ADVERTISEMENT

ಮಕ್ಕಳ ಹಕ್ಕುಗಳ ಸಂವೇದನೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 19:45 IST
Last Updated 15 ಫೆಬ್ರುವರಿ 2020, 19:45 IST

ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮತ್ತು ಮಕ್ಕಳಿಗಾಗುತ್ತಿರುವ ಅನ್ಯಾಯಗಳ ವಿರುದ್ಧ ಸದಾ ಚಿಂತಿಸುವ ಎನ್‌ ವಿ ವಾಸುದೇವ ಶರ್ಮಾ, ಸಮಾಜಕಾರ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ‘ಚೈಲ್ಡ್‌ ರೈಟ್‌ ಟ್ರಸ್ಟ್’ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾಗಿದ್ದು, ರಾಜ್ಯದ ಉದ್ದಗಲಕ್ಕೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಓಡಾಡುತ್ತಿರುವವರು. ಬ್ರಿಟನ್ನಿನ ಸಾಮಾಜಿಕ ಕಾರ್ಯಕರ್ತೆ, ಎಗ್ಲಾಂಟೈನ್‌ ಜೆಬ್‌ ಮಕ್ಕಳ ಹಕ್ಕುಗಳಿಗಾಗಿ ನಡೆಸಿದ ಹೋರಾಟ ಮತ್ತು ಅದರಲ್ಲಿ ಪಡೆದ ಅಪೂರ್ವ ಯಶಸ್ಸನ್ನು ಕುರಿತು ವಾಸುದೇವ ಶರ್ಮಾ ಬರೆದಿರುವ ಈ ಪುಸ್ತಕ ಇತಿಹಾಸದ ಅಪರೂಪದ ಅಧ್ಯಾಯವೊಂದನ್ನು ನಮ್ಮ ಮುಂದೆ ತೆರೆದಿಟ್ಟಂತೆಯೇ, ಮಕ್ಕಳ ಹಕ್ಕುಗಳ ಕುರಿತ ಅಪೂರ್ವ ಕಾನೂನು ತಿಳುವಳಿಕೆಯನ್ನೂ ನೀಡುತ್ತದೆ. ಒಟ್ಟು 30 ಪುಟ್ಟ ಪುಟ್ಟ ಅಧ್ಯಾಯಗಳುಳ್ಳ ಈ ಕೃತಿ, ಸರಳ ಭಾಷೆ ಮತ್ತು ಸಣ್ಣ ವಾಕ್ಯಗಳಿಂದಾಗಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಕಾನೂನು ವಿವರಗಳ ಶುಷ್ಕ ಬರವಣಿಗೆಯಾಗುವ ಅಪಾಯದಿಂದ ತಪ್ಪಿಸಿಕೊಂಡು, ಇದನ್ನೊಂದು ಸೃಜನಾತ್ಮಕ ಕೃತಿಯೆಂಬಂತೆ ರೂಪಿಸಿರುವುದು ಶರ್ಮಾರ ಹೆಗ್ಗಳಿಕೆ.

ಲಂಡನ್ನಿನ ಟ್ರಫಾಲ್ಗರ್‌ ಚೌಕದಲ್ಲಿ ರಾತ್ರಿ ಸುರಿದ ಮಳೆಯ ನೆನಪಿನಲ್ಲಿ ತಂಗಾಳಿ ಸುಳಿಯುತ್ತಿರುವ ಒಂದು ಬೆಳಿಗ್ಗೆ ಎಗ್ಲಾಂಟೈನ್‌ ಜೆಬ್‌ ಕರಪತ್ರ ಚಳವಳಿ ನಡೆಸಿ ಪೊಲೀಸರ ಬಂಧನಕ್ಕೆ ಒಳಗಾಗುವ ಘಟನೆಯೊಂದಿಗೆ ಮೊದಲ ಅಧ್ಯಾಯ ಆರಂಭವಾಗುತ್ತದೆ. ಆ ದಿಟ್ಟ ಮಹಿಳೆಯ ಹೋರಾಟದ ಹಾದಿಯನ್ನು ನಾಟಕೀಯವಾಗಿ ವರ್ಣಿಸುತ್ತಾ, ನಡುನಡುವೆ ಮಕ್ಕಳ ಹಕ್ಕುಗಳ ಕಾನೂನಿನ ಕುರಿತು ಪುಟ್ಟ ಟಿಪ್ಪಣಿಗಳನ್ನು ಒದಗಿಸುತ್ತಾ ಸಾಗುವ ಈ ಕೃತಿ, ಮಕ್ಕಳ ಕುರಿತು ಕಳಕಳಿ ಇರುವ ಹಿರಿಯರು ಮಾತ್ರವಲ್ಲ, ಮಕ್ಕಳೂ ಓದಿ ಸುಲಭದಲ್ಲಿ ಅರ್ಥೈಸಿಕೊಳ್ಳುವಂತಿದೆ.

