ADVERTISEMENT

ಮನೆಗೆ ಮರಳಿದರೂ ಮನಸ್ಸು ದೂರವೇಕೆ?

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 19:30 IST
Last Updated 23 ಆಗಸ್ಟ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌ ಸಂದರ್ಭದಲ್ಲಿ ಪೋಷಕರ ಬಳಿಗೆ ತೆರಳಿದ ಮಕ್ಕಳು ಮನೆಯಲ್ಲಿ ತೊಂದರೆಯಾಗುತ್ತಿದೆ ಎಂದು ದೂರುವುದು ಸಾಮಾನ್ಯ. ಎಷ್ಟೋ ಕಾಲದಿಂದ ದೂರವಿರುವ ಮಕ್ಕಳು ಮನೆಗೆ ಬಂದಿದ್ದಾರೆ, ಕೆಲವು ತಿಂಗಳುಗಳಾದರೂ ತಮ್ಮ ಜೊತೆ ಇರುತ್ತಾರೆ ಎಂಬ ಖುಷಿಯ ನಡುವೆ ಸಣ್ಣಪುಟ್ಟ ಕಿರಿಕಿರಿ ಸಹಿಸಿಕೊಳ್ಳುವುದು ಅನಿವಾರ್ಯವಾಗಿಬಿಡುತ್ತದೆ.

ಕೋವಿಡ್‌–19ನಿಂದಾಗಿ ಲಾಕ್‌ಡೌನ್‌ ಮುಗಿದ ಮೇಲೆಯೂ ‘ವರ್ಕ್‌ ಫ್ರಂ ಹೋಂ’ ಮುಂದುವರಿದಾಗ ಬೆಂಗಳೂರಿನಲ್ಲಿದ್ದ ಅದಿತಿ ಹೆಗಡೆಗೆ ಪೋಷಕರಿರುವ ಊರಿಗೆ ಹೋಗಿರಲು ಸದವಕಾಶ ಸಿಕ್ಕಿತು. ತಾನಿದ್ದ ಪಿಜಿ ಖಾಲಿ ಮಾಡಿ ಶಿರಸಿ ಸಮೀಪದ ಹಳ್ಳಿಗೆ ಬಂದಿಳಿದಳು. ಖುಷಿಯಾದ ಅಪ್ಪ ಮಗಳಿಗೆಂದು ಇಂಟರ್‌ನೆಟ್‌ ಬೂಸ್ಟರ್‌ ಹಾಕಿಸಿ ಮಹಡಿಯ ಕೊಠಡಿಯನ್ನು ಕಚೇರಿಯ ಕ್ಯಾಬಿನ್‌ನಂತೆ ಪರಿವರ್ತಿಸಿ ಕೊಟ್ಟರು. ನಾಲ್ಕಾರು ದಿನಗಳು ಖುಷಿಯಿಂದಲೇ ಕಳೆದವು. ಅಮ್ಮ ಮಾಡಿದ ತಿಂಡಿ– ತಿನಿಸು, ಬಾಲ್ಯದ ನೆನಪುಗಳಿಂದ ಖುಷಿಗೊಂಡ ಅದಿತಿ, ಎಸ್ಸೆಸ್ಸೆಲ್ಸಿ ನಂತರ ಕಳೆದುಕೊಂಡಿದ್ದ ಕುಟುಂಬದ ಸೌಖ್ಯವನ್ನು ಆಸ್ವಾದಿಸಿತೊಡಗಿದ್ದಳು.

