ಎಲಿಪ್ಯಾಡ್
ಯಲವಳ್ಳಿ ಎಂಬ ಕಾಲ್ಪನಿಕ ಹಳ್ಳಿಯ ಮೂಲಕ ಧಾರ್ಮಿಕ ಆಚರಣೆ ಹಾಗೂ ಮೂಢನಂಬಿಕೆಗಳನ್ನು ಮಾನವೀಯ ನೆಲೆಯಲ್ಲಿ ಕಟ್ಟಿಕೊಟ್ಟಿರುವ ಕಾದಂಬರಿ ‘ಎಲಿಪ್ಯಾಡ್’.
ಭಾರತದ ಯಾವುದೇ ಹಳ್ಳಿಯ ಪ್ರತಿರೂಪದಂತೆ ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ. ಇದು ಪುಟ್ಟ ಕಾದಂಬರಿಯಾದರೂ, ಅಸಂಖ್ಯಾತ ಪಾತ್ರಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ. ಊರಿನ ಎಲ್ಲರಿಗೂ ಕಾದಂಬರಿಯೊಳಗೆ ಸ್ಥಾನ ಕಲ್ಪಿಸುವ ಪ್ರಯತ್ನವನ್ನು ಕಾದಂಬರಿಕಾರ ಮಾಡಿದ್ದಾರೆ.
ಕಾದಂಬರಿಯ ಮುಖ್ಯ ಪಾತ್ರ ರಾಣಿ, ಎಲ್ಲಿಂದಲೊ ಬಂದು ತುಂಗನ ಹೆಂಡತಿಯಾಗಿ ಯಲವಳ್ಳಿ ಸೇರಿದವಳು. ಅವಳಿಗೆ ಜತೆಯಾಗುವ ‘ಅರ್ಜುನ’ ಎನ್ನುವ ಆನೆ ಹಾಗೂ ಅದರ ಮಾವುತ ಕೋಗಿಲೆ ಕೂಡ ಕಾದಂಬರಿಯ ತುಂಬಾ ಆವರಿಸಿಕೊಂಡಿದ್ದಾರೆ. ಅವರ ಮೂಲಕ ಗ್ರಾಮ್ಯ ಭಾರತವು ಈ ಕಾದಂಬರಿಯಲ್ಲಿ ಅನಾವರಣಗೊಂಡಿದೆ.
ಗ್ರಾಮ್ಯ ಭಾಷೆಯ ಸರಳ ನಿರೂಪಣೆಯಿಂದ ಕೂಡಿರುವ ಸಾಮಾನ್ಯ ಶೈಲಿಯ ಕಥೆಯನ್ನು ಹೊಂದಿರುವ ಕೃತಿಯೊಳಗೆ ಜಾತಕ, ಸೂತಕ, ನಂಬಿಕೆ, ಮೂಢನಂಬಿಕೆ, ಆಚರಣೆ, ಅನಾಚಾರ ಎಲ್ಲವೂ ಸೇರಿಕೊಂಡಿವೆ. ಅದರ ಜೊತೆಗೆ ಜೂಜು ಹಾಗೂ ಬಹಿರ್ದೆಸೆಯಂತಹ ಪಿಡುಗುಗಳು ಕೊನೆಗೊಳ್ಳಬೇಕು ಎನ್ನುವ ಕಾದಂಬರಿಕಾರರ ಆಶಯವೂ ಇಲ್ಲಿ ಕಾಣಿಸಿಕೊಳ್ಳುತ್ತದೆ.
ಚಿತ್ರಕತೆಯಂತೆ ಸಾಗುವ ನಿರೂಪಣಾ ಶೈಲಿಯು ಕೆಲವೊಮ್ಮೆ ಓದುಗರಿಗೆ ಗೊಂದಲ ಉಂಟುಮಾಡಿದರೂ, ಕಾದಂಬರಿ ಓದುತ್ತಾ ಸಾಗಿದಂತೆ ಉತ್ತರ ಸಿಗುತ್ತದೆ. ಹನ್ನೊಂದು ಅಧ್ಯಾಯಗಳಿದ್ದು , ಕಥೆಯ ಈ ವಿಗಂಡಣೆ ಓದನ್ನು ಸುಲಭವಾಗಿಸುತ್ತವೆ.
ಲೇ: ಭಗೀರಥ
ಪ್ರ: ಟೋಟಲ್ ಕನ್ನಡ
ಸಂ: 9686152902
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.