ಟ್ರಫಾಲ್ಗರ್‌ ಚೌಕದಲ್ಲಿ ಕರಪತ್ರ ಹಂಚಿದ್ದಕ್ಕೆ ಗೆಳತಿ ಬಾರ್ಬರಾ ಜೊತೆಗೆ ದೇಶದ್ರೋಹದ ಆರೋಪ ಎದುರಿಸಿ ನ್ಯಾಯಾಧೀಶರ ಮುಂದೆ ವಿಚಾರಣೆ ಎದುರಿಸುತ್ತಾರೆ ಜೆಬ್‌. ಮಹಿಳೆಯೆಂಬ ವಿನಾಯ್ತಿ ತೋರಿ ದಂಡ ವಿಧಿಸುತ್ತಾರೆ ವಿಚಾರಣೆ ನಡೆಸಿದ ಸರ್‌. ಆರ್ಚಿಬಾಲ್ಡ್‌ ಬೋರ್ಕಿನ್‌. ಜೆಬ್‌ ಅವರ ಕೈಯಿಂದಲೇ ಮೊದಲ ದೇಣಿಗೆ ಪಡೆದು ಆರಂಭಿಸಿದ್ದು ‘ಸೇವ್‌ ದಿ ಚಿಲ್ಡ್ರನ್‌’ ಎಂಬ ಸಂಸ್ಥೆ! ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 30 ವರ್ಷ ತುಂಬಿರುವ ಮತ್ತು ಎಗ್ಲಾಂಟೈನ್‌ ಜೆಬ್‌ ಆರಂಭಿಸಿದ ‘ಸೇವ್‌ ದಿ ಚಿಲ್ಡ್ರನ್‌’ ಸಂಸ್ಥೆಗೆ 100 ವರ್ಷಗಳಾಗಿರುವ ಹೊತ್ತಲ್ಲಿ ಸಕಾಲಿಕವಾಗಿ ಈ ಕೃತಿ ಹೊರಬಂದಿದೆ.

ADVERTISEMENT

ಆಕರ್ಷಕ ಮುದ್ರಣ ವಿನ್ಯಾಸ ಮತ್ತು ರೇಖಾಚಿತ್ರಗಳ ಸಹಿತ ವಿವರಣೆ ಪುಸ್ತಕದ ಓದನ್ನು ಆಪ್ತವಾಗಿಸುತ್ತದೆ. ಮುಖಪುಟದ ಬಾಲಕಾರ್ಮಿಕ ಬವಣೆಯ ಚಿತ್ರವನ್ನು ಬ್ಲರ್‌ ಆಗಿಸಿ, ‘ಕ್ಷಮಿಸಿ, ಈ ಚಿತ್ರ ಮನಸ್ಸು ಕಲಕುತ್ತದೆ, ಹಾಗಾಗಿ ಇಲ್ಲಿ ಕೃತಿಯ ಯಾವ ವಿವರವನ್ನೂ ನೀಡಿಲ್ಲ’ ಎಂದು ಮುದ್ರಿಸಿರುವುದು, ಮಕ್ಕಳಿಗೆ ಸಂಬಂಧಿಸಿದ ವಿಷಯಗಳು ಎಷ್ಟೊಂದು ಸೂಕ್ಷ್ಮ ಎಂದು ತಿಳಿಹೇಳುವಂತಿದೆ. ಮಕ್ಕಳ ಕುರಿತು ಕಳಕಳಿಯುಳ್ಳ ಪ್ರತಿಯೊಬ್ಬರೂ ಜೊತೆಗೆ ಇಟ್ಟುಕೊಳ್ಳಬೇಕಾದ ಕೃತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.