ವಾರ ಕಳೆದ ಕೂಡಲೇ ತಾಕಲಾಟ ಶುರುವಾಯಿತು. ಅಮ್ಮನ ಅತಿ ಕಾಳಜಿ, ನಿರ್ವಹಣೆಯ ಬಿಸಿ. ‘ಯಾವಾಗಲೂ ನಾನು ಚೆನ್ನಾಗಿ ಡ್ರೆಸ್‌ ಮಾಡಿಕೊಂಡಿರಬೇಕು. ಮನೆಯಲ್ಲಿ ಹಾಕುವ ಪೈಜಾಮ– ಟೀ ಷರ್ಟ್‌ ಹಾಕಿಕೊಂಡರೆ ಬೈಯುತ್ತಾರೆ. ಕೂದಲನ್ನು ನೀಟಾಗಿ ಬಾಚಿಕೊಂಡರಷ್ಟೇ ಸಾಲದು ಅವರಿಗೆ, ಕಿವಿ, ಕತ್ತು, ಹಣೆ ಬೋಳಾಗಿರದಂತೆ ಅಲಂಕರಿಸಿಕೊಂಡು ಕೂರಬೇಕು. ಫೋನ್‌ ಬಂದರೆ ಯಾರದ್ದು ಎಂಬ ತನಿಖೆ. ಬೆಂಗಳೂರಿಗಿಂತ ಇದು ಸುರಕ್ಷಿತ ಎಂದುಕೊಂಡು ಬಂದರೆ, ಇಲ್ಲಿ ನನಗೆ ವೈಯಕ್ತಿಕ ಬದುಕೇ ಇಲ್ಲ’ ಎಂಬುದು ಅದಿತಿಯ ಅಳಲು.

ADVERTISEMENT

ಅದಿತಿಯದ್ದು ಒಂದು ರೀತಿಯ ಸಮಸ್ಯೆಯಾದರೆ, ದೆಹಲಿಯಿಂದ ಬೆಂಗಳೂರಿನ ಪೋಷಕರ ಮನೆಗೆ ಬಂದ ರೂಪದರ್ಶಿ ಧೀರೇನ್‌ ಶೆಟ್ಟಿಯದ್ದು ಇನ್ನೊಂದು ಬಗೆಯ ದೂರು. ‘ನನ್ನ ತಂದೆ ಸುರಕ್ಷತಾ ಕ್ರಮ ಅನುಸರಿಸುವುದೇ ಇಲ್ಲ. ಬೆಳಿಗ್ಗೆ ಹಾಲು ತರಲು ಮುಖಗವಸನ್ನು ಗಲ್ಲಕ್ಕೆ ಎಳೆದುಕೊಂಡು ಬೂತ್‌ಗೆ ಹೋಗುತ್ತಾರೆ. ಅಂತರ ಕಾಪಾಡಿಕೊಳ್ಳದೇ ಸಿಕ್ಕವರ ಬಳಿ ಮಾತನಾಡುತ್ತ ನಿಲ್ಲುತ್ತಾರೆ. ಹೇಳಿದರೆ ಸಿಟ್ಟಾಗುತ್ತಾರೆ. ನನಗೂ ಸದ್ಯಕ್ಕೆ ಕೆಲಸವಿಲ್ಲ. ಇಲ್ಲಿಯೇ ಕಾಲಹರಣ ಮಾಡಬೇಕು’ ಎನ್ನುವ ಧೀರೇನ್‌ ಇದೆಲ್ಲ ತಲೆಮಾರುಗಳ ನಡುವಿನ ತಿಕ್ಕಾಟ ಎನ್ನಲು ಮರೆಯುವುದಿಲ್ಲ.

