. ಅಂತಹ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಇರಲಿ.

ಸಂದರ್ಶನದ ಪರಾಮರ್ಶೆ ನಡೆಸಿ: ಸಂದರ್ಶನ ಪೂರ್ಣಗೊಂಡ ನಂತರ ಬಿಡುವು ಮಾಡಿಕೊಂಡು ಸಂದರ್ಶನದ ಸಂದರ್ಭದಲ್ಲಿ ಎಲ್ಲವೂ ಸುಲಲಿತವಾಗಿ ನಡೆದ ಮತ್ತು ಹಿತಕರವಲ್ಲದ ಸಂಗತಿಗಳನ್ನು ಕೂಲಂಕಷವಾಗಿ ಪರಾಮರ್ಶಿಸಿ. ನಿಮ್ಮಿಂದಾದ ಲೋಪಗಳನ್ನು ಮೆಟ್ಟಿ ನಿಲ್ಲಲು ಯೋಜನೆಯೊಂದನ್ನು ರೂಪಿಸಿ ಕಾರ್ಯರೂಪಕ್ಕೆ ತನ್ನಿ.

(ಲೇಖಕ: ಮಸಾಯ್ ಸ್ಕೂಲ್‌ನ ಸಹ ಸ್ಥಾಪಕ ಮತ್ತು ಹಿರಿಯ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.