ADVERTISEMENT

ಕಮೂ ಬದುಕಿನ ಚಿತ್ರಣ

Kamu- modala odu

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 19:37 IST
Last Updated 9 ಮಾರ್ಚ್ 2019, 19:37 IST
ಕಮೂ
ಕಮೂ   

ಕೃತಿ: ಕಮೂ ತರುಣ ವಾಚಿಕೆ
ಲೇಖಕ: ಕೇಶವ ಮಳಗಿ
ಪ್ರಕಾಶಕರು: ಸಂಗಾತ ಪುಸ್ತಕ
ಪುಟ ಸಂಖ್ಯೆ: 134
ಬೆಲೆ: ₹ 160

ಯುವಜನರನ್ನು ಅಪಾರವಾಗಿ ಪ್ರಭಾವಿಸಿದ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಆಲ್ಬರ್ಟ್ ಕಮೂ, ಬಂಡುಕೋರ ಮನಸು ಸೃಷ್ಟಿಸುವ ಸಾಹಿತ್ಯದ ಪ್ರತಿನಿಧಿ ಎಂದೇ ಜನಪ್ರಿಯ. ಸದಾ ಕಾಲಕ್ಕೂ ಪ್ರಸ್ತುತವಾಗುವ ಮನುಷ್ಯನ ಅಸ್ಮಿತೆ, ವ್ಯಕ್ತಿ ಸ್ವಾತಂತ್ರ್ಯ, ನೈತಿಕತೆ– ಅನೈತಿಕತೆಗಳ ಪಾತ್ರವೇನು? ಇತ್ಯಾದಿ ಮೂಲಭೂತ ಪ್ರಶ್ನೆಗಳು ಬಂದಾಗಲೆಲ್ಲಾ ಅಲ್ಲಿ ಕಮೂನ ಸಾಹಿತ್ಯ ಚರ್ಚೆಗೆ ಇದ್ದದ್ದೆ. ಕಮೂ ಕುರಿತು ಕೇಶವ ಮಳಗಿ ಅವರು ಬರೆದಿರುವ ‘ಕಮೂ ತರುಣ ವಾಚಿಕೆ’ ಕನ್ನಡದಮಟ್ಟಿಗೆ ಅಪರೂಪದ ಕೃತಿ.

ಕಮೂವಿನ ಕುರಿತು ಅಲ್ಲಲ್ಲಿ ಬಿಡಿಬಿಡಿಯಾಗಿ ಪ್ರಸ್ತಾಪಿಸಲಾಗಿದೆ. ಆದರೆ, ಕಮೂ ಕುರಿತ ಪೂರ್ಣಪ್ರಮಾಣದ ಪರಿಚಯಾತ್ಮಕ ಮತ್ತು ವಿಶ್ಲೇಷಣಾತ್ಮಕ ಕೃತಿಯ ಕೊರತೆಯನ್ನು ‘ಕಮೂ ತರುಣ ವಾಚಿಕೆ’ ನೀಗಿಸಿದೆ.

ADVERTISEMENT

ಆತನ ಜೀವನ ಪರಿಚಯದ ಜತೆಗೆ ಆತ ಬರೆದಿರುವ ಎರಡು ಕಥೆಗಳು, ನಾಲ್ಕು ಪ್ರಬಂಧಗಳ ಅನುವಾದ ಕೃತಿಯಲ್ಲಿದೆ. ಇದರ ಜತೆಗೆ ಆತ ಪ್ರತಿಪಾದಿಸಿದ ಬಂಡಾಯ, ಅಸಂಗತವಾದ, ಸಿಸಿಫಸ್ ಕಲ್ಪಿತ ಕಥನ, ಆತನ ಮುಖ್ಯ ಕಾದಂಬರಿಗಳ ಒಟ್ಟು ಸಾರಾಂಶವೂ ಇಲ್ಲಿ ಅಡಕವಾಗಿರುವುದು ವಿಶೇಷ.

ಆತನ ಮೊದಲ ಪ್ರೇಮದ ಗೆಳತಿ ಸಿಮೊನ್ ದಿ ಬುವಾ, ಗೆಳೆಯ ಸಾರ್ತ್ರೆಯ ಒಡನಾಟದ ಜತೆಗೆ ಕಮೂವಿನ ಕೌಟುಂಬಿಕ ಬದುಕಿನ ಚಿತ್ರಣವನ್ನೂ ಕಟ್ಟಿಕೊಡುವ ಕೇಶವ ಮಳಗಿ ಅವರು, ಕಮುವಿನ ಬರವಣಿಗೆಯ ವಿವಿಧ ಮಜಲುಗಳನ್ನು ಕನ್ನಡದ ಓದುಗರ ಮುಂದಿಟ್ಟಿದ್ದಾರೆ. ಅಸ್ತಿತ್ವಕ್ಕಾಗಿ ಹೋರಾಡುವ ಮನುಷ್ಯನ ಅಂತರಂಗದ ತುಮುಲಗಳ ವಿಶ್ಲೇಷಣೆಯ ಜತೆಗೆ ಸೈದ್ಧಾಂತಿಕವಾಗಿ ಎಡಪಂಥ ಎಡವಿದ್ದರ ಬಗ್ಗೆಯೂ ಕಮೂ ಹೊಂದಿದ್ದ ನಿಷ್ಠುರ ವಿಮರ್ಶಾತ್ಮಕ ದೃಷ್ಟಿಕೋನ ಇಲ್ಲಿದೆ. ‌

ಪಂಥೀಯ ಗುದ್ದಾಟದಲ್ಲಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗುವ ಸೈದ್ಧಾಂತಿಕ ಕಾರ್ಯಕರ್ತರಿಗೆ ‘ಭಿನ್ನಾಭಿಪ್ರಾಯಗಳ ನಡುವೆಯೂ ನಾವು ಸಾಮಾನ್ಯವಾದ ವಿಷಯಗಳಿಗೆ ಒಗ್ಗೂಡಬೇಕು’ ಎನ್ನುವ ಕಮೂವಿನ ಮಾತುಗಳು ಪ್ರಸಕ್ತ ಸನ್ನಿವೇಶಕ್ಕೆ ಕನ್ನಡಿ ಹಿಡಿಯುವಂತಿವೆ. ಅಪ್ಪಟ ಮನುಷ್ಯ ಪ್ರೀತಿ, ಅಂತಃಕರಣದ ಬುಗ್ಗೆಯಾಗಿದ್ದ ಕಮೂವಿನ ಬದುಕು– ಬರಹಗಳನ್ನು ಲೇಖಕರು ‘ಕಮೂ ತರುಣವಾಚಿಕೆ’ಯಲ್ಲಿ ಸಮಗ್ರವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.