ಇವೆಲ್ಲ ‘ಸಿಲ್ಲಿ’ ಎನಿಸಬಹುದು. ಆದರೆ, ‘ಕೋವಿಡ್‌–19 ಪಿಡುಗಿನ ಸಂದರ್ಭದ ಗೂಡುಗಳು’ ಎಂದು ತಮಾಷೆಯಿಂದ ಕರೆಯುವ ಪೋಷಕರ ಮನೆಗೆ ಮರಳಿದ ಮಕ್ಕಳಿಗೆ ಹೊಂದಿಕೊಳ್ಳಲು ಕಷ್ಟವಾದರೆ, ಇದು ತಂದೆ– ತಾಯಿ, ಸಹೋದರ– ಸಹೋದರಿಯರಿದ್ದರೆ ಅವರಿಗೂ ಕಷ್ಟವೇ. ಖರ್ಚು ಹೆಚ್ಚು ಎಂದು ಕೆಲಸ ಕಳೆದುಕೊಂಡವರ ಪೋಷಕರ ಅಳಲು. ಮಕ್ಕಳ ತಮ್ಮ ಕಚೇರಿ ಕೆಲಸ ಮಾಡುತ್ತ ಕೂರುತ್ತಾರೆ. ನಮಗೆ ಮನೆಗೆಲಸದಲ್ಲಿ ಯಾವ ರೀತಿಯ ಸಹಾಯವನ್ನೂ ಮಾಡುವುದಿಲ್ಲ ಎಂಬುದು ಇನ್ನು ಕೆಲವರ ದೂರು.

ಕೆಲವೊಮ್ಮೆ ಪೋಷಕರು ಮತ್ತು ಮಕ್ಕಳ ನಡುವಿನ ರಾಜಕೀಯ ಒಲವಿನ ಭಿನ್ನಾಭಿಪ್ರಾಯವೂ ಇಂತಹ ವಾಗ್ವಾದಕ್ಕೆ ಕಾರಣವಾಗಬಹುದು. ಇಂತಹ ಸಮಸ್ಯೆಗಳು ಮಕ್ಕಳು ಪೋಷಕರ ಜೊತೆಗೇ ಇರುವಂತಹ ಕುಟುಂಬಗಳಲ್ಲೂ ಇರುತ್ತವೆ.

ಹೊಂದಾಣಿಕೆ ಅನಿವಾರ್ಯ

ಪರಸ್ಪರರ ಸ್ವಾತಂತ್ರ್ಯ, ವೈಯಕ್ತಿಕ ರೀತಿನೀತಿಗಳ ಬಗ್ಗೆ ಗೌರವ ಇದ್ದರೆ ಇವೆಲ್ಲವನ್ನೂ ಸುಧಾರಿಸಿಕೊಳ್ಳಬಹುದು. ಇಲ್ಲಿ ಸಂವಹನ ಅತ್ಯಂತ ಮುಖ್ಯ. ಮನೆಯಿಂದಲೇ ಕಚೇರಿ ಕೆಲಸ ಮಾಡುವವರು ಹಗಲಿಡೀ ಕೆಲಸ ಮಾಡಬೇಕಾಗುತ್ತದೆ.

ವಿದೇಶಿ ಕಂಪನಿಗಳಿಗೆ ಕೆಲಸ ಮಾಡುವವರು ರಾತ್ರಿ ಕೂತು ಮಾಡುವುದು ಅನಿವಾರ್ಯ. ತಂದೆ– ತಾಯಿಯರ ಜೊತೆ ಕೂತು ಮಾತನಾಡಲೂ ಸಮಯವಿರುವುದಿಲ್ಲ. ಇದನ್ನು ಪೋಷಕರೂ ಅರ್ಥ ಮಾಡಿಕೊಳ್ಳಬೇಕು. ಅನಿವಾರ್ಯವಾದಾಗ ಖರ್ಚು– ವೆಚ್ಚವನ್ನು ಮಕ್ಕಳು ಹಂಚಿಕೊಳ್ಳಬೇಕಾಗುತ್ತದೆ. ದೀರ್ಘಾವಧಿ ಪೋಷಕರ ಜೊತೆಗೇ ಜೀವನ ನಡೆಸುವುದು ಅನಿವಾರ್ಯವಾದ ಸಂದರ್ಭದಲ್ಲಿ ಕೆಲವು ಸಣ್ಣಪುಟ್ಟ ಹೊಂದಾಣಿಕೆಗೆ ಸಿದ್ಧರಿರಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.