ADVERTISEMENT

ಕ್ರೈಸ್ತ ಜಾನಪದದ ಬೇರು ಅರಸುತ್ತ....

ವಿಕ್ರಂ ಕಾಂತಿಕೆರೆ
Published 27 ಏಪ್ರಿಲ್ 2019, 19:46 IST
Last Updated 27 ಏಪ್ರಿಲ್ 2019, 19:46 IST
ದಾವಿದ–ಕಿಮ್ಮೀರ ಯುದ್ಧ (ಬಯಲಾಟ)
ದಾವಿದ–ಕಿಮ್ಮೀರ ಯುದ್ಧ (ಬಯಲಾಟ)   

ಬೈಬಲ್‌ನ ಹಳೆಯ ಒಡಂಬಡಿಕೆಯಲ್ಲಿ ಬರುವ ದಾವಿದ ಮತ್ತು ಗೊಲಿಯಾತರ ಹೋರಾಟದ ಕಥನವನ್ನು ಬಯಲಾಟದ ರೂಪಕ್ಕೆ ಇಳಿಸಿ ‘ಅಟ್ಟ’ಕ್ಕೆ ತರುವ ಸಂದರ್ಭದಲ್ಲಿ ಅದರ ಕರ್ತೃಗಳ ಮನಸ್ಸಿನಲ್ಲಿ ತೋಚಿದ ಆಲೋಚನೆ– ‘ಎಲ್ಲರೂ ಮಾಡುವಾಗ ನಮ್ಮದು ನಾವ್ಯಾಕ ತೋರಸಬಾರದು...’ ಎಂಬುದು.

ಕನ್ನಡ ನಾಡಿನಲ್ಲಿ ‘ಆದಿ ಕ್ರೈಸ್ತರ’ ನೆಲ ಎಂದು ಹೇಳಲಾಗುವ ರಾಯಚೂರು ಜಿಲ್ಲೆ ಮುದಗಲ್‌ನ ಅಂತೋಣಪ್ಪ ಸೊಲ್ಲಾಪುರ, ತೋಮಾಸಪ್ಪ ಸೊಲ್ಲಾಪುರ, ಬಾಲಸ್ವಾಮಿ ಗಬ್ಬೂರ, ಚಿನ್ನಪ್ಪ ದಂಡಾವತಿ ಮತ್ತು ಕಲಬುರ್ಗಿ ಜಿಲ್ಲೆ ಚಿತ್ತಾಪುರದ ಚಿನ್ನಪ್ಪ ಎರಬೋವಿ ಮುಂತಾದವರು ಈ ದಾವಿದ ಗೊಲಿಯಾತರ ಕಥನವನ್ನು ‘ದಾವಿದ–ಕಿಮ್ಮೀರ ಯುದ್ಧ’ದ ರೂಪದಲ್ಲಿ ಕನ್ನಡಿಗರ ಮುಂದೆ ಇರಿಸಿದ ರಂಗ ಕಲಾಸಕ್ತರು.

ಈ ಬಯಲಾಟದ ಬಗ್ಗೆ ಮಾಹಿತಿ ಸಿಕ್ಕಿದ ನಂತರ ನಾಡಿನ ವಿವಿಧ ಮೂಲೆಗೆ ಸಂಚರಿಸಿ ಅನೇಕರನ್ನು ಭೇಟಿ ಮಾಡಿ ಮಾಹಿತಿ ಕಲೆ ಹಾಕಿ ಪುಸ್ತಕ ರೂಪದಲ್ಲಿ ನೀಡಿದ್ದಾರೆ, ಪತ್ರಕರ್ತ ಎಫ್‌.ಎಂ.ನಂದಗಾವ್‌. ‘ಕ್ರೈಸ್ತರೂ ಬಯಲಾಟ, ದೊಡ್ಡಾಟವನ್ನು ಆಡಿದ್ದಾರೆಯೇ...‘ ಎಂಬ ಸಹಜ ಸಂದೇಹದೊಂದಿಗೆ ಆರಂಭವಾದದ್ದು ನಂದಗಾವ್‌ ಅವರ ಯಾತ್ರೆ.

ADVERTISEMENT

‌ಹಸ್ತಪ್ರತಿ ರೂಪದಲ್ಲಿದ್ದ ಬಯಲಾಟವನ್ನು ಸಂಗ್ರಹಿಸಿ ಅವರು ಮುದ್ರಣ ರೂಪದಲ್ಲಿ ಹೊರತಂದ ಮೂಲಕ ಕ್ರೈಸ್ತ ಜಾನಪದಕ್ಕೆ ವಿವಿಧ ಆಯಾಮಗಳು ಲಭಿಸಿವೆ. ಅನೇಕ ಕೃತಿಗಳ ಅಧ್ಯಯನ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ ಕ್ರೈಸ್ತರ ಕಲಾಸೇವೆ ಮುಂತಾದವುಗಳ ಬಗ್ಗೆ ಕಲೆ ಹಾಕಿದ ಮಾಹಿತಿ ಈ ಕೃತಿಯನ್ನು ಓದುಗ ಸ್ನೇಹಿ ಮತ್ತು ಅಧ್ಯಯನಕ್ಕೆ ಅನುಕೂಲಕರವಾಗಿಸಿದೆ.

ಬೈಬಲ್‌ನ ಪ್ರಸಂಗವೊಂದನ್ನು ಬಯಲಾಟ ರೂಪಕ್ಕೆ ಇಳಿಸಿರುವುದು ದೊಡ್ಡ ಸಾಹಸ. ಬಯಲಾಟದ ಬಂಧಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಸಿದ್ಧಪಡಿಸಿರುವ ಈ ರಂಗಕೃತಿಯಲ್ಲಿ ಧರ್ಮ ನಿರಪೇಕ್ಷೆಯನ್ನು ಸಾರುವ ಅನೇಕ ಅಂಶಗಳಿವೆ. ಧರ್ಮಸಭೆಯ ಬೆಂಬಲವಿಲ್ಲದಿದ್ದರೂ ದಾವಿದ ಕಿಮ್ಮೀರ ಬಯಲಾಟ ಸಿದ್ಧಪಡಿಸುವ ದಿಟ್ಟತನವನ್ನು ಅಂತೋಣಪ್ಪ ಸೊಲ್ಲಾಪುರ ಮತ್ತು ತಂಡದವರು ತೋರಿದ್ದಾರೆ. ಅಷ್ಟೇ ಸಾಹಸ, ಈ ಕೃತಿಯ ಸಂಪಾದನೆಗೂ ಬೇಕಾಗಿತ್ತು ಎಂಬುದು ಸಂಪಾದಕರ ಮಾತಿನಿಂದ ತಿಳಿದುಬರುತ್ತದೆ.

ಕನ್ನಡ ನಾಡಿನಲ್ಲಿ ಕ್ರೈಸ್ತರ ನೆಲೆ–ಬೆಲೆ, ಮೂಲ ಕ್ರೈಸ್ತರು ಮತ್ತು ವಲಸೆ ಕ್ರೈಸ್ತರು, ಆ ಜನಪದ ಮತ್ತು ಅವರ ಜಾನಪದದ ಬಗ್ಗೆ ನಡೆದಿರುವ ಅಧ್ಯಯನ, ರಂಗಭೂಮಿಗೆ ಅವರ ಕೊಡುಗೆ ಇತ್ಯಾದಿಗಳ ಬಗ್ಗೆ ಕೃತಿಯಲ್ಲಿ ಸಾಕಷ್ಟು ವಿವರಗಳಿವೆ.

ಬೈಬಲ್‌ ಕಥನವನ್ನು ಇಲ್ಲಿನದೇ ಸಾಂಪ್ರದಾಯಿಕ ಕಥಾನಕವನ್ನಾಗಿ ಪರಿವರ್ತಿಸುವಲ್ಲಿ ಮುದಗಲ್ಲಿನ ಕ್ರೈಸ್ತ ಜನಪದರು ಯಶಸ್ಸು ಕಂಡಿದ್ದಾರೆ ಎಂದು ಸಂಪಾದಕರೇ ಹೇಳಿಕೊಂಡಿದ್ದಾರೆ. ಅಂಥ ಬಯಲಾಟದ ಹಸ್ತಪ್ರತಿಯನ್ನು ಹುಡುಕಿ ಜೀವ ತುಂಬುವ ಕೆಲಸ ಆಗಿದೆ.

ಮೂಲ ಪಠ್ಯದ ಕಥಾಸಾರದಲ್ಲಿ ಭಾಮಿನಿ ಷಟ್ಪದಿ ಮತ್ತು ಕೊನೆಯಲ್ಲಿ ಮಂಗಳ ಪದ್ಯಗಳು ಇರಲಿಲ್ಲ. ಅವುಗಳನ್ನು ಹೊಸದಾಗಿ ರಚಿಸಿ ಸೇರಿಸುವ ಎದೆಗಾರಿಕೆಯನ್ನೂ ಸಂಪಾದಕರು ಮೆರೆದಿದ್ದಾರೆ. ಹಿತಕರವಲ್ಲದ ಪದಗಳನ್ನು ತೆಗೆದು ಶಿಷ್ಟ ಪದಗಳನ್ನು ಸೇರಿಸುವ ಕಾರ್ಯವನ್ನೂ ಮಾಡಿದ್ದಾರೆ. ಉದಾಹರಣೆಗೆ ಮೂಲ ಪಟದಲ್ಲಿ ಪ್ರಿಯಕರನನ್ನು ಅಣ್ಣಯ್ಯ ಎಂದು ಕರೆದಿದ್ದರೆ ಸಂಪಾದಿತ ಕೃತಿಯಲ್ಲಿ ಅದು ಪ್ರಾಣಕಾಂತ, ಸುಂದರಾಂಗ ಎಂದಾಗಿದೆ.

1953 ಮತ್ತು 1973ರಲ್ಲಿ ಅಟ್ಟವೇರಿದ ಈ ಬಯಲಾಟ ಯಹೂದ್ಯರ ಪುರಾಣ ಕಥೆಗೆ ಕನ್ನಡ ನಾಡಿನಲ್ಲಿ ಮರುಹುಟ್ಟು ನೀಡಿತ್ತು. ನಂತರ ನೇಪಥ್ಯಕ್ಕೆ ಸರಿದ ಆಟ ಈಗ ಪುಸ್ತಕ ರೂಪಕ್ಕೆ ಇಳಿದು ಮತ್ತೊಂದು ಮಜಲನ್ನು ತಲುಪಿದೆ. ಆಟದ ಪೂರ್ಣಪಾಠವೇ 143 ಪುಟಗಳಷ್ಟು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.